

ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಾಗಲಿ, ಯಶಸ್ಸು ದೊರೆಯಬೇಕೆಂದರೆ ಸದಾಕಾಲ ಗುರಿಯತ್ತ ಗಮನವಿರಬೇಕು. ಆದರೆ ಬಹಳಷ್ಟು ಸಂದರ್ಭದಲ್ಲಿ ಹಾಕಿಕೊಂಡ ಗುರಿಯತ್ತ ಗಮನ ಕೇಂದ್ರೀಕರಿಸದೆ ವಿಚಲಿತರಾಗುವುದರಿಂದ ಅಂದುಕೊಂಡಿದ್ದನ್ನು ಸಾಧಿಸುವುದರಲ್ಲಿ ಎಡವುತ್ತೇವೆ. ಜಯ-ಅಪಜಯ ಎಂಬುದು ನಾವು ಗುರಿಯನ್ನು ಹೇಗೆ ಕೇಂದ್ರೀಕರಿಸುತ್ತೇವೆ ಎಂಬುದನ್ನೇ ಅವಲಂಬಿಸಿರುತ್ತದೆ.
ಒಂದು ಮರದ ಹಲಗೆಯನ್ನು ತೆಗೆದುಕೊಂಡು ನೆಲದ ಮೇಲೆ ಇಟ್ಟು ಅಕ್ಕ-ಪಕ್ಕದ ಎರಡು ಜಾಗಗಳನ್ನು ಜೋಡಿಸಲು ಬಳಸಿದಾಗ ಅದರೆ ಮೇಲೆ ಯಾವುದೇ ಭಯವಿಲ್ಲದೆ ಚೆನ್ನಾಗಿ ನಡೆದಾಡುತ್ತೇವೆ. ಕಾರಣ ಆ ಮರದ ಹಲಗೆ ನೆಲದ ಮೇಲೆ ಇರುವುದರಿಂದ ಬೀಳುತ್ತೇವೆ ಎಂಬ ಭಯ ಇರುವುದಿಲ್ಲ. ಒಂದು ವೇಳೆ ಅದೇ ಮರದ ಹಲಗೆಯನ್ನು ಎರಡು ಛಾವಣಿಗಳ ಮೇಲೆ ಇಟ್ಟು, ಒಂದು ಕಡೆಯಿಂದ ಇನ್ನೊಂದು ಕಡೆ ನಡೆದಾಡಲು ಹೇಳಿದಾಗ ಭಯಭೀತರಾಗುತ್ತೇವೆ. ಕಾರಣ ಆ ಮರದ ಹಲಗೆ ಮನೆಯ ಛಾವಣಿ ಮೇಲೆ ಇರುವುದರಿಂದಾಗಿ ಎಲ್ಲಿ ಕಾಲು ಜಾರಿ ಬೀಳುತ್ತೇವೆಯೋ ಎಂಬ ಆತಂಕ. ಅದು ಎಷ್ಟರ ಮಟ್ಟಿಗೆ ಆವರಿಸುತ್ತದೆ ಎಂದರೆ ಆ ಮರದ ಹಲಗೆ ಮೇಲೆ ನಡೆಯುವ ಪ್ರಯತ್ನವೇ ಬೇಡವೆಂದು ನಿರ್ಧರಿಸಿ ಬಿಡುತ್ತೇವೆ. ಅಂದರೆ ಪ್ರಯತ್ನಿಸುವ ಮೊದಲೇ ಸೋಲನ್ನು ಒಪ್ಪಿಕೊಂಡಂತೆ. ಪದೇಪದೆ ಛಾವಣಿಯಿಂದ ಕೆಳಗೆ ಬಗ್ಗಿ ನೋಡುವುದು, ಇಷ್ಟೊಂದು ಎತ್ತರದ ಮೇಲೆ ನಡೆಯುವುದು ಅಪಾಯಕಾರಿ ಎಂದು ಭಾವಿಸುವುದು, ಹೀಗೆ ಹತ್ತಾರು ಋಣಾತ್ಮಕ ಅಂಶಗಳನ್ನು ತಲೆಯಲ್ಲಿ ತುಂಬಿಕೊಂಡು, ಕೈಕಟ್ಟಿ ಕುಳಿತುಕೊಳ್ಳುವುದರಿಂದ ಪ್ರಯೋಜನವಾದರೂ ಏನು?
