

ಸಸ್ಯಾಹಾರವು ದೇಹಕ್ಕೆ, ಮನಸ್ಸಿಗೆ ಒಳ್ಳೆಯದಾದರೂ ಕೆಲವು ಕೊರತೆಗಳೂ ಇವೆ. ಮುಖ್ಯವಾಗಿ ಇರುವ ಸಮಸ್ಯೆಯೆಂದರೆ ಪ್ರೋಟೀನ್ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಗುಣಮಟ್ಟದಲ್ಲಿ ಸಿಗದೇ ಹೋಗುವುದು. ಮಾಂಸಾಹಾರಿಗಳಿಗೆ ಮಾಂಸ, ಮೀನು, ಮೊಟ್ಟೆಗಳಲ್ಲಿ ಪ್ರೋಟೀನ್ ಸುಲಭವಾಗಿ ಸಿಕ್ಕಿಬಿಡುತ್ತದೆ. ಆದರೆ ಸಸ್ಯಾಹಾರಿಗಳು ತುಂಬಾ ಯೋಚಿಸಿ, ಯೋಜಿಸಿ ಪ್ರೋಟೀನ್ ಅನ್ನು ಪಡೆಯಬೇಕಾಗುತ್ತದೆ.
ಪ್ರೋಟೀನ್ ನಮ್ಮ ದೇಹಕ್ಕೆ ಹಲವಾರು ವಿಷಯಗಳಲ್ಲಿ ಅತ್ಯಂತ ಅವಶ್ಯಕವಾಗಿರುವುದು. ಮಾಂಸಖಂಡಗಳ ಬೆಳವಣಿಗೆಗೆ, ಜೀವಕೋಶಗಳಿಗೆ ಸರಿಯಾದ ರೀತಿಯ ಶಕ್ತಿ ಇರಲು, ದೇಹ ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳಲು, ಎಷ್ಟೋ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸಲು... ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಕಾರ್ಯಗಳಿಗೆ ಬೇಕಾಗುತ್ತದೆ. ಅಮೈನೋ ಆಸಿಡ್ಗಳೆಂಬ ಘಟಕಗಳಿಂದ ಪ್ರೋಟೀನ್ ತಯಾರಾಗುತ್ತದೆ. ಒಟ್ಟು ಇಪ್ಪತ್ತು ರೀತಿಯ ಅಮೈನೋ ಆಸಿಡ್ಗಳಲ್ಲಿ ನಮ್ಮ ದೇಹವು ಹನ್ನೊಂದನ್ನು ತಾನೇ ತಯಾರು ಮಾಡಿಕೊಳ್ಳುತ್ತದೆ. ಆದರೆ ಉಳಿದ ಒಂಬತ್ತನ್ನು ನಾವು ಆಹಾರದ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ.
ಪ್ರಾಣಿಜನ್ಯ ಪ್ರೋಟೀನ್ (ಮಾಂಸ, ಮೊಟ್ಟೆ, ಹಾಲು ಇತ್ಯಾದಿ) ಗಳು ಪೂರ್ಣ ಆಸಿಡ್ಗಳು. ಏಕೆಂದರೆ, ಇವುಗಳಲ್ಲಿ ಎಲ್ಲಾ ಒಂಬತ್ತು ಅವಶ್ಯಕ ಅಮೈನೋ ಆಸಿಡ್ಗಳು ಸರಿಯಾದ ಪ್ರಮಾಣದಲ್ಲಿ ಸಿಗುತ್ತವೆ. ಆದರೆ ಸಸ್ಯಾಹಾರದಿಂದ ಸಿಗುವ ಪೋ›ಟೀನ್ಗಳಲ್ಲಿ ಒಂದೇ ಕಡೆ ಎಲ್ಲವೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ಸರಿಯಾದ ರೀತಿಯ ಯೋಜನೆ ಅವಶ್ಯಕ. ಅಂದರೆ ಒಂದೇ ಊಟದಲ್ಲಿ ಎಲ್ಲಾ ರೀತಿಯ ಅಮೈನೋ ಆಸಿಡ್ಗಳು ಸಿಗುವಂತಹ ಎಲ್ಲಾ ತರದ ಪದಾರ್ಥಗಳನ್ನು ಸೇವಿಸಬೇಕೆಂದು ಅರ್ಥವಲ್ಲ. ಬದಲಿಗೆ ಒಂದೊಂದು ಊಟದಲ್ಲಿ ಒಂದೊಂದು ರೀತಿಯ ಪದಾರ್ಥಗಳನ್ನು ಬಳಸುತ್ತಾ ಹೋದರೆ ಎಲ್ಲವೂ ಲಭ್ಯವಾಗುತ್ತವೆ. ನಮ್ಮ ದೇಶದಲ್ಲಿ ಬಹುತೇಕ ಎಲ್ಲರಲ್ಲಿಯೂ ಪ್ರೋಟೀನ್ನ ಕೊರತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಅದರಲ್ಲಿಯೂ ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಈ ಕೊರತೆಯ ಪ್ರಮಾಣ ಅತಿಯಾಗಿದೆ. ಹಾಗಾಗಿ ಇದರ ಬಗ್ಗೆ ಯೋಚಿಸಲೇಬೇಕು.
