

ಬೆಂಗಳೂರು: ಓಲ್ಡ್ ಈಸ್ ಗೋಲ್ಡ್ ಎಂಬುದು ಬಹಳ ಸಂದರ್ಭದಲ್ಲಿ ಸಾಬೀತಾಗುವ ಮಾತು. ಆಧುನಿಕತೆ, ಜಾಗತಿಕ ಬೆಳವಣಿಗೆ ಇತ್ಯಾದಿ ಪರಿವರ್ತನೆಗಳ ನಡುವೆಯೂ ಆ್ಯಂಟಿಕ್ ಟ್ರೆಂಡ್ ದಿನೇ ದಿನೇ ಎಲ್ಲೆಡೆ ವ್ಯಾಪಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊಸದಾಗಿ ನಿರ್ಮಿಸುವ ಮನೆಯ ಅಲಂಕಾರದಲ್ಲಿ ಆ್ಯಂಟಿಕ್ ಟ್ರೆಂಡ್‌ನದ್ದು ಸಿಂಹಪಾಲು.
ಹೊಸ ಮನೆ ಕಟ್ಟಿಸುವವರು ಮನೆಯ ಇಂಟಿರೀಯರ್ ಡಿಸೈನ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಮನೆ ಚಿಕ್ಕದಿರಲಿ, ದೊಡ್ಡ ಬಂಗಲೆಯೇ ಇರಲಿ, ಮನೆಯ ವ್ಯಾಪ್ತಿ ಮತ್ತು ಗಾತ್ರಕ್ಕೆ ತಕ್ಕ ಹಾಗೆ ಎಲ್ಲರೂ ಇಂಟೀರಿಯರ್ ಡಿಸೈನ್ ಮಾಡಿಸಲೇ ಬೇಕು. ಹಾಗೆ ಇಂಟೀರಿಯರ್ ಡಿಸೈನ್ ಮಾಡಿಸುವಾಗ ಆ್ಯಂಟಿಕ್ ಶೈಲಿಯಲ್ಲಿ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಬಾಗಿಲು, ಕಿಟಕಿ, ಶೋಕೇಸ್, ಕಬೋರ್ಡ್ ಎಲ್ಲ ಕಟ್ಟಿಗೆ ಕೆಲಸವನ್ನು ಪುರಾತನ ಶೈಲಿಯಲ್ಲಿ ಮಾಡಿಸುವುದು ಸದ್ಯದ ಟ್ರೆಂಡ್.
ಗೃಹಪ್ರವೇಶದ ನಂತರ ಮನೆಯಲ್ಲಿನ ರ್ನಿಚರ್ ಕೂಡಾ ಪುರಾತನ ಶೈಲಿಯಲ್ಲಿ ಮಾಡಿಸುತ್ತಾರೆ. ಹಳೆಯ ಕಾಲದ ಐಷಾರಾಮಿ ಪೀಠೋಪಕರಣಗಳಾದ ಮೇಜು, ಕುರ್ಚಿ, ರಾಯಲ್ ಡೈನಿಂಗ್ ಟೇಬಲ್, ಮಹಾರಾಜ ಮಂಚ, ಬೃಹತ್ ಗಾತ್ರದ ಮರದ ಪೆಟ್ಟಿಗೆಗಳು, ಮಾರ್ಬಲ್ ಟೇಬಲ್, ಡ್ರೆಸಿಂಗ್ ಟೇಬಲ್, ಸುಂದರ ಕೆತ್ತನೆಗಳ ಚೌಕಟ್ಟಿರುವ ಕನ್ನಡಿಗಳು ಹೀಗೆ ರಾಜ-ಮಹಾರಾಜರು ಬಳಸುತ್ತಿದ್ದ ಮಾದರಿಯ ಆ್ಯಂಟಿಕ್ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವುಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ಹಳೇಯ ವಸ್ತುಗಳ ಖರೀದಿಗೆ ಬದಲಾಗಿ ಕೆಲವರು ಅದೇ ಪುರಾತನ ಶೈಲಿಯಲ್ಲಿ ಹೊಸದಾಗಿ ಪೀಠೋಪಕರಣಗಳನ್ನು ಮಾಡಿಸುತ್ತಿದ್ದಾರೆ.
ಅಡುಗೆ ಮನೆ ವಸ್ತುಗಳಲ್ಲೂ ಪುರಾತನ ಶೈಲಿಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ಇದ್ದಂತಹ ಹಿತ್ತಾಳೆ ಮತ್ತು ತಾಮ್ರದ ತಟ್ಟೆ, ಲೋಟಗಳನ್ನು ಮರಳಿ ಬಳಸಲಾಗುತ್ತಿದೆ. ಅಲಂಕಾರದ ಜೊತೆಗೆ ಆರೋಗ್ಯದ ಕಾಳಜಿ ಕೂಡಾ ಆ್ಯಂಟಿಕ್ ಟ್ರೆಂಡ್ ಹಿಂದಿರುವುದು ಬದಲಾವಣೆಗೆ ಪ್ರಮುಖ ಕಾರಣ.
