

ಆಪ್ತರ ಬಳಿ ಹೇಳಿದಾಗಲೆಲ್ಲ, ‘ಒಳ್ಳೆಯ ಪ್ಯಾಕೇಜ್ ಸಿಗುವ ಕಂಪನಿ ಸೇರಿಕೊಂಡು ಆರಾಮವಾಗಿ ಜೀವನ ಸಾಗಿಸುವುದೇ ಲೇಸು, ಈ ಕೃಷಿ ಅಷ್ಟಾಗಿ ಕೈಗೆ ಎಟುಕಲ್ಲ’ ಎಂಬ ಸಲಹೆ ಬರುತ್ತಿತ್ತು.
ಆದರೂ ತನ್ನ ಕನಸಿನ ರೆಕ್ಕೆಗೆ ಪುಷ್ಟಿ ನೀಡಲು ಡ್ರಾ್ಯಗನ್ ಫ್ರೂಟ್ ಬೆಳೆಯತ್ತ ಮನಸ್ಸು ಮಾಡಿದ. ಪದವಿ ವಿದ್ಯಾಭ್ಯಾಸದ ಬಿಡುವಿನ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅದರ ಬಗ್ಗೆ ಅಧ್ಯಯನ ಮಾಡಿದ. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಜಮೀನಿನಲ್ಲಿ ಡ್ರಾ್ಯಗನ್ ಫ್ರೂಟ್ ಬೆಳೆಯಲಾರಂಭಿಸಿದ. ಜತೆಗೆ ತನ್ನೂರಿನ ಇತರ ರೈತರಿಗೆ ಈ ಬೆಳೆಗೆ ಪ್ರೇರೇಪಿಸಲು ಒಂದು ನರ್ಸರಿ ಆರಂಭಿಸಿ, ಅವರಿಗೂ ಸಸಿಗಳ ಪೂರೈಕೆ ಮಾಡಿದ. ಬೆಳೆದ ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಲಾರಂಭಿಸಿದ. ತನ್ನ ಕನಸಿನಂತೆ ಕೋಟಿಗಟ್ಟಲೆ ಹಣದ ವಹಿವಾಟು ನಡೆಸಿದ. ಇತ್ತ ಪದವಿಯನ್ನು ಪೂರ್ಣಗೊಳಿಸಿ ಉತ್ತಮ ಸಂಬಳಕ್ಕೆ ಕಂಪನಿಯೊಂದರಲ್ಲಿ ಉದ್ಯೋಗವನ್ನೂ ಪಡೆದ. ಉದ್ಯೋಗ ಮತ್ತು ಕನಸಿನ ಕೃಷಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತ ಸಾಗಿದ.
ಪ್ರತಿಯೊಬ್ಬರಿಗೂ ಏನಾದರೂ ಸಾಧಿಸ ಬೇಕೆಂಬ ಒಂದಿಷ್ಟು ಕನಸು ಇರುತ್ತದೆ. ಆದರೆ ಎಲ್ಲರೂ ಸಾಗಿದ ದಾರಿಯಲ್ಲಿ ಸಾಗುತ್ತ ಯಶಸ್ಸು ಪಡೆಯಲು ಪ್ರಯತ್ನಿಸುತ್ತೇವೆ. ಹೊಸ ಚಿಂತನೆಯತ್ತ ಹೊರಳಿ ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತೇವೆ. ಏಕಮುಖವಾಗಿ ಚಿಂತಿಸುತ್ತ ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಂಡವರಂತೆ ಪ್ರತಿ ಕೆಲಸದಲ್ಲೂ ನಿರುತ್ಸಾಹದ ಹೆಜ್ಜೆ ಇಡುವ ಮನಸ್ಥಿತಿ ನಮ್ಮದಾಗಬಾರದು. ನಮ್ಮ ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು, ಶ್ರದ್ಧೆಯಿಂದ ಕಾರ್ಯಪ್ರವೃತ್ತರಾದರೆ ಯಾವುದೇ ಹೊಸ ಯೋಚನೆ-ಯೋಜನೆಯತ್ತ ಚಿತ್ತ ಬೆಳೆಸಿದರೂ ಯಶಸ್ಸು ನಮ್ಮದಾಗುತ್ತದೆ. ವಿದ್ಯೆ ಕಲಿಯುವುದು ಎಷ್ಟು ಮುಖ್ಯವೋ, ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಯಶಸ್ವಿಯಾಗುವುದು ಕೂಡ ಅಷ್ಟೇ ಮುಖ್ಯ. ‘ನೀವು ಯಶಸ್ಸನ್ನು ಪಡೆಯಲು ದೃಢಪ್ರಯತ್ನ ಮಾಡಬೇಕು, ಅಪಾರ ಇಚ್ಛಾಶಕ್ತಿ ಬೇಕು. ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ’ ಎಂದು ಪ್ರಯತ್ನಶೀಲನು ಹೇಳುತ್ತಾನೆ. ಜೀವನದಲ್ಲಿ ಯಶಸ್ಸಿನ ದಡ ಸೇರಲು , ದೃಢವಾದ ನಿಶ್ಚಯ, ಪ್ರಯತ್ನ ಮತ್ತು ಸ್ವಸಾಮರ್ಥದಲ್ಲಿ ನಂಬಿಕೆಯಿಂದ ಮುನ್ನಡೆಯೋಣ.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)