ಸೂಪರ್​ಹ್ಯೂಮನ್​ ಎಐ: ಇನ್ನು 15 ತಿಂಗಳಲ್ಲಿ ಸಾಕಾರ; ಬಹುತೇಕರ ಉದ್ಯೋಗಕ್ಕೆ ಕುತ್ತು!

Published on: 

"ಇನ್ನು 15 ತಿಂಗಳುಗಳಲ್ಲಿ ಸೂಪರ್​ ಹ್ಯೂಮನ್​ ಎಐ ರೂಪುಗೊಳ್ಳಲಿದ್ದು, ಅದು ಬಹುತೇಕ ಎಲ್ಲ ಕ್ಷೇತ್ರಗಳ ಅತ್ಯುತ್ತಮ ಮಾನವ ತಜ್ಞರನ್ನು ಮೀರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದ ಬಹುತೇಕ ಮನುಷ್ಯರು ಉದ್ಯೋಗಕ್ಕೆ ಅನರ್ಹರಾಗಬಹುದು. ಬದುಕಿಗಾಗಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನೇ ಅವಲಂಬಿಸಬೇಕಾಗಬಹುದು' ಎಂದು ಆಂಥ್ರೊಪಿಕ್​ ಸಂಶೋಧಕ ತಾವೊ ಲಿನ್​ ನೀಡಿರುವ ಎಚ್ಚರಿಕೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯೋಗಗಳೇ ಇಲ್ಲದ ಸಮಾಜದಲ್ಲಿ ಬದುಕು ಹೇಗಿರಲಿದೆ? ಎಐ ಹೊಸ ಉದ್ಯೋಗಗಳನ್ನೂ ಸೃಷ್ಟಿಸುತ್ತದೆಯೇ? ತಂತ್ರಜ್ಞಾನ ಕ್ರಾಂತಿ ಮನುಷ್ಯನ ಬದುಕಿನ ಸ್ವರೂಪವನ್ನೇ ಬದಲಿಸಲಿದೆಯೇ? ಭವಿಷ್ಯದ ಸಂಪೂರ್ಣ ಚಿತ್ರಣ ಇಲ್ಲಿದೆ.

ಮನುಷ್ಯನನ್ನೇ ಮೀರಿಸುವ ಬುದ್ಧಿಮತ್ತೆ!

ಸೂಪರ್​ಹ್ಯೂಮನ್​ ಎಂದರೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅತ್ಯುತ್ತಮ ಮಾನವ ತಜ್ಞರ ಮಟ್ಟದಲ್ಲಿ ಅಥವಾ ಅವರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಎಐ ವ್ಯವಸ್ಥೆ. ಇದು ಸೂಚನೆಗಳನ್ನು ಪಾಲಿಸುವುದಷ್ಟೇ ಅಲ್ಲದೆ, ಸಂಕೀರ್ಣ ಸಮಸ್ಯೆಗಳನ್ನು ವಿಶ್ಲೇಷಿಸುವುದು, ಪರಿಹಾರ ಕಂಡುಹಿಡಿಯುವುದು, ಯೋಜನೆ ರೂಪಿಸುವುದು, ನಿರ್ಧಾರ ಕೈಗೊಳ್ಳಲು ನೆರವಾಗುವುದು ಮತ್ತು ವಿವಿಧ ಕ್ಷೇತ್ರಗಳ ಜ್ಞಾನವನ್ನು ಒಟ್ಟುಗೂಡಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬಹುದು. ಈಗಾಗಲೇ ಎಐ ಬಳಸಿ ಲೇಖನ ಬರೆಯುವುದು, ಚಿತ್ರಗಳನ್ನು ರಚಿಸುವುದು, ವಿಡಿಯೊ ಸಿದ್ಧಪಡಿಸುವುದು, ಕಂಪ್ಯೂಟರ್​ ಕೋಡ್​ ಬರೆಯುವುದು, ಬೃಹತ್​ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಿಸುವುದು ಸಾಧ್ಯವಾಗಿದೆ. ಈ ಸಾಮರ್ಥ್ಯಗಳು ಇನ್ನಷ್ಟು ವಿಸ್ತರಿಸಿದರೆ ಮನುಷ್ಯರು ವರ್ಷಗಳ ಕಾಲ ಕಲಿತು ಪರಿಣತಿ ಪಡೆದಿರುವ ಹಲವು ಕೆಲಸಗಳನ್ನು ಎಐ ಅತಿ ಕಡಿಮೆ ಸಮಯದಲ್ಲಿ ನಿರ್ವಹಿಸಬಹುದು. ಇದೇ ಉದ್ಯೋಗ ಕ್ಷೇತ್ರದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿರುವ ಪ್ರಮುಖ ಕಾರಣ.

