ಬೈಕ್​ನಲ್ಲಿ ಪದೇ ಪದೇ​ ಸ್ಟಾರ್ಟಿಂಗ್​ ಟ್ರಬಲ್​? ಈ ಸಣ್ಣ ವಿಷಯಗಳು ನಿಮಗೆ ಗೊತ್ತಾದ್ರೆ ಮೆಕ್ಯಾನಿಕ್ ಅವಶ್ಯಕತೆ ಬರಲ್ಲ

ಬೈಕ್​ ಸ್ಟಾರ್ಟಿಂಗ್​ ಟ್ರಬಲ್​ ಸಮಸ್ಯೆಗಳು
ಬೈಕ್​ ಸ್ಟಾರ್ಟಿಂಗ್​ ಟ್ರಬಲ್​ ಸಮಸ್ಯೆಗಳು
Published on

ಪ್ರಮುಖ ಮುಖ್ಯಾಂಶಗಳು

  • ಮಳೆ, ಚಳಿಗಾಲದಲ್ಲಿ ಇಂತಹ ಸಮಸ್ಯೆಗಳು ತೀರ ಸಾಮಾನ್ಯ
  • ಸಣ್ಣ-ಪುಟ್ಟ ತೊಂದರೆಗಳಿಂದ ಸ್ಟಾರ್ಟಿಂಗ್ ಟ್ರಬಲ್​
  • ನೀವೇ ಸಮಸ್ಯೆ ಪತ್ತೆಹಚ್ಚಿದರೆ ಮೆಕ್ಯಾನಿಕ್​ ಅವಶ್ಯಕತೆ ಬರಲ್ಲ
Bike Start Issue: ಏನೋ ಅರ್ಜೆಂಟ್​ ಕೆಲಸವಿದೆ. ನಾನಿಗಲೇ ಹೊರಡಬೇಕು ಎಂದು ಬೈಕ್​ಗೆ ಕೀ ಹಾಕುತ್ತಿದ್ದಂತೆ ಗಾಡಿ ಸ್ಟಾರ್ಟ್ ಆಗೋದಿಲ್ಲ ಎಂದು ಗೊತ್ತಾದರೆ ಒಂದು ನಿಮಿಷ ತಲೆಕೆಡುತ್ತದೆ.​ ತಕ್ಷಣವೇ, ಪದೇ ಪದೇ ಸೆಲ್ಫ್-ಸ್ಟಾರ್ಟ್ ಬಟನ್ ಒತ್ತುವುದು ಅಥವಾ ಕಿಕರ್​ ಇದ್ದರೆ, ಅದನ್ನು ತುಳಿಯಲು ಪ್ರಯತ್ನಿಸುವುದು ತೀರ ಸಾಮಾನ್ಯ ಬಿಡಿ. ವಿಶೇಷವಾಗಿ ಚಳಿಗಾಲದಲ್ಲಿ. ಇಂತಹ ಸಮಸ್ಯೆಗಳು ಸಣ್ಣಪುಟ್ಟ ದೋಷಗಳಿಂದಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ.
ದೊಡ್ಡ ಟೆಕ್ನಿಕಲ್​ ಸಮಸ್ಯೆ ಅಲ್ಲದಿದ್ದರೂ ನೀವೇ ಗುರುತಿಸಿ ಸರಿಪಡಿಸಬಹುದಾದ ಸಣ್ಣ-ಪುಟ್ಟ ಸಮಸ್ಯೆಗಳಿವು. ಅಷ್ಟಕ್ಕೂ, ಬೈಕ್​ ಸ್ಟಾರ್ಟ್​ ಆಗದಿದ್ದಲ್ಲಿ ಏನು ಮಾಡಬೇಕು? ಮಾಡಿದರೆ ಸರಿ? ಏನೆಲ್ಲ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳನ್ನು ನಾವು ಚೆಕ್​ ಮಾಡಿಕೊಳ್ಳಬೇಕು ಎಂಬುದರ ವಿವರ ಹೀಗಿದೆ ನೋಡಿ.

ಇಂಜಿನ್ ಕಟ್-ಆಫ್ (ಕಿಲ್) ಸ್ವಿಚ್

ಬೈಕಿನ ಬಲ ಹ್ಯಾಂಡಲ್‌ಬಾರ್‌ನಲ್ಲಿ ಕೆಂಪು ಬಣ್ಣದಲ್ಲಿ ಇಂಜಿನ್ ಕಟ್-ಆಫ್ ಸ್ವಿಚ್ ಇದೆ. ರೈಡರ್​ಗಳು ಬೈಕ್ ಆಫ್ ಮಾಡಲು ಈ ಸ್ವಿಚ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಮತ್ತೆ ಆನ್ ಮಾಡಲು ಮರೆತು, ಸ್ಟಾರ್ಟ್​ ಆಗ್ತಿಲ್ಲವಲ್ಲ ಎಂದು ಕೆಲ ಕಾಲ ಪರದಾಡುತ್ತಾರೆ. ಈ ಪರಿಸ್ಥಿತಿಯಲ್ಲಿ, ಒಮ್ಮೆ ಕಿಲ್​ ಸ್ವಿಚ್​ ಆನ್​/ಆಫ್​ ಯಾವುದರಲ್ಲಿದೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ.

