ಸೋತು ಗೆಲ್ಲುವುದರಲ್ಲಿನ ಹಿತ: ಮನೋಲ್ಲಾಸ

Manollasa
Published on
| ಡಾ.ವಿಶ್ವನಾಥ ರೆಡ್ಡಿ

ಜೀವನದಲ್ಲಿ ಎದುರಾಗುವ ಪ್ರತಿಯೊಂದು ಪರೀಕ್ಷೆ ಅಥವಾ ಸವಾಲಿನಲ್ಲಿ ಹೋರಾಡಿ ಯಶಸ್ವಿಯಾಗಲು ಸಾಧ್ಯವಿಲ್ಲ. ಅದಕ್ಕಾಗಿ ನಮ್ಮ ಶಕ್ತಿ-ಯುಕ್ತಿಯ ಇತಿಮಿತಿ ಅರಿತು ಬಾಳಬಂಡಿಯ ಪಯಣ ಸಾಗಿಸಬೇಕಾಗುತ್ತದೆ. ಇದು ಜಗದ ನಿಯಮವೂ ಹೌದು. ಮಹಾಭಾರತ ಯುದ್ಧದ 14ನೇ ದಿನ. ಪಾಂಡವರ ಕಡೆಯಿದ್ದ ವೀರ ದೃಷ್ಟದ್ಯುಮ್ನನ ಕೈಯಿಂದ ಅತಿರಥರೆನಿಸಿದ ದ್ರೋಣಾಚಾರ್ಯರ ಸಾವು ಸಂಭವಿಸುತ್ತದೆ. ತನ್ನ ತಂದೆಯ ಮರಣಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಅಶ್ವತ್ಥಾಮ ವಿಷ್ಣುವಿನ ಪ್ರಸಿದ್ಧ ಆಯುಧವಾದ ನಾರಾಯಣ ಅಸ್ತ್ರವನ್ನು ಪಾಂಡವರ ಸಂಹಾರಕ್ಕಾಗಿ ಪ್ರಯೋಗಿಸಿದ. ನಾರಾಯಣಾಸ್ತ್ರವು ಬಹಳ ಶಕ್ತಿಶಾಲಿಯಾದ ಆಯುಧ. ಅದು ಆಕಾಶದಿಂದ ಅಸಂಖ್ಯಾತ ಚಕ್ರ, ಗಧೆ, ತೀಕ್ಷ್ಣಬಾಣಗಳ ಸುರಿಮಳೆಯನ್ನೇ ಪಾಂಡವರ ಮತ್ತು ಅವರ ಸೈನ್ಯದ ಕಡೆ ಸುರಿಸುವ ಮೂಲಕ ಅದನ್ನು ಪ್ರತಿರೋಧಿಸಿ ಯುದ್ಧಕ್ಕೆ ನಿಂತವರನ್ನು ವಧಿಸಿ ದೊಡ್ಡ ಹಾನಿಯನ್ನುಂಟು ಮಾಡುವುದರಲ್ಲಿತ್ತು. ನಾರಾಯಣಾಸ್ತ್ರದಿಂದ ಪಾರಾಗಿ ಬದುಕುಳಿಯುವ ರಹಸ್ಯವನ್ನು ಅರಿತಿದ್ದ ಸಾಕ್ಷಾತ್ ವಿಷ್ಣುವಿನ ಅವತಾರಿಯಾದ ಶ್ರೀಕೃಷ್ಣ ಪರಮಾತ್ಮನು ಪಾಂಡವರಿಗೆ ಮತ್ತು ಅವರ ಯೋಧರಿಗೆ, ‘ಇದು ಭಗವಾನ್ ವಿಷ್ಣುವಿನ ಮಹಾಅಸ್ತ್ರವಾಗಿರುವುದರಿಂದ ಈ ಕೂಡಲೇ ಎಲ್ಲರೂ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಸಂಪೂರ್ಣವಾಗಿ ಶರಣಾಗಿ’ ಎಂದು ಸಲಹೆ ನೀಡಿದ.

