

ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಬಹುತೇಕ ಪಾಲಕರು ಹಿಂದೇಟು ಹಾಕುತ್ತಾರೆ. ಆದರೆ, ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಶ್ರೀ ಸಿದ್ಧಾರೂಢ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಕರಿಗೆ ಮಾತ್ರವಲ್ಲದೇ ಮಕ್ಕಳಿಗೂ ಅತ್ಯಾಪ್ತ. ಇದಕ್ಕೆ ಕಾರಣ ಇಲ್ಲಿಯ ಶಿಕ್ಷಕ. ಇವರು ಮಾಡುತ್ತಿರುವ ಅಪೂರ್ವ ಸೇವೆಯ ಬಗ್ಗೆ ಇಲ್ಲಿದೆ ವಿವರ.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹು ದೊಡ್ಡದು ಎಂಬ ಮಾತು ನಿಜವೇ. ಆದರೆ ಇವತ್ತಿನ ದಿನಗಳಲ್ಲಿ ಪಾಲಕರ ಮಾತು ಕೇಳದ ಮಕ್ಕಳೇ ಹೆಚ್ಚು. ಆದರೆ ಅಂಥವರು ಕೂಡ ಶಾಲೆಯ ಶಿಕ್ಷಕರ ಮಾತಿಗೆ ತಲೆಬಾಗುತ್ತಾರೆ, ಅವರು ಹೇಳಿದಂತೆ ಕೇಳುತ್ತಾರೆ. ಈ ಕಾರಣಕ್ಕಾಗಿಯೇ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದದ್ದಾಗಿದೆ.
ಶಾಲೆಯಲ್ಲಿ ಪಾಠ ಮಾಡಿ ತಮ್ಮ ಕರ್ತವ್ಯ ಮುಗಿಸುವ ಶಿಕ್ಷಕರು ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಶಿಕ್ಷಕರು ಮಾತ್ರ ಇದರಾಚೆಯೂ ಯೋಚಿಸಿ ಇಡೀ ಶಾಲೆಗೆ ಒಳ್ಳೆಯ ಹೆಸರು ತರುವುದು ಮಾತ್ರವಲ್ಲದೇ, ಯಾರಿಗೂ ಬೇಡ ಎನಿಸಿರುವ ಶಾಲೆಯ ಕಡೆಗೂ ಚಿತ್ತ ಹರಿಸುವಂತೆ ಮಾಡುತ್ತಿದ್ದಾರೆ. ಅಂಥ ಅಪರೂಪದ ಶಿಕ್ಷಕರಲ್ಲಿ ಒಬ್ಬರು ಈರಣ್ಣ ಕಡಕೋಳ. ಇವರ ಸತತ ಶ್ರಮದ ಫಲವಾಗಿ ಸರ್ಕಾರಿ ಶಾಲೆಯೊಂದು ಇಂದು ಉನ್ನತ ಸ್ಥಾನದಲ್ಲಿ ನಿಂತಿದೆ. ಈರಣ್ಣ ಅವರು, ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉನ್ನತ ವ್ಯಾಸಂಗಕ್ಕಾಗಿ ಅನೇಕ ಕಲಿಕಾ ಚಟುವಟಿಕೆಗಳನ್ನು ಏರ್ಪಡಿಸುತ್ತಿದ್ದಾರೆ. ಇದರ ಫಲವಾಗಿ 2010-11ರಲ್ಲಿ 110 ಇದ್ದ ಮಕ್ಕಳ ಸಂಖ್ಯೆ ಇಂದು 567ಕ್ಕೇರಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾ ಮಟ್ಟಕ್ಕೆ ತಕ್ಕಂತೆ ಪಾಠ ಬೋಧಿಸಿ ಆಗಾಗ್ಗೆ ಪರೀಕ್ಷೆಗಳನ್ನು ಆಯೋಜಿಸುತ್ತಾರೆ. ಮಕ್ಕಳಿಗೆ ಪ್ರೋತ್ಸಾಹಿಸಲು ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ‘ಹೆಮ್ಮೆಯ ಕನ್ನಡಿಗ’, ‘ಹೆಮ್ಮೆಯ ಭಾರತೀಯ’ ಎಂಬ ಬಿರುದು ನೀಡಿ, ಧ್ವಜ ಮತ್ತು ಶಾಲು ನೀಡಿ ಗೌರವಿಸುತ್ತಿದ್ದಾರೆ.
