ಅವಳಲ್ಲ ಅವನು... : ಕೂಚುಪುಡಿಯಲ್ಲಿ ಏಕೈಕ ಸ್ತ್ರೀವೇಷಧಾರಿ ಪುರುಷ

kuchupudi feb 18 2020
Published on

ಯಕ್ಷಗಾನ, ನಾಟಕಗಳಲ್ಲಿ ಸ್ತ್ರೀವೇಷಧಾರಿಗಳು ಸಾಮಾನ್ಯ. ಆದರೆ ಕೂಚುಪುಡಿಯಲ್ಲಿಯೂ ಸ್ತ್ರೀವೇಷದ ಮೂಲಕವೇ ದಶಕದಿಂದ ದೇಶ- ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದಾರೆ ಬಸವರಾಜ ಬಲಕುಂದಿ. ಕೂಚುಪುಡಿಯಲ್ಲಿ ಏಕೈಕ ಸ್ತ್ರೀವೇಷಧಾರಿ ಇವರು.

‘ಈಕೆಯ’ ಸುಂದರ ಮುಖವದನ ಹಾಗೂ ಅದ್ಭುತ ನೃತ್ಯ ನೋಡಿದರೆ ಮನಸೋಲದವರಿಲ್ಲ. ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತ, ಬಳಕುತ್ತ ಕೂಚುಪುಡಿ ನೃತ್ಯ ಮಾಡಿದರೆ ಎಲ್ಲರೂ ವಾವ್’ ಎನ್ನಬೇಕು. ಅಂಥ ಸೌಂದರ್ಯ, ಅಷ್ಟೇ ಸುಂದರ ಅಭಿನಯ...

ಆದರೆ ಅಸಲಿಯತ್ತು ಗೊತ್ತಾದಾಗ ಮಾತ್ರ ಎಲ್ಲರೂ ಹುಬ್ಬೇರಿಸುವುದು ಗ್ಯಾರೆಂಟಿ. ಏಕೆಂದರೆ ಅಲ್ಲಿಯವರೆಗೆ ಸುಂದರಿ ಎಂದು ಅಂದುಕೊಂಡದ್ದು ಯುವತಿಯಲ್ಲ ಬದಲಿಗೆ ಯುವಕ ಎಂದು! ಹೌದು. ಈ ‘ಸುಂದರಿ’ಯೇ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದವರಾದ ಬಸವರಾಜ ಬಲಕುಂದಿ. ನೃತ್ಯದ ವೇಷಭೂಷಣ ಧರಿಸಿದರೆ ಥೇಟ್ ಯುವತಿಯಂತೆಯೇ ಕಾಣುವ ಇವರು ಕೂಚುಪುಡಿ ನೃತ್ಯಪಟು. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದವರಾದ ಬಸವರಾಜ, ಹೆಸರಿನ ಜತೆಗೆ ಊರಿನ ಹೆಸರನ್ನೂ ಸೇರಿಸಿಕೊಂಡು ಬಸವರಾಜ ಬಲಕುಂದಿಯಾಗಿದ್ದಾರೆ.

ಸ್ತ್ರೀ ವೇಷಧಾರಿಯಾಗಿ ಬಿಡುವಿಲ್ಲದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಆಂಧ್ರಪ್ರದೇಶದ ಎಮ್ಮಿಗನೂರಿನ ಮೊಹಮ್ಮದ್ ಗೌಸ್ ಬಸವರಾಜ್​ರ ನೃತ್ಯ ಗುರು. ಏಳನೇ ತರಗತಿ ಓದುವ ವೇಳೆ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಬಸವರಾಜ್ ಅವರು ಹೋದದ್ದು ಭರತನಾಟ್ಯ ಕಲಿಯಲು, ಆದರೆ, ಪರಿಣತರಾದದ್ದು ಕೂಚುಪುಡಿ ನೃತ್ಯದಲ್ಲಿ.

