ಕರೊನಾ ಸಂಕಷ್ಟ ಕಾಲದಲ್ಲಿ ದೇಹರಕ್ಷಣೆಗೆ ಮೂರು ಸೂತ್ರಗಳು

health
Published on

ಜನರ ಮುಂದೆ ಪ್ರಸ್ತುತ ಎದುರಾಗಿರುವುದು ಮುಂದೇನು ಎಂಬ ಪ್ರಶ್ನೆಯಲ್ಲ. ವೃತ್ತಿಜೀವನ ಹೇಗೆಂಬ ಆತಂಕವಲ್ಲ. ಕುಟುಂಬದ ಪಾಲನೆ ಹೇಗೆಂಬ ಚಿಂತೆಯಲ್ಲ. ಜೀವನ ನಿರ್ವಹಣೆ ಹೇಗಪ್ಪ ಎಂಬ ಆಲೋಚನೆಯೂ ಅಲ್ಲ. ಹಣದ ಸಮಸ್ಯೆ, ಕೌಟುಂಬಿಕ ಸಮಸ್ಯೆ, ನೌಕರಿ ಸಮಸ್ಯೆ, ಸವಲತ್ತುಗಳ ಕೊರತೆ, ನೀರು, ರಸ್ತೆ, ವಿದ್ಯುತ್, ಆಹಾರ - ಹೀಗೆ ಯಾವುದೇ ಅಭಾವವಾಗಲಿ, ತೊಂದರೆಯಾಗಲಿ ಕಾಡುತ್ತಿಲ್ಲ. ಕಿತ್ತುಹೋಗಿರುವ ಡಾಂಬರೂ ಕಾಣಿಸುತ್ತಿಲ್ಲ. ಮಳೆಯ ಅಭಾವವೂ ಗೋಚರಿಸುತ್ತಿಲ್ಲ. ಸಲೀಸಾದ ಓಡಾಟಕ್ಕೆ ಆಗುತ್ತಿರುವ ತೊಂದರೆಯೂ ಲೆಕ್ಕಕ್ಕೇ ಇಲ್ಲ!

ಪ್ರಶ್ನೆ ಎದುರಾಗಿರುವುದು ಒಂದೇ! ಅದು ಜೀವದ ಪ್ರಶ್ನೆ. ಬದುಕಿ ಉಳಿದರೆ ಇನ್ನೆಲ್ಲವೂ ಎಂಬ ಭಾವನೆ ದಟ್ಟವಾಗಿ ಕವಿಯತೊಡಗಿದೆ. ಈ ಭೀತಿಯಿಂದ ಹೊರಬರಬೇಕಾದರೆ ನಮ್ಮ ದೇಹರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಪ್ರತಿಯೊಬ್ಬರೂ ಕೈಗೊಳ್ಳಲೇಬೇಕಾಗುತ್ತದೆ. ಇದು ಕೇವಲ ಅವಶ್ಯಕತೆಯಲ್ಲ, ಅನಿವಾರ್ಯ.

ಸೂತ್ರ ಒಂದು: ಪ್ರತಿನಿತ್ಯ ಒಬ್ಬ ವ್ಯಕ್ತಿಗೆ ಒಂದು ಲೀಟರ್ ನೀರನ್ನು ಕುದಿಸಿ ಕೊನೆಯಲ್ಲಿ ಐದಾರು ತುಳಸಿ ಎಲೆಗಳನ್ನು ಅದಕ್ಕೆ ಹಾಕಬೇಕು. ಮತ್ತೆರಡು ನಿಮಿಷ ಕುದಿಸುವುದನ್ನು ಮುಂದುವರಿಸಿ. ಕಾಯಿಸಿ ಆರಿಸಿದ ಈ ಮೌಲ್ಯವರ್ಧಿತ ನೀರನ್ನು ದಿನದಲ್ಲಿ ಕುಡಿಯುತ್ತ ಹೋಗಿ. ಈ ತುಳಸಿ ಫಾಂಟಾ ಮುಗಿದ ಬಳಿಕ ಸಾದಾ ನೀರನ್ನು ಅಗತ್ಯಕ್ಕೆ ತಕ್ಕಂತೆ ಕುಡಿಯಬಹುದು. ತುಳಸಿಗಿಡ ಸಿಗದವರು ಅರ್ಧ ಚಮಚ ತುಳಸಿ ಚೂರ್ಣ ಹಾಕಿ ತಯಾರಿಸಬಹುದು.

ಸೂತ್ರ ಎರಡು: ಈಗಾಗಲೇ ಕಾಯಿಸಿಟ್ಟಿರುವ ಒಂದು ಲೋಟ ಹಾಲಿಗೆ ಉಷ್ಣದೇಹ ಪ್ರಕೃತಿಯವರಿಗೆ ಹಾಗೂ ಮಕ್ಕಳಿಗೆ ಕಾಲುಚಮಚ ಅರಿಶಿಣ ಹುಡಿಯನ್ನು ಹಾಕಬೇಕು. ಆಗಾಗ ಶೀತ, ಉಸಿರಾಟದ ತೊಂದರೆಗೊಳಗಾಗುವ ತಂಪು ದೇಹದವರು ಅರ್ಧ ಚಮಚ ಅರಿಶಿಣವನ್ನು ಬಳಸಬೇಕು. ಬಳಿಕ ಮೂರು ನಿಮಿಷಗಳ ಕಾಲ ಪುನಃ ಕುದಿಸಿ ಸೋಸಿ ಬೆಲ್ಲ ಅಥವಾ ಸಕ್ಕರೆಯನ್ನು ರುಚಿಗೆ ತಕ್ಕಂತೆ ಸೇರಿಸಬಹುದು. ಸಂಜೆ ಅಥವಾ ರಾತ್ರಿ ಊಟದ ಬಳಿಕ ಸೇವಿಸಬೇಕು.