15 ತಿಂಗಳಲ್ಲಿ ಸಾಧ್ಯವೇ?

ಆಂಥ್ರೊಪಿಕ್​ ಸಂಶೋಧಕ ತಾವೊ ಲಿನ್​ ಪ್ರಕಾರ, ಸೂಪರ್​ಹ್ಯೂಮನ್​ ಎಐ ಮುಂದಿನ 15 ತಿಂಗಳಲ್ಲೆ, ಅಂದರೆ, 2027ರ ಅಂತ್ಯದ ವೇಳೆಗೆ ರೂಪುಗೊಳ್ಳುವ ಸಾಧ್ಯತೆಯಿದೆ. ಆದರೆ ಇದು ಖಚಿತ ವೈಜ್ಞಾನಿಕ ನಿರ್ಧಾರವಲ್ಲ; ತಜ್ಞರೊಬ್ಬರ ಅಂದಾಜು. ಎಐ ಅಭಿವೃದ್ಧಿಯ ವೇಗ, ಕಂಪ್ಯೂಟಿಂಗ್​ ಸಾಮರ್ಥ್ಯ, ಹೊಸ ಮಾದರಿಗಳ ತರಬೇತಿ ಮತ್ತು ತಂತ್ರಜ್ಞಾನದಲ್ಲಿನ ಮಿತಿಗಳು ಈ ಬೆಳವಣಿಗೆಯ ಸಮಯವನ್ನು ನಿರ್ಧರಿಸಲಿವೆ. ಆದರೂ ಇಷ್ಟು ಕಡಿಮೆ ಅವಧಿಯಲ್ಲಿ ಮನುಷ್ಯನ ಬೌದ್ಧಿಕ ಸಾಮರ್ಥ್ಯಕ್ಕೆ ಸವಾಲಾಗುವ ತಂತ್ರಜ್ಞಾನ ಬರಬಹುದು ಎಂಬ ಎಚ್ಚರಿಕೆ ಭವಿಷ್ಯದ ಉದ್ಯೋಗಗಳ ಬಗ್ಗೆ ಗಂಭೀರ ಚಿಂತನೆ ಹುಟ್ಟುಹಾಕಿದೆ.

ಉದ್ಯೋಗಗಳೇ ಇಲ್ಲದ ಭವಿಷ್ಯ!

