ಮನೋಲ್ಲಾಸ: ಆತ್ಮತೃಪ್ತಿಯೊಂದೇ ಸಾಕು...

sir mv feb 10
Published on

ಡಾ. ಗಣಪತಿ ಆರ್ ಭಟ್

ಧನಿಕನೋರ್ವ ಆಶ್ರಮವೊಂದಕ್ಕೆ ಬಂದು ಸಂನ್ಯಾಸಿಗಳ ಬಳಿ ತನ್ನ ಸಂಕಷ್ಟ ತೋಡಿಕೊಂಡ. ‘ಸ್ವಾಮಿಗಳೇ, ನಾನು ಏನೇನು ಅಂದುಕೊಂಡಿದ್ದೆನೋ, ಅವೆಲ್ಲವನ್ನೂ ಸಂಪಾದಿಸಿದ್ದೇನೆ. ಬೇಕಾದಷ್ಟು ಹಣವಿದೆ. ಉದ್ಯೋಗದಲ್ಲಿ ಲಾಭವಿದೆ. ಕಾರು, ಬಂಗಲೆ ಎಲ್ಲವೂ ಇವೆ. ಆದರೂ ಚಿಂತೆ ಬಿಡುವುದಿಲ್ಲ. ಆರೋಗ್ಯವೂ ಕೈ ಕೊಡುತ್ತಿದೆ. ಏನು ಮಾಡಲಿ?’ ನಸುನಗುತ್ತ ಆ ಸಂನ್ಯಾಸಿಗಳು, ‘ನಿನ್ನ ಬಳಿ ಇರುವ ಸವಲತ್ತುಗಳನ್ನು ನೀನು ಯಾವುದೋ ಪ್ರತಿಷ್ಠೆಯ ಹಿಂದೆ ಬಿದ್ದು ಪಡೆದುಕೊಂಡಿದ್ದೀಯೆ. ಹಾಗಾಗಿ ಅದರಿಂದ ನಿನ್ನ ಮನಸಿಗೆ ಸಮಾಧಾನವೂ ಇಲ್ಲ, ಚಿಂತೆಯೂ ಹೋಗುವುದಿಲ್ಲ. ನೈಜಾನಂದವು ನಿನ್ನೊಳಗಿದೆ. ನೆಮ್ಮದಿ ಕೊಡುವ ಕೆಲಸ ಮಾಡು. ಮುಂದೆ ಎಲ್ಲವೂ ಸರಿ ಹೋಗುವುದು’ ಎಂದು ಹೇಳಿ ಕಳುಹಿಸಿದರು.

ಸದೃಢವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬಯಸುವ ನಾವು ಹಣವೋ ಅಥವಾ ನಾನಾ ಬಗೆಯ ಸವಲತ್ತುಗಳು ಇದ್ದರೆ ಒಳ್ಳೆಯ ಜೀವನ ನಡೆಸಬಹುದು ಎಂಬ ಲೆಕ್ಕಾಚಾರ ಹಾಕುತ್ತೇವೆ. ಕಷ್ಟಪಡುತ್ತಿದ್ದರೂ ಸರಿಯೇ, ಇತರರನ್ನು ಮೆಚ್ಚಿಸಲು ಡಾಂಭಿಕವಾಗಿ ಬದುಕುತ್ತೇವೆ. ಆದರೆ ಸದೃಢ ಬದುಕಿಗೆ ಆತ್ಮತೃಪ್ತಿ ಬೇಕೇ ಹೊರತು ಇನ್ನಾವ ಬಗೆಯ ಬಾಹ್ಯ ಸವಲತ್ತುಗಳಲ್ಲ. ಅದಕ್ಕಾಗಿ ನಮ್ಮ ವೇದೋಪನಿಷತ್ತುಗಳು ಆನಂದವನ್ನೇ ಬ್ರಹ್ಮ ಎಂಬುದಾಗಿ ಹೇಳಿ ಅದನ್ನು ಸಂಪಾದಿಸುವುದೇ ಮನುಷ್ಯ ಜೀವನದ ಪರಮಗುರಿಯಾಗಬೇಕೆಂದು ಪ್ರತಿಪಾದಿಸುತ್ತವೆ.

