

ಕೈಗಳನ್ನು ಬಳಸದೇ, ಕೇವಲ ಮನಸ್ಸಿನಲ್ಲಿ ಯೋಚಿಸಿಯೇ ಕಂಪ್ಯೂಟರನ್ನು ಅಥವಾ ಮೊಬೈಲ್ ಫೋನನ್ನು ನಿಯಂತ್ರಿಸುವ ಹೊಸ ತಂತ್ರಜ್ಞಾನವೇ ‘ಬ್ರೖೆನ್-ಕಂಪ್ಯೂಟರ್ ಇಂಟರ್ಫೇಸ್’. ಮನುಷ್ಯನ ಮಿದುಳಿನಲ್ಲಿ ಕೂರಿಸುವ ಒಂದು ಪುಟ್ಟ ಚಿಪ್, ಆತನ ಆಲೋಚನೆಗಳಿಂದ ಹೊರಹೊಮ್ಮುವ ನರಗಳ ತರಂಗಗಳನ್ನು ಗ್ರಹಿಸಿ, ಅದನ್ನು ಕಂಪ್ಯೂಟರ್ ಭಾಷೆಗೆ ಪರಿವರ್ತಿಸುತ್ತದೆ. ಪಾರ್ಶ್ವವಾಯು ಪೀಡಿತರು, ಕೈಕಾಲು ಸ್ವಾಧೀನ ಕಳೆದುಕೊಂಡ ರೋಗಿಗಳು ಕೇವಲ ಯೋಚನೆ ಮಾಡುವ ಮೂಲಕವೇ ಸ್ಕ್ರೀನ್ ಮೇಲೆ ಟೈಪ್ ಮಾಡಲು, ಗೇಮ್ ಆಡಲು ಮತ್ತು ಸಂವಹನ ನಡೆಸಲು ಈ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ. ಆದರೆ, ಇದನ್ನೇ ಬಳಸಿ ನಮ್ಮ ಮನಸ್ಸಿನ ಖಾಸಗಿ ಆಲೋಚನೆಗಳನ್ನು ಇತರರು ಹ್ಯಾಕ್ ಮಾಡುವ ಅಪಾಯವೂ ಇದೆ. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ.
ಹಾಲಿವುಡ್ನ ಕೆಲವು ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ನೀವು ನೋಡಿರಬಹುದು, ನಾಯಕ ಅಥವಾ ವಿಲನ್ ಕೇವಲ ಕಣ್ಣು ಮುಚ್ಚಿ ಯೋಚಿಸಿದ ತಕ್ಷಣ ಅವರ ಎದುರಿಗಿರುವ ಬಾಗಿಲು ತೆರೆಯುತ್ತದೆ, ಬೃಹತ್ ಪರದೆಯ ಮೇಲೆ ತನ್ನಿಂತಾನೇ ಮೆಸೇಜ್ಗಳು ಟೈಪ್ ಆಗತೊಡಗುತ್ತವೆ ಅಥವಾ ರೋಬಾಟ್ಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ... ಇಷ್ಟು ದಿನ ಇದೆಲ್ಲವೂ ಕೇವಲ ಕಲ್ಪನೆ ಅಥವಾ ಸಿನಿಮಾಗಳಿಗೆ ಸೀಮಿತವಾಗಿತ್ತು. ಆದರೆ ಈಗ ತಂತ್ರಜ್ಞಾನ ಎಲ್ಲಿಗೆ ತಲುಪಿದೆಯೆಂದರೆ ಈ ಕಲ್ಪನೆ ಕೂಡ ನಿಜ ಜೀವನದ ವಾಸ್ತವವಾಗುತ್ತಿದೆ. ಕೈಗಳಲ್ಲಿ ಸ್ಮಾರ್ಟ್ಫೋನ್ ಹಿಡಿದು ಸ್ಕ್ರೀನ್ ಮೇಲೆ ಬೆರಳು ಆಡಿಸದೇ, ಕಂಪ್ಯೂಟರ್ ಮುಂದೆ ಕುಳಿತು ಮೌಸ್ ಅಥವಾ ಕೀಬೋರ್ಡನ್ನು ಬಳಸದೇ, ಕೇವಲ ನಮ್ಮ ಮಿದುಳಿನ ಆಲೋಚನೆಯ ಮೂಲಕವೇ ಡಿಜಿಟಲ್ ಸಾಧನಗಳನ್ನು ನಿಯಂತ್ರಿಸುವ ತಂತ್ರಜ್ಞಾನವೇ ಬ್ರೖೆನ್-ಕಂಪ್ಯೂಟರ್ ಇಂಟರ್ಫೇಸ್ (ಬಿಸಿಐ). ಇದು ಮಾನವಕುಲದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ತಂತ್ರಜ್ಞಾನ ಎಂದು ಪರಿಗಣಿಸಲಾಗುತ್ತಿದೆ.