ಎಐನ ಸಾಮರ್ಥ್ಯ ಹೆಚ್ಚಾದಂತೆ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ. ಹತ್ತು ನೌಕರರು ನಿರ್ವಹಿಸುತ್ತಿದ್ದ ಕೆಲಸವನ್ನು ಎಐ ನೆರವಿನಿಂದ ಇಬ್ಬರು ನಿರ್ವಹಿಸುವಂತಾದರೆ, ಸಂಸ್ಥೆಗೆ ಸಿಬ್ಬಂದಿ ವೆಚ್ಚ ಕಡಿಮೆ ಮಾಡಲು ಅವಕಾಶ ಸಿಗುತ್ತದೆ. ಉದ್ಯೋಗ ಕಳೆದುಕೊಂಡವರು ಮತ್ತೊಂದು ಉದ್ಯೋಗ ಹುಡುಕಿಕೊಳ್ಳುವುದು ಸಾಧ್ಯ. ಆದರೆ ಅದರಲ್ಲಿಯೂ ಎಐ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸಲು ಆರಂಭಿಸಿದರೆ, ಮನುಷ್ಯರಿಗೆ ಪರ್ಯಾಯ ಉದ್ಯೋಗ ಹುಡುಕುವುದು ಕಷ್ಟವಾಗಬಹುದು. ಇದೇ ತಾವೊ ಲಿನ್​ ಅವರ ಎಚ್ಚರಿಕೆಯ ಪ್ರಮುಖ ಅಂಶ. ಆದರೆ ಎಐ ಮಾನವ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯ ಗಳಿಸುವುದು ಮತ್ತು ಕಂಪನಿಗಳು ಅದನ್ನು ನೈಜವಾಗಿ ಅಳವಡಿಸಿಕೊಂಡು ಉದ್ಯೋಗಿಗಳನ್ನು ಬದಲಿಸುವುದು ಎರಡೂ ಏಕಕಾಲಕ್ಕೆ ಆಗುವುದಿಲ್ಲ. ಇದಕ್ಕೆ ಹೆಚ್ಚಿನ ಸಮಯ ಅಗತ್ಯ.

ಬೌದ್ಧಿಕ ಉದ್ಯೋಗಗಳಿಗೂ ಕುತ್ತು

ವಕೀಲರು ಕಾನೂನು ದಾಖಲೆಗಳನ್ನು ಪರಿಶೀಲಿಸುವುದು, ವೈದ್ಯರು ರೋಗದ ಲಕ್ಷಣಗಳನ್ನು ವಿಶ್ಲೇಷಿಸುವುದು, ಲೆಕ್ಕಪರಿಶೋಧಕರು ಹಣಕಾಸಿನ ದಾಖಲೆಗಳನ್ನು ಪರಿಶೀಲಿಸುವುದು, ಶಿಕ್ಷಕರು ಪಾಠ ರೂಪಿಸುವುದು, ಸಾಫ್ಟ್​ ವೇರ್​ ಎಂಜಿನಿಯರ್​ಗಳು ಕೋಡ್​ ಬರೆಯುವುದು ಸೇರಿದಂತೆ ಹಲವು ಕೆಲಸಗಳಲ್ಲಿ ಎಐ ನೆರವಾಗುತ್ತಿದೆ. ಈ ಕೆಲಸಗಳನ್ನು ಎಐ ಸಂಪೂರ್ಣವಾಗಿ ನಿರ್ವಹಿಸುವ ಹಂತ ತಲುಪಿದರೆ, ವೃತ್ತಿಪರರ ಕೆಲಸದ ಪ್ರಮಾಣ ಮತ್ತು ಸ್ವರೂಪ ಬದಲಾಗಬಹುದು. ಕೆಲವು ಕ್ಷೇತ್ರಗಳಲ್ಲಿ ಮಾನವ ಪರಿಣತಿಯ ಅಗತ್ಯ ಮುಂದುವರಿದರೂ, ಕಡಿಮೆ ಸಿಬ್ಬಂದಿಯಿಂದ ಹೆಚ್ಚು ಕೆಲಸ ಮಾಡಿಸುವ ಸಾಧ್ಯತೆ ಇರುತ್ತದೆ. ಇದರಿಂದ ಹೊಸ ನೇಮಕಾತಿಗಳು ಆಗುವುದಿಲ್ಲ.

ಕೆಲಸ ಕಳೆದುಕೊಂಡವರಿಗೆ ಸರ್ಕಾರವೇ ಆಸರೆ?

ಉದ್ಯೋಗವಿಲ್ಲದ ಜನರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾದರೆ, ಸರ್ಕಾರಗಳ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಹೊಣೆ ಹೆಚ್ಚಬಹುದು. ಸರ್ಕಾರದ ಕಲ್ಯಾಣ ಯೋಜನೆಗಳು, ನಿರುದ್ಯೋಗ ಭತ್ಯೆ, ಆಹಾರ ಭದ್ರತೆ ಮತ್ತು ನೇರ ಹಣ ವರ್ಗಾವಣೆ ಪ್ರಮುಖವಾಗಬಹುದು. ಎಐನಿಂದ ಉದ್ಯೋಗ ನಷ್ಟ ದೊಡ್ಡ ಮಟ್ಟದಲ್ಲಿ ಸಂಭವಿಸಿದರೆ, ಜನರಿಗೆ ಕನಿಷ್ಠ ಆದಾಯ ಒದಗಿಸುವ ಹೊಸ ನೀತಿಗಳ ಅಗತ್ಯ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಯೂನಿವರ್ಸಲ್​ ಬೇಸಿಕ್​ ಇನ್​ಕಮ್​ (ಯುಬಿಐ) ಅಥವಾ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆ ಮತ್ತೆ ಚರ್ಚೆಗೆ ಬರುತ್ತಿದೆ. ಉದ್ಯೋಗ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಬದುಕಲು ಅಗತ್ಯವಾದ ಕನಿಷ್ಠ ಮೊತ್ತವನ್ನು ಸರ್ಕಾರ ನೀಡುವ ವ್ಯವಸ್ಥೆ ಇದು. ಎಐ ಮತ್ತು ಯಾಂತ್ರೀಕರಣದಿಂದ ಉದ್ಯೋಗಗಳೇ ಕಡಿಮೆಯಾದರೆ, ಇಂತಹ ವ್ಯವಸ್ಥೆ ನೆರವಾಗಬಹುದು.

ಎಐ ಮಾಡಲಾಗದ ಉದ್ಯೋಗಗಳಿವೆಯೇ?

ಕೆಲವು ಉದ್ಯೋಗಗಳಲ್ಲಿ ಮಾನವ ಸಾಮರ್ಥ್ಯಕ್ಕೆ ಪರ್ಯಾಯ ಸುಲಭವಲ್ಲ. ಅಂಥವುಗಳಲ್ಲಿ ಭಾವನಾತ್ಮಕ ಸಂಬಂಧ, ವಿಶ್ವಾಸ, ಕಾಳಜಿ, ನೈತಿಕ ನಿರ್ಧಾರ, ಸಾಮಾಜಿಕ ಸಂವಹನ ಮತ್ತು ಜವಾಬ್ದಾರಿ ಇವು ಪ್ರಮುಖವಾದವುಗಳು. ವೈದ್ಯರು ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವಾಗ ಕೇವಲ ವೈದ್ಯಕೀಯ ಮಾಹಿತಿಯಷ್ಟೇ ಮುಖ್ಯವಾಗುವುದಿಲ್ಲ; ರೋಗಿಯ ಆತಂಕ, ಕುಟುಂಬದ ಪರಿಸ್ಥಿತಿ ಮತ್ತು ಮಾನಸಿಕ ಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದಷ್ಟೇ ಅಲ್ಲ, ಅವರ ವ್ಯಕ್ತಿತ್ವ ರೂಪಿಸುವಲ್ಲೂ ಪಾತ್ರ ವಹಿಸುತ್ತಾರೆ. ಆರೈಕೆ ಕ್ಷೇತ್ರ, ಮಾನಸಿಕ ಆರೋಗ್ಯ ಸೇವೆ, ಸಾಮಾಜಿಕ ಕಾರ್ಯ, ಸಮಾಲೋಚನೆ ಮತ್ತು ಮಾನವ ಸಂಬಂಧಗಳ ಮೇಲೆ ಅವಲಂಬಿತ ವೃತ್ತಿಗಳಲ್ಲಿ ಮಾನವ ಸಂಪರ್ಕ ಅತ್ಯಗತ್ಯ.

