

ಆತ ಇನ್ನೂ ಹದಿನೈದರ ಬಾಲಕ. ಇನ್ನೇನು ಯೌವನಾವಸ್ಥೆಗೆ ಕಾಲಿಡಬೇಕಾದವ. ಎಸ್ಎಸ್ಎಲ್ಸಿ ಓದುತ್ತಿದ್ದ ಈತನಿಗೆ ಅದ್ಯಾವ ಗಳಿಗೆಯಲ್ಲಿ ಮೊಬೈಲ್ ಗೇಮ್ ಗೀಳು ಶುರುವಾಯ್ತೋ ಗೊತ್ತಿಲ್ಲ. ಅದರ ಸೆಳೆತಕ್ಕೆ ಸಿಕ್ಕು ಅದರಲ್ಲೇ ತಲ್ಲೀನನಾದ. ಅಪ್ಪ ಮೊಬೈಲ್ಗೆ
ಯಾಕೆ ಹೀಗಾಗುತ್ತಿದೆ, ಈ ಮಕ್ಕಳಿಗೆ ಏನಾಗಿದೆ ಎಂಬುದರ ಆತ್ಮಾವಲೋಕನ ಇಂದಿನ ತುರ್ತು ಅಗತ್ಯವಾಗಿದೆ. ಮಕ್ಕಳು ಪ್ರೌಡಾವಸ್ಥೆಗೆ ಬರುವ ಕಾಲದಲ್ಲಿ ಮನಸ್ಸು ಚಂಚಲಗೊಳ್ಳುವುದು ಸಹಜ. ಹೊಸ ಆಕರ್ಷಣೆಯತ್ತ ಸೆಳೆತವೂ ಸಹಜ. ಅದರಲ್ಲೂ ಈ ಮೊಬೈಲ್ ಎಂಬ ಮಾಯಾಂಗನೆಯ ಸೆಳೆತ ಬಹಳವೇ ಆತಂಕಕಾರಿ. ಅಂತರ್ಜಾಲ (ಇಂಟರ್ನೆಟ್) ಮತ್ತು ಸಾಮಾಜಿಕ ಜಾಲತಾಣಗಳ ಸಮರ್ಪಕ ಬಳಕೆಯಾಗದ ಕಾರಣ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದಕ್ಕೊಂದು ಉತ್ತಮ ನಿದರ್ಶನ ಮೃತ್ಯುರೂಪಿ ಗೇಮ್ ಸೃಷ್ಟಿಸಿರುವ ಅನಾಹುತ.
ಯಾವ ಮಕ್ಕಳಿಗೆ ಆಟ ಎಂದರೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟವೇ. ಆದರೆ ಆಟಗಳ ಆಯ್ಕೆ ಬದಲಾಗಿದೆ. ಮಕ್ಕಳು ಮೈದಾನ ಬಿಟ್ಟು ಮೊಬೈಲ್ ಆಯ್ಕೆ ಮಾಡಿಕೊಂಡಿದ್ದಾರೆ. ದಿನಪೂರ್ತಿ ಆನ್ಲೈನ್ ಗೇಮ್ಳಲ್ಲಿ ಮುಳುಗಿರುತ್ತಾರೆ. ಊಟದ ಅರಿವು ಇಲ್ಲವೇ ಪಾಠದ ಗೊಡವೆಯೇ ಇಲ್ಲ. ಇಂದು ಸ್ಮಾರ್ಟ್ಫೋನ್ ಇರದ ಮನೆಗಳೇ ಇಲ್ಲ. ಮಕ್ಕಳು ಇದರ ಬಿಗಿಮುಷ್ಟಿಗೆ ಸಿಲುಕಿ ನಲುಗುವುಂತಾಗಿರುವುದು ವಿಪರ್ಯಾಸವೇ ಸರಿ. ಮೊಬೈಲ್ ಗೇಮ್ಳು ಮಕ್ಕಳ ಬೌದ್ಧಿಕ ಗುಣಮಟ್ಟ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಅಭ್ಯಾಸದಲ್ಲಿ ಆಸಕ್ತಿ ಕ್ಷೀಣಿಸುವಂತೆ ಮಾಡುತ್ತವೆ. ಈ ಗೇಮ್ಳು ಮಕ್ಕಳ ಬುದ್ಧಿಗೆ ಸವಾಲೊಡ್ಡಿ ಅದನ್ನೇ ಸವಾಲಾಗಿ ಸ್ವೀಕರಿಸುವಂತೆ ಪ್ರೇರೇಪಿಸುತ್ತವೆ ಅಥವಾ ಉದ್ರೇಕಿಸುತ್ತವೆ.