ಲೂಸ್​ ಸ್ಪಾರ್ಕ್ ಪ್ಲಗ್ ವೈರ್

ಸ್ಪಾರ್ಕ್ ಪ್ಲಗ್ ಇಂಜಿನ್‌ನ ಪ್ರಮುಖ ಭಾಗ. ಇದು ಬೈಕ್​ನಲ್ಲಿ ಸ್ಪಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವೈರ್ ಏನಾದರೂ ಲೂಸ್​ ಆಗಿದ್ದರೆ ಅಥವಾ ಅದರ ಮೇಲೆ ಕೊಳೆ ಅಂಟಿದ್ದರೆ, ಸರಿಯಾದ ಸಿಗ್ನಲ್ ಇಂಜಿನ್‌ಗೆ ತಲುಪುವುದಿಲ್ಲ. ಇದರಿಂದ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಹೀಗಾಗಿ, ಸ್ಪಾರ್ಕ್ ಪ್ಲಗ್ ತೆಗೆದು. ಕೊಳೆಮುಕ್ತ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಿ, ಮತ್ತೆ ಪ್ಲಗ್​ ಮಾಡಿ. ಈಗ ಸ್ಟಾರ್ಟ್ ಮಾಡಲು ಪ್ರಯತ್ನಿಸಿ.

ಸೆಲ್ಫ್​ ಸ್ಟಾರ್ಟ್​ ಸಮಸ್ಯೆ

ಚಳಿಗಾಲದಲ್ಲಿ ಬ್ಯಾಟರಿಗಳು ಬೇಗನೆ ಡೆಡ್​ ಆಗ್ತವೆ. ವಿಶೇಷವಾಗಿ, ಕೆಲವು ದಿನಗಳವರೆಗೆ ಬೈಕ್ ಸ್ಟಾರ್ಟ್ ಆಗದಿದ್ದರಂತು ಸೆಲ್ಫ್​ ಸ್ಟಾರ್ಟ್​ ವರ್ಕ್​ ಆಗೋದಿಲ್ಲ. ಅಲ್ಲಿಗೆ ಬ್ಯಾಟರಿ ಡೆಡ್​ ಆಗಿದೆ ಎಂಬುದು ಸ್ಪಷ್ಟ. ಈ ಸಮಯದಲ್ಲಿ, ಬೈಕ್​ನ ಸೆಂಟರ್​ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ, ನಾಲ್ಕನೇ ಗೇರ್‌ಗೆ ಹಾಕಿ, ಹಿಂಬದಿ ಚಕ್ರವನ್ನು ಕೈಯಿಂದ ಜೋರಾಗಿ ತಿರುಗಿಸಿ. ಈ ವಿಧಾನವು ಬೈಕ್ ಸ್ಟಾರ್ಟ್​ಗೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ ಪುಶ್ ಸ್ಟಾರ್ಟ್ ಎಂದು ಕರೆಯಲಾಗುತ್ತದೆ.

ಪೆಟ್ರೋಲ್ (ತೀರ ಸಾಮಾನ್ಯ)

ಕೆಲವೊಮ್ಮೆ ನಮ್ಮ ಗಾಡಿಯಲ್ಲಿ ಇಂಧನ ಖಾಲಿಯಾಗಿದೆ ಎಂಬುದೇ ನಮಗೆ ತಿಳಿದಿರುವುದಿಲ್ಲ. ಈಗ ಇವಿ ಗಾಡಿಗಳು ಚಾಲ್ತಿಯಲ್ಲಿವೆ, ಅದು ಬೇರೆ ಮಾತು ಬಿಡಿ. ಮೊದಲಿಗೆ ಪೆಟ್ರೋಲ್​ ಇಲ್ಲದೆ ಇಂಜಿನ್ ಕೆಲಸ ಮಾಡುವುದೇ ಇಲ್ಲ. ಇದರಿಂದಾಗಿ ಬೈಕು ಸ್ಟಾರ್ಟ್ ಮಾಡುವುದು ಅಸಾಧ್ಯ. ಇಂಧನ ಗೇಜ್ ಅನ್ನು ಮಾತ್ರ ಅವಲಂಬಿಸಬೇಡಿ. ನಿಮ್ಮ ಬೈಕು ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗದಿದ್ದರೆ, ಇಂಧನ ಟ್ಯಾಂಕ್ ಅನ್ನು ಒಮ್ಮೆ ಪರಿಶೀಲಿಸಿ.

ಏರ್ ಫಿಲ್ಟರ್ ಇಶ್ಯೂ

ಏರ್ ಫಿಲ್ಟರ್ ಕೆಲಸವೇ ಇಂಜಿನ್​ಗೆ ಶುದ್ಧ ಗಾಳಿಯನ್ನು ಪೂರೈಕೆ ಮಾಡುವುದು. ಅಕಸ್ಮಾತ್​ ಫಿಲ್ಟರ್​ನಲ್ಲಿ ಕೊಳೆ ಕೂತರೆ, ಇಂಜಿನ್ ಸರಿಯಾದ ಪ್ರಮಾಣದ ಗಾಳಿಯನ್ನು ಪಡೆಯುವುದಿಲ್ಲ ಮತ್ತು ಬೈಕ್ ಸ್ಟಾರ್ಟ್ ಆಗೋದಿಲ್ಲ. ಇದರಿಂದ ಚಲಿಸುವಾಗ ಆಗಾಗ್ಗೆ ಜರ್ಕ್ ಸಮಸ್ಯೆಯೂ ಕಾಡುತ್ತದೆ. ಏರ್ ಫಿಲ್ಟರ್ ಪರಿಶೀಲಿಸಿ, ಅಗತ್ಯವಿದ್ದರೆ ಸ್ವಚ್ಛಗೊಳಿಸಿ ಅಥವಾ ಹೊಸದರ ಅವಶ್ಯಕತೆ ಬಿದ್ದಲ್ಲಿ, ಪಡೆಯಿರಿ. ಇದು ಕೇವಲ ಸ್ಟಾರ್ಟ್ ಮಾತ್ರವಲ್ಲದೆ ಬೈಕ್​ನ ಕಾರ್ಯಕ್ಷಮತೆಗೂ ಅತೀ ಮುಖ್ಯ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net