ನೀವು ಈ ತಪ್ಪುಗಳನ್ನು ಮಾಡುತ್ತಿದ್ರೆ ತಕ್ಷಣವೇ ನಿಲ್ಲಿಸಿ... ಇಲ್ಲದಿದ್ರೆ ಕರುಳಿಗೆ ತುಂಬಾ ಹಾನಿಯಾಗುತ್ತೆ! Intestines

Intestines
Published on

Intestines : ನಾವು ಸಾಮಾನ್ಯವಾಗಿ ನಮ್ಮ ದೇಹವನ್ನು ಆರೋಗ್ಯವಾಗಿಡಲು ವ್ಯಾಯಾಮ ಮಾಡುತ್ತೇವೆ. ಆದರೆ, ವ್ಯಾಯಾಮ ಒಂದರಿಂದಲೇ ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಾಧ್ಯವಿಲ್ಲ. ಬದಲಾಗಿ, ಆರೋಗ್ಯಕರ ಅಭ್ಯಾಸಗಳು ಕೂಡ ಅಷ್ಟೇ ಮುಖ್ಯ. ಆದ್ದರಿಂದ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ಪೋಷಕಾಂಶಗಳಿಂದ ಕೂಡಿದ ಸಮತೋಲಿತ ಆಹಾರ ಸೇವನೆ ಮಾಡಬೇಕು.

ವ್ಯಾಯಾಮ ಮಾಡುವ 20 ನಿಮಿಷಗಳ ಮೊದಲು ನೀವು ಬಾಳೆಹಣ್ಣು ಅಥವಾ ಸೇಬನ್ನು ತಿನ್ನಬಹುದು. ಅಂತಹ ಹಣ್ಣುಗಳು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತವೆ ಮತ್ತು ಆಯಾಸವಿಲ್ಲದೆ ವ್ಯಾಯಾಮ ಮಾಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವವರು ಕೆಲವು ವಿಷಯಗಳನ್ನು ತಪ್ಪಿಸಬೇಕು, ಏಕೆಂದರೆ ಅಂತಹ ಅಭ್ಯಾಸಗಳಿಂದ ದೇಹವನ್ನು ಪ್ರವೇಶಿಸುವ ಕೆಮಿಕಲ್ಸ್​, ಕರುಳಿನ ಆರೋಗ್ಯವನ್ನು ಹದಗೆಡಿಸಬಹುದು.

ಅಂದಹಾಗೆ, ದೇಹದ ಪ್ರತಿಯೊಂದು ಅಂಗವೂ ಚೆನ್ನಾಗಿ ಕಾರ್ಯನಿರ್ವಹಿಸಿದರೆ ಮಾತ್ರ ನಾವು ಆರೋಗ್ಯಕರವಾಗಿ ಇರುತ್ತೇವೆ. ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅವುಗಳ ಆರೋಗ್ಯವು ಕೂಡ ಅಷ್ಟೇ ಮುಖ್ಯ. ವಿಶೇಷವಾಗಿ ಕರುಳಿನ ಆರೋಗ್ಯವು ದೇಹದಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ಕರುಳಿನಲ್ಲಿ ಲಕ್ಷಾಂತರ ಸೂಕ್ಷ್ಮಜೀವಿಗಳಿವೆ. ಅವುಗಳ ಕಾರ್ಯವು ಉತ್ತಮವಾಗಿದ್ದಾಗ ಮಾತ್ರ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆ ಉತ್ತಮವಾಗಿರುತ್ತದೆ. ಇದಲ್ಲದೆ, ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ, ಕರುಳನ್ನು ಬಹಳ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು.

ಆ ನಿಟ್ಟಿನಲ್ಲಿ, ವ್ಯಾಯಾಮ ಮಾಡುವವರು ಕೆಲವು ಮುಖ್ಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಅಭ್ಯಾಸಗಳೇ ನಮ್ಮ ಕರುಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಹಾಗಾದರೆ, ನಮ್ಮ ಅಭ್ಯಾಸಗಳು ಹೇಗಿರಬೇಕೆಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನಾನ್​ಸ್ಟಿಕ್​ ಪಾತ್ರೆಗಳ ಬಳಕೆ

