ಸ್ವರ್ಗ-ನರಕದ ಪರಿಕಲ್ಪನೆ

hell heaven
Published on
ಡಾ. ಕೆ.ಪಿ. ಪುತ್ತೂರಾಯ
|ಡಾ. ಕೆ.ಪಿ. ಪುತ್ತೂರಾಯ

ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಸತ್ತ ಮೇಲೆ ಪ್ರಾಪ್ತವಾಗುವ ಸ್ವರ್ಗ-ನರಕಗಳ ಕಲ್ಪನೆ ಇದೆ. ಆದರೆ, ಸ್ವರ್ಗ-ನರಕಗಳೆಂಬುದು ನಿಜವಾಗಿಯೂ ಇವೆಯೇ? ಇದ್ದರೆ ಎಲ್ಲಿವೆ ? ಎಂಬ ಪ್ರಶ್ನೆಗಳಿಗೆ ಖಚಿತವಾದ ಉತ್ತರವಿಲ್ಲ. ಕಾರಣ ಅಲ್ಲಿಗೆ ಹೋಗಿ ಮರಳಿ ಬಂದವರಿಲ್ಲ. ಅಲ್ಲಿಯ ವಿವರಗಳನ್ನು ತಿಳಿದು ಹೇಳಿದವರಿಲ್ಲ. ಈ ಸತ್ಯವನ್ನೇ ಡಿ.ವಿ.ಜಿ.ಯವರು ಪ್ರಸ್ತಾಪಿಸಿದ್ದು ಹೀಗೆ. ಮರಣದಿಂ ಮುಂದೇನ್ ? ಪ್ರೇತವೋ ಭೂತವೋ, ಪರಲೋಕವೋ ಪುನರ್ ಜನ್ಮವೋ? ಅದೇನೋ ತಿರುಗಿ ಬಂದವರಿಲ್ಲ. ವರದಿ ತಂದವರಿಲ್ಲ; ಧರೆಯ ಬಾಳ್ಗದರಿನೇಂ ಮಂಕುತಿಮ್ಮ.

ಆದರೂ ಸತ್ತ ಮೇಲೆ ಸ್ವರ್ಗ-ನರಕವೆಂಬುದೊಂದಿದೆ. ಅದು ಜೀವಿತಾವಧಿಯಲ್ಲಿನ ನಮ್ಮ ಕರ್ವನುಸಾರವಾಗಿ ಪ್ರಾಪ್ತವಾಗುತ್ತದೆ. ಜೀವದಲ್ಲಿರುವಾಗ ಸತ್ಕಾರ್ಯಗಳನ್ನು, ಒಳ್ಳೆಯದನ್ನು ಮಾಡಿದರೆ ಸತ್ತ ಮೇಲೆ ಸ್ವರ್ಗ, ದುಷ್ಕೃತ್ಯಗಳನ್ನು, ಕೆಟ್ಟದ್ದನ್ನು ಮಾಡಿದರೆ ನರಕವೆಂಬುದನ್ನು ನಮಗೆ ಬಾಲ್ಯದಿಂದಲೂ ಹೇಳಿಕೊಡಲಾಗುತ್ತದೆ. ಮಾತ್ರವೇ ಅಲ್ಲ. ಸ್ವರ್ಗವೆಂದರೆ ಸಾವೇ ಇಲ್ಲದ ಸುಖ-ಸಂತೋಷಗಳ ತಾಣ; ನರಕವೆಂದರೆ ನೋವು ಯಾತನೆಗಳ ಉಗ್ರಾಣ, ಅಲ್ಲಿ ನಮ್ಮ ದೇಹವನ್ನು ನಾನಾ ರೀತಿಯಲ್ಲಿ ದಂಡಿಸಲಾಗುತ್ತದೆ. ಉರಿಯುವ ಬೆಂಕಿಯಲ್ಲಿ ಹಾಕುತ್ತಾರೆ: ಕುದಿಯುವ ಎಣ್ಣೆಯಲ್ಲಿ ಸುಡುತ್ತಾರೆ. ಎಂಬ ಭಯಾನಕ ಕತೆಗಳನ್ನು ಹಿರಿಯರು ಮಕ್ಕಳಿಗೆ ಹೇಳುವುದುಂಟು. ಆದರೆ, ಆಧ್ಯಾತ್ಮಿಕವಾಗಿಯೂ, ವೈಜ್ಞಾನಿಕ ವಾಗಿಯೂ, ಇಂತಹ ವಿವರಣೆಗಳಿಗೆ ಯಾವ ಸಮರ್ಪಕವಾದ ಉತ್ತರವೂ ಇಲ್ಲ. ಆಧ್ಯಾತ್ಮಿಕವಾಗಿ ನೋಡಿದರೆ, ಆತ್ಮವೆಂಬುದು ನಿರ್ವಿಕಾರ. ಅದು ನಮ್ಮ ಜೀವಿತಾವಧಿಯಲ್ಲಿ ನಮ್ಮ ಜೀವದೊಡನೆ ಜೀವಾತ್ಮನ ರೂಪದಲ್ಲಿ ಬಾಳ ಸಂಗಾತಿಯಾಗಿರುವ ಶಕ್ತಿ ಸ್ವರೂಪಿಯಾಗಿರುವ ಪರಮಾತ್ಮನ ಅಂಶ. ಸಾವು ಎಂದರೆ, ಆತ್ಮ, ಜೀವವನ್ನು ತೊರೆದು, ಜೀವದಿಂದ ಬೇರ್ಪಟ್ಟು ಜೀವವನ್ನು ಜಡವಾಗಿಸುವ ಒಂದು ಪ್ರಕ್ರಿಯೆ. ಜೀವದಿಂದ ಬೇರ್ಪಟ್ಟ ಆತ್ಮಕೆ ಸಾವು ನೋವು ಗಳೆಂದಿಲ್ಲ. ಕಾರಣ ಅದು ಒಂದು ಶಕ್ತಿ ಸ್ವರೂಪಿ ಚೈತನ್ಯ. ಮತ್ತೆ ವೈಜ್ಞಾನಿಕವಾಗಿ ನೋಡಿ ದರೆ, ಸತ್ತಮೇಲೆ ಮಣ್ಣಲ್ಲಿ ಮಣ್ಣಾಗುವ, ಇಲ್ಲವೇ ಬೆಂಕಿಯಲ್ಲಿ ಸುಟ್ಟು ಬೂದಿಯಾಗುವ ಜೀವ ನಮ್ಮದು. ಇಂತಹ ಜೀವವೇ ಇಲ್ಲವೆಂದ ಮೆಲೆ, ಸ್ವರ್ಗದಲ್ಲಿ ಸುಖಪಡಲು ಇಲ್ಲವೆ ನರಕದಲ್ಲಿ ಯಾತನೆ ಪಡಲು ಹೇಗೆ ಸಾಧ್ಯ? ಯಾವುದರಿಂದ ಸಾಧ್ಯ?

