

ಡ್ಯಾನಿ ಪಿರೇರಾ
‘ಪರಧರ್ಮವನ್ನು ಅಪ್ಪುವುದಕ್ಕಿಂತ ಸ್ವಧರ್ಮದಲ್ಲಿ ಮರಣ ಹೊಂದುವುದೇ ಶ್ರೇಯಸ್ಸು’ ಎನ್ನುತ್ತದೆ ಭಗವದ್ಗೀತೆ. ಧರ್ವಚರಣೆಗೆ ಈ ದೇಶ ಇನ್ನಿಲ್ಲದ ಮಹತ್ವಕೊಟ್ಟಿದೆ. ಧರ್ವನುಷ್ಠಾನಕ್ಕಾಗಿ ದುಡಿದು ಮಡಿದು ಕೀರ್ತಿಶೇಷರಾದ ಪರಂಪರೆ ನಮ್ಮದು. ಪ್ರಾಣ ಕೊಟ್ಟೇನು, ಧರ್ಮಬಿಡೆನು ಎಂದು ಅಮರರಾದವರ ಕತೆಗಳು ಅದೆಷ್ಟೋ! ಧರ್ಮ ಬಿಟ್ಟು ವಿರೋಧಿಗಳೊಂದಿಗೆ ಕೈ ಜೋಡಿಸಿ ಧರ್ಮಭ್ರಷ್ಟರಾದವರು ಸಾಕಷ್ಟಿದ್ದರೂ ಅವರನ್ನು ಧರ್ಮದ್ರೋಹಿ ವಿಶ್ವಾಸಘಾತುಕರೆಂದೇ ಇತಿಹಾಸ ಗುರುತಿಸುವುದು. ಆದರೆ ಸತ್ಯಾನುಷ್ಠಾನದಲ್ಲಿ ಯಾರು ಧರ್ವಚರಣೆಯೇ ಉನ್ನತ ಧ್ಯೇಯವೆಂದು ಭಾವಿಸಿ ಅದನ್ನು ಕಾರ್ಯಗತಗೊಳಿಸುವಲ್ಲಿ ಪ್ರಾಣಕ್ಕೆ ಅಂಜದೆ ಧರ್ಮಪಾಲನೆಗೆ ಮುಂದಾದರೋ ಅವರನ್ನು ಧರ್ಮಪರಿಪಾಲಕರೆಂದು ಇತಿಹಾಸ ಸ್ಮರಿಸುತ್ತದೆ. ಮಾತ್ರವಲ್ಲ, ಅವರ ನಡೆ ಶತಶತಮಾನಕ್ಕೂ ಉನ್ನಾತಾದರ್ಶಕ್ಕೆ ಮೇಲ್ಪಂಕ್ತಿಯಾಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಸನಾತನ ಪರಂಪರೆಯ ಮೇಲ್ಮೆಗೆ ಕಾರಣ ವಾಗಿದ್ದು ಛತ್ರಪತಿ ಶಿವಾಜಿ ಮಹಾರಾಜರ ಬದುಕು. ಆದರೆ ಶಿವಾಜಿ ಮಹಾರಾಜರ ಮರಣಾನಂತರ ಮರಾಠರ ಪ್ರಾಬಲ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮೊಗಲರು ಪ್ರಬಲರಾಗಿದ್ದರು. ಮತಾಂಧನಾಗಿದ್ದ ಔರಂಗಜೇಬನು ಶಿವಾಜಿಯ ಮಗನಾದ ಸಂಭಾಜಿಯನ್ನು ಸೆರೆಹಿಡಿಸಿದ್ದು ಮಾತ್ರವಲ್ಲದೆ, ಅವನನ್ನು ಕಾರಾಗೃಹದೊಳಗೆ ಅತ್ಯಂತ ಕೊಳಕಾದ ಸ್ಥಳದಲ್ಲಿ ಬಂಧಿಸಿಡಬೇಕೆಂದು ದರ್ಪದ ಆದೇಶ ನೀಡಿದ್ದ. ಕೆಲವು ದಿನಗಳ ನಂತರ ಸಂಭಾಜಿಯನ್ನು ಕರೆಸಿದ ಔರಂಗಜೇಬ್, ನಿಶ್ಯಕ್ತನಾಗದ ಮತ್ತು