ಇಂದು ವೈಕುಂಠ ಏಕಾದಶಿ ದರ್ಶನದಿಂದ ಧನ್ಯತೆ

Vaikunt 3
Published on

ಏಕಾದಶಿ ಎಂದರೆ 11 ಎಂದು. 5 ಕಮೇಂದ್ರಿಯ, 5 ಜ್ಞಾನೇಂದ್ರಿಯ ಹಾಗೂ ಮನಸ್ಸು. ಧರ್ಮ, ಕರ್ಮ, ಜ್ಞಾನ ಸಾಧನ ಕರಣಗಳಿಂದ ಭಗವತ್ ಚಿಂತನೆಗೆ ತೊಡಗುವ ಕ್ರಿಯೆಯೇ ಏಕಾದಶಿ. ಈ ಏಕಾದಶಿಗೆ ಸಾಕ್ಷಾತ್ ಶ್ರೀ ವಿಷ್ಣುವೇ ಅಭಿಮಾನಿ ದೇವರು. ಈ ಕಾರಣಕ್ಕೆ ಆ ದಿನವನ್ನು ಹರಿದಿನ ಎನ್ನುವರು.

ಹಿನ್ನೆಲೆ: ಏಕಾದಶಿ ಎನ್ನುವ ದೇವಿಯು ವಿಷ್ಣುವಿನಿಂದ ಉದ್ಭವಳಾಗಿ ‘ಮುರ’ ಎಂಬ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ. ಇದರಿಂದ ಸಂಪ್ರಿತನಾದ ವಿಷ್ಣುವು ಏನಾದರು ವರಕೇಳು ಎಂದಾಗ ‘ವೈಕುಂಠ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರುಗಳ ಪಾಪ ಪರಿಹರಿಸಿ, ಮೋಕ್ಷವನ್ನು ಕರುಣಿಸು’ ಎಂದು ಏಕಾದಶಿ ದೇವಿ ಕೇಳುತ್ತಾಳೆ. ವಿಷ್ಣುವು ಅದರಂತೆ ಆಗಲಿ ಎಂದನಂತೆ. ಉಪವಾಸದ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು, ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಸಾಧನೆ ಮಾಡಬೇಕು.

ಉಪವಾಸ: ‘ಉಪ’ ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ವಾಸಿಸುವುದೇ ಉಪವಾಸವಾಗಿದೆ. ಉಪವಾಸದ ಸಮಯದಲ್ಲಿ ಯಾರು ಧ್ಯಾನ, ಪೂಜೆ, ಭಜನೆ, ವಿಷ್ಣು ಸಹಸ್ರನಾಮ ಪಠಣ, ಜಾಗರಣೆ ಮಾಡುತ್ತಾರೋ ಅವರಿಗೆ ಅಂತ್ಯದಲ್ಲಿ ಮೋಕ್ಷ ಕರುಣಿಸುವನು. ಪ್ರತಿ ವರ್ಷ ವೈಕುಂಠ ಏಕಾದಶಿ ಬರುವುದು ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ ಇದೆ. ಮುಕ್ಕೋಟಿ ದೇವತೆಗಳಿಗೆ ನಾರಾಯಣನು ದರ್ಶನ ನೀಡುವನು. ನಾರಾಯಣನ ಅಕ್ಷರಗಳಲ್ಲಿ ವಿಶೇಷತೆ ಇದೆ. ನಾ-ಎಂದರೆ ಕಾರಣ ರೂಪ ಜಲದ ಮೇಲೆ ನಿವಾಸವನ್ನು ಕಲ್ಪಿಸಿಕೊಂಡಿರುವವನು, ರಾ-ಎಂದರೆ ಎಲ್ಲ ಮಾನವ ಜೀವಿಗಳು ನೆಲೆಗೊಳ್ಳುವ ಸ್ಥಾನ, ಯ-ಎಂದರೆ ಎಲ್ಲ ಮಾನವರ ಹೃದಯಗಳಲ್ಲಿ ವಾಸಿಸುವವನು, ಣ-ಎಂದರೆ ಮಾನವ ಕೋಟಿಯ ಅಂತಿಮ ಗಮ್ಯಸ್ಥಾನ.

ಧರ್ಮವು ಇಳಿಮುಖವಾಗಿ ಅಧರ್ಮವು ತಾಂಡವ ವಾಡುತ್ತಿರುವಾಗ ಧರ್ಮವನ್ನು ಉದ್ದರಿಸಲು ವಿಷ್ಣುವು ದೇಹ ಧಾರಿಯಾಗಿ ಅವತರಿಸುತ್ತಾನೆ. ವಿಷ್ಣುವಿಗೆ ನಾಲ್ಕು ಕೈಗಳು. ಇದರಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇರುವುದು. ಶಂಖವು ಪಂಚಭೂತಗಳನ್ನು ಸೂಚಿಸುತ್ತದೆ. ಚಕ್ರವು ಚಿತ್ತವನ್ನು, ಗದೆಯು ಬುದ್ಧಿಯನ್ನು, ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ಈ ವಿಷ್ಣು ಸೃಷ್ಟಿಕರ್ತನಾಗಿರುವನು.

ವೈಕುಂಠ ಏಕಾದಶಿ ದಿನ ವಿಷ್ಣುವಿನ ದೇವಾಲಯದಲ್ಲಿ ಈಶಾನ್ಯದ ಬಾಗಿಲನ್ನು ತೆರೆಯುತ್ತಾರೆ. ಅಂದು ಭಕ್ತರು ಪೂರ್ವ ಬಾಗಿಲಿನಿಂದ ಪ್ರವೇಶಿಸಿ ಉತ್ತರ ಬಾಗಿಲಿನಲ್ಲಿರುವ ಶೇಷಶಯನನನ್ನು ದರ್ಶನ ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ಉತ್ತರ ಬಾಗಿಲಿನ ಮೂಲಕ ದರ್ಶನ ಆಗುವುದರಿಂದ ಅಂದು ವಿಶೇಷ ಮಹತ್ವ. ದೇವರ ಉತ್ಸವಮೂರ್ತಿಗಳನ್ನು ತೊಟ್ಟಿಲಲ್ಲಿ ಕೂಡಿಸಿ ತೂಗುಹಾಕಿರುತ್ತಾರೆ. ಅದನ್ನು ದರ್ಶಿಸಿದರೆ ವೈಕುಂಠ ಪ್ರಾಪ್ತಿ ಆದಷ್ಟೆ ಪುಣ್ಯ ಎನ್ನುವುದು ಭಕ್ತರ ನಂಬಿಕೆ.

| ಮಂಡಗದ್ದೆ ಪ್ರಕಾಶಬಾಬು

(ಲೇಖಕರು ಧಾರ್ವಿುಕ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net