ಭೀಮನನ್ನು ಬಿಟ್ಟು ಎಲ್ಲರೂ ಶ್ರೀಕೃಷ್ಣನ ಆದೇಶ ಪಾಲಿಸಿದರು. ಆದರೆ ಭೀಮಸೇನ ಮಾತ್ರ ಅಹಂಕಾರದಿಂದ ಶ್ರೀಕೃಷ್ಣನ ಸಲಹೆಯನ್ನು ನಿರಾಕರಿಸಿ ನಾರಾಯಣಾಸ್ತ್ರದ ವಿರುದ್ಧ ಹೋರಾಡಲು ಪ್ರಯತ್ನಿಸಿ ಘಾಸಿಗೊಂಡ. ಇನ್ನೇನು ಆ ಆಯುಧ ಭೀಮನ ಪ್ರಾಣಕ್ಕೆ ಸಂಚಕಾರ ತರುವಾಗ, ಶ್ರೀಕೃಷ್ಣ ಭೀಮನನ್ನು ಉದ್ದೇಶಿಸಿ, ‘ನೀನು ಆ ಅಸ್ತ್ರವನ್ನು ಪ್ರತಿರೋಧಿಸಿದಷ್ಟು ಅದರ ತೀವ್ರತೆ ಹೆಚ್ಚುತ್ತದೆ. ಆದ್ದರಿಂದ ಈ ಕ್ಷಣಕ್ಕೆ ಶಸ್ತ್ರಾಸ್ತ್ರಗಳನ್ನು ತ್ಯಾಗಮಾಡು, ನಾರಾಯಣಾಸ್ತ್ರದ ವಿರುದ್ಧ ಯುದ್ಧಮಾಡುವ ಅಥವಾ ಅದನ್ನು ಪ್ರತಿರೋಧಿಸುವ ಆಲೋಚನೆಯಿಂದ ನಿನ್ನ ಮನಸ್ಸನ್ನು ಮುಕ್ತಗೊಳಿಸು, ಭಕ್ತಿಭಾವದಿಂದ ಸಂಪೂರ್ಣವಾಗಿ ಶರಣಾದರೆ ಮಾತ್ರ ನಿನ್ನನ್ನು ನೀನು ರಕ್ಷಿಸಿಕೊಳ್ಳಬಹುದು’ ಎಂದು ಉಪದೇಶಿಸಿದ. ಆಗ ಭೀಮನಿಗೆ ತನ್ನ ತಪ್ಪಿನ ಅರಿವಾಗಿ ಶ್ರೀಕೃಷ್ಣನ ಮಾತನ್ನು ಪಾಲಿಸಿದ. ಪ್ರತಿರೋಧಿಸಿ ಗೆಲ್ಲಲು ಅಸಾಧ್ಯವಾದ ನಾರಾಯಣ ಅಸ್ತ್ರವು ಉಪಶಮನವಾಯಿತು.

ಜೀವನದಲ್ಲಿ ನಮಗೂ ಇಂಥ ಕಠಿಣ ಪರಿಸ್ಥಿತಿಗಳು ಎದುರಾಗಬಹುದು. ನಾವು ಎಷ್ಟೇ ಬುದ್ಧಿವಂತರಿರಲಿ, ಅನುಭವಸ್ಥರಿರಲಿ, ಎದುರಾಗುವ ಎಲ್ಲ ಸಮಸ್ಯೆಗಳಿಗೆ ನಮ್ಮಲ್ಲಿ ಪರಿಹಾರವಿದೆ ಎನ್ನುವ ಅತಿಯಾದ ಆತ್ಮವಿಶ್ವಾಸ ನಮಗೆ ಸೋಲಿನ ರುಚಿ ತೋರಿಸಬಲ್ಲದು. ಕೆಲವೊಮ್ಮೆ ಜೀವನವೊಡ್ಡುವ ಕಠಿಣ ಪರೀಕ್ಷೆಗಳಿಗೆ ಎದೆಕೊಟ್ಟು ಹೋರಾಡಿ ಗೆಲ್ಲಲು ಅನುಕೂಲಗಳಿಲ್ಲದೆ ಇರಬಹುದು ಅಥವಾ ನಮ್ಮ ಸಾಮರ್ಥ್ಯ ಸಾಕಾಗದೆ ಇರಬಹುದು. ಅಂಥ ಅಸಹಾಯಕ ಪರಿಸ್ಥಿತಿಯಲ್ಲಿ ಭಗವಂತನಿಗೆ ಶರಣಾಗಿ ಸ್ವಲ್ಪ ಸಮಯದವರೆಗೂ ಶಾಂತವಾಗಿರುವುದು ಉತ್ತಮ. ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹೋರಾಟದ ನಿರ್ಧಾರವನ್ನು ಕೈಗೊಳ್ಳಬೇಕು ಸೋಲೇ ಗೆಲುವಿನ ಸೋಪಾನ ಎನ್ನುವ ಹಾಗೆ ಕೆಲವೊಮ್ಮೆ ನಾವು ಸೋತು ಗೆಲ್ಲಬೇಕಾಗುತ್ತದೆ.

(ಲೇಖಕರು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net