ಮಾನವನ ಮಿದುಳು ಮತ್ತು ಕಂಪ್ಯೂಟರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನದ ನಡುವೆ ನೇರ ಸಂಪರ್ಕ ಕಲ್ಪಿಸುವ ಡಿಜಿಟಲ್ ಸೇತುವೆ ಇದು. ಸಾಮಾನ್ಯವಾಗಿ ನಾವು ಕಂಪ್ಯೂಟರ್ ಬಳಸುವಾಗ, ಪ್ರಕೃತಿಯ ನಿಯಮದಂತೆ ಕೈ ಬೆರಳುಗಳಿಗೆ ನಮ್ಮ ಮಿದುಳು ವಿವಿಧ ನರಗಳ ಮೂಲಕ ಆದೇಶಗಳನ್ನು ನೀಡುತ್ತದೆ. ನಂತರ ಬೆರಳುಗಳು ಮೌಸ್ ಅಥವಾ ಕೀಬೋರ್ಡನ್ನು ಚಲಾಯಿಸುತ್ತವೆ. ಅಂದರೆ ‘ಮಿದುಳು- ನರಮಂಡಲ- ಸ್ನಾಯುಗಳು- ಚಲನೆ- ಕಂಪ್ಯೂಟರ್’ ಎಂಬ ಸರಪಳಿ ಕೆಲಸ ಮಾಡುತ್ತದೆ. ಆದರೆ ಬಿಸಿಐ ತಂತ್ರಜ್ಞಾನದಲ್ಲಿ ಈ ಮಧ್ಯದ ಹಂತಗಳಾದ ಸ್ನಾಯುಗಳ ಚಲನೆ ಹಾಗೂ ಕೀಬೋರ್ಡ್- ಮೌಸ್ಗಳ ಅಗತ್ಯವೇ ಇರುವುದಿಲ್ಲ! ಮಿದುಳಿನ ಆಲೋಚನೆ ನೇರವಾಗಿ ಕಂಪ್ಯೂಟರ್ಗೆ ತಲುಪಿ ಕೆಲಸ ಮಾಡುತ್ತದೆ.
ನಮ್ಮ ಮಿದುಳು ಕೋಟಿಗಟ್ಟಲೆ ನ್ಯೂರಾನ್ಗಳಿಂದ (ನರಕೋಶ) ರಚನೆಯಾಗಿದೆ. ನಾವು ಯಾವುದಾದರೂ ಕ್ರಿಯೆಯನ್ನು ಕೈಗೊಳ್ಳಬೇಕೆಂದು ಬಗ್ಗೆ ಆಲೋಚಿಸಿದಾಗ, ಉದಾಹರಣೆಗೆ ಕೈ ಎತ್ತಬೇಕು ಅಥವಾ ಎಡಕ್ಕೆ ನೋಡಬೇಕು ಎಂದು ಯೋಚಿಸಿದಾಗ, ಈ ನ್ಯೂರಾನ್ಗಳಲ್ಲಿ ಪುಟ್ಟ ವಿದ್ಯುತ್ ತರಂಗಗಳು (ಎಲೆಕ್ಟ್ರಿಕಲ್ ಸಿಗ್ನಲ್ಸ್) ಉತ್ಪತ್ತಿಯಾಗುತ್ತವೆ. ಬಿಸಿಐ ತಂತ್ರಜ್ಞಾನ ಈ ವಿದ್ಯುತ್ ತರಂಗಗಳನ್ನು ಗ್ರಹಿಸಿ ಕಂಪ್ಯೂಟರ್ ಭಾಷೆಗೆ ಭಾಷಾಂತರಿಸುತ್ತದೆ. ಇದರ ಕಾರ್ಯಾಚರಣೆಯನ್ನು ಪ್ರಮುಖವಾಗಿ 4 ಸರಳ ಹಂತಗಳಲ್ಲಿ ಅರ್ಥೈಸಿಕೊಳ್ಳಬಹುದು.