ಇಂಥ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಲು ಬೇಕಾಗಿರುವುದು ನಿರ್ದಿಷ್ಟ ಗುರಿ, ಆ ಗುರಿಯತ್ತ ಗಮನ. ಆ ಮರದ ಹಲಗೆಯನ್ನು ಬಳಸಿಕೊಂಡು ಆ ಛಾವಣಿಯನ್ನು ಯಶಸ್ವಿಯಾಗಿ ದಾಟುತ್ತೇನೆ ಎಂಬ ಆತ್ಮವಿಶ್ವಾಸ ಹಾಗೂ ದಾಟುವ ಸಂದರ್ಭದಲ್ಲಿ ಕಾಲು ಜಾರದಂತೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸುವುದು ಅಗತ್ಯ. ಸಕಾರಾತ್ಮಕ ಮನೋಭಾವ ಹೊಂದಿದವರು ಯಾವುದೇ ಭಯವಿಲ್ಲದೆ- ಹೇಗೂ ಎರಡು ಮನೆಗಳ ಮೇಲೆ ಸಂಪರ್ಕಕ್ಕೆ ಮರದ ಹಲಗೆ ಇರುವುದರಿಂದ ಚಿಂತಿಸುವ ಅಗತ್ಯವಿಲ್ಲವೆಂದು ಸಂಪೂರ್ಣ ಗಮನವನ್ನು ಆ ಮರದ ಹಲಗೆಯ ಮೇಲೆಯೇ ಕೇಂದ್ರೀಕರಿಸಿ ನಿರಾಯಾಸವಾಗಿ ದಾಟುತ್ತಾರೆ. ‘ಇದು ನನ್ನಿಂದ ಸಾಧ್ಯವೇ? ಎನ್ನುವುದರ ಬದಲು ನನ್ನಿಂದ ಏಕೆ ಸಾಧ್ಯವಿಲ್ಲ?’ ಎಂದು ಪ್ರಶ್ನಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
ಸಾಧನೆಯ ಹಾದಿಯಲ್ಲಿ ಚಲಿಸುವಾಗ ಯಶಸ್ಸೆಂಬುದು ಸ್ವಲ್ಪ ತಡವಾಗಿ ಸಿಗಬಹುದು. ಕಾಯುವಿಕೆ ಕೆಲವೊಮ್ಮೆ ದೀರ್ಘವಾಗಿಯೂ ಇರಬಹುದು. ಅದಕ್ಕಾಗಿ ವಿಚಲಿತರಾಗಿ ಗುರಿಯನ್ನೇ ಬದಲಿಸುವ ನಿರ್ಣಯ ಕೈಗೊಳ್ಳಬಾರದು. ಹಾಗೆ ಮಾಡಿದ್ದಲ್ಲಿ ನಾವೇ ಸೋಲು ಒಪ್ಪಿಕೊಂಡಂತೆ. ಸಂದರ್ಭ ಯಾವುದೇ ಇರಲಿ, ನಿರ್ದಿಷ್ಟ ಗುರಿಯತ್ತ ಗಮನ ಕೇಂದ್ರೀಕರಿಸಿ, ಆತ್ಮವಿಶ್ವಾಸದಿಂದ ಮುನ್ನಡೆದಾಗ ಮಾತ್ರ ಯಶಸ್ಸು ದೊರೆಯುತ್ತದೆ. ಅಂಥ ಇಚ್ಛಾಶಕ್ತಿ, ಬದ್ಧತೆ, ತಾಳ್ಮೆ, ಪರಿಶ್ರಮ ನಮ್ಮ ವ್ಯಕ್ತಿತ್ವದ ಅವಿಭಾಜ್ಯ ಮೌಲ್ಯಗಳಾಗಲಿ.
(ಲೇಖಕರು ಹವ್ಯಾಸಿ ಬರಹಗಾರರು)