ಖಾಲಿ ಹೊಟ್ಟೆಯಲ್ಲಿ ಟೀ/ಕಾಫಿ ಕುಡಿಯುವುದರಿಂದ ಏನೆಲ್ಲ ಸಮಸ್ಯೆ? ಇಲ್ಲಿದೆ ತಿಳಿಯಿರಿ ಉಪಯುಕ್ತ ಮಾಹಿತಿ | Tea/Coffee

ವಿಜಯವಾಣಿ (21)
Published on

Tea/Coffee: ನಮ್ಮಲ್ಲಿ ಬಹುತೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿಯಾದ ಚಹಾ ಅಥವಾ ಕಾಫಿ ಇರಬೇಕು. ಇದನ್ನು ಕುಡಿಯದೆ ದಿನವೇ ಪ್ರಾರಂಭವಾಗದು ಎನ್ನುವ ರೀತಿಯಲ್ಲಿ ರೂಢಿಸಿಕೊಂಡಿರುತ್ತಾರೆ. ಗರಮ್​ ಗರಮ್​ ಟೀ/ಕಾಫಿ ನಮ್ಮ ತುಟಿಗಳನ್ನು ಸ್ಪರ್ಶಿಸಿದಾಗ, ಅದೇನೋ ಮನಸ್ಸಿಗೊಂದು ರೀತಿ ಉಲ್ಲಾಸವಾಗುವುದು ದಿಟ. ಇದರಲ್ಲಿ ಅನುಮಾನವೇ ಬೇಡ. ಕೆಲವರು ಮಾತ್ರ ಖಾಲಿ ಹೊಟ್ಟೆಯಲ್ಲಿ ಟೀ/ಕಾಫಿ ಕುಡಿಯುವ ಮೂಲಕ ಹಲವು ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ.

ಅಸಲಿಗೆ ಈ ಅಭ್ಯಾಸ ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇದು ನಮ್ಮ ಊಹೆಗೂ ಮೀರಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟಕ್ಕೂ ಖಾಲಿ ಹೊಟ್ಟೆಯಲ್ಲಿ ಟೀ/ಕಾಫಿ ಸೇವನೆ ಯಾವೆಲ್ಲ ಸಮಸ್ಯೆಗಳಿಗೆ ಕಾರಣವಾಗಬಹುದು? ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.

ಟೀ-ಕಾಫಿಯಲ್ಲಿರುವ ಪದಾರ್ಥಗಳು

  • ಕೆಫೀನ್
  • ಟ್ಯಾನಿನ್‌
  • ಆ್ಯಸಿಡ್ಸ್​

1. ಅಸಿಡಿಟಿ

ಚಹಾ/ಕಾಫಿಯಲ್ಲಿರುವ ಕೆಫೀನ್ ಅಂಶ ಮತ್ತು ಆಮ್ಲಗಳು ಖಾಲಿ ಹೊಟ್ಟೆಯಲ್ಲಿ ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ಹೊಟ್ಟೆಯ ಒಳಪದರವನ್ನು ಹಾನಿಗೊಳಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿದ ಆಮ್ಲೀಯತೆಯು ಗ್ಯಾಸ್​, ಮಲಬದ್ಧತೆ ಮತ್ತು ವಿಪರೀತ ನೋವನ್ನು ಉಂಟುಮಾಡುವ ಸಾಧ್ಯತೆಯಿದೆ.

2. ಗ್ಯಾಸ್ಟ್ರೀಕ್​

ಖಾಲಿ ಹೊಟ್ಟೆಯಲ್ಲಿ ಚಹಾ/ಕಾಫಿಯನ್ನು ಪದೇ ಪದೇ ಕುಡಿಯುವುದರಿಂದ ಹೊಟ್ಟೆಯಲ್ಲಿ ಉರಿಯೂತ ಸಂಭವಿಸುತ್ತದೆ. ದೀರ್ಘಕಾಲದವರೆಗೆ ಹೀಗೆ ಮಾಡಿದರೆ, ಜಠರದುರಿತದ ಅಪಾಯ ಕಾಡುವ ಸಾಧ್ಯತೆಗಳು ಹೆಚ್ಚು.

3. ನಿರ್ಜಲೀಕರಣ

ಟೀ/ಕಾಫಿಯಲ್ಲಿರುವ ಕೆಫೀನ್ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರರ್ಥ ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಈ ರೀತಿ ಕುಡಿಯುವುದರಿಂದ ದೇಹದಲ್ಲಿನ ನೀರಿನ ಮಟ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ತಲೆನೋವು, ಆಯಾಸವನ್ನು ಉಂಟುಮಾಡುತ್ತದೆ.

4. ಆತಂಕ, ಮನಸ್ಥಿತಿ ಬದಲಾವಣೆ

ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದರಿಂದ ಹಾರ್ಮೋನ್​ಗಳ ಅಸಮತೋಲನ ಉಂಟಾಗುತ್ತದೆ. ಇದು ಮಾನಸಿಕ ಆತಂಕ, ಉದ್ವೇಗ ಮತ್ತು ಮನಸ್ಥಿತಿ ಬದಲಾವಣೆಗಳಿಗೆ ಕಾರಣವಾಗಬಹುದು.

ನಿಯಂತ್ರಣಕ್ಕೆ ಏನು ಮಾಡಬೇಕು?

  • ಟೀ/ಕಾಫಿ ಸೇವಿಸುವುದಕ್ಕೂ ಮೊದಲು ನೀವು ಏನನ್ನಾದರೂ ತಿನ್ನಬೇಕು ಇಲ್ಲವೇ ಖಾಲಿ ಹೊಟ್ಟೆಗೆ ನೀರು ಕುಡಿಯಬೇಕು. ಅದಾದ ನಂತರ ಕುಡಿದರೆ ಸಮಸ್ಯೆಗಳು ಉಲ್ಬಣಿಸುವುದಿಲ್ಲ.
  • ಬೆಳಗ್ಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯ ಅಭ್ಯಾಸ.
  • ಚಹಾ ಬದಲಿಗೆ ಗಿಡಮೂಲಿಕೆ ಟೀ ಸೇವಿಸುವುದು ಉತ್ತಮ ಆಯ್ಕೆ.
  • ಕಾಫಿ/ಚಹಾ ಕುಡಿಯುವ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಿ,(ಏಜೆನ್ಸೀಸ್).

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net