ಮನೋಲ್ಲಾಸ: ಸತ್ವಭರಿತರಾಗಿ ಬದುಕೋಣ

manollasa 28
Published on
  • ಬೇಲೂರು ರಾಮಮೂರ್ತಿ

ಗುರುಕುಲದಲ್ಲಿ ಪಾಠ ಮುಗಿದ ಬಳಿಕ ಗುರುಗಳು ಶಿಷ್ಯರನ್ನು ಉದ್ದೇಶಿಸಿ, ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ ಎನ್ನುವ ಮಾತನ್ನು ನೀವೆಲ್ಲ ಕೇಳಿದ್ದೀರಿ. ಈಗ ಹೇಳಿ ನೀವು ಕಲ್ಲಿನಂತೆ ಆಗಬಯಸುವಿರಾ ಇಲ್ಲವೆ ಮಣ್ಣಿನಂತಾಗ ಬಯಸುವಿರಾ?’ ಅಂತ ಕೇಳಿದರು. ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಾಗಲೇಬೇಕು, ಆದರೆ ಗುರುಗಳು ಏಕೆ ಮಣ್ಣಿನ ವಿಚಾರ ತೆಗೆದರು ಅಂತ ಶಿಷ್ಯರು ತಕ್ಷಣ ಉತ್ತರಿಸಲಾರದೇ ಗುರುಗಳತ್ತ ನೋಡಿದರು. ಮುಗುಳ್ನಕ್ಕ ಗುರುಗಳು ಮಣ್ಣಿನ ಮಹಿಮೆ ವಿವರಿಸಿದರು. ‘ಒಬ್ಬ ದಾರಿಹೋಕ ಪ್ರತಿದಿನ ಹನುಮನ ಗುಡ್ಡದ ಬಳಿ ಒಂದು ಬಂಡೆಯನ್ನು ನೋಡಿಕೊಂಡು ಹೋಗುತ್ತಿದ್ದ. ಎಷ್ಟು ವರ್ಷಗಳಾದರೂ ಆ ಬಂಡೆ ಹಾಗೇ ಇತ್ತು. ಅದರ ಪಕ್ಕದಲ್ಲೇ ಇದ್ದ ಮಣ್ಣಿನ ಜಾಗ ಹಿಂದೆ ಇದ್ದಂತೆ ಬರಡಾಗಿರದೇ ಅಲ್ಲಿ ತೆಂಗಿನ ಮರ ಬೆಳೆದಿತ್ತು. ಅದರಲ್ಲಿ ಎಳನೀರೂ ತುಂಬಿತ್ತು. ಅದರ ಸುತ್ತ ಅನೇಕ ಹೂವಿನ ಗಿಡಗಳೂ ಬೆಳೆದಿದ್ದವು. ಮಣ್ಣಿದ್ದ ಜಾಗ ಬಹಳ ಚೆನ್ನಾಗಿ ಕಾಣುತ್ತಿತ್ತು.

