ವ್ಯಕ್ತಿತ್ವ ಹೇಗಿರಬೇಕು ಎಂದರೆ..

mana jan 08
Published on
ಡ್ಯಾನಿ ಪಿರೇರಾ

ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಷ್ಣುವಿನ ಅವತಾರವಾಗಿದ್ದರೂ ಅವನು ಮನುಷ್ಯ ರೂಪದಲ್ಲಿರುವಾಗ ಅನೇಕ ಕಂಟಕಗಳನ್ನು ಎದುರಿಸ ಬೇಕಾಯಿತು. ಷಡ್ಯಂತ್ರದ ಮೂಲಕ ರಾಜ್ಯಭಾರ ವಂಚಿತನಾಗಿ ವನವಾಸಕ್ಕೆ ಹೋಗಬೇಕಾಯಿತು. 14 ವರ್ಷಗಳ ಕಾಲ ಕಾಡಿನಲ್ಲೂ ಅನೇಕ ಕಷ್ಟಗಳನ್ನು ಅನುಭವಿಸಬೇಕಾಗಿ ಬಂತು. ಆ ನಂತರ ತನ್ನ ಪ್ರೀತಿಪಾತ್ರ ಮಡದಿ ಸೀತೆಯನ್ನು ರಾವಣ ಅಪಹರಿಸಿದ. ಮಡದಿಯನ್ನು ಹುಡುಕಿ ಹೊರಟ ಶ್ರೀರಾಮ ದಕ್ಷಿಣಕ್ಕೆ ಬಂದು ತಲುಪಿದ್ದ. ರಾವಣ ಲಂಕೆಯಲ್ಲಿಟ್ಟ ಸೀತೆಯನ್ನು ಬಿಡಿಸಿಕೊಂಡು ಬರಲು ವಾನರ ಸೇನೆಯ ಸಹಾಯ ಪಡೆದ. ಅಲ್ಲಿದ್ದ ರಾವಣನೊಡನೆ ಯುದ್ಧದಲ್ಲಿ ಶ್ರೀರಾಮ ಕಾದಾಡಿದ. ದಶಮುಖ ರಾವಣನಿಗೆ ಹತ್ತು ತಲೆ. ಪ್ರತಿಯೊಂದು ತಲೆಯನ್ನು ಶ್ರೀರಾಮ ಸಂಹಾರ ಮಾಡಿ, ಗೆದ್ದು ವಾಪಸ್ ಅಯೋಧ್ಯೆಯೆಡೆಗೆ ಪಯಣಿಸಿದ. ಆದರೆ ಆತನಿಗೆ ಅಯೋಧ್ಯೆಗೆ ಬರಲು ಮನಸ್ಸಿಲ್ಲ. ತಾನು ಹಿಮಾಲಯಕ್ಕೆ ಹೋಗಬೇಕು, ಕೆಲ ಕಾಲ ಅಗಸ್ಱ ಋಷಿಗಳ ಗುಹೆಯಲ್ಲಿದ್ದು ರಾವಣನ ಹತ್ಯೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ತಾನು ಘೊರ ಅಪರಾಧ ಮಾಡಿದ್ದೇನೆ ಎಂಬ ಭಾವ ಕಾಡುತ್ತಿತ್ತು. ಏಕೆಂದರೆ ಶ್ರೀರಾಮನು ಸಂಹರಿಸಿದ ವ್ಯಕ್ತಿ ಸಾಮಾನ್ಯನಾಗಿರದೆ ರಾಜನಾಗಿದ್ದ ಮಾತ್ರವಲ್ಲ, ಸಾಕ್ಷಾತ್ ಶಿವಭಕ್ತನಾಗಿದ್ದ. ಅಣ್ಣನ ಮನೋಭಿಲಾಷೆ ಕೇಳಿದ ಲಕ್ಷ್ಮಣನಿಗೆ ದಿಗ್ಭ›ಮೆಯಾಗಿ, ‘ಆತ ಅತ್ತಿಗೆ ಸೀತೆಯನ್ನು ಅಪಹರಿಸಿದ್ದ ದುಷ್ಟ, ಪರಹೆಣ್ಣನ್ನು ಅಪಹರಿಸುವುದು ಅಪರಾಧ ಎಂದು ತಿಳಿದಿರಲಿಲ್ಲವೇ ಆತನಿಗೆ?’ ಎಂದ. ಆಗ-‘ನೋಡು ಲಕ್ಷ್ಮಣ ರಾವಣನ ಹತ್ತು ತಲೆಗಳಲ್ಲಿ ಒಂಬತ್ತರಲ್ಲಿ ಯಾರಿಗೂ ಬೇಡವಾದ, ಯಾರಿಗೂ ಇರಬಾರದ ದುಷ್ಟ ಸ್ವಭಾವಗಳಿದ್ದವು