ಹೊಸ ಕೌಶಲ ಕಲಿಯುವುದೇ ಪರಿಹಾರ?

ತಂತ್ರಜ್ಞಾನ ಬಳಕೆ, ಡೇಟಾ ವಿಶ್ಲೇಷಣೆ, ಎಐ ಸಾಧನಗಳ ನಿರ್ವಹಣೆ, ಸೈಬರ್​ ಭದ್ರತೆ ಮತ್ತು ಡಿಜಿಟಲ್​ ಸೇವೆಗಳ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿಗೆ ಅವಕಾಶಗಳು ಹೆಚ್ಚಾಗಬಹುದು. ಒಂದು ಉದ್ಯೋಗದಿಂದ ಮತ್ತೊಂದು ಉದ್ಯೋಗಕ್ಕೆ ಬದಲಾಗಲು ತರಬೇತಿ, ಸಮಯ ಮತ್ತು ಆರ್ಥಿಕ ನೆರವು ಬೇಕಾಗುತ್ತದೆ. ಈಗಾಗಲೇ ಕುಟುಂಬದ ಹೊಣೆ ಹೊತ್ತಿರುವವರು, ಮಧ್ಯವಯಸ್ಕ ಉದ್ಯೋಗಿಗಳು, ಕಡಿಮೆ ಆದಾಯದವರು ಮತ್ತು ತಂತ್ರಜ್ಞಾನದಿಂದ ದೂರವಿರುವವರು ಹೊಸ ಕೌಶಲ ಕಲಿಯುವಲ್ಲಿ ಹೆಚ್ಚಿನ ಸವಾಲು ಎದುರಿಸಬಹುದು.

ಮನುಷ್ಯರ ಕೆಲಸವನ್ನೇ ಬದಲಿಸುವ ಎಐ

ಎಐ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸುವವರು ಅದರ ಸಾಮರ್ಥ್ಯವನ್ನಷ್ಟೇ ಅಲ್ಲ, ಅದನ್ನು ಸಮಾಜದಲ್ಲಿ ಅಳವಡಿಸುವ ವೇಗವನ್ನೂ ಪ್ರಶ್ನಿಸುತ್ತಿದ್ದಾರೆ. ಕಂಪನಿಗಳು ಉದ್ಯೋಗಿಗಳ ಬದಲಿಗೆ ಎಐ ಬಳಸಲು ಮುಂದಾದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಬದಲಾವಣೆ ವೇಗವಾಗಿ ಸಂಭವಿಸಬಹುದು. ದೈಹಿಕ ಶ್ರಮದ ಕೆಲಸಗಳನ್ನು ನಿರ್ವಹಿಸಲು ರೋಬಾಟ್​ಗಳ ಅಭಿವೃದ್ಧಿ, ಅವುಗಳ ಉತ್ಪಾದನೆ, ನಿರ್ವಹಣೆ ಮತ್ತು ವ್ಯಾಪಕ ಬಳಕೆಗೆ ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯ. ಎಐ ಸಾಫ್ಟ್​ವೇರ್​ ಮೂಲಕ ಕಚೇರಿ ಕೆಲಸಗಳನ್ನು ನಿರ್ವಹಿಸಬಲ್ಲದಾದರೂ, ಕಟ್ಟಡ ನಿರ್ಮಾಣ, ಕೃಷಿ, ಸಾರಿಗೆ, ಸ್ವಚ್ಛತೆ, ಸರಕು ಸಾಗಣೆ ಮುಂತಾದ ಕೆಲಸಗಳಿಗೆ ಯಂತ್ರಗಳ ಭೌತಿಕ ಸಾಮರ್ಥ್ಯವೂ ಬೇಕಾಗುತ್ತದೆ. ಇಂತಹ ರೋಬಾಟ್​ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಎಲ್ಲೆಡೆ ಬಳಸಲು ಸಮಯ ಬೇಕಾಗಬಹುದು.

