ಮನೋಲ್ಲಾಸ: ಸತ್ಯದ ಸೌಧದಲ್ಲಿದೆ ಸ್ವಾಸ್ಥ್ಯ ಸಮಾಜ

Manollasa
Published on
  • ಡ್ಯಾನಿ ಪಿರೇರಾ

ಅದೊಂದು ಪುಟ್ಟಹಳ್ಳಿ. ಸುಳ್ಳೇ ಸರ್ವಸ್ವವೆಂದು ಭಾವಿಸಿದ್ದರು ಆ ಜನ. ತಾವು ಎಲ್ಲರನ್ನೂ ಮೀರಿಸುವಂತೆ ಸುಳ್ಳು ಹೇಳಿ ಯಾಮಾರಿಸುತ್ತೇವೆಂಬ ವಿಚಿತ್ರ ತೃಪ್ತಿ ಅವರೊಳಗೆ ಲಾಸ್ಯವಾಡುತ್ತಿತ್ತು. ಅವರಲ್ಲಿ ಸುಳ್ಳಿನ ತೀವ್ರತೆ ಎಷ್ಟಿತ್ತೆಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಿತ್ರರಿಬ್ಬರಲ್ಲಿ ಒಬ್ಬ ಇದ್ದಕ್ಕಿದ್ದಂತೆ ದೂರದ ಬೆಟ್ಟವನ್ನು ತೋರಿಸಿ ಅದರೊಳಗೆ ಒಂದು ಸುಳ್ಳನ್ನು ಪೋಣಿಸಿ- ‘ಅಲ್ಲಿ ನೋಡು ಆ ಬೆಟ್ಟ, ಅಲ್ಲೊಂದು ಇರುವೆಗಳ ಸಾಲು ಕಾಣುತ್ತಿದೆಯಾ?! ಎಷ್ಟು ಶಿಸ್ತಾಗಿ ಹೋಗುತ್ತಿವೆಯಲ್ಲ ಆ ಇರುವೆಗಳು! ನಿನಗದು ಕಾಣಿಸುತ್ತಿಲ್ಲವೇ?’ ಎಂದ. ಆತನ ಸುಳ್ಳಿಗೆ ಟಕ್ಕರ್ ಕೊಡಲು ಜೊತೆಗಾರ ಸಿದ್ಧನಾಗಿಯೇ ಇದ್ದ. ಆತ- ‘ಹೌದು, ಇರುವೆ ಸಾಲು ಚೆನ್ನಾಗಿಯೇ ಕಾಣುತ್ತಿದೆ. ಆದರೆ, ಒಂದು ಇರುವೆಯ ಬಲಗಾಲು ಸ್ವಲ್ಪ ವಕ್ರವಾಗಿದೆ. ಅದು ಕುಂಟುತ್ತ ಹೋಗುತ್ತಿದೆ, ಛೆ! ಪಾಪ’ ಎಂದ.

