ಮನುಷ್ಯನು ಸೂರ್ಯ ಉಪಾಸನೆಯಿಂದ ಶಾರೀರಿಕ, ವಾಚಿಕ, ಮಾನಸಿಕವಾದ ಸಮಸ್ತ ಪಾಪಗಳನ್ನು ಕಳೆದುಕೊಂಡು ಪವಿತ್ರಾತ್ಮನಾಗುತ್ತಾನೆ

Sun
Published on

ಭುವನಭಾಸ್ಕರನಾದ ಸೂರ್ಯನು ಪ್ರಕಾಶಸ್ವರೂಪನಾದ ಪ್ರತ್ಯಕ್ಷ ಪರದೈವನಾಗಿದ್ದಾನೆ. ಆದರೆ ಅವನ ಅಪರಿಮಿತ ಶಕ್ತಿಯ ಸಂಬಂಧದಿಂದ ಸಗುಣನೂ ಸಾಕಾರನೂ ಆಗಿ ಉಪಾಸ್ಯನಾಗಿದ್ದಾನೆ. ‘ಯ ಏವಾಸೌತಪತಿ ಕಮುದ್ಗೀಥಮುಪಾಸೀತ’ ಅಂದರೆ, ‘ಆಕಾಶದಲ್ಲಿ ಬೆಳಗುವ ಸೂರ್ಯನನ್ನು ಉದ್ಗೀಥರೂಪದಿಂದ (ಓಂಕಾರರೂಪದಿಂದ) ಉಪಾಸನೆ ಮಾಡಬೇಕು ಎಂಬುದಾಗಿ ಛಾಂದೋಗ್ಯ ಉಪನಿಷತ್ತು ಸಾರುತ್ತದೆ. ಆದಿತ್ಯನೇ ಬ್ರಹ್ಮ (ಆದಿತ್ಯೋ ಬ್ರಹ್ಮೇತಿ) ಎಂಬುದಾಗಿ ಅದೇ ಉಪನಿಷತ್ತು ಮತ್ತೊಂದೆಡೆ ಘೊಷಿಸುತ್ತದೆ.

‘ಆದಿತ್ಯನನ್ನು ಓಂಕಾರರೂಪನಾದ ಧ್ಯಾನಿಸುತ್ತ ಆತ್ಮಯೋಗವನ್ನು ಅಂದರೆ ಯೋಗಸಮಾಧಿಯನ್ನು ಹೊಂದಬೇಕು’ ಎಂಬುದಾಗಿ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಉಕ್ತವಾಗಿದೆ. ಯಾಜ್ಞವಲ್ಕ್ಯ ಮಹರ್ಷಿಯು ಆದಿತ್ಯೋಪಾಸನೆಯಿಂದ ಆತ್ಮತತ್ತ್ವವನ್ನು ಪಡೆದನೆಂದು ಉಪನಿಷತ್ತಿನಲ್ಲಿ ಹೇಳಲ್ಪಟ್ಟಿದೆ.

ಸೂರ್ಯೋಪನಿಷತ್ತಿನಲ್ಲಿ ಸೂರ್ಯದೇವನ ವಿಶ್ವವ್ಯಾಪಕ ಸ್ವರೂಪವು ವರ್ಣಿತವಾಗಿದೆ. ‘ಆದಿತ್ಯನೇ ತೇಜಸ್ಸು, ಓಜಸ್ಸು, ಬಲ, ಯಶಸ್ಸು, ಚಕ್ಷು, ಶ್ರೋತೃ, ಆತ್ಮ, ಮನಸ್ಸು ಎಲ್ಲವೂ ಆಗಿದ್ದಾನೆ’ ಎಂದು ಮಹಾನಾರಾಯಣ ಉಪನಿಷತ್ತು ವರ್ಣಿಸುತ್ತದೆ.

‘ಭೂಃ ಭುವಃ ಸುವಃ ಎಂಬ ಮೂರು ಲೋಕಗಳನ್ನು ದಾಟಿ ‘ಮಹಃ’ ಎಂಬ ಆದಿತ್ಯಲೋಕವು ಬೆಳಗುತ್ತದೆ. ಆದಿತ್ಯಲೋಕದಿಂದಲೇ ಇತರ ಎಲ್ಲ ಲೋಕಗಳಿಗೂ ಮಹತ್ವ ಉಂಟಾಗಿದೆ - ‘ಆದಿತ್ಯೇನ ವಾವ ಸರ್ವೆ ಲೋಕಾ ಮಹೀಯಂತೆ’ ಎಂಬುದಾಗಿ ತೈತ್ತಿರೀಯ ಉಪನಿಷತ್ತು ವರ್ಣಿಸುತ್ತದೆ. ಮನುಷ್ಯನು ಸೂರ್ಯನ ಉಪಾಸನೆಯಿಂದ ಶಾರೀರಿಕವಾದ, ವಾಚಿಕವಾದ ಮತ್ತು ಮಾನಸಿಕವಾದ ಸಮಸ್ತ ಪಾಪಗಳನ್ನು ಕಳೆದುಕೊಂಡು ಪವಿತ್ರಾತ್ಮನಾಗುತ್ತಾನೆ.

