

ವಿದ್ಯಾಶಂಕರ ಶರ್ಮ
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನು ಬಹಳ ದೈವಭಕ್ತನಾಗಿದ್ದ. ತನ್ನ ಪ್ರಜೆಗಳ ಒಳಿತಿಗಾಗಿ ಬಹಳ ಶ್ರಮ ಪಡುತ್ತಿದ್ದ. ಒಮ್ಮೆ ಅವನಿಗೆ ದೇವರನ್ನು ಒಲಿಸಿಕೊಂಡು ಇನ್ನೂ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಆಸೆಯಾಯಿತು. ಅದಕ್ಕಾಗಿ ಊರಿನಿಂದ ಸ್ವಲ್ಪ ದೂರದಲ್ಲಿರುವ ಪರ್ವತಕ್ಕೆ ಹೋಗಿ ಕಠಿಣ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗುತ್ತಾನೆ. ‘ಏನು ವರ ಬೇಕು’ ಎಂದು ಕೇಳುತ್ತಾನೆ. ತನ್ನ ಪ್ರಜೆಗಳಿಗೂ ದೇವರು ದರ್ಶನ ನೀಡಬೇಕು ಎಂದು ರಾಜ ಕೇಳಿಕೊಳ್ಳುತ್ತಾನೆ. ಆಗ ದೇವರು, ‘ನಿನ್ನ ಪ್ರಜೆಗಳು ನನ್ನನ್ನು ನೋಡುವ ಅರ್ಹತೆಯನ್ನು ಇನ್ನೂ ಪಡೆದಿಲ್ಲ’ ಎನ್ನುತ್ತಾನೆ.
ಆಗ ರಾಜ ತನ್ನ ಪ್ರಜೆಗಳು ಕೂಡ ಯೋಗ್ಯರು ಎಂದು ಹೇಳುತ್ತಾನೆ. ಆಗ ಭಗವಂತ ನಸುನಗುತ್ತ, ‘ಸರಿ, ನಾಳೆ ಬೆಳಗ್ಗೆ ನಾನು ಬರುತ್ತೇನೆ. ನನ್ನ ದರ್ಶನ ಪಡೆಯಲು ನಿನ್ನ ಪ್ರಜೆಗಳನ್ನು ಕರೆದುಕೊಂಡು ಬಾ’ ಎನ್ನುತ್ತಾನೆ. ಅದರಂತೆ ರಾಜ ಮರಳಿ ಊರಿಗೆ ಬಂದು ತನ್ನ ಪ್ರಜೆಗಳಿಗೆ ನಡೆದಿದ್ದೆಲ್ಲವನ್ನೂ ಹೇಳುತ್ತಾನೆ. ಮರುದಿನ ತನ್ನ ಜೊತೆ ಬರಬೇಕು, ತಾನು ದೇವರನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳುತ್ತಾನೆ. ಅದರಂತೆ ಪ್ರಜೆಗಳೆಲ್ಲರೂ ಮರುದಿನ ಬೆಳಗ್ಗೆ ರಾಜನ ಜೊತೆ ಹೊರಡಲು ಸಿದ್ಧರಾಗುತ್ತಾರೆ. ಪರ್ವತವು ದೂರವಿರುವುದರಿಂದ ಎಲ್ಲರೂ ಬುತ್ತಿ ಕಟ್ಟಿಕೊಳ್ಳುತ್ತಾರೆ. ಪ್ರಯಾಣ ಶುರುವಾಗುತ್ತದೆ. ಸ್ವಲ್ಪ ದೂರ ಹೋಗುತ್ತಿರುವಾಗ, ದಾರಿಯಲ್ಲಿ ಬೆಳ್ಳಿಯ ನಾಣ್ಯಗಳು ಬಿದ್ದಿರುವುದು ಕಾಣುತ್ತದೆ. ಅದನ್ನು ನೋಡಿ ಕೆಲವು ಪ್ರಜೆಗಳು ತಾವು ತಂದಿದ್ದ ಆಹಾರವನ್ನು ಬದಿಗಿಟ್ಟು ಬೆಳ್ಳಿಯ ನಾಣ್ಯಗಳನ್ನು ಆರಿಸಿಕೊಳ್ಳಲು ಮುಗಿಬೀಳುತ್ತಾರೆ. ತಾವು ಹೋಗುತ್ತಿರುವ ಉದ್ದೇಶವನ್ನು ಮರೆತು ಅದರಲ್ಲೇ ಮಗ್ನರಾಗುತ್ತಾರೆ. ಹಾಗೆಯೇ ಪ್ರಯಾಣ ಮುಂದುವರೆಯುತ್ತದೆ. ಸ್ವಲ್ಪ ಮುಂದೆ ಹೋದಾಗ ದಾರಿಯಲ್ಲಿ ಬಂಗಾರದ ನಾಣ್ಯಗಳು ಕಾಣುತ್ತವೆ. ಆಗ ಇನ್ನು ಕೆಲವು ಪ್ರಜೆಗಳು ಅವುಗಳನ್ನು ಆರಿಸಿಕೊಳ್ಳುವುದರಲ್ಲಿ ಮಗ್ನರಾಗುತ್ತಾರೆ. ನಂತರ ಮತ್ತೆ ಸ್ವಲ್ಪ ಸಮಯದ ಪಯಣ ಆದ ಮೇಲೆ ದಾರಿಯಲ್ಲಿ ವಜ್ರದ ಹರಳುಗಳು ಬಿದ್ದಿರುವುದು ಕಾಣುತ್ತದೆ. ಉಳಿದ ಪ್ರಜೆಗಳು ವಜ್ರದ ಹರಳುಗಳನ್ನು ಆರಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ತಾವು ಹೊರಟ ಉದ್ದೇಶವನ್ನೇ ಎಲ್ಲರೂ ಮರೆತುಬಿಡುತ್ತಾರೆ. ಮುಂದೆ ಮುಂದೆ ಸಾಗುತ್ತಿದ್ದ ರಾಜ ಪರ್ವತದ ತುದಿಯನ್ನು ತಲುಪುತ್ತಾನೆ.
