

ಗೌತಮ ಬುದ್ಧ ಒಮ್ಮೆ ತನ್ನ ಶಿಷ್ಯರೊಂದಿಗೆ ಊರಿಂದೂರಿಗೆ ಸಂಚರಿಸುತ್ತಿದ್ದ. ಕಾಡಿನ ದಾರಿಯ ಮಧ್ಯೆ ಒಂದು ಮರದ ಕೆಳಗೆ ಕುಳಿತು ವಿಶ್ರಮಿಸಿದ ನಂತರ, ವಿನಯಪೂರ್ವಕವಾಗಿ ಮರಕ್ಕೆ ತಲೆಬಾಗಿ ನಮಸ್ಕರಿಸಿದ. ಶಿಷ್ಯಂದಿರು ಆಶ್ಚರ್ಯದಿಂದ, ‘ನೀವು ಈ ಮರಕ್ಕೆ ನಮಸ್ಕರಿಸಲು ಕಾರಣವಾದರೂ ಏನು?’ ಎಂದು ಪ್ರಶ್ನಿಸಿದರು. ‘ಯಾಕೆ? ನಾನು ಮರಕ್ಕೆ ನಮಸ್ಕರಿಸಿದ್ದು ಅನುಚಿತವೇ?’ ಎಂದು ಮುಗುಳುನಕ್ಕ ಬುದ್ಧ. ‘ತಮ್ಮಂಥ ಮಹಾನ್ ವ್ಯಕ್ತಿ ನಿರ್ಜೀವ ಕಾಡುಮರಕ್ಕೆ ನಮಿಸಿದ್ದು ಆಶ್ಚರ್ಯ. ನೀವು ಅದಕ್ಕೆ ನೀಡಿದ ಗೌರವ ಹಾಗೂ ವಂದನೆಯನ್ನು ಸ್ವೀಕರಿಸಿ, ಪ್ರಸನ್ನತೆ ವ್ಯಕ್ತಪಡಿಸುವ ಶಕ್ತಿಯೂ ಅದಕ್ಕಿಲ್ಲ. ಹೀಗೆ ಪ್ರತಿಕ್ರಿಯೆ ನೀಡದವರಿಗೆ ನಮಸ್ಕರಿಸಿ ಪ್ರಯೋಜನವೇನು ಎಂಬುದು ನಮ್ಮ ಅಭಿಪ್ರಾಯ’ ಎಂದರು ಶಿಷ್ಯಂದಿರು.
ಅದಕ್ಕೆ ಬುದ್ಧ ನಸುನಗುತ್ತ ‘ನಿಜ, ಈ ಮರ ಮನುಷ್ಯರಂತೆ ಮಾತಿನ ಮೂಲಕವೋ ಅಥವಾ ದೈಹಿಕ ಭಾಷೆಯ ಮೂಲಕವೋ ಸಂವಹನ ನಡೆಸಲಾರದು. ಆದರೆ ಅದರ ರೆಂಬೆ, ಕೊಂಬೆ, ಎಲೆಗಳು ಬಾಗಿ ಅಲ್ಲಾಡುತ್ತಿವೆಯಲ್ಲ! ಅಷ್ಟು ಸಾಕು. ಅಷ್ಟಕ್ಕೂ ಇತರರಿಂದ ಏನನ್ನೂ ಅಪೇಕ್ಷಿಸದೆ ಸಕಲ ಜೀವಿಗಳಿಗೂ ಗಾಳಿ, ನೀರು, ನೆರಳು, ಹಣ್ಣು, ಗೊಬ್ಬರ ಇತ್ಯಾದಿಗಳನ್ನು ಕೊಟ್ಟು ಜೀವನ ನೀಡುವ ಈ ಮರಗಳು ನಿತ್ಯ ಸಂಜೀವಿನಿಯಂತೆ. ಮರ ಗಿಡಗಳಿಗೂ ಜೀವವಿದೆ. ಅವುಗಳೂ ನಮ್ಮ ಹಾಗೆ ಉಸಿರಾಡುತ್ತವೆ, ಬೆಳೆಯುತ್ತವೆ, ಹುಟ್ಟುತ್ತವೆ, ಸಾಯುತ್ತವೆ ಎಂದ ಮೇಲೆ ನಮ್ಮ ಭಾವನೆಗೂ ಪ್ರತಿಕ್ರಿಯಿಸುತ್ತವೆ. ಗಿಡಕ್ಕೆ ನೀರಿಲ್ಲದಿದ್ದಾಗ ಬಾಡುತ್ತವೆ, ನೀರು ದೊರೆತಾಗ ಮತ್ತೆ ಚಿಗುರುತ್ತವೆ ಎಂದಮೇಲೆ ಅವಕ್ಕೂ ಭಾವನೆಗಳು ಇವೆ ಎಂದೇ ಅರ್ಥ. ನನಗೆ ಈ ಮರ ತಂಪಾದ ನೆರಳು ನೀಡಿ, ಧ್ಯಾನ ಮಾಡಲು ಜಾಗ ನೀಡಿದೆ, ಉಸಿರಾಡಲು ವಾಯುವನ್ನು ನೀಡಿದೆ. ಅದಕ್ಕೆ ಕೃತಜ್ಞತೆ ಸಲ್ಲಿಸಿ, ಋಣ ತೀರಿಸಬೇಕಾದ್ದು ನನ್ನ ಕರ್ತವ್ಯ. ಅದಕ್ಕೇ ನಮಸ್ಕರಿಸಿದೆ’ ಎಂದಾಗ ಶಿಷ್ಯಂದಿರು ಗುರುವಿನ ತತ್ತ್ವಕ್ಕೆ, ವೈಚಾರಿಕತೆಗೆ ತಲೆಬಾಗಿದರು.
ಹೀಗೆ ಮರಗಿಡಗಳನ್ನು ದೈವಿಕಭಾವದಿಂದ ನೋಡುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಿದೆ. ನಮ್ಮನ್ನು ಸಲಹುವ, ಕಾಪಾಡುವ ನಿಸರ್ಗಕ್ಕೆ ನಾವು ತೋರುವ ಅಲ್ಪಗೌರವ ಇದು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು ಕಡಿದರೂ ಅವುಗಳು ಮತ್ತೆ ಚಿಗುರಿ, ನಮಗೆ ನೆರಳಾಗಿ, ಸಮಾಜಕ್ಕೆ ನಿಸ್ವಾರ್ಥವಾಗಿ ಒಳಿತುಮಾಡುವ ಪಾಠವನ್ನು ಕಲಿಸುವ ಜೊತೆಗೆ ಜೀವನದಲ್ಲಿ ಸೋಲುವ ಮನಸ್ಥಿತಿಯನ್ನು ಬಿಟ್ಟು ಆಶಾವಾದಿಗಳಾಗಿರಬೇಕು ಎಂಬುದನ್ನೂ ತಿಳಿಸಿಕೊಡುವ ಇವು ಪ್ರಕೃತಿಯ ಜೀವನಾಡಿಗಳು.
ಗಿಡ-ಮರಗಳು ಪ್ರಕೃತಿಯ ಶ್ವಾಸಕೋಶಗಳಿದ್ದಂತೆ. ಸ್ವಚ್ಛವಾದ ಗಾಳಿಯನ್ನು ಹೊರಹಾಕಿ ಜೀವಿಗಳ ರಕ್ಷಣೆಯ ಪಣತೊಟ್ಟ ಅವುಗಳೇ ನಾವು ಬರಿಗಣ್ಣಿನಿಂದ ನೋಡುವ ಪ್ರತ್ಯಕ್ಷ ದೇವರುಗಳು. ಮರ-ಗಿಡಗಳಿಗೆ ಕೇವಲ ಕೈಮುಗಿದು, ನಾಲ್ಕು ಸುತ್ತು ಸುತ್ತಿದರೆ ನಮ್ಮ ಭಕ್ತಿಗೆ ಬೆಲೆ ಬರಲಾರದು. ಗಿಡಗಳನ್ನು ನೆಟ್ಟು, ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಈ ರೀತಿಯಲ್ಲಿ ನಾವು ಗಿಡ-ಮರಗಳಿಗೆ ತೋರುವ ಕೃತಜ್ಞತೆ ನಮ್ಮ ಮುಂದಿನ ಪೀಳಿಗೆಗೆ ಭವ್ಯ ಬುನಾದಿಯಾದೀತು!
(ಲೇಖಕರು ಹವ್ಯಾಸಿ ಬರಹಗಾರರು)