2030ರ ವೇಳೆಗೆ 17 ಕೋಟಿ ಹೊಸ ಉದ್ಯೋಗ!

ಎಐನಿಂದ ಉದ್ಯೋಗ ನಷ್ಟದ ಆತಂಕ ಎದುರಾಗಿರುವಾಗ, ಜಾಗತಿಕವಾಗಿ ಹೊಸ ಉದ್ಯೋಗಗಳೂ ಸೃಷ್ಟಿಯಾಗಲಿವೆ. ವಿಶ್ವ ಆರ್ಥಿಕ ವೇದಿಕೆಯ "ಫ್ಯೂಚರ್​ ಆಫ್​ ಜಾಬ್ಸ್​ ರಿಪೋರ್ಟ್​ 2025' ಪ್ರಕಾರ, 2030ರ ವೇಳೆಗೆ ವಿವಿಧ ಜಾಗತಿಕ ಬದಲಾವಣೆಗಳಿಂದ 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದೇ ವೇಳೆ 9.2 ಕೋಟಿ ಉದ್ಯೋಗಗಳು ನಷ್ಟವಾಗಬಹುದು. ಇದರಿಂದ ಒಟ್ಟಾರೆ 7.8 ಕೋಟಿ ಹೆಚ್ಚುವರಿ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ. ಆದರೆ ಹೊಸ ಉದ್ಯೋಗಗಳು ಸೃಷ್ಟಿಯಾಗುವುದರಿಂದ ಹಳೆಯ ಉದ್ಯೋಗ ಕಳೆದುಕೊಂಡ ಎಲ್ಲರಿಗೂ ತಕ್ಷಣ ಕೆಲಸ ದೊರೆಯುವುದಿಲ್ಲ. ವ್ಯಕ್ತಿಯ ಕೌಶಲ ಮತ್ತು ಹೊಸ ಉದ್ಯೋಗಕ್ಕೆ ಬೇಕಾದ ಸಾಮರ್ಥ್ಯದ ನಡುವೆ ವ್ಯತ್ಯಾಸವಿರಬಹುದು. ವಯಸ್ಸು, ತರಬೇತಿ, ಶಿಕ್ಷಣ, ಸ್ಥಳ ಮತ್ತು ಆರ್ಥಿಕ ಪರಿಸ್ಥಿತಿಗಳು ಹೊಸ ಉದ್ಯೋಗಕ್ಕೆ ಬದಲಾಗುವ ಅವಕಾಶವನ್ನು ನಿರ್ಧರಿಸಬಹುದು. ಆದ್ದರಿಂದ ಒಟ್ಟಾರೆ ಉದ್ಯೋಗಗಳ ಸಂಖ್ಯೆ ಹೆಚ್ಚಾದರೂ ಕೆಲವು ವರ್ಗದ ಜನರು ದೀರ್ಘಕಾಲ ನಿರುದ್ಯೋಗಿಗಳಾಗುವ ಅಪಾಯವಿದೆ.

ಕೆಲಸವಿಲ್ಲದಿದ್ದರೂ ಬದುಕಲು ಸಾಧ್ಯವೇ?