ಹಿಂದೆ ಕಾಶ್ಮೀರದಲ್ಲಿ ಕೈಯ್ಯಟ ಎಂಬ ಪ್ರಕಾಂಡ ವ್ಯಾಕರಣ ಪಂಡಿತನಿದ್ದ. ವ್ಯಾಕರಣ ಮಹಾಭಾಷ್ಯಕ್ಕೆ ಟೀಕೆಯನ್ನು ಬರೆದು ಆತ ಸಾಕಷ್ಟು ಹೆಸರುವಾಸಿಯಾಗಿದ್ದ. ಆದರೂ ನಗರದ ಹೊರ ಭಾಗದಲ್ಲಿ ಪುಟ್ಟ ಗುಡಿಸಲಿನಲ್ಲಿ ವಾಸವಿದ್ದ. ಈ ವಿಷಯ ರಾಜನಿಗೆ ಗೊತ್ತಾಯಿತು. ಮಹಾನ್ ಪಂಡಿತನೋರ್ವ ತನ್ನ ರಾಜ್ಯದಲ್ಲಿ ಹೀಗೆ ನಿರ್ಧನಿಕನಾಗಿ ವಾಸಿಸಬಾರದು ಎಂದುಕೊಂಡ ರಾಜನು ಅವನ ಬಳಿ ಹೋಗಿ ತನ್ನ ಅವಗಣನೆಗೆ ಕ್ಷಮೆ ಇರಲಿ ಎನ್ನುತ್ತ, ಅವನಿಗೆ ಭೂಮಿ, ಹಣ ಇತ್ಯಾದಿಗಳನ್ನು ಕೊಡಲು ಮುಂದಾದ. ಇದರಿಂದ ಕೆರಳಿದ ಕೈಯ್ಯಟನು-‘ನೀವು ಧನ, ಕನಕಗಳನ್ನು ಕೊಟ್ಟರೆ ನನ್ನ ಬದುಕು ಪರಾವಲಂಬಿಯಾಗುತ್ತದೆ. ಇದರಿಂದ ನಾನು ಆತ್ಮಸಾಕ್ಷಿಗನುಗುಣವಾಗಿ ಬದುಕಲು ಆಗುವುದಿಲ್ಲ. ಮುಂದುವರಿದರೆ ನಾನು ಈಗಲೇ ಈ ರಾಜ್ಯವನ್ನು ಬಿಟ್ಟು ಹೊರಡುತ್ತೇನೆ’ ಎಂದ. ರಾಜ ಆತನ ಮಾತನ್ನು ಕೇಳಲೇ ಬೇಕಾಯಿತು.

ಶತಾಯುಷಿಗಳಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯರನ್ನು ‘ನಿಮ್ಮ ದೀರ್ಘಾಯಸ್ಸಿನ ಗುಟ್ಟೇನು?’ ಎಂದು ಯಾರೋ ಕೇಳಿದರಂತೆ. ಅದಕ್ಕವರು ‘ನಾನು ನನ್ನ ಮನಸಿಗೆ ಒಪ್ಪುವ ಕೆಲಸವನ್ನು ಮಾತ್ರ ಮಾಡುತ್ತೇನೆ’ ಎಂದಿದ್ದರಂತೆ. ಮನಸ್ಸನ್ನು ಪೀಡಿಸಿ ಬಲವಂತವಾಗಿ ಕೆಲಸವನ್ನು ಮಾಡಿದರೆ ಆ ವ್ಯಥೆಯೇ ನಮ್ಮನ್ನು ಇನ್ನಷ್ಟು ಜರಾಕೂಪಕ್ಕೆ ತಳ್ಳುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಸಂಸ್ಕೃದಲ್ಲಿ ಸುಭಾಷಿತವೊಂದಿದೆ:

ಸರ್ಪಾಃ ಪಿಬಂತಿ ಪವನಂ ನ ಚ ದುರ್ಬಲಾಸ್ತೇ ಶುಷ್ಕೈಸ್ತೃೈರ್ವನಗಜಾ ಬಲಿನೋ ಭವಂತಿ|

ಕಂದೈಃ ಫಲೈಮುನಿವರಾಃ ಕ್ಷಪಯಂತಿ ಕಾಲಂ ಸಂತೋಷ ಏವ ಪುರುಷಸ್ಯ ಪರಂ ನಿಧಾನಂ||

ಅಂದರೆ, ಸರ್ಪಗಳು ಕೇವಲ ಗಾಳಿಯನ್ನೇ ಸೇವಿಸುತ್ತವೆ. ಅವು ದುರ್ಬಲವಲ್ಲ. ಒಣಗಿದ ಹುಲ್ಲುಗಳನ್ನೇ ತಿಂದರೂ ಕಾಡಾನೆಗಳು ಬಲಿಷ್ಠವಾಗಿಯೇ ಇರುತ್ತವೆ. ಕೇವಲ ಗಡ್ಡೆ-ಗೆಣಸು ಸೇವಿಸಿ ಋಷಿ-ಮುನಿಗಳು ಬಹುಕಾಲ ಬಾಳುತ್ತಾರೆ. ಆರೋಗ್ಯಯುತವಾಗಿ ಬಾಳಲು ಸಂತೋಷವೇ ಕಾರಣ. ಹಾಗಾಗಿ ಸದೃಢವಾಗಿ ಬಾಳ ಬಯಸುವ ನಾವು ನೆಮ್ಮದಿ ಕೊಡುವ ಕಾರ್ಯವನ್ನೇ ಮಾಡೋಣ.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net