ಶಾಸ್ತ್ರ, ಸಂಪ್ರದಾಯ, ಜ್ಯೋತಿಷ್ಯ ಬಲ್ಲವರೆಲ್ಲ, ‘ಸುಳ್ಳು, ಕುಟಿಲತೆಯ ಭಾರಕ್ಕೆ ಈ ಹಳ್ಳಿಯ ಅವಸಾನ ತಡೆಯಲು ಆ ಭಗವಂತನಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು. ಈ ನಡುವೆ ಅಲ್ಲೊಬ್ಬ ಧ್ಯೇಯವಾದಿ ಸಂನ್ಯಾಸಿ ಬಂದ. ಆ ಯುವ ಸಂನ್ಯಾಸಿ ಸುಸಂಸ್ಕೃತ ವ್ಯಕ್ತಿತ್ವದ ನೀತಿವಂತನಾಗಿದ್ದ. ಆತನ ಆಳವಾದ ಜ್ಞಾನ, ಸ್ವಾರ್ಥತ್ಯಾಗದ ಪರೋಪಕಾರಿ ಬುದ್ಧಿ ಊರಿನವರ ಗಮನ ಸೆಳೆಯಿತು. ಆರಂಭದಲ್ಲಿ ಆ ಊರಿನ ಸುಳ್ಳಿನ ಕುಟಿಲತೆಗೆ ತಾನೇ ಸಂತ್ರಸ್ತನಾದರೂ ಇದಕ್ಕೆಲ್ಲ ಇತಿಶ್ರೀ ಹಾಡಲು ಸಂನ್ಯಾಸಿ ಸಂಕಲ್ಪಿತನಾಗಿದ್ದ. ಹೊಸ ತಲೆಮಾರಿನ ಹುಡುಗರೊಂದಿಗೆ ಸ್ನೇಹ ಬಯಸಿ ಅವರಳಗೊಬ್ಬನಾದ ಸಂನ್ಯಾಸಿ ತನ್ನ ವಿಶುದ್ಧ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆದ. ನೋಡ ನೋಡುತ್ತಿದ್ದಂತೆ ಸಂನ್ಯಾಸಿಯ ಸಾಂಗತ್ಯ ಎಲ್ಲರಿಗೂ ಆಪ್ಯಾಯಮಾನ ಎನಿಸಿತು. ಮಕ್ಕಳು ಮತ್ತು ಪ್ರೌಢಾವಸ್ಥೆಯ ಹುಡುಗರಿಗೆ ಆತನ ವ್ಯಕ್ತಿತ್ವ ಅನುಸರಿಸಲು ಬಯಸುವ ಕೇಂದ್ರಬಿಂದು ಎನಿಸಿತು. ಕೆಲವೇ ವರ್ಷಗಳಲ್ಲಿ ಊರಿನ ಮಕ್ಕಳ ಅಲೋಚನಾ ಲಹರಿಯೇ ಬದಲಾಯಿತು. ಅವರೊಳಗೆ ಪರಿವರ್ತನೆಯ ಬೀಜ ಬಿತ್ತಿ ಅದರೊಳಗೆ ಸತ್ಯ ಬದುಕಿನ ಫಸಲನ್ನು ಆ ಸಂನ್ಯಾಸಿ ತೆಗೆದಿದ್ದ.

ಹೌದು, ಸಮಾಜದಲ್ಲಿ ಎಲ್ಲರೂ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ, ಉಪದೇಶಕ್ಕಿಂತ ಸಜ್ಜನರ ಮಾರ್ಗದರ್ಶನ ಮುಖ್ಯ. ಅದರಲ್ಲೂ ಗುರು-ಹಿರಿಯರು ನೀಡುವ ಉಪದೇಶಕ್ಕಿಂತ ಅವರ ನಡೆಯ ಪ್ರವೃತ್ತಿಯನ್ನು ಯುವಕರು ಹೆಚ್ಚು ಗಮನಿಸುತ್ತಾರೆ. ಅದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ-

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ |

ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ||

ಅಂದರೆ- ಶ್ರೇಷ್ಠ ಪುರುಷರು ಯಾವ ಆಚರಣೆಗಳನ್ನು ಮಾಡುತ್ತಾರೋ ಸಾಮಾನ್ಯ ಜನರೂ ಹಾಗೆಯೇ ಮಾಡುತ್ತಾರೆ. ಅವರು ಯಾವುದನ್ನು ಪ್ರಮಾಣವೆಂದು ಮಾಡಿ ತೋರಿಸುತ್ತಾರೋ ಸಮಸ್ತ ಜನರೂ ಅದಕ್ಕನುಸಾರವಾಗಿ ವರ್ತಿಸಲು ತೊಡಗುತ್ತಾರೆ. ಹಾಗಾಗಿ ಉತ್ತಮ ಆಲೋಚನೆಗೆ ಅಡಿಪಾಯ ಹಾಕೋಣ. ಸತ್ಯದ ಸೌಧ ಕಟ್ಟುವ ಪ್ರಯತ್ನದಲ್ಲಿ ಸ್ವಾಸ್ಥ್ಯ ಸಮಾಜಕ್ಕೆ ಮುನ್ನುಡಿ ಬರೆಯೋಣ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net