ಭವಿಷ್ಯದಲ್ಲಿ ಎಐ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿದರೆ, ಮನುಷ್ಯರಿಗೆ ಕೆಲಸದ ಅವಧಿ ಕಡಿಮೆಯಾಗಬಹುದು. ವಾರಕ್ಕೆ 5&6 ದಿನ ಕೆಲಸ ಮಾಡುವ ಬದಲಿಗೆ 3&4 ದಿನ ಕೆಲಸ ಮಾಡುವ ವ್ಯವಸ್ಥೆ ರೂಪುಗೊಳ್ಳಬಹುದು. ಕೆಲಸ ಮನುಷ್ಯನಿಗೆ ಕೇವಲ ಹಣ ಗಳಿಸುವ ಮಾರ್ಗವಲ್ಲ. ಅದು ವ್ಯಕ್ತಿಯ ಗುರುತು, ಆತ್ಮಗೌರವ, ಸಾಮಾಜಿಕ ಸ್ಥಾನಮಾನ ಮತ್ತು ಬದುಕಿನ ಉದ್ದೇಶದೊಂದಿಗೆ ಬೆಸೆದುಕೊಂಡಿದೆ. ಕೆಲಸವೇ ಇಲ್ಲದ ಸಮಾಜದಲ್ಲಿ ಜನರು ತಮ್ಮ ಸಮಯವನ್ನು ಹೇಗೆ ಬಳಸಿಕೊಳ್ಳುತ್ತಾರೆ? ಸಾಮಾಜಿಕ ಸಂಬಂಧಗಳು, ಸೃಜನಶೀಲತೆ, ಕಲೆ, ಕ್ರೀಡೆ, ಕುಟುಂಬ ಮತ್ತು ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚಿನ ಅವಕಾಶ ಸಿಗಬಹುದೇ? ಅಥವಾ ಆದಾಯವಿಲ್ಲದ ಕಾರಣ ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅಸಮಾನತೆ ಹೆಚ್ಚಬಹುದೇ? ಎಂಬ ಪ್ರಶ್ನೆಗಳೂ ಮಹತ್ವ ಪಡೆಯುತ್ತವೆ.

ಎಐ ಅಭಿವೃದ್ಧಿಗೆ ವೇಗವೋ, ನಿಯಂತ್ರಣವೋ?

ಎಐ ಬೆಳವಣಿಗೆಗೆ ಸಂಪೂರ್ಣವಾಗಿ ಅಡ್ಡಿಪಡಿಸುವುದು ಸಾಧ್ಯವಿಲ್ಲದಿದ್ದರೂ, ಅದರ ಅಭಿವೃದ್ಧಿ ಮತ್ತು ಬಳಕೆಗೆ ಸೂಕ್ತ ನಿಯಂತ್ರಣ, ಸುರಕ್ಷತಾ ಪರೀಕ್ಷೆ ಹಾಗೂ ಜವಾಬ್ದಾರಿಯುತ ನೀತಿಗಳು ಅಗತ್ಯ ಎಂಬ ಚರ್ಚೆ ಹೆಚ್ಚುತ್ತಿದೆ. ಅತ್ಯಂತ ಶಕ್ತಿಶಾಲಿ ಎಐ ವ್ಯವಸ್ಥೆಗಳು ಮನುಷ್ಯರ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದರೆ, ಅವುಗಳ ಕಾರ್ಯವಿಧಾನ, ಸುರಕ್ಷತೆ ಮತ್ತು ನಿಯಂತ್ರಣದ ಬಗ್ಗೆ ಹೆಚ್ಚಿನ ಎಚ್ಚರಿಕೆ ಬೇಕಾಗುತ್ತದೆ. ತಂತ್ರಜ್ಞಾನ ಕಂಪನಿಗಳ ನಡುವಿನ ಸ್ಪರ್ಧೆಯಿಂದ ಹೊಸ ಎಐ ಮಾದರಿಗಳನ್ನು ವೇಗವಾಗಿ ಬಿಡುಗಡೆ ಮಾಡುವ ಒತ್ತಡ ಹೆಚ್ಚಿದೆ. ಆದರೆ ವೇಗದ ಅಭಿವೃದ್ಧಿಯೊಂದಿಗೆ ಅಪಾಯಗಳ ಮೌಲ್ಯಮಾಪನ, ದುರುಪಯೋಗ ತಡೆ ಮತ್ತು ಮಾನವ ನಿಯಂತ್ರಣದ ವ್ಯವಸ್ಥೆಗಳೂ ಬಲಗೊಳ್ಳಬೇಕು.