1. ತರಂಗಗಳ ಗ್ರಹಿಕೆ (ಸಿಗ್ನಲ್ ಡಿಟೆಕ್ಷನ್): ಮಿದುಳಿನ ಮೋಟಾರ್ ಕಾರ್ಟೆಕ್ಸ್ (ಚಲನೆಯನ್ನು ನಿಯಂತ್ರಿಸುವ ಭಾಗ) ಭಾಗದಲ್ಲಿ ಅತ್ಯಂತ ಸೂಕ್ಷ್ಮವಾದ ಎಲೆಕ್ಟ್ರೋಡ್ ಅಥವಾ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಇದು ನಾವು ಆಲೋಚಿಸಿ ದಾಗ ಹೊರಹೊಮ್ಮುವ ವಿದ್ಯುತ್ ಸಂಕೇತ ಗಳನ್ನು ತಕ್ಷಣ ಗ್ರಹಿಸುತ್ತದೆ.
2. ತರಂಗಗಳ ಸಂಸ್ಕರಣೆ (ಸಿಗ್ನಲ್ ಪ್ರೊಸೆಸಿಂಗ್): ಗ್ರಹಿಸಿದ ವಿದ್ಯುತ್ ತರಂಗಗಳು ಅತ್ಯಂತ ಕ್ಷೀಣವಾಗಿರುತ್ತವೆ. ಹಾಗಾಗಿ ತಂತ್ರಜ್ಞಾನವು ಅವುಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದಾದ ಮಟ್ಟಿಗೆ ದೊಡ್ಡದು (ಆಂಪ್ಲಿಫೈ) ಮಾಡುತ್ತದೆ.
3. ಡಿಜಿಟಲ್ ಭಾಷಾಂತರ: ಇಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರಮುಖ ಪಾತ್ರ ವಹಿಸುತ್ತದೆ. ಮಿದುಳಿನ ತರಂಗಗಳನ್ನು ಎಐ ವಿಶ್ಲೇಷಿಸಿ, ಈ ವ್ಯಕ್ತಿ ಸ್ಕ್ರೀನ್ ಮೇಲಿನ ಕರ್ಸರ್ಅನ್ನು ಎಲ್ಲಿಗೆ ಸರಿಸಲು ಬಯಸುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುತ್ತದೆ.
4. ಅನುಷ್ಠಾನ: ಆಜ್ಞೆಯನ್ನು ಕಂಪ್ಯೂಟರ್ ಗ್ರಹಿಸಿ ತಕ್ಷಣವೇ ಸ್ಕ್ರೀನ್ ಮೇಲಿನ ಕರ್ಸರ್ ಆ ಜಾಗಕ್ಕೆ ಚಲಿಸುವಂತೆ ಮಾಡುತ್ತದೆ ಅಥವಾ ಅಕ್ಷರಗಳನ್ನು ಟೈಪ್ ಮಾಡುತ್ತದೆ.
