ಸಂಜೆಯ ಚಳಿಗೆ ಪರ್ಫೆಕ್ಟ್ ಕಾಂಬಿನೇಷನ್: ನಾಲಿಗೆ ಚಪ್ಪರಿಸುವಂತೆ ಮಾಡುವ ತಂದೂರಿ ಮೊಮೊಸ್ ರೆಸಿಪಿ ಈಗ ನಿಮ್ಮ ಮನೆಯಲ್ಲೇ! Tandoori Momos
Tandoori Momos ಸಾಂದರ್ಭಿಕ ಚಿತ್ರ
Published on:
Copied
Follow Us
Tandoori Momos: ಸಂಜೆಯ ತಂಪಾದ ಹವಾಮಾನಕ್ಕೆ ಬಿಸಿಬಿಸಿಯಾದ, ಖಾರ ಹಾಗೂ ಮಸಾಲೆಯುಕ್ತ ಆಹಾರವನ್ನು ಸವಿಯುವ ಮಜಾವೇ ಬೇರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹಾಗೂ ಆಹಾರ ಪ್ರಿಯರ ಸಾರ್ವಕಾಲಿಕ ನೆಚ್ಚಿನ ಲಘು ಉಪಹಾರವಾಗಿ 'ಮೊಮೊಸ್' ಗುರುತಿಸಿಕೊಂಡಿದೆ. ನೀವು ಸದಾ ತಿನ್ನುವ ಸಾಂಪ್ರದಾಯಿಕ ಹಬೆಯಲ್ಲಿ ಬೆಯಿಸಿದ ಅಥವಾ ಫ್ರೈಡ್ ಮೊಮೊಸ್‌ಗಳಿಗಿಂತ ಭಿನ್ನವಾಗಿ, ಏನಾದರೂ ಸ್ಪೆಷಲ್ ಆಗಿ ಟ್ರೈ ಮಾಡಬೇಕು ಅಂದುಕೊಂಡಿದ್ದರೆ 'ತಂದೂರಿ ಮೊಮೊಸ್' ಅತ್ಯುತ್ತಮ ಆಯ್ಕೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೆ ಮಾಡಿ ತಂದೂರಿ ಮೊಮೊಸ್...
ಬೇಕಾಗುವ ಸಾಮಗ್ರಿಗಳು
* 10-12 ಮೊದಲೇ ಸಿದ್ಧಪಡಿಸಿ ಹಬೆಯಲ್ಲಿ ಬೇಯಿಸಿದ ಮೊಮೊಸ್
*4 ಚಮಚ ಗಟ್ಟಿ ಮೊಸರು
*1 ಚಮಚ ಕಡಲೆಹಿಟ್ಟು
*1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
*11/2 ಟೀಸ್ಪೂನ್ ಕಾಶ್ಮೀರಿ ಅಚ್ಚಕಾರದ ಪುಡಿ
*1/2 ಟೀಸ್ಪೂನ್ ಗರಂ ಮಸಾಲಾ ಪುಡಿ
*1/2 ಟೀಸ್ಪೂನ್ ಚಾಟ್ ಮಸಾಲಾ
*1 ಚಮಚ ಕಸ್ತೂರಿ ಮೇತಿ
*1 ಚಮಚ ನಿಂಬೆ ರಸ
*2 ಚಮಚ ಎಣ್ಣೆ
*ಉಪ್ಪು - ರುಚಿಗೆ ತಕ್ಕಷ್ಟು
*1 ಇದ್ದಿಲು ತುಂಡು
*1 ಟೀಸ್ಪೂನ್ ತುಪ್ಪ ಅಥವಾ ಬೆಣ್ಣೆ
ತಯಾರಿಸುವ ವಿಧಾನ
ಒಂದು ದೊಡ್ಡ ಬೌಲ್‌ನಲ್ಲಿ ಗಟ್ಟಿ ಮೊಸರು, ಹುರಿದ ಕಡಲೆಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಶ್ಮೀರಿ ಅಚ್ಚಕಾರದ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಕಸ್ತೂರಿ ಮೇತಿ, ನಿಂಬೆ ರಸ, ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಮೊದಲೇ ಹಬೆಯಲ್ಲಿ ಬೇಯಿಸಿ ಇಟ್ಟುಕೊಂಡಿರುವ (ಸ್ವಲ್ಪ ತಣ್ಣಗಾಗಿರಬೇಕು) ಮೊಮೊಸ್‌ಗಳನ್ನು ಈ ಮಸಾಲೆ ಮಿಶ್ರಣಕ್ಕೆ ಹಾಕಿ. ಮೊಮೊಸ್ ಒಡೆಯದಂತೆ ಹಗುರವಾಗಿ ಕೈಯಿಂದ ಮಸಾಲೆ ಎಲ್ಲ ಕಡೆ ತಾಗುವಂತೆ ಮಿಕ್ಸ್ ಮಾಡಿ. 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಮ್ಯಾರಿನೇಟ್ ಆದ ಮೊಮೊಸ್ ಬೌಲ್‌ನ ಮಧ್ಯದಲ್ಲಿ ಒಂದು ಸಣ್ಣ ಸ್ಟೀಲ್ ಬಟ್ಟಲು ಇಡಿ. ಇದ್ದಿಲಿನ ತುಂಡನ್ನು ಗ್ಯಾಸ್ ಉರಿಯಲ್ಲಿ ಕೆಂಪಗಾಗುವರೆಗೆ ಕಾಯಿಸಿ, ಆ ಬಟ್ಟಲಿನಲ್ಲಿ ಇಟ್ಟು, ಅದರ ಮೇಲೆ ಒಂದು ಚಮಚ ತುಪ್ಪ ಅಥವಾ ಬೆಣ್ಣೆ ಹಾಕಿ. ತಕ್ಷಣ ಬೌಲ್‌ಗೆ ಗಟ್ಟಿಯಾದ ಮುಚ್ಚಳವನ್ನು ಮುಚ್ಚಿ 5 ನಿಮಿಷ ಬಿಡಿ. ಇದ್ದಿಲಿನ ಹೊಗೆಯಿಂದಾಗಿ ಮೊಮೊಸ್‌ಗೆ ಅಪ್ಪಟ ತಂದೂರಿ ಸುವಾಸನೆ ಸಿಗುತ್ತದೆ.
ತವಾ ವಿಧಾನ
ನಾನ್-ಸ್ಟಿಕ್ ತವಾಕ್ಕೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಮ್ಯಾರಿನೇಟ್ ಮಾಡಿದ ಮೊಮೊಸ್‌ಗಳನ್ನು ಇಟ್ಟು, ಮಧ್ಯಮ ಉರಿಯಲ್ಲಿ ಎಲ್ಲಾ ಕಡೆ ತಿರುಗಿಸುತ್ತಾ, ಮಸಾಲೆ ಕಂದು ಬಣ್ಣಕ್ಕೆ ತಿರುಗಿ ಸ್ವಲ್ಪ ಸೀದಂತಾಗುವ ತನಕ ಫ್ರೈ ಮಾಡಿ.
ಈಗ ಬಿಸಿಬಿಸಿಯಾದ ತಂದೂರಿ ಮೊಮೊಸ್ ಸವಿಯಲು ಸಿದ್ಧ! ಇದರ ಮೇಲೆ ಸ್ವಲ್ಪ ಚಾಟ್ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ, ಹಸಿರು ಪುದೀನಾ ಚಟ್ನಿ ಹಾಗೂ ಈರುಳ್ಳಿ ಲಚ್ಚಾ ಜೊತೆ ಸವಿಯಲು ನೀಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.