

ಗುರುಕುಲವೊಂದರಲ್ಲಿ ಎಂದಿನಂತೆ ಪಾಠ ಪ್ರವಚನಗಳು ನಡೆಯುತ್ತಿದ್ದವು. ಹಲವಾರು ದಿನಗಳಿಂದ ಶಿಷ್ಯನೊಬ್ಬ ಗುರುಗಳಲ್ಲಿ ಏನೋ ಹೇಳಬೇಕೆಂದು ಚಡಪಡಿಸುತ್ತಿದ್ದ, ಆದರೆ ಗುರುಗಳು ಅವಕಾಶವಿತ್ತಿರಲಿಲ್ಲ. ಅವನಾಗಲೇ ಆಶ್ರಮಕ್ಕೆ ಬಂದು ಹಲವಾರು ತಿಂಗಳುಗಳೇ ಕಳೆದಿವೆ, ಆದರೂ ಗುರುಗಳೇಕೋ ಉಪದೇಶದ ಮೂಲಕ ಅನುಗ್ರಹಿಸುವ ಕೃಪಾದ ೃಷ್ಟಿಯನ್ನು ಅವನತ್ತ ಬೀರಿರಲಿಲ್ಲ. ಇವನ ಜೊತೆಗೇ ಬಂದು ಆಶ್ರಮ ಸೇರಿದ ಬೇರೆಲ್ಲ ವಿದ್ಯಾರ್ಥಿಗಳಿಗೆ ಗುರುಗಳು ವಿವಿಧ ಜ್ಞಾನಗಳ ವಿಚಾರವಾಗಿ ಉಪದೇಶಿಸುತ್ತಿದ್ದರು. ಇವನಿಗೆ ಮಾತ್ರ ಆ ಭಾಗ್ಯ ಸಿಕ್ಕಿರಲಿಲ್ಲ. ಅದು ಅವನ ಅಸಹನೆಗೆ ಕಾರಣವಾಗಿತ್ತು.
ಒಂದು ಸಂಜೆ ಗುರುಗಳು ಅವನನ್ನು ಕರೆದರು. ಅವನಿಗೋ ಒಳಗೊಳಗೇ ಸಂತೋಷ, ‘ಅಂತೂ ಗುರುಗಳು ಕರೆದರಲ್ಲ! ಇನ್ನು ನನಗೆ ಜ್ಞಾನೋಪದೇಶ ಮಾಡುತ್ತಾರೆ. ಇತರ ಎಲ್ಲ ವಿದ್ಯಾರ್ಥಿಗಳಿಗಿಂತ ನಾನೇ ಮುಂದುವರಿಯುತ್ತೇನೆ. ಇವರೆಲ್ಲರಿಗೂ ನಾನು ಸರಿಯಾಗಿ ಬುದ್ಧಿ ಕಲಿಸುತ್ತೇನೆ’ ಎಂದುಕೊಳ್ಳುತ್ತ ಗುರುಗಳ ಎದುರು ಹೋಗಿ ನಿಂತ.
‘ಮಗು, ಬಾ ಇಲ್ಲಿ. ಗೋ ಶಾಲೆಗೆ ಹೋಗಿ ಇಂದು ಸಂಜೆಯ ಪೂಜೆಗೆ ಹಾಲನ್ನು ತರುವ ಜವಾಬ್ದಾರಿ ನಿನ್ನದು. ನೋಡು, ಆ ಮೂಲೆಯಲ್ಲಿ ಪಾತ್ರೆಯಿದೆ. ಅದನ್ನು ತೆಗೆದುಕೊಂಡು ಹೋಗಿ ಆದಷ್ಟೂ ಬೇಗ ಹಾಲನ್ನು ತರಬೇಕು ಆಯಿತಾ?’ ಎಂದು ಆದೇಶಿಸಿದರು. ಖುಶಿಯಿಂದಲೇ ಪಾತ್ರೆಯನ್ನು ಕೈಗೆತ್ತಿಕೊಂಡ. ನೋಡುತ್ತಾನೆ ಪಾತ್ರೆಯ ತುಂಬ ಕಸಕಡ್ಡಿ, ಮಣ್ಣು, ಕಲ್ಲುಗಳೇ ತುಂಬಿಕೊಂಡಿವೆ! ಅವನಿಗೆ ಅಸಹ್ಯವೆನಿಸಿತು, ಛೇ ಈ ಪಾತ್ರೆಯಲ್ಲೇನಾದರೂ ಹಾಲನ್ನು ತರಲಾದೀತೇ? ತಂದರೂ ಅದನ್ನು ಉಪಯೋಗಿಸಲಾದೀತೇ? ಸಾಧ್ಯವೇ ಇಲ್ಲ, ಏನು ಮಾಡುವುದು? ಸರಿ, ಮೊದಲು ಪಾತ್ರೆಯನ್ನು ತೊಳೆದು ಶುದ್ಧಗೊಳಿಸಿದ. ಗೋಶಾಲೆಗೆ ಹೋಗಿ ಪಾತ್ರೆಯಲ್ಲಿ ಹಾಲನ್ನು ತುಂಬಿಸಿ ತಂದು ಗುರುಗಳ ಎದುರಿಗಿಟ್ಟು ನಮಸ್ಕರಿಸಿ, ಈಗ ಗುರುಗಳಿಗೆ ಸಂತುಷ್ಟಿಯಾಗಿದೆ, ತನಗೆ ಜ್ಞಾನೋಪದೇಶ ಮಾಡುತ್ತಾರೆ ಎಂದು ನಿರೀಕ್ಷಿಸಿದ. ಆದರೆ ಗುರುಗಳು ಏನನ್ನೂ ಹೇಳಲಿಲ್ಲ. ಹಾಲಿನ ಪಾತ್ರೆಯನ್ನು ಹಿಡಿದು ಪೂಜೆಗೆ ಹೊರಟೇಬಿಟ್ಟರು. ಅವನಿಗೆ ಬಹಳವೇ ನಿರಾಸೆಯಾಯಿತು.
‘ನನಗೇನೂ ಉಪದೇಶ ಮಾಡುವುದಿಲ್ಲವೇ? ಗುರುಗಳೇ’ ಎಂದು ಅಸಹನೆ ಯಿಂದಲೇ ಕೇಳಿಯೇ ಬಿಟ್ಟ. ‘ಮಗು, ನಿನಗೆ ಬಹುದೊಡ್ಡ ಉಪದೇಶವೊಂದನ್ನು ಮಾಡಿದೆನಲ್ಲಪ್ಪ! ಕಸಕಡ್ಡಿ ತುಂಬಿದ ಪಾತ್ರೆಯಲ್ಲಿ ಹಾಲನ್ನು ಹಾಕಿದರೆ ಕೆಡುತ್ತದೆ, ಅಂತೆಯೇ ಮಲಿನವಾದ ಮನಸ್ಸಿನಲ್ಲಿ ಏನೇ ವಿಷಯವನ್ನು ಹಾಕಿದರೂ ಅದು ಕೆಡುತ್ತದೆ. ಹಾಲಿನಷ್ಟೇ ಪರಿಶುದ್ಧವಾದ ಜ್ಞಾನವನ್ನು ನಿನ್ನ ಮನಸ್ಸಿನ ಪಾತ್ರೆಯಲ್ಲಿ ಹಾಕ ಬೇಕಾದರೆ ಅದು ಪರಿಶುದ್ಧವಾಗಿರಬೇಕಲ್ಲವೇ? ನಿನ್ನ ಮನಸ್ಸಿನಲ್ಲಿ ಇನ್ನೂ ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ, ಅಹಂಕಾರಗಳೆಂಬ ಸಾಕಷ್ಟು ಕಸಕಡ್ಡಿಗಳೇ ತುಂಬಿದೆ. ಅದನ್ನು ಮೊದಲು ಸ್ವಚ್ಛ ಮಾಡಿಕೋ’ ಎಂದವರೇ ಮುಂದೆ ನಡೆದರು. ಎಷ್ಟು ಸತ್ಯವಲ್ಲವೇ? ನಮ್ಮ ಮನಸ್ಸು ಪರಿಶುದ್ಧವಾದ ಪಾತ್ರೆಯಾಗಿದ್ದರೆ ಮಾತ್ರವೇ ಜ್ಞಾನಾಮೃತವನ್ನು ಅದರಲ್ಲಿ ಸುರಿಯಬಹುದು ಇಲ್ಲದಿದ್ದರೆ? ಸುರಿದರೂ ಅದು ವ್ಯರ್ಥವೇ.
(ಲೇಖಕರು ಸಂಸ್ಕೃತ ಉಪನ್ಯಾಸಕರು)
(ಪ್ರತಿಕ್ರಿಯಿಸಿ: manollasavv@gmail.com)