ದೈಹಿಕವಾಗಿ ತೀವ್ರ ಅಸಹಾಯಕರಾದ ಕೋಟ್ಯಂತರ ರೋಗಿಗಳ ಪಾಲಿಗೆ ಈ ತಂತ್ರಜ್ಞಾನ ಒಂದು ವರ. ಪಾರ್ಶ್ವವಾಯುಪೀಡಿತರು, ಬೆನ್ನುಹುರಿಯ ಸಮಸ್ಯೆಯಿಂದ ಕೈಕಾಲುಗಳ ಸ್ವಾಧೀನ ಕಳೆದುಕೊಂಡವರು ಹಾಗೂ ಎಎಲ್ಎಸ್ನಂತಹ ನರಸಂಬಂಧಿ ಕಾಯಿಲೆಗಳಿಂದಾಗಿ ಮಾತನಾಡುವ ಮತ್ತು ಚಲಿಸುವ ಶಕ್ತಿ ಕಳೆದುಕೊಂಡವರಿಗೆ ಇದರಿಂದ ಸಹಾಯವಾಗುತ್ತದೆ. ಉದಾಹರಣೆಗೆ, ಪಾರ್ಶ್ವವಾಯುಪೀಡಿತರ ಮಿದುಳು ಚೆನ್ನಾಗಿ ಕೆಲಸ ಮಾಡುತ್ತಿರುತ್ತದೆ, ಆಲೋಚನಾ ಶಕ್ತಿ ಸ್ಪಷ್ಟವಾಗಿರುತ್ತದೆ. ಆದರೆ ಮಿದುಳಿನಿಂದ ಕೈಕಾಲುಗಳಿಗೆ ಸಂದೇಶ ರವಾನಿಸುವ ನರಮಂಡಲದ ಹಾದಿ ಬಂದ್ ಆಗಿರುತ್ತದೆ.
ಬಿಸಿಐ ತಂತ್ರಜ್ಞಾನ ಅಂಥ ನರಮಂಡಲವನ್ನು ಬೈಪಾಸ್ ಮಾಡಿ, ಮಿದುಳಿನ ಆಲೋಚನೆಯನ್ನು ನೇರವಾಗಿ ಕಂಪ್ಯೂಟರ್ಗೆ ತಲುಪಿಸುತ್ತದೆ. ಇದರ ಫಲವಾಗಿ, ಹಾಸಿಗೆಯಿಂದ ಏಳಲಾಗದ ರೋಗಿಯೂ ಕೇವಲ ಯೋಚನೆ ಮಾಡುವ ಮೂಲಕವೇ ಕಂಪ್ಯೂಟರ್ ಸ್ಕ್ರೀನ್ ಮೇಲೆ ಕೀಬೋರ್ಡ್ ಬಳಸಿ ಅಕ್ಷರಗಳನ್ನು ಟೈಪ್ ಮಾಡಬಹುದು. ತಮ್ಮ ಅನಿಸಿಕೆ, ನೋವು ಮತ್ತು ಅಗತ್ಯಗಳನ್ನು ಡಿಜಿಟಲ್ ಧ್ವನಿಯ ಮೂಲಕ ಕುಟುಂಬದವರ ಜತೆ ಹಂಚಿಕೊಳ್ಳಬಹುದು. ಇಂಟರ್ನೆಟ್ ಬ್ರೌಸ್ ಮಾಡುವುದು, ವಿಡಿಯೋ ಗೇಮ್ ಆಡುವುದು ಮತ್ತು ಸ್ಮಾರ್ಟ್ ಹೋಮ್ ಸಾಧನಗಳನ್ನು ಬಳಸುವುದು (ಲೈಟ್, ಫ್ಯಾನ್ ಆನ್/ಆಫ್ ಮಾಡುವುದು) ಮುಂತಾದ ಕೆಲಸಗಳನ್ನು ತಾವೇ ಮಾಡಬಹುದು.
