

ನಮ್ಮ ಪ್ರಾಚೀನ ಗ್ರಂಥಗಳಲ್ಲಿ, ಪುರಾಣ, ಇತಿಹಾಸಗಳಲ್ಲಿ ನಮ್ಮ ಪೂರ್ವಜರು, ಅಸಂಖ್ಯ ಋಷಿ-ಮುನಿಗಳು, ದೇವತೆಗಳು ಅನೇಕ ದಿವಸಗಳನ್ನು, ವರ್ಷಗಳನ್ನು ಆಹಾರವಿಲ್ಲದೆ ಕಳೆದ ಉಲ್ಲೇಖ ಬರುತ್ತದೆ. ಅವರಿಗೆ ಕರಗತವಾಗಿದ್ದ ವಿದ್ಯೆ ಸೂರ್ಯಪಾನ. ಸೂರ್ಯನ ಶಕ್ತಿಯನ್ನು ನೇರವಾಗಿ ಉಪಯೋಗಿಸುವ ಕಲೆ ಅವರಿಗೆ ತಿಳಿದಿತ್ತು. ಈ ಋಷಿಮುನಿಗಳು, ದೇವತೆಗಳು ಬೇರೆ ಲೋಕದಲ್ಲಿ ಸಂಚರಿಸುವ ವ್ಯಕ್ತಿಗಳಾಗಿರಲಿಲ್ಲ. ಅವರು ಈ ಭೂಮಿಯ ಮೇಲೆ ಇದ್ದವರು, ಇಲ್ಲೇ ಓಡಾಡಿದವರು.
ಇನ್ನು ಮನೆಗಳಲ್ಲಂತೂ ನಮ್ಮ ಅಜ್ಜ-ಅಜ್ಜಿಯರು ಕಥೆ ಹೇಳುವಾಗ ಏನೂ ಆಹಾರ ಸೇವಿಸದೆ ನಿರಾಯಾಸವಾದ ಜೀವನವನ್ನು ಸಾಗಿಸಿದ ಅನೇಕ ಮಹಾಮಹಿಮರ ವೃತ್ತಂತಗಳನ್ನು ಬಹಳ ಸಹಜವಾಗಿ ಹೇಳಿರುತ್ತಾರೆ. ಪಾರ್ವತಿಯು ಶಿವನನ್ನು ಕುರಿತು ತಪಸ್ಸು ಮಾಡಲು ವರ್ಷಗಟ್ಟಲೆ ಕುಳಿತಾಗ ಅವಳು ಆಹಾರವನ್ನಿರಲೀ, ಒಂದು ಎಲೆಯನ್ನೂ ಸೇವಿಸಿರಲಿಲ್ಲ. ಹಾಗಾಗಿ ಅವಳಿಗೆ ಅಪರ್ಣಾ ಎಂಬ ಹೆಸರು ಬಂದಿತು. ಗಾಳಿಯ ಸೇವನೆ ಮಾತ್ರ ಅವಳ ಜೀವವನ್ನು ಹಿಡಿದಿಟ್ಟಿತ್ತು. ಮಹಾವೀರರು ನಿರಾಹಾರಿಗಳಾಗಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದು ಸೂರ್ಯಪಾನದ ತಂತ್ರದಿಂದಲೇ.
ಇನ್ನು ದೇವತೆಗಳ ವಿಷಯದಲ್ಲಂತೂ ಅವರು ಯಜಮಾನನು ನಡೆಸುವ ಯಜ್ಞ ಯಾಗದಲ್ಲಿ, ಸಮಾವೇಶದಲ್ಲಿ ಕೊಡುವ ಹವಿಸ್ಸನ್ನು ಮಾತ್ರ ಸ್ವೀಕರಿಸಿದ ಮಾತು ಋಗ್ವೇದದಲ್ಲಿ ಬರುತ್ತದೆ. ಈ ಹವಿಸ್ಸು ಎಂದರೆ ಯಜಮಾನ ನೀಡುತ್ತಿದ್ದ ಸೋಮಪಾನ.