ಮಳೆನೀರು ಕಲ್ಲನ್ನೂ ತೋಯಿಸುತ್ತದೆ, ಮಣ್ಣನ್ನೂ ತೋಯಿಸುತ್ತದೆ. ಆದರೆ ಕಲ್ಲು ಬೆಳೆಯುವುದಿಲ್ಲ, ಮಣ್ಣು ತನ್ನ ಗರ್ಭದಲ್ಲಿ ಎಂದೋ ಹುದುಗಿರುವ ಬೀಜಗಳಿಗೆ ಜೀವ ತುಂಬಿ ಅವು ಮೊಳಕೆ ಯೊಡೆಯುವಂತೆ ಮಾಡುತ್ತದೆ. ಕಲ್ಲಿನ ಮೇಲೆ ನೀರು ಬಿದ್ದರೆ ಅದು ಮೃದುವಾಗುವುದಿಲ್ಲ, ನೀರು ಹರಿದುಹೋಗುತ್ತದೆ. ಮಣ್ಣಿನ ಮೇಲೆ ನೀರು ಬಿದ್ದರೆ ಆಳಕ್ಕಿಳಿದು ಮೃದು ವಾಗುತ್ತದೆ. ಅಲ್ಲಿಂದ ಸತ್ವವನ್ನು ಹೀರಿ ಬೇರಿಗೆ ರವಾನಿಸುತ್ತದೆ. ನೀವುಗಳೂ ಹಾಗೆಯೇ ನಿಮ್ಮ ಬದುಕಿನಲ್ಲಿ ಕಲ್ಲಿನಂತೆ ಜಡವಾಗಬಾರದು. ಮಣ್ಣಿನಂತೆ ಸತ್ವಭರಿತರಾಗಬೇಕು. ಅಲ್ಲಿಂದ ಇಲ್ಲಿಂದ ಜ್ಞಾನವನ್ನು ಎಳೆದುಕೊಂಡು ನಿಮ್ಮ ಜೊತೆಯಲ್ಲಿ ಇರುವವರಿಗೆ ಅದನ್ನು ಉಪದೇಶಿಸಬೇಕು. ಅವರಲ್ಲಿರುವ ಜ್ಞಾನದ ಬಳ್ಳಿಗೆ ಆಸರೆಯಾಗಿ ಅದನ್ನು ಬೆಳೆಸಬೇಕು. ಕಲ್ಲನ್ನು ಕೊರೆದರೆ ವಿಗ್ರಹವಾಗುತ್ತದೆ, ಪೂಜಿಸಲ್ಪಡುತ್ತದೆ. ಆದರೆ ಯಾರಾದರೂ ಬಂದು ಹಾಗೆ ಮಾಡುವವರೆಗೂ ಕಲ್ಲು ಜಡವಾಗಿ ಬಿದ್ದಿರುತ್ತದೆ. ಎಲ್ಲ ಕಲ್ಲುಗಳೂ ವಿಗ್ರಹವಾಗುವುದಿಲ್ಲ.

ಆದರೆ ಎಲ್ಲ ಮಣ್ಣಿನಲ್ಲಿಯೂ ಬೆಳೆ ಬೆಳೆಯುತ್ತದೆ, ಜೀವ ಕೊಡುತ್ತದೆ. ನೀವೂ ಹಾಗೆಯೇ ನಿಮ್ಮಲ್ಲಿರುವ ಜ್ಞಾನವನ್ನು ಇನ್ನೊಬ್ಬರು ಬಂದು ಅರಳಿಸಲಿ ಎಂದು ಕಲ್ಲಿನಂತೆ ಕಾಯದೇ ನಿಮ್ಮಲ್ಲಿರುವ ಜ್ಞಾನವನ್ನು ನೀವೇ ಪೋಷಿಸಿ ಮಣ್ಣಿನಂತೆ ಎಲ್ಲ ಸತ್ವಗಳನ್ನೂ ಹೀರಿಕೊಂಡು, ನಿಮ್ಮಲ್ಲಿ ಅಂತರ್ಗತ ವಾದ ವಿದ್ಯೆ ಎಂಬ ಮರ, ಗಿಡಗಳನ್ನು ಚೆನ್ನಾಗಿ ಬೆಳೆಸಿ ಮರಗಿಡಗಳು ಜನರಿಗೆ ನೆರಳು, ಹೂವು, ಹಣ್ಣು, ಕಾಯಿಗಳನ್ನು ನೀಡುವಂತೆ ನೀವೂ ನಿಮ್ಮ ಜ್ಞಾನ ಎಂಬ ಮರದಿಂದ ನ್ಯಾಯ, ನೀತಿ, ಧರ್ಮ ಎಂಬ ಹೂವು, ಹಣ್ಣು, ಕಾಯಿಗಳನ್ನು ಜನತೆಗೆ ನೀಡುವಂತಾಗಲಿ. ಇದೇ ನನ್ನ ಅಂತರಂಗದ ಮಾತು’ ಎಂದರು. ನಾವೂ ನಮ್ಮ ಬದುಕಿನಲ್ಲಿ ಕಲ್ಲಿನಂತಾಗದೇ ಮಣ್ಣಿನಂತೆ ಸತ್ವಭರಿತರಾಗೋಣ. ನಮ್ಮ ಒಳ್ಳೆಯತನವನ್ನು, ಇತರ ಒಳ್ಳೆಯ ಮೌಲ್ಯವನ್ನು ಇನ್ನೊಬ್ಬರು ಬಂದು ಅರಳಿಸಲಿ ಎಂದು ಕಾಯದೇ ನಾವೇ ಅರಳಿಸುತ್ತ ಅದರಿಂದ ಜನತೆಗೆ ಉಪಕಾರಿಯಾಗುವಂತೆ ಬಾಳೋಣ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net