ಈ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದ ಪ್ರಮುಖ ಸಂಸ್ಥೆಯೆಂದರೆ ಎಲಾನ್ ಮಸ್ಕ್ ಅವರ ನ್ಯೂರೋಲಿಂಕ್. ಇದು ನಾಣ್ಯದ ಗಾತ್ರದ ಅತ್ಯಂತ ಚಿಕ್ಕ ಚಿಪ್ ಅಭಿವೃದ್ಧಿಪಡಿಸಿದ್ದು, ಅದನ್ನು ಮನುಷ್ಯನ ಮಿದುಳಿನಲ್ಲಿ ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸುವ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ. ಇತ್ತೀಚೆಗೆ ಈ ಚಿಪ್ ಅಳವಡಿಸಿಕೊಂಡ ಮೊದಲ ಪಾರ್ಶ್ವವಾಯುಪೀಡಿತ ವ್ಯಕ್ತಿ ಕೇವಲ ತಮ್ಮ ಯೋಚನೆಯ ಮೂಲಕವೇ ಕಂಪ್ಯೂಟರ್ನಲ್ಲಿ ಚೆಸ್ ಆಡಿದ್ದಾರೆ, ಆನ್ಲೈನ್ ಗೇಮ್ಳನ್ನು ನಿಯಂತ್ರಿಸಿದ್ದಾರೆ, ಕರ್ಸರ್ ಚಲಾಯಿಸಿದ್ದಾರೆ. ಇದನ್ನು ಈ ಕಂಪನಿ ಇಡೀ ಜಗತ್ತಿಗೆ ಪ್ರದರ್ಶಿಸಿದೆ. ಜಾಗತಿಕ ಮಾಧ್ಯಮಗಳು ಇದನ್ನು ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರದ ಮಹೋನ್ನತ ಮೈಲಿಗಲ್ಲು ಎಂದು ಬಣ್ಣಿಸಿವೆ.
ಬಿಸಿಐ ತಂತ್ರಜ್ಞಾನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವದಂತಿಗಳು ಮತ್ತು ಅನಗತ್ಯ ಭಯವನ್ನು ಕೆಲವರು ಹರಡುತ್ತಿದ್ದಾರೆ. ಆದರೆ ಸಾರ್ವಜನಿಕವಾಗಿ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಇದು ತಕ್ಷಣವೇ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬರುವ ತಂತ್ರಜ್ಞಾನವಲ್ಲ. ಪ್ರಸ್ತುತ ಇದು ಅತ್ಯಂತ ನಿಯಂತ್ರಿತ ವೈದ್ಯಕೀಯ ಪ್ರಯೋಗಗಳ ಹಂತದಲ್ಲಿದೆ. ಯಾರೋ ದೂರದಲ್ಲಿ ನಿಂತು ನಿಮ್ಮ ಮಿದುಳನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಚಿಪ್ ಅಳವಡಿಕೆಗೆ ಕಠಿಣ ವೈದ್ಯಕೀಯ ಪ್ರಕ್ರಿಯೆಗಳನ್ನು ನೆರವೇರಿಸಬೇಕಾಗುತ್ತದೆ. ಈ ತಂತ್ರಜ್ಞಾನದ ದುರುಪಯೋಗ ತಡೆಯಲು ಜಾಗತಿಕ ಮಟ್ಟದಲ್ಲಿ ‘ನ್ಯೂರೋ ರೈಟ್ಸ್’ ಎಂಬ ಹೊಸ ಕಾನೂನು ರೂಪಿಸಲು ಸರ್ಕಾರಗಳು ಮತ್ತು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.
