ಮನೋಲ್ಲಾಸ: ಸೋಲೇ ಗೆಲುವಿನ ಸೋಪಾನ

ravindranath
Published on
  • ಮಹಾದೇವ ಬಸರಕೋಡ

ಒಂದು ಬಾರಿ ಕವಿ ರವೀಂದ್ರನಾಥ್ ಟ್ಯಾಗೋರ್ ಯಮುನಾ ನದಿಯಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಒಳಗೆ ಕತ್ತಲು ಆವರಿಸಿತ್ತು. ಕವಿಯ ಮನದಲ್ಲಿ ಕವಿತೆ ರಚಿಸಬೇಕೆಂಬ ತುಡಿತ. ಹಡಗಿನಲ್ಲಿಯ ಕೊಠಡಿಯೊಂದಕ್ಕೆ ಹೋಗಿ ಅಲ್ಲಿ ಮೇಣದಬತ್ತಿಯನ್ನು ಹೊತ್ತಿಸಿ ಅದರ ಬೆಳಕಿನಲ್ಲಿ ಕವಿತೆ ರಚಿಸಲು ಮುಂದಾದರು. ಅದೆಷ್ಟೇ ಪ್ರಯತ್ನಿಸಿದರೂ ಅವರಿಂದ ಕವಿತೆ ರಚಿಸಲು ಸಾಧ್ಯವಾಗಲೇ ಇಲ್ಲ. ರವೀಂದ್ರರು ನಿರಾಶರಾಗಿ ಕೈಚೆಲ್ಲಿ ಆ ಕ್ಷಣದ ಸೋಲನ್ನು ಒಪ್ಪಿಕೊಂಡು ಮೇಣದಬತ್ತಿಯನ್ನು ನಂದಿಸಿ ಹೊರಬಂದರು.

ಹೊರಗೆ ಪೂರ್ಣಚಂದಿರ ನಗುತ್ತಿದ್ದ. ಹುಣ್ಣಿಮೆಯ ಬೆಳದಿಂಗಳು ಯಮುನಾ ನದಿಯ ಮಡಿಲು ತುಂಬಿ ಮೋಹಕತೆಯನ್ನು ಸೃಷ್ಟಿಸಿತ್ತು. ಸುಂದರ, ಆಹ್ಲಾದಕರ ವಾತಾವರಣ ರಮ್ಯತೆಯನ್ನು ಅನಾವರಣಗೊಳಿಸಿತ್ತು. ಇದರಿಂದ ಪುಳಕಿತರಾದ ರವೀಂದ್ರರ ಹೃದಯದಾಳದ ಭಾವನೆಗಳು ಓತಪ್ರೋತವಾಗಿ ಹರಿದು ಬರತೊಡಗಿದವು. ಅಪರೂಪದ ಕಾವ್ಯ ಸೃಷ್ಟಿಯಾಗಿತ್ತು. ಕವಿ ರವೀಂದ್ರ ತಮ್ಮ ಸೋಲನ್ನು ಆ ಕ್ಷಣಕ್ಕೆ ಮನಸಾರೆ ಒಪ್ಪಿಕೊಂಡು ಅದರಿಂದ ಹೊರಬಂದಿದ್ದರು. ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡಲು ಅವರ ಆ ಕ್ಷಣದ ನಿರ್ಧಾರ ಸಹಕಾರಿಯಾಗಿತ್ತು. ಅವರಿಗೆ ಯಶಸ್ಸು ದೊರಕಿತ್ತು. ಇದು ಸೋಲನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಎದುರಿಸುವ ಪ್ರಪ್ರಥಮ ಹೆಜ್ಜೆಯಾಗಿದೆ.

ಡಿವಿಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳುವಂತೆ ಸೋಲು ನಮ್ಮನ್ನು ಹೆದರಿಸದಂತೆ ಜಾಗ್ರತೆ ವಹಿಸಬೇಕು. ಸೋಲಿಗೆ ಕಾರಣವಾದ ಸಂಗತಿಗಳನ್ನೇ ಗೆಲುವಿನೆಡೆಗೆ ಕರೆದ್ಯೊಯಲು ಕೈ ಹಿಡಿಯಬೇಕು.

ಪರಿಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು!

ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ!!

ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ!

ಬಿರಿದನೆ ಫಲಕೆ ಮನೆ-ಮಂಕುತಿಮ್ಮ!!

ಬದುಕಿನ ಹಾದಿಯಲಿ ಸೋಲಿನ ಅನುಭವಗಳು, ವಿಧವಿಧ ಪರೀಕ್ಷೆಗಳು ಅನಿವಾರ್ಯವೇ ಆಗಿವೆ. ಅವುಗಳು ಮನಸ್ಸನ್ನು ಗಟ್ಟಿಗೊಳಿಸಬಲ್ಲವು. ಅರಳಿದ ಮೊಗ್ಗು ಹಣ್ಣಿನ ಉಗಮಕ್ಕೆ ಕಾರಣವಾಗುವಂತೆ ಸೋಲು ನಮ್ಮ ಗೆಲುವಿಗೆ ಮುನ್ನುಡಿಯಾಗಬೇಕು. ಸಮುದ್ರದಲ್ಲಿ ಬಿದ್ದ ಒಂದು ಅಲೆ, ಕೆಳಕ್ಕೆ ಬಿದ್ದು ಮುಂದೆ ಏಳುವ ಅಲೆಗೆ ಶಕ್ತಿ ತುಂಬುವಂತೆ ಸೋಲು ನಮ್ಮ ಗೆಲುವಿಗೆ ಗಟ್ಟಿ ನೆಲೆಯನ್ನು ಒದಗಿಸಬಲ್ಲದು. ಪ್ರಶಾಂತವಾದ ಸಾಗರ ಎಂದಿಗೂ ಉತ್ತಮ ನಾವಿಕನನ್ನು ರೂಪಿಸಲಾರದು ಎಂಬ ಆಂಗ್ಲಗಾದೆ, ‘ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಬಯಸಿದರೆ, ನಿಮ್ಮ ಸೋಲಿನ ಪ್ರಮಾಣವನ್ನು ದ್ವಿಗುಣಗೊಳಿಸಿ’ ಎಂಬ ಟಾಮ್ ವಾಟ್ಸ್​ನ್ ಸೀನಿಯರ್ ಅವರ ಮಾತು, ಥಾಮಸ್ ಆಲ್ವಾ ಎಡಿಸನ್​ರ ಬಲ್ಬ್ ಪ್ರಯೋಗದ ಯಶಸ್ಸು, ಸೋಲುಗಳು ನಮ್ಮ ಕೈ ಹಿಡಿದು ಗೆಲುವಿನ ಹಾದಿಯಲಿ ಕರೆದೊಯ್ಯಬಲ್ಲವು ಎಂಬುದಕ್ಕೆ ಪುರಾವೆ ನೀಡುತ್ತವೆ. ಸೋಲು ನಮಗೆ ಗೆಲುವಿನ ತರಬೇತಿಯ ಪಾಠಶಾಲೆಯಾಗಿದೆ. ಸೋಲು ನಮಗೆ ಬಹಳಷ್ಟನ್ನು ಕಲಿಸಿಕೊಡುತ್ತದೆ. ಮನುಷ್ಯ ಗೆಲುವಿನಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ಸೋಲಿನಿಂದ ಕಲಿಯಬಲ್ಲ. ಸೋಲು ಗೆಲುವಿನ ಮುಂದೂಡಿಕೆ ಮಾತ್ರ ಆಗಿದೆ ಎಂಬ ಸತ್ಯವನ್ನು ನಾವು ಅರಿಯಬೇಕಿದೆ. ಇದನ್ನು ಅರಿಯುವ ಜಾಣತನ, ತಾಳ್ಮೆ ನಮಗೆ ಇದ್ದಾಗ ಎಲ್ಲ ಸೋಲುಗಳನ್ನು ಗೆಲುವಿನ ಸೋಪಾನವಾಗಿಸಿಕೊಳ್ಳಬಹುದು.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net