ಅಂದ ಮೆಲೆ, ಈ ಸ್ವರ್ಗ-ನರಕದ ಪರಿಕಲ್ಪನೆ ಏಕೆ ಮತ್ತು ಹೇಗೆ ಪ್ರಾರಂಭವಾಯಿತು ಎಂಬುದು ಪ್ರಶ್ನೆ. ಬಹುಶಃ ಇದು ಒಳ್ಳೆಯ ಕೆಲಸ ಮಾಡಿದರೆ, ಸತ್ತ ಮೇಲೆ ಸ್ವರ್ಗ, ಕೆಟ್ಟ ಕೆಲಸ ಮಾಡಿದರೆ ನರಕ ಎಂಬ ನಂಬಿಕೆಯನ್ನು ಹುಟ್ಟಿಸುತ್ತ ಜನರನ್ನು ಕೆಟ್ಟ ಕೆಲಸ ಮಾಡದಂತೆ, ಒಳ್ಳೆಯ ಕೆಲಸ ಮಾಡುವಂತೆ ಪ್ರೇರೇಪಿಸುವ ಪ್ರಯತ್ನವೆನ್ನಬಹುದು; ಎಚ್ಚರಿಕೆಯ ಸಂದೇಶವಿದು ಎಂದು ತಿಳಿದುಕೊಳ್ಳಬೇಕು.

ಆಚಾರವೇ ಸ್ವರ್ಗ, ಅನಾಚಾರವೇ ನರಕ, ಕೂಡಲ ಸಂಗಮ ದೇವ ನೀವೆ ಪ್ರಮಾಣರು ಎಂದರು ಜಗಜ್ಯೋತಿ ಬಸವಣ್ಣನವರು. ಇದಕ್ಕೆ ಅಯ್ಯಾ ಎಂದರೆ ಸ್ವರ್ಗ ಅಯ್ಯೋ ಎಂದರೆ ನರಕವೆಂದರು, ಬಲ್ಲವರು. ನಮ್ಮ ಸುತ್ತಮುತ್ತ ಸ್ವರ್ಗಮಯವಾದ ವಾತಾವರಣ ಸೃಷ್ಟಿಸಲು ಎಲ್ಲರೂ ಪ್ರಯತ್ನಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net