

ಕಾಂಬೋಜ ದೇಶದ ಚಂದನಾವತಿ ಎಂಬ ಪ್ರಾಂತದಲ್ಲಿ ಒಮ್ಮೆ ಭೀಕರ ಬರಗಾಲ ಬಿದ್ದಿತು. ಆ ಪ್ರಾಂತದ ರಾಜಕುಟುಂಬದ ಅತ್ಯಂತ ಶ್ರೀಮಂತ ಮಹಿಳೆಯೂ, ದಯಾಳುವೂ ಆದ ಮೃಣಾಲಿನೀ ದೇವಿ ಒಂದು ಘೂಷಣೆ ಹೊರಡಿಸಿದರು- ‘ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಈ ಪ್ರಾಂತದ ಎಲ್ಲ ಬಡ ಕುಟುಂಬಗಳ ಮಕ್ಕಳಿಗೆ ಒಂದೊಂದು ರೊಟ್ಟಿಯನ್ನು ಹಂಚುತ್ತೇನೆ, ಎಲ್ಲರೂ ಪ್ರತಿದಿನವೂ ನಮ್ಮ ಅರಮನೆಯ ಉದ್ಯಾನದಲ್ಲಿ ಬಂದು ಸೇರಿರಿ’ ಎಂದು. ಮರುದಿನ ಅನೇಕ ಮಕ್ಕಳು ಅಲ್ಲಿಗೆ ಬಂದು ಸೇರಿದರು.
ಸ್ವಯಂಸೇವಕರು ದೊಡ್ಡ ದೊಡ್ಡ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತಂದು ಇಟ್ಟರು. ಅವುಗಳಲ್ಲಿ ಸಣ್ಣದು ದೊಡ್ಡದು ಹೀಗೆ ತರಹೇವಾರಿ ರೊಟ್ಟಿಗಳಿದ್ದವು. ಮಕ್ಕಳು ನಾ ಮುಂದು ತಾ ಮುಂದು ಎಂದು ಧಾವಿಸಿ ಬಂದರು. ಪರಸ್ಪರ ತಳ್ಳಾಡುತ್ತ ದೊಡ್ಡ ರೊಟ್ಟಿಯನ್ನೇ ಆರಿಸಿಕೊಳ್ಳಲು ಪ್ರಯತ್ನಪಟ್ಟರು. ಪ್ರತಿಯೊಬ್ಬರೂ ಒಂದೊಂದು ರೊಟ್ಟಿ ತೆಗೆದುಕೊಂಡು ಹೋಗುತ್ತಿದ್ದರು. ಒಬ್ಬ ಚಿಕ್ಕ ಬಾಲಕಿ ಮಾತ್ರ ಒಂದು ಮರದ ಕೆಳಗೆ ನಿಶ್ಚಿಂತೆಯಿಂದ ಕುಳಿತಿದ್ದಳು. ಅವಳು ತುಂಬಾ ಬಡಕುಟುಂಬದ ಹೆಣ್ಣು ಮಗಳೆಂಬುದು ಅವಳ ಹರಿದ, ಮಾಸಿದ ಬಟ್ಟೆಯಿಂದಲೇ ಗೊತ್ತಾಗುತ್ತಿತ್ತು. ಎಲ್ಲರೂ ರೊಟ್ಟಿಗಳನ್ನು ಒಯ್ದ ಮೇಲೆ ಅವಳಿಗೆ ಒಂದು ಸಣ್ಣ ರೊಟ್ಟಿ ಸಿಕ್ಕಿತು. ಅದನ್ನೇ ಅವಳು ಸಂತೋಷದಿಂದ ಮನೆಗೆ ತೆಗೆದುಕೊಂಡು ಹೋದಳು. ಸಣ್ಣ ರೊಟ್ಟಿ ಸಿಕ್ಕಿತು ಎಂಬ ಖೇದ ಅವಳ ಮುಖದಲ್ಲಿ ಕಾಣಲಿಲ್ಲ. ಎರಡನೆಯ ದಿನವೂ ಹಾಗೆಯೇ ಆಯಿತು. ಇದನ್ನು ಮೃಣಾಲಿನೀದೇವಿ ಗಮನಿಸುತ್ತಲೇ ಇದ್ದರು. ಮಕ್ಕಳು ತಳ್ಳಾಟ ಮಾಡಿದರೂ ಅವರು ಮಕ್ಕಳಿಗೆ ಗದರಲಿಲ್ಲ. ‘ಹಸಿವೆಯ ಮುಂದೆ ಇನ್ನೇನಿದೆ?’ ಎಂಬ ಅರಿವು, ಕರುಣೆ ಅವರಲ್ಲಿತ್ತು. ಮೂರನೆಯ ದಿನವೂ ಎಂದಿನಂತೆ ಆ ಪುಟ್ಟ ಹುಡುಗಿ ಅದೇ ಮರದ ಕೆಳಗೆ ಕುಳಿತಿದ್ದಳು.
