

ಮನುಷ್ಯ ಸ್ವಭಾವಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಕೆಲವರು ಸೌಮ್ಯ ಸ್ವಭಾವ ಹೊಂದಿದ್ದರೆ ಇನ್ನು ಕೆಲವರು ಸದಾ ಉಗ್ರರೂಪಿಗಳಾಗಿರುತ್ತಾರೆ. ಸಾಹಸ ಪ್ರವೃತ್ತಿ ಕೆಲವರಲ್ಲಿ ಎದ್ದು ಕಂಡರೆ ಉಳಿದವರು ಸಾಧು ಸಜ್ಜನರಾಗಿರುತ್ತಾರೆ. ಸ್ವಭಾವಗಳು ಪ್ರಕೃತಿದತ್ತವಾಗಿ ಬಂದಿರುವ ಗುಣವಾಗಿದ್ದರೂ ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ತಿದ್ದಿ ತೀಡುವುದರಿಂದ ವ್ಯಕ್ತಿಯ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ಮಾಡಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಆಯುರ್ವೆದ ಹಲವಾರು ಮಾರ್ಗದರ್ಶೀ ಸೂತ್ರಗಳನ್ನು ಸದ್ವೃತ್ತದ ಮೂಲಕ ನಮ್ಮ ಮುಂದಿಟ್ಟಿದೆ.
ಪರ್ವತದ ಏರುತಗ್ಗಿನ ಮೊನಚಾದ ಶಿಖರ ಪ್ರದೇಶದಲ್ಲಿ ಅಲೆದಾಡಬಾರದು. ಮಂಗಗಳು ಸಲೀಸಾಗಿ ಏರಬಲ್ಲವೆಂದು ಮನುಷ್ಯರು ಅನಿವಾರ್ಯತೆಯಿಲ್ಲದೆ ಮರವನ್ನು ಹತ್ತಬಾರದು. ನದಿ ಸ್ನಾನ ಒಳ್ಳೆಯದೆಂದು ಪುಸ್ತಕದಲ್ಲಿ ಓದಿ ತಿಳಿದುಕೊಂಡು ಉಕ್ಕಿ ಹರಿಯುವ ನದಿಯಲ್ಲಿ ಸ್ನಾನವನ್ನು ಮಾಡಬಾರದು. ನದಿಯ ಪಕ್ಕದ ದಂಡೆಯ ನೆರಳಿನಲ್ಲಿ ಕುಳಿತು ಮೈಮರೆಯಬಾರದು. ಅಗ್ನಿಯ ಜ್ವಾಲಾಮುಖಿಯೆಡೆಗೆ ಹೋಗುವ ದುಸ್ಸಾಹಸವನ್ನೂ ಮಾಡಬಾರದು. ಬೆಂಕಿಯ ಜ್ವಾಲೆಯ ಸಮೀಪ ಹೋಗುವುದೂ ಒಳ್ಳೆಯದಲ್ಲ, ಬೆಂಕಿಯನ್ನು ಕೆಳಗಿಟ್ಟು ಅದರ ಶಾಖದಿಂದ ದೇಹ ಕಾಯಿಸಲು ಕುಳಿತುಕೊಳ್ಳಬಾರದು. ಮಲಿನ ಪ್ರದೇಶ, ಹೊಟ್ಟುಧಾನ್ಯಗಳ ಬೂದಿಯ ರಾಶಿ, ಹಸಿಮಣ್ಣಿನ ದೊಡ್ಡಹೆಂಟೆ, ಯಜ್ಞಭೂಮಿ ಹಾಗೂ ಸ್ನಾನದ ಸ್ಥಳಗಳಿಗೆ ಕಾಲಿಡಕೂಡದು. ತನ್ನದೇ ನೆರಳನ್ನು ನೋಡಲು ನೀರಿನ ಬಾವಿ ಅಥವಾ ಕೆರೆಗಳೆಡೆಗೆ ಬಗ್ಗಬಾರದು. ಆಳ ತಿಳಿಯದ ಕೆರೆ, ಸರೋವರಗಳಲ್ಲಿ ಮುಳುಗಿ ಸ್ನಾನ ಮಾಡುವ ಗೋಜಿಗೆ ಹೋಗಬಾರದು. ಮೊಸಳೆ ಮೊದಲಾದ ಆಪತ್ತು ತರಬಹುದಾದ ಪ್ರಾಣಿಗಳು ವಾಸವಿರಬಹುದಾದ ಕೆರೆಗಳಿಗೆ ಇಳಿಯುವ ದುಸ್ಸಾಹಸಕ್ಕೂ ಮುಂದಾಗಬಾರದು. ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಯ ಬಳಕೆ ಯೋಗ್ಯವಾದುದು.
