

ಅಸ್ತವ್ಯಸ್ತವಾದ ಜೀವನ ಕ್ರಮ, ಅಸಮರ್ಪಕವಾದ ಆಹಾರ ಕ್ರಮ ಮುಂತಾದ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರಿಗೆ ಆರೋಗ್ಯದ ತೊಂದರೆಗಳು ಹೆಚ್ಚಾಗತೊಡಗಿವೆ. ಅದರಲ್ಲಿ ದಢೂತಿ ದೇಹದ ಸಮಸ್ಯೆಯೂ ಒಂದು. ದೇಹದ ತೂಕವನ್ನು ಇಳಿಸಿಕೊಳ್ಳಲು ಜನರು ಮಾಡುವ ಪ್ರಯತ್ನ ಅಷ್ಟಿಷ್ಟಲ್ಲ. ಆದರೂ ಅದರಲ್ಲಿ ಯಶಸ್ಸು ಕಾಣುವವರು ವಿರಳ. ಹಾಗಾದರೆ ದೇಹ ತೂಕ ಇಳಿಸಿಕೊಳ್ಳಲು ಸುಲಭ ಉಪಾಯಗಳಿಲ್ಲವೇ? ಖಂಡಿತ ಇವೆ. ಏನವು? ತಿಳಿಯೋಣ ಬನ್ನಿ.
ಇದು ಭಾರತೀಯರಿಗೆ ದೊರೆತಿರುವ ಔಷಧೀಯ ಗುಣವುಳ್ಳ ಅತ್ಯುತ್ತಮ ಮೂಲಿಕೆ ಅರಿಶಿಣ. ಭಾರತದಲ್ಲಿ ಇದರ ಬಳಕೆಯನ್ನು ಪ್ರಾಚೀನ ಕಾಲದಿಂದಲೂ ಕಾಣಬಹುದು. ಪ್ರಸ್ತುತ ಅರಿಶಿಣವಿಲ್ಲದ ಮನೆಯನ್ನು ಕಾಣಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಭಾರತೀಯರ ಮನೆ ಹಾಗೂ ಮನದಲ್ಲಿ ಅರಿಶಿಣವು ಅಂತರ್ಗತವಾಗಿದೆ. ಹೌದು. ಎಲ್ಲ ತರಹದ ಅಡುಗೆ ಹಾಗೂ ಮಸಾಲೆ ಪದಾರ್ಥಗಳಿಂದ ಹಿಡಿದು, ಬಟ್ಟೆಗಳಿಗೆ ಬಣ್ಣ ಕಟ್ಟುವುದು, ಜತೆಗೆ ವೈದ್ಯಕೀಯವಾಗಿ ಹಲವು ಕಾಯಿಲೆಗಳಿಗೆ, ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ, ಚರ್ಮದ ಆರೈಕೆಗೆ ಈ ಅರಿಶಿಣವು ದಿವ್ಯೌಷಧವೇ ಸರಿ.
ಅರಿಶಿಣವು ಅತ್ಯುತ್ತಮ ಆಂಟಿಆಕ್ಸಿಡೆಂಟ್ ಆಗಿದ್ದು, ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿದೆ. ಹೀಗಾಗಿ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಚರ್ಮದ ರೋಗ, ಅಲರ್ಜಿ ಹಾಗೂ ಕೀಲು ಸಂಬಂಧಿ ಕಾಯಿಲೆಗಳಿಗೆ ಅರಿಶಿಣವನ್ನು ಚಿಕಿತ್ಸಕವಾಗಿ ಬಳಸಲಾಗುತ್ತದೆ. ಒಂದು ವೇಳೆ ನೀವು ದೇಹ ಶುದ್ಧೀಕರಣಕ್ಕಾಗಿ ಹಂಬಲಿಸುತ್ತಿದ್ದರೆ, ಅದಕ್ಕೆ ಅರಿಶಿಣದ ನೀರು ಅತ್ಯುತ್ತಮ ಪೇಯ. ನೀರಿಗೆ ಅರಿಶಿಣದ ಪುಡಿ ಬೆರೆಸಿ ಕುಡಿಯುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ.