ಅವಳಿಗೆ ದೊರೆತ ತೀರಾ ಸಣ್ಣ ರೊಟ್ಟಿಯನ್ನೇ ತೆಗೆದುಕೊಂಡು ಮನೆಗೆ ತೆರಳಿದಳು. ಮನೆಗೆ ಹೋಗಿ ರೊಟ್ಟಿಯನ್ನು ಮುರಿದಾಗ ಅದರಲ್ಲಿ ಒಂದು ಬಂಗಾರದ ನಾಣ್ಯ ಹೊಳೆಯುತ್ತಿರುವುದು ಕಾಣಿಸಿತು. ಅಮ್ಮ ಹೇಳಿದಳು- ‘ಕೂಡಲೇ ಇದನ್ನು ಮೃಣಾಲಿನೀದೇವಿ ಅವರಿಗೆ ಕೊಟ್ಟು ಬಾ. ಅದು ಅವರದು, ನಮ್ಮದಲ್ಲ’ ಎಂದು. ತಕ್ಷಣ ಆ ಬಾಲಕಿ ಮೃಣಾಲಿನೀದೇವಿ ಅವರ ಅರಮನೆಗೆ ಓಡುತ್ತ ಬಂದಳು. ಬಂಗಾರದ ನಾಣ್ಯವನ್ನು ಮರಳಿಸುತ್ತ ‘ಇದು ನೀವು ಕೊಟ್ಟ ರೊಟ್ಟಿಯಲ್ಲಿ ಸಿಕ್ಕಿತು. ಹಿಟ್ಟಿನಲ್ಲಿ ಬಿದ್ದಿರಬಹುದು ಅಂತ ಅಮ್ಮ ಹೇಳಿದಳು, ತೆಗೆದುಕೊಳ್ಳಿ’ ಎಂದು ನುಡಿದು ಅವರಿಗೆ ಅದನ್ನು ಕೊಟ್ಟಳು. ಮುದ್ದು ಹುಡುಗಿಯ ಪ್ರಾಮಾಣಿಕತೆ ಮತ್ತು ಮುಗ್ಧತೆಯನ್ನು ಕಂಡು ಮೃಣಾಲಿನೀದೇವಿಯವರ ಕಣ್ಣುಗಳು ಒದ್ದೆಯಾದವು. ಸಂತೋಷದಿಂದ ಅವಳನ್ನು ಬಿಗಿದಪ್ಪಿ ಮುದ್ದಾಡಿ, ‘ಇಂದಿನಿಂದ ನೀನು ನಮ್ಮ ಮನೆಯ ಮಗಳು; ನಮ್ಮದೇ ಮಗಳು’ ಎಂದು ಅವಳನ್ನು ದತ್ತುಪುತ್ರಿಯಾಗಿ ಸ್ವೀಕಾರ ಮಾಡಿದರು. ಅವಳ ತಾಯಿಗೆ ತಮ್ಮ ಮನೆಯಲ್ಲೇ ಕೆಲಸ ಕೊಟ್ಟರು. ಆ ಬಾಲಕಿಯನ್ನು ಚೆನ್ನಾಗಿ ಬೆಳೆಸಿ, ಉತ್ತಮ ಶಿಕ್ಷಣ ನೀಡಿ ಯೋಗ್ಯನಾದ ಸುಂದರ ವರನೊಂದಿಗೆ ಮದುವೆ ಮಾಡಿದರು. ಅಲ್ಲದೇ ಸಂಪತ್ತು, ಆಸ್ತಿಯಲ್ಲಿ ತಮ್ಮ ಇತರ ಮಕ್ಕಳಿಗೆ ಕೊಟ್ಟಂತೆ ಪಾಲು ಕೊಟ್ಟು, ವಿಶ್ವಾಸ ತೋರಿದರು.
ಪ್ರಾಮಾಣಿಕತೆಯು ಮನುಷ್ಯನಿಗೆ ಗೌರವ ತಂದು ಕೊಡುತ್ತದೆ. ಮನುಷ್ಯನ ಆಸೆಗೆ ಮಿತಿಯಿಲ್ಲ. ಆದರೆ, ಅತಿ ಆಸೆ ಗತಿಗೇಡು. ಸಂತೃಪ್ತಿ ಮತ್ತು ಸಂತೋಷವೇ ಬಾಳನ್ನು ಹಸನಾಗಿಸುತ್ತದೆ ಎಂಬ ಸಂದೇಶ ಈ ಕಥೆಯಲ್ಲಿದೆ. ಅದಲ್ಲದೆ, ಮನುಷ್ಯನು ದಯಾಳು ಆಗಿರಬೇಕು ಎಂಬ ಸಂದೇಶವನ್ನೂ ಇದು ನೀಡುತ್ತದೆ. ಹಾಗೆಯೇ, ‘ಮಿತಿಯಿರಲಿ ಮನಸಿನುದ್ವೇಗದಲಿ ಭೋಗದಲಿ ಅತಿಯೆಲ್ಲಿಯುಂ ಬೇಡ ಮಂಕುತಿಮ್ಮ’ ಎಂಬ ಡಿವಿಜಿಯವರ ನುಡಿಯನ್ನೂ ಇದು ನೆನಪಿಸಿಕೊಡುತ್ತದೆ.