ಅರ್ಧಂಬರ್ಧ ಮುರಿದ ಮಂಚದ ಮೇಲೆ ರಾತ್ರಿ ಮಲಗುವುದೂ ಹಿತವಲ್ಲ. ಮಲಗುವ ಸ್ಥಳದ ಹತ್ತಿರದಲ್ಲಿ ಬಿಲಗಳು ಇಲ್ಲದಂತೆ ಎಚ್ಚರಿಕೆ ವಹಿಸಬೇಕು. ದೇವಾಲಯದಲ್ಲಿ ಅಥವಾ ಮರದ ಕೆಳಗೆ ಒಬ್ಬರೇ ಮಲಗುವುದೂ ತೆರನಲ್ಲ! ರಾತ್ರಿಯ ವೇಳೆ ಪರಿಚಿತವಲ್ಲದ ಸ್ಥಳದಲ್ಲಿ ಒಬ್ಬರೇ ಸಂಚರಿಸಬಾರದು. ಕತ್ತಲಲ್ಲಿ ತಿರುಗಾಡುವಾಗ ಕತ್ತಲ ಭಯ ನಾಶಕ್ಕೆ ಕೈಯಲ್ಲೊಂದು ದಂಡ ಹಿಡಿದುಕೊಳ್ಳಬೇಕು! ಸದಾ ಪಾದರಕ್ಷೆ ಧರಿಸಿಯೇ ಮನೆಯಿಂದ ಹೊರಹೋಗಬೇಕು! ನಡೆಯುವಾಗ ನಾಲ್ಕು ಮಾರು ದೂರಕ್ಕೆ ಕಣ್ಣಿನ ದೃಷ್ಟಿ ನೆಟ್ಟಿದ್ದರೆ ಶರೀರ ರಕ್ಷಣೆಗೆ ಒಳ್ಳೆಯದು.
ಇಲ್ಲಿ ಹೇಳಿರುವ ವಿಚಾರಗಳನ್ನೆಲ್ಲ ಓದುತ್ತ ಹೋದಂತೆ ಎಷ್ಟೊಂದು ಸೂಕ್ಷ್ಮ ವಿಚಾರಗಳನ್ನೂ ಸಾವಿರಾರು ವರ್ಷಗಳ ಹಿಂದೆಯೇ ಮನಮುಟ್ಟುವಂತೆ ವೈದ್ಯವಿಜ್ಞಾನಿಋಷಿಗಳು ಲಿಖಿತ ರೂಪದಲ್ಲಿ ಹೇಳಿದ್ದಾರೆಂದು ಹಲವರಿಗೆ ಹೆಮ್ಮೆಯಾಗಬಹುದು. ಉಳಿದ ಕೆಲವರು ಇಷ್ಟೊಂದು ಸಣ್ಣಪುಟ್ಟ ವಿಚಾರವನ್ನೂ ತಿಳಿಹೇಳುವ ಅಗತ್ಯವಿತ್ತೇ ಎಂದು ಪ್ರಶ್ನಿಸಬಹುದು. ಅನ್ನ ಹೇಗೆ ಮಾಡುವುದೆಂದು ಅಡುಗೆ ಪುಸ್ತಕದಲ್ಲಿ ಬರೆದರೆ ಕೆಲವು ದಶಕಗಳ ಹಿಂದಿನವರಿಗೆ ಬಾಲಿಶವಾಗಿ ಕಾಣುತ್ತಿತ್ತು. ಇಂದಿನವರಿಗೆ ಅದರಲ್ಲಿ ಸಮಗ್ರ ಮಾಹಿತಿಯಿದೆ ಎಂದು ಖುಷಿಯಾದೀತು! ಅಷ್ಟಕ್ಕೂ ಆಯುರ್ವೆದ ಇರುವುದು ಒಂದು ತಲೆಮಾರಿಗಾಗಿ ಅಲ್ಲ, ನೂರಾರು ಪೀಳಿಗೆಗಳ ಉದ್ಧಾರಕ್ಕಾಗಿ.