ಮೊದಲನೆಯದಾಗಿ ಸಸ್ಯಾಹಾರಿಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಪ್ರೋಟೀನ್ ಅನ್ನು ಪೂರೈಸಿಕೊಳ್ಳಬೇಕು. ಪ್ರತಿದಿನವೂ ಕನಿಷ್ಠ ಒಂದು ಲೋಟ ದೇಸೀ ತಳಿಯ, ಹುಲ್ಲು ಮೆಂದ ಆಕಳ ಹಾಲನ್ನು ಸೇವಿಸುವ ರೂಢಿ ಮಾಡಿಕೊಂಡರೆ ತುಂಬಾ ಒಳ್ಳೆಯದು. ವಾರದಲ್ಲಿ ಒಂದೆರಡು ದಿನವಾದರೂ ಮೊಸರನ್ನು ಸೇವಿಸಬೇಕು. ಇನ್ನುಳಿದ ಹಾಲಿನ ಉತ್ಪನ್ನಗಳನ್ನು ಕೂಡ ಆಗಾಗ ಬಳಸುತ್ತಿರುವುದರಿಂದ ಪೂರ್ಣ ಪ್ರೋಟೀನ್ ಚೆನ್ನಾಗಿ ಸಿಗುತ್ತದೆ. ಬೇಳೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಲಭ್ಯವಾಗುತ್ತದೆ. ಉದಾಹರಣೆಗೆ ಹೆಸರುಬೇಳೆ, ಉದ್ದಿನ ಬೇಳೆ, ತೊಗರಿ ಬೇಳೆ, ಶೇಂಗಾ ಇತ್ಯಾದಿ ಎಲ್ಲ ರೀತಿಯ ದ್ವಿದಳ ಧಾನ್ಯಗಳಲ್ಲಿಯೂ ಬೇರೆ ಬೇರೆ ರೀತಿಯ ಪ್ರೋಟೀನ್ ಲಭ್ಯವಾಗುತ್ತದೆ. ನಟ್ಗಳು ಮತ್ತು ಬೀಜಗಳಲ್ಲಿ ಕೂಡ ವಿಶೇಷ ರೀತಿಯ ಪ್ರೋಟೀನ್ ಸಿಗುತ್ತದೆ. ಉದಾಹರಣೆಗೆ ಬಾದಾಮಿ, ವಾಲ್ನಟ್, ಚಿಯಾ ಬೀಜಗಳು, ಅಗಸೆ ಬೀಜ, ಕುಂಬಳ ಬೀಜ, ಬೂದುಗುಂಬಳ ಬೀಜ, ಸೂರ್ಯಕಾಂತಿ ಬೀಜ ಇತ್ಯಾದಿ.
ಪಾಲಿಶ್ ಮಾಡದ ಧಾನ್ಯಗಳಲ್ಲಿ ಕೂಡ ಒಳ್ಳೆಯ ಪ್ರಮಾಣದ, ಒಳ್ಳೆಯ ಗುಣಮಟ್ಟದ ಪ್ರೋಟೀನ್ ಸಿಗುತ್ತದೆ. ಉದಾಹರಣೆಗೆ ಪಾಲಿಶ್ ಮಾಡದೆ ಇರುವ ಅಕ್ಕಿ, ಓಟ್ಸ್, ಗೋಧಿ ಇತ್ಯಾದಿ. ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ ಅವನ ಒಂದು ಕೆಜಿ ತೂಕಕ್ಕೆ 0.8ಗ್ರಾಂ ನಷ್ಟು ಪೋ›ಟೀನ್ಅವಶ್ಯಕ ಎಂದು ಹೇಳಲಾಗಿದೆ. ಅಂದರೆ 70 ಕೆಜಿ ತೂಗುವ ವ್ಯಕ್ತಿಗೆ ಕನಿಷ್ಠ 56 ಗ್ರಾಂ ನಷ್ಟು ಪೋ›ಟೀನ್ ಅವಶ್ಯಕ. ತುಂಬಾ ದೈಹಿಕ ಶ್ರಮವನ್ನು ಮಾಡುವವರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಹಾಗಾಗಿ ಸಸ್ಯಾಹಾರಿಗಳು ತಮ್ಮ ಊಟದಲ್ಲಿ ಪ್ರೋಟೀನ್ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕಾಗಿರುವುದು ಅತ್ಯಂತ ಅನಿವಾರ್ಯ. ಅದಕ್ಕಾಗಿ ಸೋಯಾಬೀನ್, ಸಿರಿಧಾನ್ಯಗಳು, ನಟ್ಗಳು, ಬೀಜಗಳು, ದ್ವಿದಳ ಧಾನ್ಯಗಳು, ಪಾಲಿಶ್ ಮಾಡದ ಏಕದಳ ಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು. ಇಲ್ಲದೆ ಹೋದರೆ ಹಲವಾರು ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.