ಹೆತ್ತವರ ಹೊಣೆ ಏನು?: ಮಾಧ್ಯಮಗಳಲ್ಲಿ ಗೇಮ್ ದುರಂತಗಳ ವರದಿಗಳು ಪ್ರಸಾರ ಮತ್ತು ಪ್ರಕಟಗೊಳ್ಳುತ್ತಿದ್ದಂತೆ ಇದರ ಬಗ್ಗೆ ಜಾಗೃತಿಯ ಮಾತು ಕೇಳಿಬರಲಾರಂಭಿಸಿವೆ. ಆದರೆ ಹೆತ್ತವರು ಮಕ್ಕಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದೇ ಆದರೆ ಇಂತಹ ತಂತ್ರಜ್ಞಾನದಿಂದ ಸಂಭವಿಸಬಹುದಾದ ದುರಂತಗಳನ್ನು ತಡೆಗಟ್ಟಬಹುದಾಗಿದೆ. ಮನೆಯಲ್ಲಿ ಕೂಡುಕುಟುಂಬ ಅಥವಾ ಅವಿಭಕ್ತ ಕುಟುಂಬ ವ್ಯವಸ್ಥೆ ಕಣ್ಮರೆಯಾಗಿದೆ. ಪಾಲಕರು ಕೆಲಸಕ್ಕೆ ಹೋಗುತ್ತಾರೆ. ಅಜ್ಜ-ಅಜ್ಜಿಯರು ಊರಲ್ಲೆಲ್ಲೋ ಇರುತ್ತಾರೆ. ಇದರಿಂದ ಮಕ್ಕಳಿಗೆ ನಮ್ಮವರು ತಮ್ಮವರು ಕಥೆ, ಹರಟೆ, ಪ್ರವಾಸ, ಪೇಟೆ ಎನ್ನುವುದರ ಗಂಧಗಾಳಿಯೇ ಇಲ್ಲದಂತಾಗಿದೆ. ಇದು ಏಕಾಂಗಿತನಕ್ಕೆ ಎಡೆಮಾಡಿಕೊಟ್ಟಿದೆ.
ಭಾವನಾತ್ಮಕ ಸಂವೇದನೆ ಎನ್ನುವ ಪದ ಅರ್ಥವನ್ನೇ ಕಳೆದುಕೊಂಡಿದೆ. ಆಗ ಕಣ್ಣಿಗೆ ಬೀಳುವುದು ಈ ಮೊಬೈಲ್ ಮತ್ತು ಅದರಲ್ಲಿನ ಇಂತಹ ಗೇಮ್ಳು. ಮಾನಸಿಕವಾಗಿ ದುರ್ಬಲವಿರುವ ಮಕ್ಕಳಂತೂ ಇಂತಹ ಗೇಮ್ ಸೆಳೆತಕ್ಕೆ ಸಿಕ್ಕರೆ ಕಥೆ ಮುಗಿದಂತೆಯೇ ಸರಿ. ನಿರ್ವಾಹಕ ಹಂತಹಂತವಾಗಿ ನೀಡುವ ಟಾಸ್ಕ್ ಪೂರೈಸುತ್ತ ಹೋದಂತೆ ಆತುರ ಹೆಚ್ಚುತ್ತ ಹೋಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಎಲ್ಲ ಟಾಸ್ಕ್ಗಳನ್ನು ಗೆದ್ದು ತ್ರಿವಿಕ್ರಮನಾಗಬೇಕು ಎನ್ನುವ ಹುಚ್ಚು ಛಲ ಹುಟ್ಟುತ್ತದೆ.
ಇದಕ್ಕೆ ಏನು ಪರಿಹಾರ?: ಪಾಲಕರು ಮಕ್ಕಳ ಚಲನವಲನ ಹಾಗೂ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದರ ಜತೆಗೆ ಸಾಮಾಜಿಕ ಬಾಂಧವ್ಯಗಳ ವೃದ್ಧಿಗೆ ಆದ್ಯತೆ ನೀಡಬೇಕು. ಮಕ್ಕಳನ್ನು ಒಂಟಿಯಾಗಿರಲು ಬಿಡದೆ ಸಿಕ್ಕಷ್ಟು ಸಮಯವನ್ನು ಅವರೊಡನೆ ಕಳೆಯಿರಿ. ಸಾಧ್ಯವಾದರೆ ಚಿಕ್ಕ ಪ್ರವಾಸ ಕೈಗೊಳ್ಳಿ. ನಿಮ್ಮ ಬಾಲ್ಯದ ದಿನಗಳನ್ನು ಅವರಿಗೆ ವಿವರಿಸಿ. ಹೊಲಗದ್ದೆಗಳತ್ತ ಕರೆದುಕೊಂಡು ಹೋಗಿ. ಪ್ರಪಂಚ ವಿಶಾಲವಾಗಿದೆ. ನಿಸರ್ಗದ ಕೌತುಕಗಳಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿ. ಪ್ರಾಣಿ-ಪಕ್ಷಿಗಳ ಪರಿಚಯ ಮಾಡಿಸಿ. ನಿಮ್ಮ ಮಕ್ಕಳ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಲ್ಲಿ ಎದೆಗುಂದದೆ ಮಾನಸಿಕ ತಜ್ಞ ವೈದ್ಯರತ್ತ ಕರೆದುಕೊಂಡು ಹೋಗಿ ಆಪ್ತಸಂವಾದ, ಸಲಹೆ ಕೊಡಿಸಿ.