ಅಲ್ಲಿ ಕಾಯುತ್ತಿದ್ದ ದೇವರಿಗೆ ‘ಪ್ರಜೆಗಳನ್ನು ಕರೆ ತಂದಿದ್ದೇನೆ ನೋಡು’ ಎಂದು ಹೇಳಿ, ಹಿಂದೆ ನೋಡುತ್ತಾನೆ. ಅಲ್ಲಿ ಒಬ್ಬ ಪ್ರಜೆಯೂ ಇರುವುದಿಲ್ಲ. ಅವರೆಲ್ಲರೂ ನಾಣ್ಯಗಳ ಆಸೆಗೆ ಬಿದ್ದು ಹಿಂದೆಯೇ ಉಳಿದುಬಿಟ್ಟಿರುತ್ತಾರೆ. ಆಗ ದೇವರು ‘ಆ ಪ್ರಜೆಗಳೆಲ್ಲ ನನ್ನನ್ನು ನೋಡಲು ಇನ್ನೂ ಅರ್ಹತೆ ಪಡೆದಿರಲಿಲ್ಲ, ಅವರಿಗೆ ಇನ್ನೂ ಹಣ, ಸಂಪತ್ತುಗಳ ಆಸೆಯೇ ಮುಗಿದಿಲ್ಲ. ಹಾಗಾಗಿ ಅವರು ನನ್ನನ್ನು ನೋಡುವ ಇಚ್ಛೆಗಿಂತ ಧನದ ಆಕರ್ಷಣೆಗೆ ಮರುಳಾಗಿದ್ದಾರೆ’ ಎಂದು ಹೇಳುತ್ತಾನೆ. ನಮ್ಮ ಅರ್ಹತೆಗೆ ತಕ್ಕಂತೆ ಫಲ ದೊರೆಯುತ್ತದೆ. ಭಗವಂತನ ಸಾಕ್ಷಾತಾರವೇ ನಮ್ಮ ಇಚ್ಛೆಯಾಗಿದ್ದರೆ, ಬೇರೆ ಯಾವ ಲೌಕಿಕ ಆಕರ್ಷಣೆಯೂ ಮುಖ್ಯವಾಗುವುದಿಲ್ಲ. ಆ ಉದ್ದೇಶವೇ ಉತ್ಕಟವಾಗಿದ್ದರೆ ಮಾತ್ರ ನಮಗೆ ಅದಕ್ಕೆ ಸರಿಯಾದ ಫಲ ದೊರೆಯುತ್ತದೆ. ಯಾವುದೇ ಗುರಿಯಿರಲಿ, ಅದನ್ನು ತಲುಪುವ ಪ್ರಾಮಾಣಿಕ ಶ್ರದ್ಧೆ ಇದ್ದರೆ ಮಾತ್ರ ನಮ್ಮ ಸಾಧನೆಯ ಮಾರ್ಗ ನಾವು ಅಂದುಕೊಂಡ ಗಮ್ಯವನ್ನು ತಲುಪುತ್ತದೆ. ಹಾಗಿಲ್ಲದಾದಾಗ, ನಾವು ನಮ್ಮ ಗುರಿಯನ್ನು ತಲುಪುವ ಅರ್ಹತೆಯನ್ನು ಕಳೆದುಕೊಂಡು ಚುಕ್ಕಾಣಿ ಕಳೆದುಕೊಂಡ ಹಡಗಿನಂತೆ ಎಲ್ಲಿಯೋ ಕಳೆದುಹೋಗುತ್ತೇವೆ.
(ಲೇಖಕರು ಹವ್ಯಾಸಿ ಬರಹಗಾರರು)