ಶ್ರೀಮಂತರಾಗಿದ್ದರೆ ಆ್ಯಂಟಿಕ್ ಟ್ರೆಂಡ್‌ನ್ನು ಪೂರ್ಣ ಅಳವಡಿಸಕೊಳ್ಳಲು ಇನ್ನೂ ಹೆಚ್ಚಿನ ಹಣ ವ್ಯಯಿಸುತ್ತಾರೆ. ವಿಂಟೇಜ್ ಕಾರ್, ವಿಂಟೇಜ್ ಬೈಕ್‌ಗಳು ಕೂಡಾ ಆ್ಯಂಟಿಕ್ ಟ್ರೆಂಡ್‌ನ ಭಾಗವಾಗಿವೆ. ಜೊತೆಗೆ ಆ್ಯಂಟಿಕ್ ಶೈಲಿ ಆಭರಣಗಳದ್ದಂತು ಬಹುದೊಡ್ಡ ಮಾರುಕಟ್ಟೆ. ಎಲ್ಲ ಜುವೆಲ್ಲರಿ ಶಾಪ್‌ಗಳಲ್ಲಿ ಆ್ಯಂಟಿಕ್ ಮಾದರಿ ಆಭರಣಗಳದ್ದೇ ಪ್ರತ್ಯೇಕ ವಿಭಾಗವಿರುತ್ತದೆ.
ಮನೆಯ ಅಲಂಕಾರಕ್ಕೆ ಪುರಾತನ ವಿಗ್ರಹಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆ್ಯಂಟಿಕ್ ವಿಗ್ರಹಗಳ ಸಂಗ್ರಹ ಕೆಲವರ ಹವ್ಯಾಸವೂ ಆಗಿರುತ್ತದೆ. ಸಂಗ್ರಹಿಸದ ಆ್ಯಂಟಿಕ್ ವಿಗ್ರಹಗಳನ್ನು ಮನೆಯ ಅಲಂಕಾರಕ್ಕೆ ಬಳಸುತ್ತಾರೆ. ಆ್ಯಂಟಿಕ್ ವಿಗ್ರಹಗಳಲ್ಲಿ ದೇವರ ವಿಗ್ರಹಗಳೇ ಹೆಚ್ಚಾಗಿರುತ್ತವೆ. ಗಣಪತಿ, ಕೃಷ್ಣ, ಲಕ್ಷ್ಮೀ, ಸರಸ್ವತಿ, ನಟರಾಜ ಇತ್ಯಾದಿ ದೇವರ ವಿಗ್ರಹಗಳು ಮನೆಯ ಅಲಂಕಾರ ಹೆಚ್ಚಿಸುವುದರ ಜೊತೆಗೆ ನೋಡುಗರ ಕಣ್ಮನ ಸೆಳೆಯುತ್ತವೆ.
ದೇವರ ವಿಗ್ರಹ ಹೊರತು ಪಡಿಸಿ ಕೆಲವು ಪ್ರಾಣಿಗಳ ಆ್ಯಂಟಿಕ್ ವಿಗ್ರಹ ಕೂಡಾ ಹೆಚ್ಚೆಚ್ಚು ಬಳಕೆಯಾಗುತ್ತವೆ. ಅವುಗಳಲ್ಲಿ ಆನೆ, ನವಿಲು, ಕಾಮಧೇನು ವಿಗ್ರಹಗಳು ಹೆಚ್ಚಾಗಿರುತ್ತವೆ.
ಇನ್ನು ಆಗಾಗ ಬದಲಿಸುವ ವಸ್ತುಗಳಲ್ಲೂ ಆ್ಯಂಟಿಕ್ ಟ್ರೆಂಡ್ ಬಂದಿದೆ. ಅಂತಹವುಗಳಲ್ಲಿ ಮನೆಯ ಅಲಂಕಾರ ಹೆಚ್ಚಿಸುವ ಕಾರ್ಪೆಟ್‌ಗಳು, ಸೋಫಾ ಕವರ್, ಗಡಿಯಾರ, ಪೇಂಟಿಂಗ್ಸ್ ಇತ್ಯಾದಿ ಹೆಸರಿಸಬಹುದು.
ಆ್ಯಂಟಿಕ್ ವಸ್ತುಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾದಂತೆ, ಮಾರುಕಟ್ಟೆಯಲ್ಲಿ ಆ್ಯಂಟಿಕ್ ಶಾಪ್‌ಗಳು ಕೂಡಾ ಹೆಚ್ಚಾಗಿವೆ. ಮೊದಲೆಲ್ಲಾ ಗ್‌ಟಿ, ನಾವೆಲ್ಟಿ ಸ್ಟೋರ್ಸ್‌ಗಳಲ್ಲಿ ಆ್ಯಂಟಿಕ್ ವಿಗ್ರಹಗಳು ಮಾತ್ರ ಸಿಗುತ್ತಿದ್ದವು. ಆದರೆ ಈಗ ಹಾಗಲ್ಲ; ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಲ್ಲ ಬಗೆಯ ಆ್ಯಂಟಿಕ್ ವಸ್ತುಗಳು ಕೂಡಾ ಒಂದೇ ಶಾಪ್‌ನಲ್ಲಿ ಸಿಗುತ್ತವೆ.
ಕಟ್ಟಿಗೆ, ಲೋಹ, ಪಿಂಗಾಣಿ, ಮಾರ್ಬಲ್, ಪೇಂಟಿಗ್ಸ್ ಇತ್ಯಾದಿ ಎಲ್ಲ ವಸ್ತುಗಳು ಕೂಡಾ ಆ್ಯಂಟಿಕ್ ಶಾಪ್‌ನಲ್ಲಿ ದೊರೆಯುತ್ತವೆ. ಬೆಂಗಳೂರಿನಲ್ಲಿ ಇಂತಹ ಆ್ಯಂಟಿಕ್ ಶಾಪ್‌ಗಳು ಹಲವೆಡೆ ಇವೆ.