ವಾತವು ಸಮತೋಲನ ಕಳೆದುಕೊಂಡರೆ ದೇಹಾದ್ಯಂತ ಕಿರಿಕಿರಿ

ವಾತ ದೋಷ
ವಾತ ದೋಷ
Published on
ಆಯುರ್ವೆದದಲ್ಲಿ ವಾತ ದೋಷವನ್ನು ದೋಷಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಆಕಾಶ ಮತ್ತು ವಾಯು ಮಹಾಭೂತಗಳ ಈ ಶಕ್ತಿಯು ದೇಹದ ಎಲ್ಲ ಚಲನೆಗಳ ಹಿಂದೆ ಇರುತ್ತದೆ. ಹೃದಯದ ಬಡಿತದಿಂದ ಹಿಡಿದು ಮಿದುಳಿನ ನರಗಳ ಸಂವಹನದವರೆಗೆ ಎಲ್ಲವನ್ನೂ ವಾತವೇ ನಿಯಂತ್ರಿಸುತ್ತದೆ. ಆದರೆ ವಾತವು ಚಂಚಲ, ಶೀತ ಮತ್ತು ಶುಷ್ಕ (ಒಣ) ಸ್ವಭಾವವನ್ನು ಹೊಂದಿರುವುದರಿಂದ, ಮೂರು ದೋಷಗಳಲ್ಲಿ ಇದು ಅತ್ಯಂತ ಬೇಗನೆ ಅಸಮತೋಲನಕ್ಕೆ ಒಳಗಾಗುತ್ತದೆ. 
ದೇಹದಲ್ಲಿ ವಾತವು ಕೋಪಗೊಂಡಾಗ ಅದು ದೇಹದಾದ್ಯಂತ ಒಣ ಮತ್ತು ತಂಪಾದ ಗಾಳಿಯಂತೆ ಕೆಲಸ ಮಾಡಿ, ಅಸ್ಥಿರತೆ, ನೋವು ಮತ್ತು ಶಕ್ತಿಯ ಕುಸಿತಕ್ಕೆ ಕಾರಣವಾಗುತ್ತದೆ.

ವಾತವು ತನ್ನ ಸಮತೋಲನವನ್ನು ಕಳೆದುಕೊಂಡಾಗ, ದೇಹ ಮತ್ತು ಮನಸ್ಸಿನಲ್ಲಿ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೀರ್ಣಕ್ರಿಯೆಯಲ್ಲಿ ಏರುಪೇರು - ಹೊಟ್ಟೆ ಉಬ್ಬರ, ಗ್ಯಾಸಿಕ್ ಮತ್ತು ದೀರ್ಘಕಾಲದ ಮಲಬದ್ಧತೆ ಕಾಣಿಸಿಕೊಳ್ಳುತ್ತವೆ. ಕರುಳಿನಲ್ಲಿರುವ ತೇವಾಂಶವನ್ನು ಒಣಗಿಸುತ್ತದೆ.

ಕೀಲು ಮತ್ತು ಸ್ನಾಯು ನೋವು - ಕೀಲುಗಳಲ್ಲಿ ಶಬ್ದ ಬರುವುದು, ಬಿಗಿತ ಮತ್ತು ಮೈಕೈನೋವು ಬರ ಬಹುದು. ಶುಷ್ಕತೆ - ಒರಟಾದ ಚರ್ಮ, ಒಡೆಯುವ ಉಗುರುಗಳು, ಒಣ ಕೂದಲು ಹಾಗೂ ಕಣ್ಣು ಅಥವಾ ಬಾಯಿ ಒಣಗುವುದು ಆಗುತ್ತದೆ. ನಿದ್ರಿಸಲು ಕಷ್ಟವಾಗುವುದು ಅಥವಾ ಮಧ್ಯರಾತ್ರಿಯಲ್ಲಿ ನಿದ್ರೆಯಿಂದ ಎಚ್ಚರವಾಗುತ್ತಿರುವುದು ಇಂತಹ ಸಮಸ್ಯೆಗಳಾಗುತ್ತವೆ. ಕೈಕಾಲು ನಡುಕ ಅಥವಾ ಅತಿಯಾದ ದೈಹಿಕ ಆಯಾಸ ಮತ್ತು ಚಡಪಡಿಕೆ ಉಂಟಾಗುವುದು. ಮಾನಸಿಕ ಮತ್ತು ಭಾವನಾತ್ಮಕ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ. ಆತಂಕ, ಭಯ, ಅತಿಯಾದ ಆಲೋಚನೆಗಳು, ಏಕಾಗ್ರತೆಯ ಕೊರತೆ, ಗೊಂದಲಕ್ಕೊಳಗಾಗುವುದು ಮುಂತಾದ ಮಾನಸಿಕ ತೊಂದರೆಗಳಾಗುತ್ತವೆ.

