

ರೈತನೊಬ್ಬ ಧೋ ಎಂದು ಸುರಿಯುವ ಮಳೆಯಲ್ಲಿ ಉರುವಲು ಇಲ್ಲ ಎನ್ನುವ ಕಾರಣಕ್ಕೆ ಉಪವಾಸವಿರುತ್ತಾನೆ. ಉರುವಲಿಗೋಸ್ಕರ ತೀವ್ರ ಹುಡುಕಾಟ ನಡೆಸಿ ಕಡೆಗೆ ಚಾವಡಿಯಲ್ಲಿದ್ದ ದೊಡ್ಡ ಕಟ್ಟಿಗೆಯ ತುಂಡನ್ನೆ ಕಡಿಯಲು ಮುಂದಾಗುತ್ತಾನೆ. ಆದರೆ ಅದು ಕಟ್ಟಿಗೆಯಾಗಿರದೆ, ಕಟ್ಟಿಗೆಯ ರೂಪದಲ್ಲಿದ್ದ ಮಾರಿದೇವತೆಯಾಗಿರುತ್ತದೆ. ತನ್ನನ್ನು ಕಡಿಯಲು ಬಂದ ರೈತನ ಮೇಲೆ ಕೋಪ ಮಾಡಿಕೊಳ್ಳದೆ ಮಾರಿದೇವತೆ ತನ್ನ ನಿಜರೂಪ ತೋರಿಸಿ ‘ನನ್ನನ್ನೇಕೆ ಸೀಳ ಹೊರಟೆ?’ ಎಂದಾಗ ಆತ ಹಸಿವಿನ ಕಾರಣವನ್ನು ಹೇಳುತ್ತಾನೆ. ಎಷ್ಟೇ ಕಷ್ಟ ಬಂದರೂ ಕಷ್ಟಸಹಿಷ್ಣುವಾಗಿ ಬದುಕುವ ರೈತನ ಅದಮ್ಯ ಉತ್ಸಾಹ ಕಂಡು ‘ನನ್ನನ್ನು ಕಡಿಯದಿರು! ಇಂದಿನಿಂದ ನಿನ್ನ ಮನೆ ಮುಂದೆ ನಿತ್ಯವೂ ಸೌದೆ ಹೊರೆ ಇರುವಂತೆ ನೋಡಿಕೊಳ್ಳುತ್ತೇನೆ’ ಎನ್ನುತ್ತದೆ.
ಹಾಗೆ ಕೊಟ್ಟ ಮಾತಿನಂತೆ ಒಂದಷ್ಟು ದಿನಗಳವರೆಗೆ ಮಾರಿದೇವತೆ ತನಗೆ ಜೀವದಾನ ಮಾಡಿದ ರೈತನನ್ನು ಕಟ್ಟಿಗೆ ನೀಡಿಯೇ ಸಲಹುತ್ತಿರುತ್ತದೆ. ಹೇಗೋ ಈ ವಿಚಾರ ತಿಳಿದ ಪಕ್ಕದ ಮನೆಯ ಹೆಂಗಸು ಕೂಡ ಗಂಡನಿಗೆ ‘ಮಾರಿದೇವತೆ ಸೌದೆ ಹಾಕುವಾಗ ನೋಡಿ ಕಡಿಯಲು ಮುಂದಾಗು. ಆಗ ನಮಗೂ ನಿತ್ಯವೂ ಸೌದೆ ಹೊರೆ ದೊರೆಯುತ್ತದೆ’ ಎನ್ನುತ್ತಾಳೆ. ಹೆಂಡತಿಯ ಬಲವಂತದಿಂದ ಆ ವ್ಯಕ್ತಿ ಭಂಡಧೈರ್ಯ ಮಾಡಿ ಮಾರಿದೇವತೆಯನ್ನು ಕಡಿಯಲು ಕೊಡಲಿ ಎತ್ತಿದರೆ ಕಡಿಯಲು ಸಾಧ್ಯವಾಗುವುದಿಲ್ಲ. ಇಡೀ ದೇಹ ಚೈತನ್ಯ ಕಳೆದುಕೊಂಡಂತೆ ಮರವಟ್ಟಂತೆ ಕೊಡಲಿ ಎತ್ತಿದ ಅದೇ ಭಂಗಿಯಲ್ಲಿಯೇ ಇದ್ದು ಬಿಡುತ್ತಾನೆ. ದುರಾಸೆಯಿಂದ ತಮಗೂ ಲಾಭವಾಗು ತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಹೆಂಡತಿ ತನ್ನ ಕಿವಿಯಾ ಭರಣಗಳನ್ನು ಕೊಟ್ಟು ‘ನನ್ನ ಗಂಡನನ್ನು ಬಿಟ್ಟು ಬಿಡು’ ಎಂದು ಬೇಡಿಕೊಳ್ಳುತ್ತಾಳೆ. ಉಪಾಯ ಮಾಡಿ ಲಾಭಮಾಡಿಕೊಳ್ಳುವ ಕೃತ್ರಿಮತೆಯನ್ನು ಅರಿತ ಮಾರಿದೇವತೆ ಕೇವಲ ಕಿವಿಯಾಭರಣಕ್ಕೆ ಸಮಾಧಾನವಾಗದೆ ನಿತ್ಯವೂ ಈ ರೈತನ ಮನೆ ಮುಂದೆ ಸೌದೆ ಹೊರೆ ಹಾಕಿದರೆ ಬಿಡುವೆ ಎನ್ನುತ್ತದೆ. ದುರಾಸೆಪಟ್ಟ ದಂಪತಿ ಮರ್ಯಾದೆಗಂಜಿ ಬಡ ರೈತನ ಮನೆಗೆ ನಿತ್ಯವೂ ಒಂದೊಂದು ಹೊರೆ ಸೌದೆಯನ್ನು ಹಾಕಲು ಮುಂದಾಗುತ್ತಾರೆ.
‘ಧೈರ್ಯಮಿಲ್ಲದಂಗಾವ ಕಾರ್ಯಮುಂ ಆಗದು’ ಎಂಬುದು ರಾಮ ಕಥಾಸಾರದಲ್ಲಿ ಬರುವ ಮಾತು. ‘ಧೈರ್ಯಂ ಸರ್ವತ್ರಸಾಧನಂ’ ಎಂಬ ಮಾತು ಎಲ್ಲರಿಗೂ ತಿಳಿದಿರುವಂಥದ್ದೆ. ಇದನ್ನು ಮನೋಬಲ, ಆತ್ಮಬಲ ಎನ್ನಲೂಬಹುದು. ಧೈರ್ಯವಿಲ್ಲದಿದ್ದರೆ ಜೀವನ ನಡೆಸಲಾಗದು ಎಂದು ದೇವಚಂದ್ರ ಈ ಕತೆ ಮೂಲಕ ವಿವರಿಸುತ್ತಾನೆ. ಯಾವುದೇ ಕೆಲಸ ಮಾಡಲು ಧೈರ್ಯ ಬೇಕು. ಆದರೆ ದುರಾಸೆಯಿಂದ ಕೂಡಿದ ಭಂಡಧೈರ್ಯ ಸಲ್ಲದು. ಧೈರ್ಯದಲ್ಲೂ ಸಾತ್ವಿಕತೆ ಇರಬೇಕು. ಅಂತಹ ಧೈರ್ಯ ನಮ್ಮ ಏಳಿಗೆಯ ಸೂಚಕ. ಒದಗಿ ಬರುವ ಕಷ್ಟಗಳೂ ಮನುಷ್ಯನ ಸಂಸ್ಕಾರವನ್ನು ಒರೆಗೆ ಹಚ್ಚುವ ಪರಿಪ್ರೇಕ್ಷ ಎಂದರೆ ತಪ್ಪಾಗದು.
ಸೂರ್ಯನ ಕಿರಣಗಳಿಗೆ ಮಂಜು ಕರಗಿ ನೀರಾಗಬಹುದು. ಆದರೆ ತನ್ನ ಶೀತಲ ಗುಣವನ್ನು ಅದು ಬಿಡುವುದಿಲ್ಲ. ಹಾಗೆ ಕಷ್ಟಗಳು ಬಂದಾಗ ಮನಸ್ಸು ವಿಚಲಿತವಾಗುವುದು ಸಾಮಾನ್ಯ. ಆದರೆ ವಿವೇಕಯುತ ಕಾರ್ಯಗಳು ನಮ್ಮನ್ನು ಸಂಕಷ್ಟಗಳಿಂದ ಪಾರುಮಾಡುತ್ತವೆ. ಸುಖ-ದುಃಖ ಏನೇ ಇರಲಿ ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಕ್ಷಮತೆ ಇದ್ದರೆ ಅದುವೇ ಧೈರ್ಯ.
(ಲೇಖಕರು ಉಪನ್ಯಾಸಕರು, ಬರಹಗಾರರು)