ಕಳೆದ 15 ವರ್ಷಗಳಿಂದ ಕೂಚುಪುಡಿ ನೃತ್ಯವೇ ಬಸವರಾಜ ಅವರ ಉಸಿರಾಗಿದೆ. 10 ವರ್ಷಗಳಿಂದ ಸ್ತ್ರೀ ವೇಷಧಾರಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳು, 15 ರಾಜ್ಯ, ದುಬೈ, ಕೆನಡಾ, ನೆದರ್ಲೆಂಡ್, ಸ್ವಿಜರ್​ಲೆಂಡ್ ಸೇರಿದಂತೆ 10 ವಿವಿಧ ದೇಶಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. ಭಾಮಾ ಕಲಾಪದಲ್ಲಿ ಸತ್ಯಭಾಮಾ, ಮೋಹಿನಿ ಭಸ್ಮಾಸುರದಲ್ಲಿ ಮೋಹಿನಿ, ಸೀತಾ ಸ್ವಯಂವರದಲ್ಲಿ ಸೀತೆ, ಪಾರ್ವತಿ ಕಲ್ಯಾಣದಲ್ಲಿ ಪಾರ್ವತಿ, ರುಕ್ಮಿಣಿ ಪಾತ್ರಗಳ ಜತೆಗೆ ಕಿತ್ತೂರು ರಾಣಿ ಚನ್ನಮ್ಮ ನೃತ್ಯರೂಪಕಕ್ಕೆ ಬಸವರಾಜ ಹೆಸರುವಾಸಿಯಾಗಿದ್ದಾರೆ. ಬಿಎ ಹಾಗೂ ನೃತ್ಯದಲ್ಲಿ ಎಂಎ ಮತ್ತು ಡಿಪ್ಲೊಮಾ ಪದವಿ ಪಡೆದಿದ್ದಾರೆ. 27 ವರ್ಷದ ಬಸವರಾಜ ಬಲಕುಂದಿ ಸಿರಗುಪ್ಪದ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಹಂಪಿ, ಆನೆಗುಂದಿ, ಕಿತ್ತೂರು, ಬೆಳವಡಿ ಉತ್ಸವ, ಮೈಸೂರು ದಸರಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಸ್ತ್ರೀ ವೇಷ ಧರಿಸಿದಾಗ ಸ್ತ್ರೀ ಸಹಜ ಗುಣಗಳಂತೆಯೇ ವರ್ತಿಸುತ್ತಾರೆ. ಸ್ತ್ರೀಯರ ಘನತೆ ಕಾಪಾಡುವುದು ಅದರ ಉದ್ದೇಶ. ಪ್ರದರ್ಶನ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಇವರೇ ಬಸವರಾಜ ಬಲಕುಂದಿ ಎಂದು ಗುರುತಿಸುವುದೇ ಕಷ್ಟ. ಈ ಬಗ್ಗೆ ಸ್ವತಃ ಬಸವರಾಜ ಅವರಿಗೇ ಬೇಸರ ಇದೆ.

ಸ್ತ್ರೀವೇಷಕ್ಕೆ ಬಂದದ್ದು ಹೀಗೆ

ನೃತ್ಯ ಕಲಿತ ಆರಂಭದಲ್ಲಿ ಬಸವರಾಜ ಬಲಕುಂದಿ ಸ್ತ್ರೀ ವೇಷದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಕೂಚುಪುಡಿ ನೃತ್ಯ ರೂಪಕಗಳಲ್ಲಿ ಪುರುಷರು ಒಂದು ಸಲವಾದರೂ ಸ್ತ್ರೀ ವೇಷ ಧರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಅನುಸರಿಸಿದ್ದರು. ಬಳಿಕ ರಾಜ್ಯದಲ್ಲಿ ನಿರಂತರವಾಗಿ ಸ್ತ್ರೀ ವೇಷ ಧರಿಸಿ ಕೂಚುಪುಡಿ ನೃತ್ಯ ಮಾಡುವವರು ಯಾರೂ ಇಲ್ಲ ಎಂಬುದನ್ನು ತಿಳಿದು ಸ್ತ್ರೀ ವೇಷಧಾರಿಯಾಗಿಯೇ ಮುಂದುವರೆದಿದ್ದಾರೆ.

ಕೂಚುಪುಡಿಯಲ್ಲಿ ಸ್ತ್ರೀ ವೇಷ ಧರಿಸಿ ನೃತ್ಯ ಮಾಡುವ ಕರ್ನಾಟಕದ ಏಕೈಕ ಪುರುಷ ನಾನು ಎಂಬ ಹೆಮ್ಮೆ ಇದೆ. ಜೀವನದ ಕೊನೆಯುಸಿರು ಇರುವವರೆಗೂ ಸ್ತ್ರೀ ವೇಷಧಾರಿಯಾಗಿಯೇ ಪ್ರದರ್ಶನ ನೀಡುತ್ತೇನೆ. ಗುರು ಮೊಹಮ್ಮದ್ ಗೌಸ್ ಅವರೇ ನನಗೆ ದಾರಿ ಹಾಗೂ ಬೆಳಕು ಆಗಿದ್ದಾರೆ. | ಬಸವರಾಜ ಬಲಕುಂದಿ ಕೂಚುಪುಡಿ ನೃತ್ಯಪಟು

ಅಶೋಕ್ ನೀಮಕರ್ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net