ಮನೋಲ್ಲಾಸ: ದೃಢಚಿತ್ತರಾಗೋಣ

Manollasa
Published on

ಚಿದಂಬರ ಮುನವಳ್ಳಿ

ಸಮುದ್ರದ ದಡದಲ್ಲಿರುವ ಮರದ ಪೊದೆಯಲ್ಲಿ ಪಕ್ಷಿಯೊಂದು ಮೊಟ್ಟೆಗಳನ್ನಿಟ್ಟು ಅತ್ಯಂತ ಕಾಳಜಿಯಿಂದ ಜೋಪಾನ ಮಾಡಿತ್ತು. ಒಂದು ದಿನ ಆಹಾರಕ್ಕೋಸ್ಕರ ಅದು ಹೊರಗಡೆ ಹೋಗಿ ತಿರುಗಿ ಬಂದು ನೋಡಿದರೆ ಮೊಟ್ಟೆಗಳು ನಾಪತ್ತೆ. ಅಲ್ಲಿರುವ ಬೇರೆ ಪಕ್ಷಿಗಳನ್ನು ಕೇಳಿದಾಗ ತಿಳಿಯಿತು.

ಸಮುದ್ರವು ಭೀಕರ ತೆರೆಗಳೊಡನೆ ಮುನ್ನುಗಿ ಆ ಮೊಟ್ಟೆಗಳನ್ನು ತನ್ನತ್ತ ಸೆಳೆದುಕೊಂಡು ಬಿಟ್ಟಿತ್ತು. ಆ ಪಕ್ಷಿಗೆ ತೀವ್ರ ದುಃಖ ಉಂಟಾಗಿ ಸಮುದ್ರವನ್ನು ಕೇಳಿಕೊಂಡಿತು- ‘ಮರಿಯಾಗಿ ಹೊರಬರಬೇಕಾಗಿದ್ದ ಆ ನನ್ನ ಮೊಟ್ಟೆಗಳನ್ನು ದಯವಿಟ್ಟು ಹಿಂತಿರುಗಿಸು.’ ಸಮುದ್ರವು ತಿರಸ್ಕಾರದಿಂದ ಹೇಳಿತು- ‘ನನ್ನ ಸ್ವಭಾವವು ಗೊತ್ತಿದ್ದೂ ನನ್ನ ದಡದ ಮೇಲೆ ಮೊಟ್ಟೆಗಳನ್ನಿಟ್ಟಿದ್ದು ನಿನ್ನ ತಪು್ಪ. ಸಿಗುವುದಿಲ್ಲ ಹೋಗು.’ ಪಕ್ಷಿ ಹೇಳಿತು- ‘ನಾನು ದೂರದಲ್ಲಿ ಪೊದೆಯೊಳಗೆ ಮೊಟ್ಟೆಗಳನ್ನು ಇಟ್ಟಿದ್ದೆ. ನೀನೇ ಅತಿಕ್ರಮಣ ಮಾಡಿದ್ದೀಯಾ. ಬೇಗ ಹಿಂತಿರುಗಿಸು. ಇಲ್ಲವಾದರೆ ನಾನು ನಿನ್ನನ್ನೇ ಒಣಗಿಸಿ ಬಿಡುತ್ತೇನೆ.’ ಸಮುದ್ರವು ಗಹಗಹಿಸಿ ನಕ್ಕುಬಿಟ್ಟಿತು. ಮರುದಿನದಿಂದ ಆ ಪಕ್ಷಿಯು ಸಮುದ್ರದಿಂದ ಒಂದೊಂದೇ ಹನಿಯನ್ನು ತನ್ನ ಚುಂಚಿನಿಂದ ತೆಗೆದು ಹಾರಿ ಬಂದು ಭೂಮಿಯ ಮೇಲೆ ಹಾಕಲಿಕ್ಕೆ ಆರಂಭಿಸಿತು. ಅದನ್ನು ನೋಡಿ ಉಳಿದ ಪಕ್ಷಿಗಳು, ‘ಇದೇನು ಮಾಡುತ್ತಿರುವೆ? ಹೀಗೆ ಮಾಡಿ ಸಮುದ್ರವನ್ನು ಒಣಗಿಸಲು ಸಾಧ್ಯವೇ?’ ಎಂದು ಕೇಳಿದವು. ಪಕ್ಷಿ ಹೇಳಿತು, ‘ನನ್ನ ಸಂಕಟ ನಿಮಗೆ ಅರ್ಥವಾಗುವುದಿಲ್ಲ. ಸಮುದ್ರ ಒಣಗುವವರೆಗೂ ನನ್ನ ಕಾಯಕ ನಿಲ್ಲುವುದಿಲ್ಲ.’ ಉಳಿದ ಪಕ್ಷಿಗಳಿಗೂ ಕನಿಕರ ಬಂದು ಅದರ ಸಹಾಯಕ್ಕೆ ನಿಂತವು. ಅವುಗಳೂ ಒಂದೊಂದು ಹನಿಯನ್ನು ಸಮುದ್ರದಿಂದ ತರಲಾರಂಭಿಸಿದವು. ಒಂದು ದಿನ ಪಕ್ಷಿಗಳ ಈ ಸಾಮೂಹಿಕ ಕಾರ್ಯವನ್ನು ಪಕ್ಷಿರಾಜನಾದ ಗರುಡನು ನೋಡಿದನು. ಇವುಗಳಿಂದ ಈ ಕಾರ್ಯವು ಅಸಾಧ್ಯವೆಂದೆನಿಸಿ ತನ್ನ ಸ್ವಾಮಿಯಾದ ವಿಷ್ಣು ಭಗವಾನ್​ಗೆ ವಿಷಯವನ್ನು ತಿಳಿಸಿದನು. ಪಕ್ಷಿಗಳ ಈ ದೃಢ ನಿಶ್ಚಯವು ಅವನಿಗೂ ಮೆಚ್ಚುಗೆಯಾಯಿತು. ಅಲ್ಲಿಯೇ ಇದ್ದ ಕ್ಷೀರಾಬ್ದಿತನಯೆ ಮಹಾಲಕ್ಷಿ್ಮಗೂ ತನ್ನ ಜನ್ಮಸ್ಥಾನವಾದ ಸಾಗರದಿಂದ ನಡೆದ ಈ ಕೃತ್ಯವು ಸರಿ ಎನಿಸಲಿಲ್ಲ. ಅವರಿಬ್ಬರೂ ಸಮುದ್ರದ ಹತ್ತಿರ ಬಂದು, ‘ನಿಷ್ಪಾಪಿಯಾದ ಪಕ್ಷಿಯ ಮೊಟ್ಟೆಗಳನ್ನು ಹಿಂತಿರುಗಿಸದಿದ್ದರೆ ನಿನಗೆ ದೊಡ್ಡ ಶಿಕ್ಷೆ ಕಾದಿದೆ’ ಎಂದಾಗ ಸಮುದ್ರರಾಜನು ಹೆದರಿ ಶರಣು ಬಂದು ಮೊಟ್ಟೆಗಳನ್ನು ಹಿಂತಿರುಗಿಸಿದ.