‘ಮಾನಸಂ ವಾಚಿಕಂ ವಾಪಿ ಕಾಯಜಂಯಚ್ಚ ದುಷ್ಕ ೃಂ | ಸರ್ವಂ ಸೂರ್ಯಪ್ರಸಾದೇನ ತದಶೇಷಂ ವ್ಯಪೋಹತಿ ||’ ಎಂಬುದಾಗಿ ಬ್ರಹ್ಮಪುರಾಣವು ಸೂರ್ಯೋಪಾಸನೆಯ ಮಹಿಮೆಯನ್ನು ವರ್ಣಿಸುತ್ತದೆ. ಜಗತ್ತಿನ ಸೃಷ್ಟಿ ಸ್ಥಿತಿ ಮತ್ತು ಸಂಹಾರಗಳ ಒಡೆಯನು ಸೂರ್ಯಭಗವಂತನೇ ಆಗಿದ್ದಾನೆ. ‘ಚಿತ್ರಂ ದೇವಾನಾಮುದಗಾದನೀಕಂ ಚಕ್ಷುರ್ವಿುಮಿತ್ರಸ್ಯ ವರುಣಸ್ಯಾಗ್ನೇ | ಆಪ್ರಾ ದ್ಯಾವಾಪೃಥಿವೀ ಅಂತರಿಕ್ಷಂ ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ ||. ‘ಅಬ್ಬ! ಜಗತ್ತಿನ ಎಲ್ಲ ಸ್ಥಾವರಾತ್ಮಕ ಜಂಗಮಾತ್ಮಕ ವಿವರಗಳಿಗೂ ಆತ್ಮ ಎಂದರೆ ಸೂರ್ಯನೇ; ಕಿರಣಗಳ ಸಮೂಹ ಅವನು; ಮಿತ್ರಾ-ವರುಣರ ಕಣ್ಣು; ಭೂಲೋಕ, ದ್ಯುಲೋಕ ಮತ್ತು ಅಂತರಿಕ್ಷಲೋಕವನ್ನು ಉದ್ಧರಿಸುತ್ತ ಉದಯಿಸುತ್ತಿದ್ದಾನೆ!’ ಎಂದು ಸಾಮವೇದದಲ್ಲಿ ಹೇಳಲ್ಪಟ್ಟಿದೆ.

‘ದೇವತಾನುಗ್ರಹ ಬಲದಿಂದ, ಧ್ಯಾನ-ಸಮಾಧಿಗಳ ಮೂಲಕ ಮಾತ್ರ ಬ್ರಹ್ಮ, ವಿಷ್ಣು, ಮಹೇಶ್ವರ, ದುರ್ಗಾ, ಗಣೇಶ ಮೊದಲಾದ ದೇವತೆಗಳ ಸಾಕ್ಷಾತ್ಕಾರವು ಸಾಧ್ಯವಾದೀತು. ಆದರೆ ಈ ಭೂಮಿಯ ಭಾಸ್ಕರನಾದ ಸೂರ್ಯನು ಪ್ರತ್ಯಕ್ಷ ದೇವತೆಯಾಗಿ ಲೋಕವನ್ನು ಆಗ್ರಹಿಸುತ್ತಿದ್ದಾನೆ’ ಎಂದು ಸಾಂಬಪುರಾಣವು - ‘ಯ ಏಷ ತೇಜಸೋರಾಶಿಃ ದೀಪ್ತಿಮಾನ್

ಸಾರ್ವಲೌಕಿಕಃ | ಪಾಶ್ವೆರ್ೕನೋರ್ಧ್ವಮಧಶ್ಚೆ ೖವ

ಪ್ರತಪತ್ಯೇಷ ಸರ್ವತಃ ||’ ಎಂಬುದಾಗಿ ಸೂರ್ಯದೇವನ ಸ್ವರೂಪವನ್ನು ವರ್ಣಿಸುತ್ತದೆ. ಅಂದರೆ ಪರಮ ದಿವ್ಯ

ತೇಜಸ್ಸಿನ ರಾಶಿಯೇ ಸೂರ್ಯಭಗವಂತನ ಸ್ವರೂಪವಾಗಿದೆ. ಅವನ ದೀಪ್ತಿಮಯವಾದ ಪ್ರಭಾಶಕ್ತಿಯಿಂದ ಸಮಸ್ತ ಲೋಕಗಳೂ ಬೆಳಕನ್ನು ಪಡೆದಿವೆ.

ಸೂರ್ಯದೇವನ ಸಂಪೂರ್ಣ ತೇಜೋಮಂಡಲವು ಎರಡು ಭಾಗಗಳಾಗಿ ಬೆಳಗುತ್ತಿದೆ. ಆ ಪೈಕಿ ಒಂದು ಭಾಗವು ಪೃಥ್ವಿಯಿಂದ ಬ್ರಹ್ಮಲೋಕ ಪರ್ಯಂತವಾದ ಭಾಗವನ್ನು ಬೆಳಗುತ್ತಿದೆ. ಮತ್ತೊಂದು ಮತ್ತೊಂದು ಭಾಗವು ಪಾತಾಳಪರ್ಯಂತವಾಗಿ ವ್ಯಾಪಿಸಿ ಬೆಳಗುತ್ತಿದೆ. ಹೀಗೆ ಸೂರ್ಯದೇವನ ಸಮಗ್ರವಾದ ತೇಜೋಮಂಡಲದಿಂದ ಹದಿನಾಲ್ಕು ಲೋಕಗಳಲ್ಲಿರುವ ಸಮಸ್ತ ಪ್ರಾಣಿಗಳಲ್ಲಿ ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಉದ್ದೀಪನಗೊಂಡು ಕಾರ್ಯ ಮಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net