ಕಳೆಗುಂದದ ಸಂಭಾಜಿಯ ಮುಖ ಮತ್ತು ದೇಹವನ್ನು ಕಂಡು ಆಶ್ಚರ್ಯಗೊಂಡರೂ ತೋರಗೊಡದೆ, ‘ನೀನು ನಮ್ಮ ಧರ್ಮವನ್ನು ಸ್ವೀಕರಿಸಿದರೆ, ನಿನ್ನನ್ನು ಬಿಟ್ಟುಬಿಡುತ್ತೇವೆ’ ಎಂದು ಆಮಿಷ ತೋರಿಸಿದ. ಆಗ ಸಂಭಾಜಿ, ‘ನಿನ್ನ ಧರ್ಮ ಸ್ವೀಕರಿಸದಿದ್ದರೆ, ಏನು ಮಾಡುವೆ?’ ಎಂದು ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದಾಗ, ‘ನಿನ್ನ ಶಿರಚ್ಛೇದನ ಮಾಡುವೆ’ ಎಂದು ಔರಂಗಜೇಬನು ಬೆದರಿಸಿದ. ಪರಧರ್ಮವನ್ನು ಆಚರಿಸುವ ಬದಲು, ತನ್ನ ಧರ್ಮದಲ್ಲಿ ವೀರಮರಣವನ್ನಪ್ಪುವುದೇ ಶ್ರೇಯಸ್ಸು ಎಂದು ತಲೆಯೆತ್ತಿ, ಎದೆಯುಬ್ಬಿಸಿ ಹೇಳಿದ ಸಂಭಾಜಿ. ಒಡನೆಯೇ ಔರಂಗಜೇಬ್ ತನ್ನ ಸೈನಿಕರಿಗೆ ಸಂಭಾಜಿಯ ಶಿರಚ್ಛೇದ ಮಾಡುವ ಆಜ್ಞೆ ನೀಡಿದ. ಅದರಂತೆ ಸೈನಿಕರು ಸಂಭಾಜಿಯ ತಲೆಯನ್ನು ಕತ್ತರಿಸಿದರು. ತಂದೆ ಶಿವಾಜಿ ಸ್ವಧರ್ಮ-ಸ್ವದೇಶಕ್ಕಾಗಿ ಬದುಕಿದ್ದರು. ಮಗ ಸಂಭಾಜಿ ತಂದೆಯಂತೆ ಸ್ವಧರ್ಮಕ್ಕಾಗಿ ಪ್ರಾಣಕೊಟ್ಟು ಯೋಗ್ಯ ತಂದೆಯ ಯೋಗ್ಯ ಮಗನಾಗಿ ಕೀರ್ತಿಶೇಷನಾದ.
ಹೌದು, ಧರ್ಮಕ್ಕಾಗಿ ಬದುಕುವವರು ಅಮರರಾಗುತ್ತಾರೆ ಮತ್ತೊಬ್ಬರಿಗೆ ಆದರ್ಶವಾಗುತ್ತಾರೆ. ಅವರ ಶ್ರೇಷ್ಠತೆಯನ್ನು ಇತರರು ಅನುಸರಿಸುತ್ತಾರೆ. ಹಾಗಾಗಿ ಭಗವದ್ಗೀತೆ ಹೇಳುತ್ತದೆ-
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||
ಅಂದರೆ ಸತ್ಪುರುಷರು ಯಾವ ಅಚರಣೆಗಳನ್ನು ಮಾಡುತ್ತಾರೋ, ಸಾಮಾನ್ಯ ಜನ ಅದನ್ನು ಅನುಸರಿಸುತ್ತಾರೆ. ಅವರು ಯಾವುದನ್ನು ಪ್ರಮಾಣವೆಂದು ಮಾಡಿ ತೋರುತ್ತಾರೋ ಸಮಸ್ತ ಸಮುದಾಯ ಅದಕ್ಕೆ ಅನುಸಾರವಾಗಿ ವರ್ತಿಸುತ್ತದೆ ಎಂದು.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)