ನಮ್ಮ ಹೃದಯದ ಆರೋಗ್ಯಕ್ಕಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆಗಳು…

Heart Health
Published on

ಕೊಲೆಸ್ಟ್ರಾಲ್​ ನಮ್ಮ ದೇಹದಲ್ಲಿರುವ ಕೊಬ್ಬಿನ ಒಂದು ರೂಪವಾಗಿದೆ. ವಿಟಮಿನ್‌ಗಳು ಮತ್ತು ಕ್ಯಾಲರಿಗಳು ಸಂಗ್ರಹವಾಗಲು ಹಾಗೂ ದೇಹಕ್ಕೆ ಅಗತ್ಯವಿದ್ದಾಗ ಅವುಗಳನ್ನು ಕರಗಿಸಲು ಮತ್ತು ಬಳಸಲು ಕೊಲೆಸ್ಟ್ರಾಲ್ ತುಂಬಾ ಅವಶ್ಯಕವಾಗಿದೆ. ಅಲ್ಲದೆ, ಆಹಾರ ಜೀರ್ಣವಾಗಲು ಬೇಕಾದ ಅಂಶಗಳನ್ನು ತಯಾರಿಸಲು ಸಹ ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್​ ಅಗತ್ಯವಿದೆ.

ಆದರೆ, ಕೊಲೆಸ್ಟ್ರಾಲ್​ನಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಒಳ್ಳೆಯ ಕೊಲೆಸ್ಟ್ರಾಲ್​ (ಎಚ್​ಡಿಎಲ್-ಹೈ ಡೆನ್ಸಿಟಿ ಲಿಪೋಪ್ರೋಟಿನ್​​) ಮತ್ತು ಕೆಟ್ಟ ಕೊಲೆಸ್ಟ್ರಾಲ್​ (ಎಲ್​ಡಿಎಲ್-ಲೋ ಡೆನ್ಸಿಟಿ ಲಿಪೋಪ್ರೋಟಿನ್​). ನಮ್ಮ ದೇಹದಲ್ಲಿ ಯಾವಾಗಲೂ ಒಳ್ಳೆಯ ಕೊಲೆಸ್ಟ್ರಾಲ್​ ಶೇಖರಣೆಯಾಗಿದ್ದರೆ, ನಾವು ತುಂಬಾ ಆರೋಗ್ಯಯುತರಾಗಿರುತ್ತೇವೆ. ಹೃದಯದ ಕಾಯಿಲೆಗಳಂತಹ ಅನೇಕ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನಾವು ಕೆಲವು ಅಭ್ಯಾಸಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆ ಅಭ್ಯಾಸಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಒಳ್ಳೆಯ ಎಣ್ಣೆಗಳನ್ನು ಬಳಸಿ: ನಾವು ಸೇವಿಸುವ ಎಣ್ಣೆಗಳಿಂದಲೇ ಅತ್ಯಧಿಕ ಕೊಲೆಸ್ಟ್ರಾಲ್​ ಅನ್ನು ನಾವು ಪಡೆಯುತ್ತೇವೆ. ಹೀಗಾಗಿ ಬಳಸುವ ಎಣ್ಣೆ ತುಂಬಾ ಆರೋಗ್ಯಕರವಾಗಿರಬೇಕು. ಹೆಚ್ಚಾಗಿ ಆಲಿವ್ ಎಣ್ಣೆಯನ್ನು ಬಳಸಲು ವೈದ್ಯರು ಸೂಚಿಸುತ್ತಾರೆ. ಏಕೆಂದರೆ, ಇದರಲ್ಲಿ ಮೊನೊ-ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದೆ. ಇದರ ಬಳಕೆಯ ಬಗ್ಗೆ ಅನೇಕ ಅಧ್ಯಯನಗಳೂ ಸಹ ನಡೆದಿವೆ. ಆಲಿವ್ ಎಣ್ಣೆಯನ್ನು ಬಳಸಿದ 800,000ಕ್ಕೂ ಹೆಚ್ಚು ಜನರರಲ್ಲಿ ಹೃದ್ರೋಗದ ಅಪಾಯ ಕಡಿಮೆಯಾಗಿರುವುದನ್ನು ಸಂಶೋಧನೆ ತೋರಿಸಿದೆ. ಆಲಿವ್​ ಎಣ್ಣೆ ಮಾತ್ರವಲ್ಲದೆ, ಆಹಾರದಲ್ಲಿ ತೆಂಗಿನ ಎಣ್ಣೆ ಬಳಕೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಇದು ಹಸಿವು ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಡಿಮೆ ಕಾರ್ಬೋಹೈಡ್ರೇಟ್ಸ್​ ಸೇವಿಸಿ: ಕಡಿಮೆ ಕಾರ್ಬೋಹೈಡ್ರೇಟ್‌ಗಳು, ಹೆಚ್ಚಿನ ಪ್ರೋಟೀನ್‌ಗಳು ಮತ್ತು ಉತ್ತಮ ಕೊಬ್ಬಿನಂಶವಿರುವ ಕೆಟೋಜೆನಿಕ್ ಆಹಾರವನ್ನು ಅನುಸರಿಸುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವ ಜನರಲ್ಲಿ ಎಚ್‌ಡಿಎಲ್ ಮಟ್ಟವು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ನಿತ್ಯ ವ್ಯಾಯಾಮ: ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಹೃದ್ರೋಗವನ್ನು ತಡೆಯಬಹುದು.

ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು: ನಮ್ಮ ಎತ್ತರಕ್ಕೆ ತಕ್ಕಷ್ಟು ತೂಕವನ್ನು ಮಾತ್ರ ನಾವು ಹೊಂದುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಆಹಾರ ಮತ್ತು ವ್ಯಾಯಾಮ ಎರಡಕ್ಕೂ ಗಮನ ನೀಡಬೇಕು. ತೂಕ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಬಾದಿಸುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net