ದೇಹತೂಕ ಇಳಿಕೆಗೆ ಅರಿಶಿಣದ ನೀರು ಸಹಾಯಕ: ಅರಿಶಿಣವು ಔಷಧೀಯ ಅಂಶಗಳನ್ನು ಹೊಂದಿದ್ದು, ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ. ಅರಿಶಿಣದ ನೀರು ನೈಸರ್ಗಿಕ ಡಿಟಾಕ್ಸ್ ಆಗಿ ಕಾರ್ಯನಿರ್ವಹಿಸಿ, ದೇಹದಲ್ಲಿನ ವಿಷವನ್ನು ತೆಗೆದುಹಾಕುವುದಲ್ಲದೆ, ದೇಹವು ಪುನಃ ಯೌವನದ ಗುಣಲಕ್ಷಣಗಳನ್ನು ಪಡೆಯಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಚಿಂತಿಸುತ್ತಿರುವವರಿಗಂತೂ ಈ ಅರಿಶಿಣದ ನೀರು ಉತ್ತಮ ಮಾರ್ಗವಾಗಿದೆ. ಏಕೆಂದರೆ ಇದು ಬಲವಾದ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಕಡಿಮೆ ಮಾಡುವ ಲಕ್ಷಣ ಹೊಂದಿರುವುದರಿಂದ ಈ ಮೂಲಿಕೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಯೂರೋಪಿಯನ್ ರಿವ್ಯೆ ಫಾರ್ ಮೆಡಿಕಲ್ ಮತ್ತು ಫಾರ್ಮಾಕೊಲಾಜಿಕಲ್ ಸೈನ್ಸ್ ಕೈಗೊಂಡ ಅಧ್ಯಯನದ ಪ್ರಕಾರ, ಅಧಿಕ ತೂಕ ಹೊಂದಿದ್ದ ವಯಸ್ಕರು ಕಟ್ಟುನಿಟ್ಟಾದ ಆಹಾರಕ್ರಮದೊಂದಿಗೆ ತೆಗೆದುಕೊಂಡ 800 ಮಿಲಿಗ್ರಾಂ ಪೂರಕ ಆಹಾರದಲ್ಲಿ ಶೇಕಡಾ 95ರಷ್ಟು ಕರ್ಕ್ಯುಮಿನ್ (ಅರಿಶಿಣದಲ್ಲಿ ಕಂಡುಬರುವ ಸಂಯುಕ್ತ ಅಂಶ) ಇದ್ದು, 30 ದಿನಗಳಲ್ಲಿ ಅವರ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಶೇಕಡಾ 2ರಷ್ಟು ಹೆಚ್ಚಿತ್ತು. ಅದೇ ರೀತಿ 60 ದಿನಗಳಲ್ಲಿ ಅವರ ಬಿಎಂಐ ಶೇಕಡಾ 5ರಿಂದ 6ಕ್ಕೆ ಹೆಚ್ಚಾಗಿ ದೇಹದಲ್ಲಿ ಶೇಕಡಾ 8ರಷ್ಟು ಕೊಬ್ಬಿನ ನಷ್ಟಕ್ಕೆ ಕಾರಣವಾಯಿತು.
ಅರಿಶಿಣದ 6 ಮುಖ್ಯ ಗುಣಗಳು
1. ಕರುಳಿನ ಕ್ಷಮತೆ ಸುಧಾರಣೆ: ಅರಿಶಿಣವು ಪಿತ್ತಕೋಶ ಮತ್ತು ಇತರ ಜೀರ್ಣಕಾರಿ ಕಿಣ್ವಗಳಲ್ಲಿ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಿ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗೆ ದೃಢವಾದ ಚಯಾಪಚಯ ವ್ಯವಸ್ಥೆಯು ತೂಕ ಕಡಿಮೆಯಾಗಲು ಕಾರಣವಾಗುತ್ತದೆ.
2. ಹೃದಯದ ತೊಂದರೆಗಳಿಗೆ ತಡೆ: ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದ್ರೋಗಗಳು ಉಂಟಾಗುತ್ತವೆ. ಅರಿಶಿಣವು ಈ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ, ರಕ್ತನಾಳಗಳ ಒಳಪದರವನ್ನು ಸುಧಾರಿಸುತ್ತದೆ. ರಕ್ತದೊತ್ತಡ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ.