ಉಚಿತ ಸ್ಪೋಕನ್ ಇಂಗ್ಲಿಷ್: ಹಗಲಿರುಳು ವೃತ್ತಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಶ್ರಮಿಸುತ್ತಿರುವ ಶಿಕ್ಷಕ ಕಡಕೋಳ ತಮ್ಮ ಶಾಲಾ ಮಕ್ಕಳಿಗೆ ಪ್ರತಿ ಭಾನುವಾರ ಉಚಿತ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸುತ್ತಾರೆ. ಬೆಳಗ್ಗೆ ಪ್ರಾರ್ಥನಾ ಸಮಯದಲ್ಲಿ ಕೇಳಲಾದ ಪ್ರಶ್ನೆಗೆ ಥಟ್ ಅಂತ ಉತ್ತರಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡುತ್ತಿದ್ದಾರೆ. ಪ್ರತಿ ಶುಕ್ರವಾರ ‘ವಾರದ ಕಥೆ ಕಡಕೋಳ ಸರ್ ಜತೆ’ ಎಂಬ ವಿಶೇಷ ವಿಜ್ಞಾನ ವಿಷಯದ ಕುರಿತು ಚರ್ಚೆ ಇರುತ್ತದೆ.
ಪ್ರತಿ ತರಗತಿಯಲ್ಲಿ ಎಂಟು ಗುಂಪು ಮಾಡಿ ಕಲಿಕಾ ಚಟುವಟಿಕೆ ನಡೆಸುತ್ತಾರೆ. ವಿದ್ಯಾರ್ಥಿಗಳಿಗೆ ದಿನಕ್ಕೆ 125 ಲೀಟರ್ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ವಂತ ಖರ್ಚಿನಿಂದಲೇ ಮಾಡಿದ್ದಾರೆ. ಅನ್ನ, ಅಕ್ಷರ ಮತ್ತು ಆರೋಗ್ಯ ಎಂಬ ಶೀರ್ಷಿಕೆಯಡಿ ಟಿ-ಶರ್ಟ್ಗಳನ್ನು ಪ್ರತಿ ತರಗತಿಯ ಇಬ್ಬರು ನಾಯಕರಿಗೆ ನೀಡಿ ನಾಯಕತ್ವದ ಗುಣ ಬೆಳೆಸುತ್ತಿದ್ದಾರೆ.
ಶುದ್ಧ ಪರಿಸರಕ್ಕಾಗಿ ಪಣ!
ಶಿಕ್ಷಕ ಕಡಕೋಳ ತಿಂಗಳಿಗೊಮ್ಮೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ಮಾಡಿ ಅಲ್ಲಿಯ ಶೌಚಗೃಹ, ಪರಿಸರ ಸ್ವಚ್ಛತೆ ವೀಕ್ಷಿಸಿ ಒಳ್ಳೆಯ ಪರಿಸರಕ್ಕೆ ಅಂಕಗಳನ್ನು ನೀಡಿ ಆಯ್ಕೆಯಾದ ಕುಟುಂಬಗಳಿಗೆ ‘ಸ್ವಚ್ಛ ಭಾರತ ಸ್ವಚ್ಛ ಕುಟುಂಬ’ ಪ್ರಶಸ್ತಿ ನೀಡುತ್ತಿದ್ದಾರೆ. ಪ್ರತಿ ತಿಂಗಳು ತಮ್ಮ ವೇತನದಲ್ಲಿ 2 ಸಾವಿರ ರೂ.ಖರ್ಚಿನಲ್ಲಿ ಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಬೇಟಿ ಬಚಾವೋ, ಬೇಟಿ ಪಢಾವೋ ಎಂಬ ವಿಶೇಷ ಯೋಜನೆ ರೂಪಿಸಿ ವಿದ್ಯಾರ್ಥಿನಿಯರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿ ಶನಿವಾರ ‘ಓದು ಕಂದ ನಿನ್ನ ಬಾಳು ಅಂದ’ ಎಂಬ ವಿಶಿಷ್ಟ ಕಲಿಕಾ ಯೋಜನೆ ರೂಪಿಸಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ದುಡಿಯುತ್ತಿದ್ದಾರೆ. ಇವರ ಸಂಪರ್ಕ ಸಂಖ್ಯೆ: 9972032342.