ವಾತದ ಗುಣಗಳಾದ ಶೀತ, ಲಘು ಮತ್ತು ಶುಷ್ಕತೆಯನ್ನು ಹೋಲುವ ಯಾವುದೇ ಅಭ್ಯಾಸಗಳು ವಾತವನ್ನು ಹೆಚ್ಚಿಸುತ್ತವೆ. ಅತಿಯಾಗಿ ತಂಪು ಪಾನೀಯಗಳು, ಒಣಗಿದ ಆಹಾರಗಳು ಅಥವಾ ಪಾಪ್​ಕಾರ್ನ್​ನಂತಹ ಲಘು ಆಹಾರಗಳ ಸೇವನೆ, ಹಸಿವಿದ್ದರೂ ಊಟ ಮಾಡದಿರುವುದು ಅಥವಾ ಅತಿಯಾದ ಉಪವಾಸ, ಅತಿಯಾಗಿ ಕಹಿ, ಖಾರ, ಒಗರು ಇರುವ ಆಹಾರಗಳನ್ನು ಸೇವಿಸುವುದು, ಸ್ವಲ್ಪವೂ ತುಪ್ಪ, ಎಣ್ಣೆಯಂತಹ ಒಳ್ಳೆಯ ಕೊಬ್ಬುಗಳನ್ನು ಸೇವಿಸದೇ ಇರುವುದು ಇತ್ಯಾದಿ ಆಹಾರ ಶೈಲಿಗಳು ವಾತದೋಷವನ್ನು ಹೆಚ್ಚಿಸುತ್ತವೆ. ಅನಿಯಮಿತ ಜೀವನಶೈಲಿ ಕೂಡಾ ವಾತ ಪ್ರಕೋಪಕವೇ. 

ಪ್ರತಿದಿನ ಬೇರೆ ಬೇರೆ ಸಮಯದಲ್ಲಿ ಏಳುವುದು, ಊಟ ಮಾಡುವುದು ಮತ್ತು ತಡರಾತ್ರಿಯವರೆಗೆ ಎಚ್ಚರವಾಗಿರುವುದು ವಾತದ ಮುಖ್ಯ ವೈರಿಗಳು. ಅತಿಯಾದ ಚಳಿ, ಗಾಳಿಗೆ ಮೈಯೊಡ್ಡುವುದು ಅಥವಾ ಎಸಿಯ ಅತಿಯಾದ ಬಳಕೆ ಕೂಡ ಕಾರಣವಾಗುತ್ತವೆ. ಅತಿಯಾದ ಶ್ರಮ, ಪ್ರಯಾಣ, ಅತಿಯಾದ ವ್ಯಾಯಾಮ ಅಥವಾ ನಿರಂತರವಾಗಿ ಜೋರಾದ ಶಬ್ದ ಕೇಳುವುದು ಮತ್ತು ಮೊಬೈಲ್, ಟಿವಿ ವೀಕ್ಷಣೆ ಕೂಡ ಕಾರಣವಾಗುತ್ತವೆ. ಈಗ ವಾತಶಮನಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ನೋಡೋಣ. 

ವಾತವನ್ನು ಸಮತೋಲನ ಗೊಳಿಸಲು ಇರುವ ಸುವರ್ಣ ಸೂತ್ರವೆಂದರೆ ತೈಲ, ಉಷ್ಣತೆ ಮತ್ತು ಶಿಸ್ತು. ದೇಹದ ಒಳಗೆ ಮತ್ತು ಹೊರಗೆ ಎಣ್ಣೆಯ ಅಂಶವನ್ನು ನೀಡುವುದು ವಾತಕ್ಕೆ ಅತ್ಯುತ್ತಮ ಚಿಕಿತ್ಸೆ. ಹಾಗಾಗಿ ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿ ನಂತರ ಸ್ನಾನ ಮಾಡಬೇಕು. ಎಳ್ಳೆಣ್ಣೆಯು ವಾತ ಶಮನಕ್ಕೆ ಅತ್ಯುತ್ತಮ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ. ಪ್ರತಿ ಊಟದಲ್ಲಿ ಸ್ವಲ್ಪ ತುಪ್ಪವನ್ನು ಬಳಸಬೇಕು. ಇದು ಜೀರ್ಣಾಂಗವ್ಯೂಹವನ್ನು ನಯಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಆಹಾರದಲ್ಲಿ ಶುಂಠಿ, ಜೀರಿಗೆ, ದಾಲ್ಚಿನ್ನಿ ಮತ್ತು ಇಂಗು ಬಳಸಬಹುದು. ಸರಿಯಾದ ಸಮಯಕ್ಕೆ ಊಟ ಅಂದರೆ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ನಿಗದಿತ ಸಮಯದಲ್ಲಿಯೇ ಮಾಡಿದರೆ ಒಳ್ಳೆಯದು.

ರಾತ್ರಿ 10 ಗಂಟೆಯೊಳಗೆ ಮಲಗಿದರೆ ಕಫ ಕಾಲದ (ಸಂಜೆ 6 ರಿಂದ 10) ಭಾರವಾದ ಶಕ್ತಿಯು ಚಂಚಲವಾದ ವಾತವನ್ನು ಶಾಂತಗೊಳಿಗಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ಮುಕ್ಕಳಿಸುವುದರಿಂದ ಆ ಭಾಗದಲ್ಲಿ ವಾತ ಶಮನವಾಗುವುದಲ್ಲದೇ ಹಲ್ಲು ಮತ್ತು ವಸಡುಗಳ ಆರೋಗ್ಯ ಸುಧಾರಿಸುತ್ತದೆ. ಮನಸ್ಸನ್ನು ಶಾಂತವಾಗಿ ಇರುವಂತೆ ನೋಡಿಕೊಳ್ಳಬೇಕು. ಕೆಲವು ಆಸನಗಳು, ಪ್ರಾಣಾಯಾಮಗಳು, ಮುದ್ರೆಗಳು ತುಂಬಾ ಅನುಕೂಲಕರ. ಏನು ಮಾಡಿದರೂ ಕಡಿಮೆಯಾಗದಿದ್ದರೆ ಬಸ್ತಿ ಚಿಕಿತ್ಸೆಯಂತಹ ಪಂಚಕರ್ಮ ಚಿಕಿತ್ಸೆಗಳು ವಾತದಿಂದಾದ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸುತ್ತವೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net