ನಿಜ. ಆದರೆ ಆ ಹತ್ತನೆಯ ತಲೆಯಲ್ಲಿ ಅಸಾಮಾನ್ಯ ಪಾಂಡಿತ್ಯ, ಧಾರ್ವಿುಕ ಚಿಂತನೆ, ಭಕ್ತಿಭಾವ ತುಂಬಿತ್ತು. ಅಷ್ಟಲ್ಲದೆ ಅದರೊಳಗೆ ಉದಾರ

ಹೃದಯವಿತ್ತು. ಆ ತಲೆಯನ್ನು ಉಳಿಸಲು ಯೋಚಿಸಿದ್ದೆ. ಆದರೆ ಅದು ಸಾಧ್ಯವಿರಲಿಲ್ಲ. ಹಾಗಾಗಿ ಅದನ್ನೂ ಕೊಲ್ಲಲೇಬೇಕಾಯಿತು. ಆ ಕಾರಣಕ್ಕೆ ನನಗೆ ಪಶ್ಚಾತ್ತಾಪವಾಗುತ್ತಿದೆ’ ಎಂದ.

ನಿಜ, ಮನುಷ್ಯನ ಆಚಾರ-ವಿಚಾರಗಳೂ ರಾವಣನ ಹತ್ತು ತಲೆಗಳಂತೆ. ಅದರಲ್ಲಿ ಒಂಬತ್ತು ತಲೆಗಳಲ್ಲಿ ಅರಿಷಡ್ವರ್ಗಗಳನ್ನು ತುಂಬಿಕೊಂಡು ಬೇಡದ ಕೆಲಸಗಳ ಆಲೋಚನೆ ಮಾಡುತ್ತವೆ. ಕೆಲವು ಬಾರಿ ಆ ದುಷ್ಟ ಆಲೋಚನೆಗಳು ಕಾರ್ಯರೂಪಕ್ಕಿಳಿದು ಮಾಡಬಾರದ ಅನರ್ಥವನ್ನೂ ಮಾಡುತ್ತವೆ. ಅದೇ ವ್ಯಕ್ತಿಯಲ್ಲಿ ಕೆಲವು ವೇಳೆ ಉತ್ತಮ, ಉದಾತ್ತ ಗುಣಗಳು ಆವಿರ್ಭವಿಸುವುದು ಸುಳ್ಳಲ್ಲ. ‘ದುಷ್ಟತನಕ್ಕೆ ವಿರೋಧ, ಒಳ್ಳೆಯ ಆಲೋಚನೆಗೆ ಶರಣಾಗತಿ’ ಇದು ಶ್ರೀರಾಮನ ನೀತಿ. ವ್ಯಕ್ತಿಯೋರ್ವನಲ್ಲಿನ ದೋಷಗಳು ವಿಜೃಂಭಿಸಿದ್ದರೂ ಅದಕ್ಕೂ ಮೀರಿದ ಮೇರು ವ್ಯಕ್ತಿತ್ವ ಆತನ ಬದುಕಿಗೆ ಮೆರುಗು ನೀಡುವುದುಂಟು. ವ್ಯಕ್ತಿದೋಷ ಮನುಷ್ಯನ ಸಹಜ ದೌರ್ಬಲ್ಯ. ಹಾಗಾಗಿ ವ್ಯಕ್ತಿಯ ದೋಷವನ್ನು ವಿರೋಧಿಸಬೇಕು, ಕೆಲವು ಬಾರಿ ದ್ವೇಷಿಸಲೂ ಬೇಕು ಆದರೆ ವ್ಯಕ್ತಿಯನ್ನಲ್ಲ. ರಾವಣನಂಥ ವ್ಯಕ್ತಿಯ ದೋಷಗಳನ್ನಷ್ಟೇ ಗುರುತಿಸಿ ಆತನೊಳಗಿನ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಶ್ರೀರಾಮನ ಮೇರು ವ್ಯಕ್ತಿತ್ವ ಅಸಮಾನ್ಯ. ಹಾಗಾಗಿ ಆತ ಮರ್ಯಾದಾ ಪುರುಷೋತ್ತಮ ಎನಿಸಿಕೊಂಡ. ಈ ವ್ಯಕ್ತಿತ್ವವನ್ನು ಅಳವಡಿಸಿಕೊಂಡಾಗ, ದುಷ್ಟತನ ದೂರವಾಗಿ ಸಣ್ಣತನ ಮರೆಯಾಗಿ, ನಮ್ಮೊಳಗಿನ ವ್ಯಕ್ತಿತ್ವ ವಿಜೃಂಭಿಸುತ್ತದೆ. ಆಗ ಸಾಮಾನ್ಯ ಕೂಡ ಎತ್ತರಕ್ಕೇರಬಲ್ಲ. ಉತ್ಕರ್ಷದ ಹಾದಿಯಲ್ಲಿ ಸಾಗಬಲ್ಲ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net