ಧನ್ವಂತರಿ: ರಸಾಯನ ಚಿಕಿತ್ಸೆ ಕುರಿತಾದ ಉಪಯುಕ್ತ ಮಾಹಿತಿ ನಿಮಗಾಗಿ

Chemo Therapi
Published on

ಮಾನವಶರೀರವನ್ನು ಪಡೆದು ಜನಿಸಿದ ಪ್ರತಿ ವ್ಯಕ್ತಿಯ ಮೇಲೆ ದೇಹದ ಸ್ವಾಸ್ಥ್ಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯೂ ಇದೆ. ದೇಹವು ಹಳೆಯದಾಗುತ್ತ ಕಾಯಿಲೆಗಳ ತವರು ಆಗಬಾರದೆಂಬ ಸಂಕಲ್ಪ ತೊಟ್ಟವರಿಗೆಲ್ಲ ಇರುವ ಸ್ವಾಸ್ಥ್ಯ್ರದ ದಾರಿಯೇ ಆಯುರ್ವೆದ ವಿವರಿಸಿದ ರಸಾಯನ ಚಿಕಿತ್ಸೆ. ಈ ಚಿಕಿತ್ಸೆಯನ್ನು ಪಡೆದುಕೊಳ್ಳಲು ಚಿಕಿತ್ಸಾಲಯದಲ್ಲೇ ಉಳಿದುಕೊಂಡು ಮಾಡುವ ‘ಕುಟಿಪ್ರಾವೇಶಿಕ’ ಹಾಗೂ ಹೊರರೋಗಿಯಾಗಿ ಮನೆಗೆ ಹೋಗಿಬಂದು ಪಡೆದುಕೊಳ್ಳುವ ‘ವಾತಾತಪಿಕ’ ಎಂಬ ಎರಡೂ ರೀತಿಯಲ್ಲಿ ವೈದ್ಯರ ನಿರ್ದೇಶನದಂತೆ ನಿರ್ವಹಣೆ ಮಾಡಲಾಗುತ್ತದೆ.

ಚಿಕಿತ್ಸೆಯಲ್ಲಿ ಪ್ರಮುಖವಾಗಿ ಕಾಮ್ಯ ರಸಾಯನ, ನೈಮಿತ್ತಿಕ ರಸಾಯನ, ನಿತ್ಯ ರಸಾಯನವೆಂಬ ಮೂರು ವಿಧಗಳಿವೆ. ಕಾಮ್ಯ ರಸಾಯನವೆಂಬುದು ರೋಗನಾಶನ ಗುರಿಯನ್ನು ಹೊಂದಿದೆ. ಮೇಧಸ್ಸಿಗೆ ಹಾನಿಯಾಗಿ ಜ್ಞಾಪಕಶಕ್ತಿ, ಬುದ್ಧಿಶಕ್ತಿಗಳ ಬಲಹೀನವಾದಾಗ ಬ್ರಹ್ಮರಸಾಯನದಂತಹ ಔಷಧಗಳನ್ನು ನೀಡಿ ಮಾಡುವ ಚಿಕಿತ್ಸಾವಿಧಾನ ಇದಾಗಿದೆ. ಶ್ವಾಸಕೋಶದ ತೊಂದರೆಗಳಿದ್ದಾಗ ಪಿಪ್ಪಲೀರಸಾಯನ, ವಾತವ್ಯಾಧಿಗಳು ಶರೀರವನ್ನು ನಲುಗಿಸುತ್ತಿದ್ದಾಗ ಲಶುನರಸಾಯನ, ಪಚನಶಕ್ತಿ ಕುಂದಿ ರೋಗಗಳು ಕಾಡುತ್ತಿದ್ದಾಗ ಹಾಗೂ ಶ್ವಾಸಕೋಶ ಸಂಬಂಧೀ ರೋಗಗಳಿದ್ದಾಗ ಆಮಲಕೀ ರಸಾಯನ ಮತ್ತು ಹರೀತಕ್ಯಾದಿ ರಸಾಯನದ ಪ್ರಯೋಗಗಳು ಕಾಮ್ಯ ರಸಾಯನದ ಭಾಗವಾಗಿದೆ.