ಸ್ವಪ್ರಯತ್ನ ಮಾಡುವವರಿಗೆ ದೇವರೂ ಸಹಾಯ ಮಾಡುತ್ತಾನೆ. ಸುಮ್ಮನೆ ನೆಪ, ಸಬೂಬು ಹೇಳುತ್ತ ಗೋಳಾಡಿದರೆ ಏನೂ ಸಾಧಿಸಲಾಗುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಕೆಲವೇ ಕೆಲವು ಸೈನಿಕರು ಸಾವಿರಾರು ಸಂಖ್ಯೆಯಲ್ಲಿರುವ ಶತ್ರುಗಳನ್ನು ಹಿಮ್ಮೆಟ್ಟಿಸಲಿಲ್ಲವೇ? ಓಡಲೇಬೇಕೆನ್ನುವವನಿಗೆ ಅವನು ಧರಿಸಿದ ಬೂಟುಗಳಿಗಿಂತ ಕಾಲಿನಲ್ಲಿರುವ ಬಲದ ಮೇಲೆ ವಿಶ್ವಾಸವಿರುತ್ತದೆ. ‘ವ್ಯವಸಾಯಾತ್ಮಿಕಾ ಬುದ್ಧಿ ಏಕೇಹ’- ಏಕನಿಷ್ಠವಾಗಿ ಮಾಡಿದ ಕೆಲಸವು ಕರ್ಮಯೋಗವಾಗುವುದರ ಜೊತೆಗೆ ನಮ್ಮಲ್ಲಿರುವ ಆಲಸ್ಯ, ಅಜ್ಞಾನಗಳೂ ಹನಿಹನಿಯಾಗಿ ಕಳೆದು ಹೋಗುವಂತೆ ಮಾಡುತ್ತದೆ. ದೃಢಚಿತ್ತರಾಗೋಣ.

(ಲೇಖಕರು ಬ್ಯಾಂಕ್ ನಿವೃತ್ತ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net