

‘ಈ ಭೂಮಿ ನಮಗೆ ಎಲ್ಲವನ್ನೂ ಕೊಟ್ಟಿದೆ. ನಮ್ಮ ನಮ್ಮ ಶ್ರಮಕ್ಕನುಗುಣವಾಗಿ ನಮ್ಮ ಬದುಕನ್ನು ಹಸನುಮಾಡಿಕೊಳ್ಳುವ ಅವಕಾಶ ಕೊಟ್ಟಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇದಕ್ಕಾಗಿ ನಾವು ಪ್ರತೀದಿನ ಬೇಸಾಯವನ್ನು ಮಾಡುತ್ತಿರಬೇಕು’ ಎಂದು ಗುರುಗಳು ಹೇಳಿದಾಗ ಶಿಷ್ಯರು ಅಚ್ಚರಿಪಟ್ಟರು. ಯಾರಲ್ಲಿ ಜಮೀನು ಇದೆಯೋ ಅವರು ಮಾತ್ರ ಬೇಸಾಯ ಮಾಡಬಹುದು. ಆದರೆ ಇತರರು ಹೇಗೆ ಬೇಸಾಯ ಮಾಡಲು ಸಾಧ್ಯ. ಶಿಷ್ಯರ ಮನದಲ್ಲಿದ್ದ ಗೊಂದಲವನ್ನು ಗುರುಗಳು ಅರಿತರು. ‘ಈ ಭೂಮಿಯಲ್ಲಿ ಮಾಡುವ ಬೇಸಾಯದಿಂದ ನಮ್ಮ ಹೊಟ್ಟೆ ತುಂಬುತ್ತದೆ. ಆದರೆ ನಾವು ಮಾಡಬೇಕಾದ ಬಹುಮುಖ್ಯವಾದ ಬೇಸಾಯ ಎಂದರೆ ಅದು ಆಧ್ಯಾತ್ಮಿಕ ಬೇಸಾಯ. ನಮ್ಮ ಮನಸ್ಸೇ ಒಂದು ವ್ಯವಸಾಯದ ಭೂಮಿ. ಮನಸ್ಸು ಅರಳಬೇಕು, ಬೆಳೆಯಬೇಕು. ಆಗ ನಮಗೆ ವಿಶ್ವ ವಿಶಾಲವಾಗಿ ಕಾಣುತ್ತದೆ. ನಾವು ನಮ್ಮ ಮನಸ್ಸೆಂಬ ಭೂಮಿಯಲ್ಲಿ ಮಾಡಬೇಕಾದ ಬೇಸಾಯ ಎಂದರೆ ಅಲ್ಲಿ ಸುಗುಣಗಳನ್ನು ಬೆಳೆಯಬೇಕು. ಅದು ಸುಮ್ಮನೇ ಬೆಳೆಯುವುದಿಲ್ಲ. ಮೊದಲು ಸುಗುಣಗಳ ಬೀಜವನ್ನು ಬಿತ್ತಬೇಕು. ನಮ್ಮ ಮನಸ್ಸಿನಲ್ಲಿ ಸುಗುಣಗಳ ಸ್ಥಾಪನೆಯಾಗಬೇಕು. ನಂತರ ಅದಕ್ಕೆ ಪ್ರತಿನಿತ್ಯ ಅಭ್ಯಾಸ ಎಂಬ ನೀರೆರೆದು ಪೋಷಿಸಬೇಕು. ಜ್ಞಾನಸೂರ್ಯನ ಪ್ರಕಾಶ ಅದಕ್ಕೆ ಬೀಳುತ್ತಿರಬೇಕು. ಕಾಲಕಾಲಕ್ಕೆ ಸಜ್ಜನರ ಹಿತವಚನಗಳು ಎಂಬ ಪೋಷಕಾಂಶಗಳನ್ನು ಅದಕ್ಕೆ ಎರೆಯುತ್ತಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತೀದಿನ ನಾವು ನಮ್ಮ ಮನಸ್ಸಿನಲ್ಲಿ ಬೆಳೆಯುವ ಕಳೆಗಳನ್ನು ಕೀಳುತ್ತಿರಬೇಕು. ಈ ಕಳೆಗಳು ಯಾವುವೆಂದರೆ ಅತಿನಿದ್ದೆ, ಹೆದರಿಕೆ, ಸಿಟ್ಟು, ಆಲಸ್ಯ, ಎಚ್ಚರಗೇಡಿತನ, ಕೆಲಸ ಮುಂದೂಡುವಿಕೆ ಮುಂತಾದುವು. ನಮ್ಮ ಮನಸ್ಸೆಂಬ ವ್ಯವಸಾಯದ ಭೂಮಿಯಲ್ಲಿ ಈ ಕಳೆಗಳು ಏಳದಂತೆ ಎಚ್ಚರವಹಿಸಬೇಕು. ಆಗ ನಮ್ಮ ಮನಸ್ಸಿನಲ್ಲಿ ಸುಗುಣಗಳು ಎನ್ನುವ ಪುಷ್ಪ ಅರಳುತ್ತದೆ. ಇಂಥಾ ಪುಷ್ಪದ ಪರಿಮಳ ದೂರದೂರಕ್ಕೆ ಪಸರಿಸುತ್ತಾ ಇಡೀ ಪರಿಸರವನ್ನು ಚಂದ ಕಾಣಿಸುತ್ತದೆ. ಮಾನವ ಜನ್ಮದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಸುಖ, ನೆಮ್ಮದಿ, ಸಂತಸ ಸಿಗಬೇಕು. ಆಗ ಮಾತ್ರ ಇಡೀ ಭೂಮಂಡಲ ಸಂತಸದಿಂದ ನಲಿಯುತ್ತದೆ. ನಾವು ಶುದ್ಧಾತ್ಮದ ಭಾವವನ್ನು ಮತ್ತೊಬ್ಬರಿಗೆ ಹಂಚುವ ಕೆಲಸ ಮಾಡೋಣ. ನಮ್ಮ ಆಧ್ಯಾತ್ಮಿಕ ಬೇಸಾಯವನ್ನು ನಿರಂತರ ಮುಂದುವರಿಸೋಣ’ ಎಂದು ಗುರುಗಳು ಹೇಳಿದಾಗ ಮನಸ್ಸೆಂಬ ವ್ಯವಸಾಯದ ಭೂಮಿಯ ಬಗೆಗೆ ಶಿಷ್ಯರಿಗೆ ಸಂಪೂರ್ಣ ಅರಿವುಂಟಾಯಿತು.
| ಬೇಲೂರು ರಾಮಮೂರ್ತಿ
(ಲೇಖಕರು ಹವ್ಯಾಸಿ ಬರಹಗಾರರು)