ಸೂತ್ರ ಮೂರು: ಪುಟ್ಟದಾದ ನೆಲನೆಲ್ಲಿ ಗಿಡಕ್ಕೆ ಸಂಸ್ಕೃತದಲ್ಲಿ ಭೂಮ್ಯಾಮಲಕಿ ಎಂಬ ಹೆಸರಿದೆ. ಇದು ನನ್ನ ಅನುಭವದಲ್ಲಿ ಅತ್ಯಂತ ಪ್ರಭಾವಿ, ಪರಿಣಾಮಕಾರಿ ವೈರಾಣುನಾಶಕ ಔಷಧೀಯ ಸಸ್ಯ. ಇದರ ಪಂಚಾಂಗವೂ ಉಪಯೋಗಕ್ಕೆ ಯೋಗ್ಯ. ಮನೆಯಲ್ಲಿ ನಾಲ್ಕು ಜನರಿದ್ದರೆ ಒಂದು ಪೂರ್ತಿ ಗಿಡವನ್ನು ನಾಲ್ಕು ಲೋಟ ನೀರಿಗೆ ಹಾಕಿ ಒಂದು ಲೋಟ ಆಗುವ ತನಕ ಕುದಿಸಿ ಸೋಸಬೇಕು. ಬೇಕಿದ್ದವರು ಬೆಲ್ಲ ಸೇರಿಸಿ ಪ್ರತಿಯೊಬ್ಬರೂ ಕಾಲು ಲೋಟದಷ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಸಂಜೆ ಕುಡಿಯಬಹುದು. ನೆಲನೆಲ್ಲಿ ಲಭ್ಯವಿಲ್ಲವಾದರೆ ಭದ್ರಮುಷ್ಟಿಯ ಒಂದು ಗಿಡದ ಗಡ್ಡೆಯನ್ನು ಬಳಸಬಹುದು. ಇದಕ್ಕೆ ಮುಸ್ತಾ, ನಾಗರಮೋಥಾ ಎಂಬ ಹೆಸರುಗಳೂ ಇವೆ. ಮಳೆಗಾಲದಲ್ಲಿ ಎಲ್ಲೆಡೆ ಸಿಗುತ್ತದೆ. ಭದ್ರಮುಷ್ಟಿಯೂ ಸಿಗದಿದ್ದರೆ ಅಮೃತಬಳ್ಳಿಯ ನಾಲ್ಕು ಇಂಚಿನಷ್ಟು ಕಾಂಡವನ್ನು ಉಪಯೋಗಿಸಬಹುದು. ನಾಲ್ಕು ಜನರಿಗೆ ಸಾಕು. ನೆಲನೆಲ್ಲಿ, ಭದ್ರಮುಷ್ಟಿ, ಅಮೃತಬಳ್ಳಿಗಳಲ್ಲಿ ಯಾವುದಾದರೂ ಒಂದರ ಕಷಾಯ ಮಾತ್ರ ಕುಡಿಯಬೇಕು. ಹತ್ತು ದಿನಗಳ ಕಾಲ ಮಾಡಿ ಮತ್ತೆ ಹತ್ತು ದಿನ ವಿರಾಮ ನೀಡಿ. ಬಳಿಕ ಪುನಃ ಮಾಡಿಕೊಳ್ಳಬಹುದು. ಕೋವಿಡ್-19ರ ಕಥೆ ಮುಗಿಯುವಷ್ಟರ ತನಕ ವಹಿಸುವ ಈ ರಕ್ಷಣಾತ್ಮಕ ನಡೆ ಭೀತಿಭಾವನೆಯನ್ನು ನಿವಾರಿಸಲಿ, ಜೀವಗಳನ್ನೆಲ್ಲ ಉಳಿಸಲಿ.

ಪಂಚಸೂತ್ರಗಳು

  • ಚಿಕೋರಿ ಗಿಡ: ಹೃದಯಕ್ಕೆ ಹಿತಕಾರಿ.
  • ಪಚ್ಚಕರ್ಪರ: ರಕ್ತಭೇದಿ ನಿಯಂತ್ರಕ.
  • ಗಜಲಿಂಬೆ: ಹೊಟ್ಟೆನೋವು ಶಮನಕರ.
  • ತೊಂಡೆಕಾಯಿ: ಬಾಯಿಹುಣ್ಣು ಗುಣಕಾರಿ.
  • ದಾಲ್ಚಿನ್ನಿ: ರಕ್ತಸ್ರಾವ ಹತೋಟಿಗೆ ಸಹಾಯಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net