ನೈಮಿತ್ತಿಕ ರಸಾಯನ ದೇಹವನ್ನು ಪುಷ್ಟಿಗೊಳಿಸುವ ಚಿಕಿತ್ಸಾ ವಿಧಾನ. ಇದನ್ನು ರೋಗಮುಕ್ತಿಯ ಕಾಲದಲ್ಲಿ ನೀಡಬೇಕಾಗಿರುತ್ತದೆ. ವ್ಯಕ್ತಿಯೋರ್ವ ಶ್ವಾಸಕೋಶದ ಕ್ಷಯರೋಗದಿಂದ ಬಳಲಿದಾಗ ಆರು ತಿಂಗಳೋ, ಒಂದು ವರ್ಷವೋ ನೀಡಲಾದ ಔಷಧ ಚಿಕಿತ್ಸೆಯಿಂದ ಗುಣವಾಗಿರುತ್ತದೆ. ಎಲ್ಲ ರೋಗತಪಾಸಣಾ ವರದಿಗಳೂ ಪ್ರಾಕೃತ ಸ್ಥಿತಿಯನ್ನೇ ಬಿಂಬಿಸುತ್ತವೆ. ಚಿಕಿತ್ಸಿಸಿದ ವೈದ್ಯರು ಎಲ್ಲವೂ ಸರಿಯಾಗಿದೆ, ಏನೂ ಬೇಡವೆಂದೇ ಹೇಳುತ್ತಾರೆ. ಆದರೂ ಆ ವ್ಯಕ್ತಿಗೆ ಏನೋ ಸುಸ್ತು, ಎಲ್ಲದರಲ್ಲೂ ನಿರುತ್ಸಾಹ, ಮೊದಲಿದ್ದ ಕ್ರಿಯಾಶೀಲತೆ ಇರುವುದಿಲ್ಲ. ಶರೀರ ಧಾತುಗಳನ್ನು ಪುಷ್ಟಿಗೊಳಿಸಿ ಮತ್ತೆ ಮೊದಲಿನ ಹುರುಪನ್ನು ತುಂಬಿಕೊಡಲು ನೈಮಿತ್ತಿಕ ರಸಾಯನ ಚಿಕಿತ್ಸೆಯೇ ದಾರಿ. ಚ್ಯವನಪ್ರಾಶ ಅವಲೇಹ, ತ್ರಿಫಲಾ ರಸಾಯನ, ಹರೀತಕೀ ರಸಾಯನ, ಶಿಲಾಜಿತು ರಸಾಯನಗಳೆಲ್ಲ ಇದೇ ಸಾಲಿನ ಪ್ರಮುಖ ಔಷಧಗಳು. ಆಹಾರದಲ್ಲಿ ಸಾವಯವ ಒಣದ್ರಾಕ್ಷಿ ಹಾಗೂ ಖರ್ಜೂರ, ಔಷಧೀಯ ಸಸ್ಯಗಳಲ್ಲಿ ಬಲಾ, ಗುಗ್ಗುಲು, ಲಾಕ್ಷಾಗಳಂತಹ ದ್ರವ್ಯಗಳೂ ದೇಹವನ್ನು ಪುಷ್ಟಿಗೊಳಿಸಲು ಬಳಸಲ್ಪಡುತ್ತವೆ. ಅಜಸ್ರಿಕ ರಸಾಯನವೆಂದರೆ ಅದು ನಿತ್ಯ ರಸಾಯನ. ಪ್ರತಿನಿತ್ಯ ಕೆಲವೊಂದು ಆಹಾರಸೇವನಾ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಶರೀರವನ್ನು ದೃಢಗೊಳಿಸುವ ವಿಧಾನಗಳಿವು. ಅನುದಿನವೂ ಕ್ಷೀರ ಹಾಗೂ ಘೃತ ಸೇವನೆಯ ಅಭ್ಯಾಸವು ಇದರಲ್ಲಿ ಮುಂಚೂಣಿಸ್ಥಾನದಲ್ಲಿದೆ. ಯಾವುದೋ ಚಾಕಲೇಟ್ ತಿನ್ನುವುದರ ಬದಲು ಬೆಟ್ಟದ ನೆಲ್ಲಿಕಾಯಿ ಲಭ್ಯವಿರುವ ಕಾಲದಲ್ಲಿ ಸೇವನೆ, ಕೃತಕ ರಾಸಾಯನಿಕಯುಕ್ತ ಜಾಮ್ಳನ್ನು ಉಪಾಹಾರದೊಂದಿಗೆ ತಿನ್ನುವ ಬದಲು ಸಾವಯವ ಬೆಲ್ಲ ಹಾಗೂ ದೇಸಿ ಗೋವಿನ ತುಪ್ಪಗಳ ಮಿಶ್ರಣದ ಬಳಕೆ, ಒಳ್ಳೆಯ ಎಣ್ಣೆಯಾಗಿರುವ ಎಳ್ಳೆಣ್ಣೆ ಉಪಯೋಗಕ್ಕೆ ದಿನನಿತ್ಯ ಆದ್ಯತೆ, ಸದಾ ಶುದ್ಧವಾದ ಸಹಜ ನೀರು ಕುಡಿಯುವ ಅಭ್ಯಾಸಗಳೆಲ್ಲ ನಿತ್ಯ ರಸಾಯನದ ಮೂಲಕ ಶರೀರ ಸದೃಢಗೊಳಿಸುವ ಪಥಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net