ಮಕ್ಕಳನ್ನು ದತ್ತು ಪಡೆದು ಶಿಕ್ಷಣ...
ಈರಣ್ಣ ಅವರು, ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಪೈಕಿ ಮೂವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರತಿವರ್ಷ 9ನೇ ತರಗತಿಯಿಂದ ಪದವಿಯವರೆಗೆ ಅವರ ಕಲಿಕಾ ವೆಚ್ಚ ಭರಿಸುತ್ತಿದ್ದಾರೆ. ಕೋರ್ಟ್ ಅಫಿಡವಿಟ್ ಮಾಡಿಸಿ ಮಕ್ಕಳನ್ನು ದತ್ತು ಪಡೆದಿದ್ದಾರೆ. ಶಿಕ್ಷಕ ಕಡಕೋಳ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಮಾತೃಭೂಮಿ ಫೌಂಡೇಷನ್ ಆರಂಭಿಸಿ ಬಾಲ್ಯ ವಿವಾಹ ನಿಮೂಲನೆಗಾಗಿ ಪ್ರತಿವರ್ಷ 10 ಬಡ ಪ್ರತಿಭಾವಂತ ಹೆಣ್ಣುಮಕ್ಕಳನ್ನು ದತ್ತು ಪಡೆದು ಅವರ ಉನ್ನತ ವ್ಯಾಸಂಗ ಮತ್ತು ಜೀವನಕ್ಕಾಗಿ ತಲಾ 5 ಸಾವಿರ ರೂ.ತಮ್ಮ ಸ್ವಂತ ಹಣ ನೀಡುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ಧತಿ ನಿಮೂಲನೆ ಮಾಡಲು ಸದ್ದಿಲ್ಲದೇ ಶ್ರಮಿಸುತ್ತಿದ್ದಾರೆ. ಮೆಳವಂಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮಿನಿ ಗ್ರಂಥಾಲಯಕ್ಕೆ ರ್ಯಾಕ್ ನೀಡಿ ಪ್ರತಿದಿನ ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ ಸೇರಿ ವಿವಿಧ ದಿನಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಮಾಸ ಪತ್ರಿಕೆಗಳನ್ನು ನೀಡಿ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವಂತೆ ಸಹಾಯ ಹಸ್ತ ಚಾಚಿದ್ದಾರೆ.
ಶಿಕ್ಷಕ ಈರಣ್ಣ ಪಿ.ಕಡಕೋಳ ಬಡ ಹಾಗೂ ಪ್ರತಿಭಾವಂತ ಮಕ್ಕಳ ಪಾಲಿನ ಆಶಾಕಿರಣ. ಅವರ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಪರಿಸರ ಕಾಳಜಿ, ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ, ಉಚಿತ ತರಬೇತಿ ಮತ್ತು ವಿನೂತನ ಕಲಿಕಾ ಚಟುವಟಿಕೆಗಳು ಶಿಕ್ಷಣ ಇಲಾಖೆಗೆ ಮಾದರಿಯಾಗಿವೆ. ಪ್ರಸಕ್ತ ಸಾಲಿನಲ್ಲಿ ಅವರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಲಭಿಸಿದೆ. | ಅಜಿತ್ ಮಣ್ಣಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ, ಮೂಡಲಗಿ
ಅಕ್ಕಪ್ಪ ಮಗದುಮ್ಮ ಬೆಳಗಾವಿ