

Bitter Gourd: ಹಾಗಲಕಾಯಿ ಪಲ್ಯ ಎಂದರು ಸಾಮಾನ್ಯವಾಗಿ ಎಲ್ಲರು ಮೂಗು ಮುರಿಯುತ್ತಾರೆ, ಇದು ಅನೇಕರಿಗೆ ಇಷ್ಟವಾಗದ ತರಕಾರಿ. ಅದರ ಕಹಿ ಅಂಶದಿಂದ ಹೆಚ್ಚಿನ ಜನರು ಹಾಗಲಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇನ್ನೂ ಕೆಲವರು ಬಹಳ ಇಷ್ಟಪಟ್ಟು ಹಾಗಲಕಾಯಿಯ ವಿವಿಧ ರೆಸಿಪಿಗಳನ್ನು ತಯಾರಿಸಿ ತಿನ್ನುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಹಾಗಲಕಾಯಿ ಕಹಿ ಇದ್ದರೂ, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
ಹಾಗಲಕಾಯಿಂದ ಯಾವುದೇ ರೆಸಿಪಿ ಮಾಡುವಾಗ ನೀವು ಅದಕ್ಕೆ ಬಳಸುವ ಪದಾರ್ಥಗಳು, ಅದನ್ನು ತಯಾರಿಸುವ ವಿಧಾನ ಬಹಳ ಮುಖ್ಯವಾಗಿರುತ್ತದೆ. ಹಾಗಲಕಾಯಿಂದ ಒಬ್ಬಬ್ಬರು ಒಂದೊಂದು ರೀತಿ ಪಲ್ಯ ತಯಾರಿಸುತ್ತಾರೆ. ಇಲ್ಲೊಂದು ಹೊಸ ವಿಧಾನ ಇದೆ. ಒಂದು ವೇಳೆ ನೀವು ಟ್ರೈ ಮಾಡಿಲ್ಲವೆಂದರೆ ಒಮ್ಮೆ ಈ ಹೊಸ ರೀತಿಯ ಹಾಗಲಕಾಯಿ ಫ್ರೈ ತಯಾರಿಸಿ ನೋಡಿ.
ಹಾಗಲಕಾಯಿ - 1/4 ಕಿಲೋ
ಈರುಳ್ಳಿ - 3
ಟೊಮ್ಯಾಟೋ - 1
ಕಡ್ಲೆಕಾಯಿ ಬೀಜ - 1/2 ಕಪ್
ಒಣದ್ರಾಕ್ಷಿ - 2 ಟೇಬಲ್ ಸ್ಪೂನ್
ಕರಿಬೇವು - 4 ಎಸಳು
ಕೊತ್ತಂಬರಿ ಸೊಪ್ಪು - 1/2 ಕಟ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಸ್ಪೂನ್
ರೆಡ್ ಚಿಲ್ಲಿ ಪೌಡರ್ - 1 ಟೀ ಸ್ಪೂನ್
ಧನಿಯಾ ಪುಡಿ - 1 ಟೀ ಸ್ಪೂನ್
ಗರಂ ಮಸಾಲೆ - 1 ಟೀ ಸ್ಪೂನ್
ಅರಿಶಿನ - ಸ್ವಲ್ಪ
ಇಂಗು - ಚಿಟಿಕೆ
ಎಣ್ಣೆ - 1/2 ಕಪ್
ಉಪ್ಪು/ತುಪ್ಪ - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಹಾಗಲಕಾಯಿಯನ್ನು ತೊಳೆದು ರೌಂಡ್ ಆಗಿ ಅಥವಾ ಸಣ್ಣದಾಗಿ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಹೆಚ್ಚಿಕೊಳ್ಳಿ. ಕಡ್ಲೆಕಾಯಿ (ಶೇಂಗಾ) ಬೀಜವನ್ನು ಹುರಿದುಕೊಂಡು ಅದು ತಣ್ಣಗಾದಾಗ ಮಿಕ್ಸಿಯಲ್ಲಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ, ಒಂದು ಸ್ಪೂನ್ ತುಪ್ಪ ಬಿಸಿ ಮಾಡಿ ಅದರಲ್ಲಿ ಒಣದ್ರಾಕ್ಷಿಯ ಫ್ರೈ ಮಾಡಿ ಪಕ್ಕಕ್ಕೆ ತೆಗೆದಿಡಿ. ಅದೇ ಪಾತ್ರೆಗೆ ಸ್ವಲ್ಪ ಎಣ್ಣೆ ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ಹಾಗಲಕಾಯನ್ನು ಫ್ರೈ ಮಾಡಿ ಒಂದು ಪಾತ್ರೆಗೆ ತೆಗೆದಿಡಿ. ನಂತರ ಆ ಎಣ್ಣೆಯಲ್ಲಿ ಮೊದಲು ಹೆಚ್ಚಿದ ಸಣ್ಣಗೆ ಈರುಳ್ಳಿ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ಸಣ್ಣಗೆ ಕತ್ತರಿಸಿದ ಟೊಮ್ಯಾಟೋ ಸೇರಿಸಿ ಅದು ಮೃದುವಾಗುವರೆಗೂ ಹುರಿಯಿರಿ. ಇದರೊಂದಿಗೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಸ್ವಲ್ಪ ಅರಿಶಿನ, ಉಪ್ಪು ಸೇರಿಸಿ ಕೈ ಆಡಿಸಿ ಮೊದಲೇ ಫ್ರೈ ಮಾಡಿಕೊಂಡ ಹಾಗಲಕಾಯಿ ಸೇರಿಸಿ ನಾಲ್ಕೈದು ಸ್ಪೂನ್ ನೀರು ಸೇರಿಸಿ ಒಮ್ಮೆ ತಿರುವಿ ಕಡಿಮೆ ಉರಿಯಲ್ಲಿ 8-10 ನಿಮಿಷ ಕುಕ್ ಮಾಡಿ, ನಂತರ ಹುರಿದ ಕಡ್ಲೆಕಾಯಿಬೀಜದ ಪುಡಿ ಹಾಗೂ ಫ್ರೈ ಮಾಡಿಕೊಂಡ ಒಣದ್ರಾಕ್ಷಿಯನ್ನು ಸೇರಿಸಿ ಮಿಕ್ಸ್ ಮಾಡಿ ಮತ್ತೆ ಒಂದೆರಡು ನಿಮಿಷ ಕುಕ್ ಮಾಡಿದರೆ ಹಾಗಲಕಾಯಿ ಫ್ರೈ ರೆಡಿ.
ಚಪಾತಿ, ರೊಟ್ಟಿ, ದೋಸೆ, ಅನ್ನ ಅಥವಾ ಪೂರಿ ಜೊತೆ ಕೂಡಾ ಈ ಫ್ರೈ ಬಹಳ ರುಚಿಯಾಗಿರುತ್ತದೆ. ನಿಮಗೆ ಗ್ರೇವಿ ಬೇಕೆಂದರೆ ಇನ್ನಷ್ಟು ನೀರು ಸೇರಿಸುವುದು ಉತ್ತಮ.(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.