ಮೂತ್ರಪಿಂಡ ಕಾಯಿಲೆ ತಡೆಯುವ ಶಕ್ತಿ ಮೊಸರಿಗಿದೆ

Curd
Published on

ಪ್ರತಿದಿನವೂ ಮೊಸರನ್ನ ಸೇವಿಸುವುದರಿಂದ ಕೀಲುನೋವು, ಹಲ್ಲುನೋವು ಬರುವುದು ತುಂಬ ಕಡಿಮೆ. ಬೆಳಗಿನ ಉಪಾಹಾರದಲ್ಲಿ ಮೊಸರು ಇದ್ದರೆ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮೂಳೆಗಳ ಆರೋಗ್ಯಕ್ಕೂ ತುಂಬ ಒಳ್ಳೆಯದು. ರಕ್ತದೊತ್ತಡ, ಮೂತ್ರಪಿಂಡ ಕಾಯಿಲೆಗಳನ್ನು ತಡೆಯುವ ಶಕ್ತಿಯುಳ್ಳ ಮೊಸರನ್ನು ಸೇವಿಸುವುದರಿಂದ ಹೃದಯಸಂಬಂಧಿ ಕಾಯಿಲೆ ಗುಣವಾಗುತ್ತದೆ. ಮೊಸರಿನಲ್ಲಿ ಗಟ್ ಬ್ಯಾಕ್ಟೀರಿಯಾ ಇರುವುದರಿಂದ ವೈರಾಣುಗಳ ವಿರುದ್ಧ ಹೋರಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಇ, ಜಿಂಕ್, ಫಾಸ್ಪರಸ್ ಇರುವುದರಿಂದ ಮೊಸರು ಚರ್ಮದ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಅಸಿಡಿಟಿ, ಪಿತ್ತ, ರಕ್ತಸ್ರಾವ, ದೇಹದ ಉಷ್ಣತೆ, ಕೂದಲು ಉದುರುವ ಸಮಸ್ಯೆಯುಳ್ಳವರು ಮೊಸರಿಗೆ ಬೆಲ್ಲವನ್ನು ಸೇರಿಸಿ ಸೇವಿಸುವುದು ಉತ್ತಮ. ಆಯಾಸ, ದೇಹದಲ್ಲಿ ನೋವು, ಗ್ಯಾಸ್ /ಹೊಟ್ಟೆಯುಬ್ಬರ, ಮಲಬದ್ಧತೆ ಸಮಸ್ಯೆಗಳಿರುವವರು ಮೊಸರಿಗೆ ಉಪ್ಪನ್ನು ಬೆರೆಸಿ ಸೇವಿಸಬೇಕು. ತಜ್ಞರ ಪ್ರಕಾರ ಮೊಸರನ್ನು ಆದಷ್ಟು ಸೂರ್ಯಾಸ್ತದ ಮುಂಚೆಯೇ ಸೇವಿಸಬೇಕು. ಸೂರ್ಯಾಸ್ತದ ನಂತರ ಮೊಸರು ಸೇವನೆ ಆರೋಗ್ಯಕರವಾದ ಪದ್ಧತಿಯಲ್ಲ. ಆಯುರ್ವೆದದ ಪ್ರಕಾರ ಸೂರ್ಯಾಸ್ತದ ನಂತರ ವಾತಾವರಣದಲ್ಲಿ ಹಾಗೂ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಕಡಿಮೆಯಾಗುತ್ತದೆ. ಅಂತಹ ಸಮಯದಲ್ಲಿ ಮೊಸರನ್ನು ಸೇವಿಸಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಶ್ವಾಸಕೋಶದಲ್ಲಿ ಅಡೆತಡೆ, ಸೈನಸ್, ಜ್ವರ, ಕೆಮ್ಮು, ಅಸ್ತಮಾದಂತಹ ಸಮಸ್ಯೆಗಳಿಗೆ ಅವಕಾಶ ನೀಡುತ್ತದೆ. ಅಂತಹ ಸಮಯದಲ್ಲಿ ಮೊಸರಿನ ಬದಲಾಗಿ ಕಡೆದ ಮಜ್ಜಿಗೆಯನ್ನು ಬಳಸುವುದು ಉಪಯುಕ್ತ.

ಮಳೆಗಾಲದಲ್ಲಿ ಪ್ರತಿನಿತ್ಯ ಮೊಸರನ್ನು ಸೇವಿಸಬಾರದು. ಏಕೆಂದರೆ ಈ ಸಮಯದಲ್ಲಿ ಆರೋಗ್ಯವನ್ನು ನಿಯಂತ್ರಿಸುವ ವಾತ, ಪಿತ್ತ ಮತ್ತು ಕಫಗಳು ಅಸಮತೋಲನ ಹೊಂದುತ್ತವೆ. ವಾತಾವರಣದಲ್ಲಿ ತೇವಾಂಶ ಗುಣವು ಹೆಚ್ಚಿರುತ್ತದೆ. ಜೀರ್ಣಕ್ರಿಯೆಯೂ ನಿಧಾನವಾಗಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಮೊಸರನ್ನು ಸೇವಿಸುವುದರಿಂದ ನೆಗಡಿ, ಶೀತ, ಅಲರ್ಜಿಗಳಂತಹ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಮೊಡವೆ, ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳುಳ್ಳವರು ಮೊಸರನ್ನು ಅತಿಯಾಗಿ ಸೇವಿಸಬಾರದು. ಬದಲಿಗೆ ಮಜ್ಜಿಗೆಯನ್ನು ಬಳಸಬಹುದು ಅಥವಾ ಮೊಸರನ್ನು ಚೆನ್ನಾಗಿ ಕದಡಿ ಸೇವಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net