ಜಗತ್ತು ಆಧುನಿಕವಾಗಿ ಬದಲಾವಣೆ ಆದಷ್ಟು ಹೊಸ ಹೊಸ ಪರಿಕರಗಳು ಕೂಡ ಹೊರಬರುತ್ತಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಮನೆಯಲ್ಲಿರುವ ಪಾತ್ರೆಗಳು ಕೂಡ ಬದಲಾಗಿವೆ. ಅಡುಗೆಗೆ ನಾನ್-ಸ್ಟಿಕ್ ಪಾತ್ರೆಗಳ ಬಳಕೆ ಇಂದು ಹೆಚ್ಚಾಗಿದೆ. ಅದರಲ್ಲಿರುವ ಬಣ್ಣ ಕೆಟ್ಟ ರಾಸಾಯನಿಕ ಎಂಬುದು ಅನೇಕ ಮಂದಿಗೆ ತಿಳಿದೇ ಇಲ್ಲ. ನಾನ್-ಸ್ಟಿಕ್ ಪಾತ್ರೆಗಳ ನಿರಂತರ ಬಳಕೆಯಿಂದ ಆರೋಗ್ಯ ಕೆಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ಕರುಳಿನ ಆರೋಗ್ಯಕ್ಕೆ ಡೇಂಜರ್​. ಈ ನಾನ್​ ಸ್ಟಿಕ್​ ಪಾತ್ರೆಗಳಲ್ಲಿ ಟೆಫ್ಲಾನ್ (PTFE) ಎಂಬ ಕೆಮಿಕಲ್​ ಅನ್ನು ಲೇಪನ ಮಾಡಲಾಗುತ್ತದೆ. ಅಡುಗೆ ಮಾಡುವಾಗ ಹೆಚ್ಚಿನ ತಾಪಮಾನದ ಸಂದರ್ಭದಲ್ಲಿ ಸೌಟಿನಿಂದ ಪಾತ್ರೆಯ ತಳವನ್ನು ಉಜ್ಜಿದಾಗ ಅದರಿಂದ ಹಾನಿಕಾರಕ ಸಂಯುಕ್ತಗಳು ಬಿಡುಗಡೆಯಾಗುತ್ತದೆ. ಇದು ನಮ್ಮ ಆಹಾರದೊಂದಿಗೆ ಬೆರೆತು ರೋಗಗಳಿಗೆ ಕಾರಣವಾಗುತ್ತದೆ. ಕರುಳಿನ ಆರೋಗ್ಯವನ್ನು ಹದಗೆಡಿಸುತ್ತವೆ. ಆದ್ದರಿಂದ, ನೀವು ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ, ನಾನ್-ಸ್ಟಿಕ್ ಪಾತ್ರೆಗಳನ್ನು ಬಿಟ್ಟು, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಎರಕಹೊಯ್ದ ಕಬ್ಬಿಣದ ಪಾತ್ರೆಗಳನ್ನು ಬಳಸಬಹುದು.

nonstick utensils

ಸಕ್ಕರೆ ತಿನ್ನುವುದು

ನಿಮ್ಮ ದೈನಂದಿನ ಜೀವನದಲ್ಲಿ ಬಿಳಿ ಸಕ್ಕರೆಯನ್ನು ಕಡಿಮೆ ಮಾಡಬೇಕು. ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವವರಾಗಿದ್ದರೆ, ಕೃತಕ ಸಿಹಿಕಾರಕಗಳು ಕರುಳಿನ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದರಿಂದ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕಡಿಮೆಯಾಗಿ, ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಸಕ್ಕರೆಯಿಂದ ಕರುಳಿನ ಒಳಪದರದಲ್ಲಿ ಉರಿಯೂತ ಉಂಟಾಗಿ, "ಲೀಕಿ ಗಟ್" ಸ್ಥಿತಿಗೆ ಕಾರಣವಾಗಬಹುದು, ಇದರಿಂದ ವಿಷಕಾರಿ ಪದಾರ್ಥಗಳು ರಕ್ತಕ್ಕೆ ಸೇರಬಹುದು. ಸಕ್ಕರೆಯಿಂದ ಕರುಳಿನ ಚಲನೆಯ ವೇಗ ಕಡಿಮೆಯಾಗಿ, ಉಬ್ಬರ, ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ದೀರ್ಘಕಾಲದ ಸಕ್ಕರೆ ಸೇವನೆಯು ಕರುಳಿನ ಮೂಲಕ ಇನ್ಸುಲಿನ್ ಸಂವೇದನೆಯನ್ನು ಕಡಿಮೆ ಮಾಡಿ, ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು. ನಿಮಗೆ ಸಿಹಿ ತಿನ್ನಬೇಕೆಂಬ ಭಾವನೆ ಬಂದಾಗ, ನೀವು ಹಣ್ಣುಗಳನ್ನು ತಿನ್ನಬಹುದು.

Sugar

ಪ್ಲಾಸ್ಟಿಕ್​ ಬಳಕೆ

ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದು ದೇಹಕ್ಕೆ ಹಾನಿಕಾರಕ. ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ಬಿಸ್ಫೆನಾಲ್ ಎ (ಬಿಪಿಎ) ನಂತಹ ರಾಸಾಯನಿಕಗಳು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡಬಹುದು. ಮೈಕ್ರೋಪ್ಲಾಸ್ಟಿಕ್‌ಗಳು ಕರುಳಿನ ಸೂಕ್ಷ್ಮಜೀವಿಗಳ ಸಮತೋಲನವನ್ನು ಕದಡಿ, ಜೀರ್ಣಕ್ರಿಯೆಯ ಸಮಸ್ಯೆಗಳು ಮತ್ತು ರೋಗನಿರೋಧಕ ಶಕ್ತಿಯ ಕುಂಠಿತವಾಗಬಹುದು. ಅಲ್ಲದೆ, ಮೈಕ್ರೋಪ್ಲಾಸ್ಟಿಕ್‌ಗಳು ಕರುಳಿನ ಒಳಪದರದಲ್ಲಿ ಉರಿಯೂತವನ್ನು ಉಂಟುಮಾಡಿ, "ಲೀಕಿ ಗಟ್" ಸ್ಥಿತಿಗೆ ಕಾರಣವಾಗಬಹುದು, ಇದರಿಂದ ವಿಷಕಾರಿ ಪದಾರ್ಥಗಳು ರಕ್ತಕ್ಕೆ ಸೇರಬಹುದು. ಅಲ್ಲದೆ, ಆಕ್ಸಿಡೇಟಿವ್ ಒತ್ತಡ, ಜೀವಕೋಶದ ಹಾನಿ ಅಥವಾ ರೋಗನಿರೋಧಕ ವ್ಯವಸ್ಥೆಯ ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ, ಸ್ಟೀಲ್ ಅಥವಾ ಗಾಜಿನ ನೀರಿನ ಬಾಟಲಿಗಳನ್ನು ಬಳಸುವುದರಿಂದ ದೇಹದಲ್ಲಿ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.

Plastic
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net