3. ಮರೆವಿನ ಕಾಯಿಲೆ ನಿಯಂತ್ರಣ: ನೆನಪಿನ ಶಕ್ತಿ ಕುಂಠಿತಗೊಳ್ಳುವ ಅಲ್‌ಜೈಮರ್ಸ್ ಕಾಯಿಲೆಗೆ ವೈದ್ಯಕೀಯ ವಿಜ್ಞಾನದಲ್ಲಿ ಇದುವರೆಗೆ ಔಷಧ ಕಂಡುಹಿಡಿದಿಲ್ಲ. ಆದರೆ ಈ ಕಾಯಿಲೆ ಬರದಂತೆ ತಡೆಯುವಲ್ಲಿ ಅರಿಶಿಣವು ಮುಖ್ಯ ಪಾತ್ರ ವಹಿಸುತ್ತದೆ. ಅರಿಶಿಣವು ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿದ್ದು, ಇದು ನೆನಪಿನ ಶಕ್ತಿಗೆ ಹಾನಿಯಾಗದಂತೆ ತಡೆಯುತ್ತದೆ.
4. ಉರಿಯೂತ ಕಡಿಮೆ: ರಾತ್ರಿಯಲ್ಲಿ ಬೆಚ್ಚಗಿನ ನೀರಿಗೆ ಅರಿಶಿಣ ಸೇರಿಸಿ ಕುಡಿಯುವುದರಿಂದ ದೇಹದ ಉರಿಯೂತ ಕಡಿಮೆ ಆಗುತ್ತದೆ. ಅರಿಶಿಣದಲ್ಲಿ ಉರಿಯೂತವನ್ನು ನಿಯಂತ್ರಿಸುವ ಅಂಶಗಳಿರುವುದರಿಂದ ಸಂಧಿವಾತ ಮತ್ತು ದೀರ್ಘಕಾಲದ ಉರಿಯೂತದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಅರಿಶಿಣದ ನೀರು ವಯಸ್ಸಾದವರಲ್ಲಿ ಕೀಲುಗಳ ನೋವನ್ನು ನಿವಾರಿಸುತ್ತದೆ.
5. ಚರ್ಮದ ಆರೋಗ್ಯ ಸುಧಾರಣೆ: ಅರಿಶಿಣವು ರಕ್ತವನ್ನು ಶುದ್ದೀಕರಿಸುವುದಲ್ಲದೆ ಟಾಕ್ಸಿನ್‌ಗಳನ್ನು ಆಚೆ ಹಾಕುವಲ್ಲಿಯೂ ಕೆಲಸ ಮಾಡುತ್ತದೆ. ಅರಿಶಿಣದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದ ಜೀವಕೋಶಗಳಿಗೆ ಹಾನಿಯಾಗದಂತೆ ತಡೆದು, ಹೊಳಪನ್ನು ಹೆಚ್ಚಿಸುವುದಲ್ಲದೆ ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ. ಅರಿಶಿಣ ನೀರು ತ್ವಚೆಯನ್ನು ಹೆಚ್ಚು ಕಾಂತಿಯುತವಾಗಿಸುವುದಲ್ಲದೆ, ಆರೋಗ್ಯವಾಗಿಡುತ್ತದೆ.
6. ರೋಗನಿರೋಧಕ ಶಕ್ತಿ ಹೆಚ್ಚಳ: ಕೊನೆಯದಾಗಿ ಅರಿಶಿಣದ ನೀರು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯಕವಾಗುತ್ತದೆ. ಅರಿಶಿಣವು ಆ್ಯಂಟಿಆಕ್ಸಿಡೆಂಟ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದರ ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಗೆ ಜಾಗತಿಕ ಮನ್ನಣೆ ದೊರೆತಿದೆ.
ಯಾವಾಗ ಸೇವಿಸಬೇಕು?: ಭಾರತದ ಮಸಾಲೆ ಪದಾರ್ಥದಲ್ಲಿ ರಾಜನೆನಿಸಿರುವ ಅರಿಶಿಣವು ಅನೇಕ ವರ್ಷಗಳಿಂದ ಹಲವು ರೋಗಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ನಾವು ಸೇವಿಸುವ ಆಹಾರದೊಂದಿಗೆ 1 ಚಮಚ ಅರಿಶಿಣ ಸೇರಿಸುವುದು ಒಳ್ಳೆಯದು. ಅರಿಶಿಣದ ನೀರನ್ನು ಕುಡಿಯುವುದರಿಂದಲೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಅರಿಶಿಣದ ನೀರಿಗೆ ರುಚಿಗೆ ಬೇಕಿದ್ದರೆ ಜೇನುತುಪ್ಪವನ್ನೂ ಸೇರಿಸಬಹುದು. ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸುವುದು ಒಳ್ಳೆಯದು.