ಸೋಮರಸ ಎಂದರೆ ಗಿಡಮೂಲಿಕೆಗಳಿಂದ ತಯಾರಾದ ಪಾನೀಯ. ಈ ಸಂದರ್ಭದಲ್ಲಿ ಋಗ್ವೇದ ‘ಸುತೇರಣಂ’ ಎಂಬ ಪದವನ್ನು ಉಪಯೋಗಿಸುತ್ತದೆ. ಅಂದರೆ ಇಷ್ಟಪಟ್ಟು ಹಿಂಡಿದ ಸೋಮರಸವನ್ನು ದೇವತೆಗಳು ಕುಡಿಯುತ್ತಿದ್ದರು ಎಂದರ್ಥ. ಹಾಗಾಗಿ ಮುಂದೆ ಇದರ ಮೇಲೆ ವ್ಯಾಖ್ಯೆ ಮಾಡುವಾಗ - ದೇವತೆಗಳ ಅಮರತ್ವಕ್ಕೆ, ಅವರು ಏನೂ ಸೇವಿಸದೆ ಹೋದರೂ ಚಟುವಟಿಕೆಯಿಂದ ಓಡಾಡುವುದಕ್ಕೆ ಕಾರಣ ಸೋಮಪಾನ ಎಂಬ ಮಾತು ಜನಜನಿತವಾಯಿತು. ಹಾಗೆ ನೋಡಿದರೆ ದೇವತೆಗಳು ದಿನನಿತ್ಯ ಕುಡಿಯುವ ಪಾನಿಯ ಸೋಮರಸವಾಗಿರಲಿಲ್ಲ. ಯಜ್ಞದ ಯಜಮಾನ ದೇವತೆಗಳನ್ನು ವಿಶೇಷವಾಗಿ ಆಹ್ವಾನಿಸಿದಾಗ ಹಾಲು, ತುಪ್ಪ, ಜೇನಿನಿಂದ ಹದವಾಗಿ ಮಿಶ್ರಮಾಡಿ ಆಗ ತಾನೇ ಹಿಂಡಿದ ಸೋಮರಸವನ್ನು ಸಿದ್ಧಪಡಿಸುತ್ತಿದ್ದ. ಅದನ್ನು ಹೆಚ್ಚು ಕಾಲ ಇಡುವಂತಿರಲಿಲ್ಲ.
ದೇವತೆಗಳ ನಿರಾಹಾರ ಚಟುವಟಿಕೆಯ ಮೂಲ ಕಾರಣವಾಗಿದ್ದ ಸೂರ್ಯಪಾನ ಕಾಲಗರ್ಭದಲ್ಲಿ ಅಡಗಿಹೋಯಿತು. ಅದನ್ನು ಮತ್ತೆ ಮನುಕುಲಕ್ಕೆ ಪರಿಚಯಿಸಿದ ಶ್ರೇಯಸ್ಸು ಹೀರಾ ರತನ್ ಮಾನೆಕ್ ಅವರಿಗೆ ಸೇರುತ್ತದೆ.
ಸಾಷ್ಟಾಂಗ ನಮನಾಸನ: ಸೂರ್ಯನ ಶಕ್ತಿಯನ್ನು ನೇರವಾಗಿ ಉಪಯೋಗಿಸುವ ಮೂಲಕ ದೈಹಿಕ ಕಾಯಿಲೆಗಳಿಂದ ಮುಕ್ತಿ ಪಡೆಯುವ ತಂತ್ರವನ್ನು ಅನುಸರಿಸೋಣ. ಸೂರ್ಯನಮಸ್ಕಾರದ ಶಶಾಂಕಾಸನದ ನಂತರ ಎಂಟು ಅಂಗಗಳನ್ನು ಮಾತ್ರ ನೆಲಕ್ಕೆ ತಾಗಿಸಿ ಮಾಡುವ ಭಂಗಿ ‘ಸಾಷ್ಟಾಂಗ ನಮನಾಸನ’. ಎರಡೂ ಹಸ್ತ, ಎರಡೂ ಕಾಲುಗಳ ಹೆಬ್ಬೆರಳುಗಳು, ಎರಡೂ ಮಂಡಿ, ಹಣೆ ಮತ್ತು ಎದೆ - ಈ ಎಂಟು ಅಂಗಗಳನ್ನು ನೆಲಕ್ಕೆ ಸ್ಪರ್ಶಿಸುವ ನಮಸ್ಕಾರ ಆಸನ.
ಅಂಗೈ ಮತ್ತು ಕಾಲಿನ ಬೆರಳುಗಳ ಸ್ಥಾನ ಇದ್ದಲ್ಲಿಯೇ ಇರಲಿ. ಶ್ವಾಸವನ್ನು ತೆಗೆದುಕೊಳ್ಳುತ್ತ ಮುಂದೆ ಬಂದು ಶ್ವಾಸವನ್ನು ಬಿಡುತ್ತ ಕೈಕಾಲುಗಳು ಮತ್ತು ಮಂಡಿಗಳ ಜೊತೆಗೆ ಹಣೆ ಮತ್ತು ಎದೆಯನ್ನು ನೆಲಕ್ಕೆ ತಾಗಿಸುತ್ತೇವೆ. ಹಣೆ ಭೂಮಾತೆಗೆ ತಾಗಬೇಕು, ಮೂಗು ತಾಗಬಾರದು. ಎದೆ ಹಾಗೂ ಹೊಟ್ಟೆ ತಾಗಬಾರದು. ಪೃಷ್ಠಭಾಗವನ್ನು ಮೇಲೆತ್ತಿರಬೇಕು.
S