ಸೂಪರ್ ಹ್ಯೂಮನ್ ಎಐಗೆ ದಿನಗಣನೆ! ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪರಾಕಾಷ್ಠೆಯ ಪ್ರಯೋಗಕ್ಕೆ ಜಾಗತಿಕ ಕ್ಷಣಗಣನೆ ಶುರುವಾಗಿದೆ. ಮನುಷ್ಯರಿಗೆ ಪರ್ಯಾಯ ಎಂದೇ ಬಿಂಬಿತವಾಗಿರುವ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ (ಎಜಿಐ) ಸೂಪರ್ ಹ್ಯೂಮನ್ ಮನುಷ್ಯರ ಎದುರು ನಿಲ್ಲುವುದಕ್ಕೆ 3-4 ವರ್ಷ ಮಾತ್ರ ಬಾಕಿ ಇದೆ. ಇದೇ ಹೊತ್ತಲ್ಲಿ ಸೂಪರ್ ಹ್ಯೂಮನ್ ಮಾನವೀಯತೆಯ ಪರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಡೀಪ್ ಮೈಂಡ್ ಸಿಇಒ ಮತ್ತು ಗೂಗಲ್​ನ ಎಐ ಮುಖ್ಯಸ್ಥ ಡಿಮಿಸ್ ಹಸ್ಸಾಬಿಸ್ ಪ್ರತಿಪಾದಿಸುವ ಮೂಲಕ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.

ಕಾವಲು ಪಡೆ ಅಗತ್ಯ: ಎಜಿಐಗೆ ಜಗತ್ತು ಹತ್ತಿರವಾಗುತ್ತಿದ್ದಂತೆ ಅದರಿಂದ ಎದುರಾಗುವ ಅಪಾಯಗಳನ್ನು ಪರಿಹರಿಸಿಕೊಳ್ಳಲು ತುರ್ತು ಕ್ರಮ ತೆಗೆದುಕೊಳ್ಳಬೇಕಾದ ಅಪಾಯವಿದೆ. ಫ್ರಾಂಟಿಯರ್ ಮಾದರಿಗಳು ಸೈಬರ್ ಭದ್ರತೆಗೆ ಒಡ್ಡುವ ಸವಾಲುಗಳನ್ನು ನಾವು ನೋಡಿದ್ದೇವೆ. ಎಐಗಳ ಸಾಮರ್ಥ್ಯ ಹೆಚ್ಚುತ್ತಿದ್ದಂತೆ ಪರಮಾಣು ಮತ್ತು ಜೈವಿಕ ಅಪಾಯಗಳು ಸೇರಿದಂತೆ ಇತರ ಬೆದರಿಕೆಗಳು ಹೆಚ್ಚಬಹುದು. ಹಾಗಾಗಿ ಇದನ್ನು ಎದುರಿಸಲು ಅಮೆರಿಕದ ನೇತೃತ್ವದಲ್ಲಿ ಜಾಗತಿಕ ಕಾವಲು ಪಡೆಯೊಂದನ್ನು ತುರ್ತಾಗಿ ರಚಿಸಬೇಕು ಎಂದು ಹಸ್ಸಾಬಿಸ್ ತಿಳಿಸಿದ್ದಾರೆ.

ಆತಂಕಕ್ಕೆ ಕಾರಣವೇನು?

ಪ್ರಸ್ತುತ ಎಐ ತನ್ನನ್ನು ತಾನೇ ಅಭಿವೃದ್ಧಿಪಡಿಸಿಕೊಳ್ಳುತ್ತಿದೆ. ಮಾನವ ಹಸ್ತಕ್ಷೇಪವಿಲ್ಲದೆ ಹೆಚ್ಚು ಸಮರ್ಥವಾದ ಉತ್ತರಾಧಿಕಾರಿಗಳನ್ನು ರಚಿಸಬಹುದು ಎಂಬುದನ್ನು ಆಂಥ್ರೋಪಿಕ್​ನ ಸಂಶೋಧನೆಗಳು ಈಗಾಗಲೇ ತೋರಿಸಿವೆ. ಹಾಗಾಗಿ ಭವಿಷ್ಯದಲ್ಲಿ ಹೆಚ್ಚುತ್ತಿರುವ ಏಜೆಂಟಿಕ್, ಪುನರಾವರ್ತಿತ ಸ್ವಯಂ ಸುಧಾರಿಸುವ ಎಐ ವ್ಯವಸ್ಥೆಗಳನ್ನು ನಿಯಂತ್ರಿಸಲು ದೃಢವಾದ ಸುರಕ್ಷತಾ ಕ್ರಮಗಳ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹೆಜ್ಜೆ ಇಡಲು ಸಮಯ ಮತ್ತು ಅವಕಾಶ ನೀಡಬೇಕು. ಆದರೆ ಒಂದು ವಿಶಾಲ ಸಮಾಜವಾಗಿ ನಾವು ಅದನ್ನು ಮಾಡುತ್ತಿಲ್ಲ ಎಂದು ಹಸ್ಸಾಬಿಸ್ ಆತಂಕ ಹೊರಹಾಕಿದ್ದಾರೆ.

ಏನಿದು ಎಜಿಐ?

ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಎಲ್ಲ ಅರಿವಿನ ಕಾರ್ಯಗಳಲ್ಲಿ ಮಾನವ ಸಾಮರ್ಥ್ಯಗಳಿಗೆ ಸರಿಸಮನಾದ ಅಥವಾ ಮಾನವರನ್ನು ಮೀರಿಸುವ ಕೃತಕ ಬುದ್ಧಿಮತ್ತೆಯ ಒಂದು ಪ್ರಕಾರವಾಗಿದೆ. ಇದು ಮನುಷ್ಯರ ಮೆದುಳು ಹೊಂದಿರುವ ಎಲ್ಲ ಅರಿವಿನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net