ಆಲೋಚನೆಗಳ ಗೌಪ್ಯತೆ (ಬ್ರೖೆನ್ ಪ್ರೖೆವಸಿ): ಮನುಷ್ಯನ ಅತ್ಯಂತ ಸುರಕ್ಷಿತ ಸ್ಥಳವೆಂದರೆ ಅದು ಆತನ ಮನಸ್ಸು ಅಥವಾ ಮಿದುಳು. ನಾವು ಯಾವುದೇ ವಿಷಯವನ್ನು ಮನಸ್ಸಿನಲ್ಲಿ ಯೋಚಿಸಬಹುದು, ಅದನ್ನು ಬೇರೆಯವರಿಗೆ ಹೇಳದೇ ಇರುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ಬಿಸಿಐ ತಂತ್ರಜ್ಞಾನ ಮಿದುಳಿನ ಸಂಕೇತಗಳನ್ನು ಓದಲು ಪ್ರಾರಂಭಿಸಿದಾಗ, ನಮ್ಮ ಮನಸ್ಸಿನ ಖಾಸಗಿ ಆಲೋಚನೆಗಳು, ಗೌಪ್ಯ ಭಾವನೆಗಳು ಅಥವಾ ನೆನಪುಗಳು ಡಿಜಿಟಲ್ ರೂಪದಲ್ಲಿ ಸೋರಿಕೆಯಾಗುವ (ಡೇಟಾ ಲೀಕ್) ಭೀತಿ ಎದುರಾಗುತ್ತದೆ.
ಮಿದುಳಿಗೂ ಹ್ಯಾಕಿಂಗ್: ಕಂಪ್ಯೂಟರ್, ಮೊಬೈಲ್, ಬ್ಯಾಂಕ್ ಖಾತೆಗಳು ಹ್ಯಾಕ್ ಆಗುವುದೀಗ ಸಾಮಾನ್ಯವಾಗಿದೆ. ಮಿದುಳಿನಲ್ಲಿರುವ ಬಿಸಿಐ ಚಿಪ್ಗಳು ವೈರ್ಲೆಸ್ ಅಥವಾ ಇಂಟರ್ನೆಟ್ಗೆ ಸಂಪರ್ಕಗೊಂಡಾಗ, ಹ್ಯಾಕರ್ಗಳು ಅವುಗಳ ಮೇಲೆ ಸೈಬರ್ ದಾಳಿ ಮಾಡುವ ಸಾಧ್ಯತೆಯೂ ಇರುತ್ತದೆ. ಇದು ವ್ಯಕ್ತಿಯ ಚಲನೆ ಅಥವಾ ಆಲೋಚನಾ ಪ್ರಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸುವ ಭೀಕರ ವಾತಾವರಣವನ್ನು ಸೃಷ್ಟಿಸಬಹುದು.
ನ್ಯೂರೋ ಎಥಿಕ್ಸ್: ವಿಜ್ಞಾನಿಗಳು ಮತ್ತು ಸಮಾಜಶಾಸ್ತ್ರಜ್ಞರು ಇಂದು ನ್ಯೂರೋ ಎಥಿಕ್ಸ್, ಅಂದರೆ ‘ನರ ನೈತಿಕತೆ’ ಬಗ್ಗೆ ತೀವ್ರವಾಗಿ ರ್ಚಚಿಸುತ್ತಿದ್ದಾರೆ. ಬಿಸಿಐ ತಂತ್ರಜ್ಞಾನವನ್ನು ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬೇಕೇ ಅಥವಾ ಆರೋಗ್ಯವಂತ ವ್ಯಕ್ತಿಗಳ ಮಿದುಳಿನ ಶಕ್ತಿ, ನೆನಪಿನ ಶಕ್ತಿಯನ್ನು ಹೆಚ್ಚಿಸಲು ಬಳಸಬಹುದೇ? ಶ್ರೀಮಂತರು ಮಾತ್ರ ಈ ತಂತ್ರಜ್ಞಾನವನ್ನು ಖರೀದಿಸಿ ಅತ್ಯಂತ ಬುದ್ಧಿವಂತರಾದರೆ, ಸಮಾಜದಲ್ಲಿ ಹೊಸ ಮಾದರಿಯ ಅಸಮಾನತೆ ಸೃಷ್ಟಿಯಾಗುವುದಿಲ್ಲವೇ ಎಂಬ ನೈತಿಕ ಪ್ರಶ್ನೆಗಳು ಎದ್ದಿವೆ.