

‘ಸೂರ್ಯ’ ಎಂಬ ಪದವೇ ತುಂಬ ಅರ್ಥಗರ್ಭಿತವಾಗಿದೆ. ‘ಸರತಿ ಆಕಾಶೇ ಇತಿ ಸೂರ್ಯಃ’ - ‘ಯಾರು ಆಕಾಶದಲ್ಲಿ ನಿರಾಧಾರವಾಗಿ ಸುತ್ತುವನೋ ಆತನೇ ಸೂರ್ಯ.’ ‘ಸುವತಿ ಕರ್ಮಮಣಿ ಪ್ರೇಶಯತಿ’ - ‘ಯಾರು ತನ್ನ ಉದರದಿಂದಲೇ ಲೋಕದ ಎಲ್ಲ ಜೀವಿಗಳಿಗೆ ತಮ್ಮ ತಮ್ಮ ಕೆಲಸದಲ್ಲಿ ತೊಡಗುವಂತೆ ಪ್ರೇರಣೆ ನೀಡುವನೋ ಆತನೇ ಸೂರ್ಯ.’ ‘ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ’ ಎಂದು ಋಗ್ವೇದ ತಿಳಿಸುತ್ತದೆ. ಅಂದರೆ - ಸೂರ್ಯಭಗವಂತನೇ ಇಡೀ ವಿಶ್ವದ ಸಕಲ ಜೀವಿಗಳಿಗೆ ಅಂತರಾತ್ಮನಾಗಿದ್ದಾನೆ.
ಸೂರ್ಯೋಪನಿಷತ್ತಿನಲ್ಲಿ - ಜಗತ್ತಿನ ಸೃಷ್ಟಿ, ಪಾಲನೆ ಹಾಗೂ ಲಯವು ಸೂರ್ಯನಿಂದಲೇ ಆಗುತ್ತಿರುವುದು. ಸಂಪೂರ್ಣ ಜಗತ್ತಿನ ಅಂತರಾತ್ಮ ಸೂರ್ಯನೇ ಆಗಿರುವನು ಎಂದಿದೆ. ಪಾತಂಜಲ ಯೋಗದರ್ಶನದ ವಿಭೂತಿಪಾದದಲ್ಲಿನ ಇಪ್ಪತ್ತಾರನೆಯ ಸೂತ್ರದಲ್ಲಿ ‘ಭುವನಜ್ಞಾನಂ ಸೂರ್ಯು ಸಂಯಮಾತ್’ - ‘ಸೂರ್ಯನ ಮೇಲೆ ಸಂಯಮ ಮಾಡಿದರೆ ಭುವನದ ಜ್ಞಾನ ಉಂಟಾಗುತ್ತದೆ’ ಎಂದಿದೆ.
ಸೂರ್ಯ ನಿರಂತರ ಕ್ರಿಯಾಶೀಲ. ಕರ್ಮದಲ್ಲಿ ತೊಡಗಿರುವ ಕರ್ಮಯೋಗಿ. ‘ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ’ ಎಂಬ ಸುಭಾಷಿತವು ಸೂರ್ಯನ ಕುರಿತು - ‘ಮಹಾನುಭಾವರ ಕಾರ್ಯಸಿದ್ಧಿಯಾಗುವುದು ಅವರ ಸಾಮರ್ಥ್ಯದಿಂದಲೇ ಹೊರತು ದೊಡ್ಡ ದೊಡ್ಡ ಉಪಕರಣಗಳಿಂದಲ್ಲ.’ ಎಂಬರ್ಥವನ್ನು ಗ್ರಹಿಸಲು ಪ್ರೇರೇಪಿಸುತ್ತದೆ.
ಉತ್ತಮ ಮನಶ್ಶಾಸ್ತ್ರಜ್ಞರಾದ ನಮ್ಮ ಹಿರಿಯರು ಮನಸ್ಸಿಗೆ ಶಿಕ್ಷಣವನ್ನು, ಜೀವನಕ್ಕೆ ಸಂಸ್ಕಾರವನ್ನು ನೀಡಲು ಅನೇಕ ಆಚಾರವಿಚಾರಗಳನ್ನು ಸೂಚಿಸಿದ್ದಾರೆ. ಇವುಗಳಲ್ಲಿ ಗಾಯತ್ರೀ ಮಂತ್ರೋಪಾಸನೆ ಅತ್ಯಂತ ಸರಳ, ಸುಲಭ ಹಾಗೂ ತೀವ್ರ ಪರಿಣಾಮಕಾರಿ. ಗಾಯತ್ರೀ ಮಂತ್ರೋಪಾಸನೆ ಎಂದರೆ ಸೂರ್ಯನ ಉಪಾಸನೆಯೇ ಆಗಿದೆ.
ಮನುಷ್ಯನ ಶರೀರ ಒಂದು ಅದ್ಭುತ ಯಂತ್ರ. ಈ ಯಂತ್ರ ಕಾರ್ಯ ನಿರ್ವಹಿಸಬೇಕಾದರೆ ಎಲ್ಲ ನರನಾಡಿಗಳು ಸುವ್ಯವಸ್ಥಿತವಾಗಿರಬೇಕು. ನಮ್ಮ ಶರೀರದಲ್ಲಿ 72 ಸಾವಿರ ನಾಡಿಗಳಿವೆ. ಗಾಯತ್ರೀಮಂತ್ರವು ಈ ನಾಡಿಗಳಿಗೆ ವ್ಯಾಯಾಮವನ್ನು ನೀಡಿ ಉತ್ತಮ ಕಾರ್ಯಕ್ಕೆ ಪ್ರಚೋದಿಸುತ್ತದೆ. ಗಾಯತ್ರೀಮಂತ್ರದಲ್ಲಿರುವ 24 ಅಕ್ಷರಗಳು ಬೆನ್ನುಮೂಳೆಯಲ್ಲಿರುವ 24 ಕೀಲುಗಳನ್ನು ಪ್ರಚೋದಿಸಿ ಸಮನ್ವಯ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯೋಗದ ದೃಷ್ಟಿಯಲ್ಲಿ ಬೆನ್ನುಮೂಳೆ ಅಥವಾ ಮೇರುದಂಡ ಮಹತ್ವದ ಸ್ಥಾನವನ್ನು ಹೊಂದಿದೆ. ಈ ಮೂಳೆ ಶರೀರದ ಕಂಬವೆಂದು ಕರೆಯಲ್ಪಡುವುದು. ಆಧುನಿಕ ಶರೀರಶಾಸ್ತ್ರದಲ್ಲಿಯೂ ಬೆನ್ನುಮೂಳೆಯ 24 ಭಾಗಗಳನ್ನು ಹೆಸರಿಸಿದ್ದಾರೆ. ಇಂತಹ ಮಹತ್ವದ ಸ್ಥಾನವನ್ನು ಹೊಂದಿರುವ ಮೇರುದಂಡವನ್ನು ಸುಸ್ಥಿತಿಯಲ್ಲಿಡಲು, ಅದರೊಳಗಿರುವ ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳನ್ನು, ಮೂಲಾಧಾರಾದಿ ಆರು ಚಕ್ರಗಳನ್ನು ಪ್ರಚೋದಿಸಲು ಓಂಕಾರ ಉಚ್ಚಾರಣೆ, ಗಾಯತ್ರೀ ಮಂತ್ರಾನುಷ್ಠಾನ, ಸಂಧ್ಯಾವಂದನೆ, ಸೂರ್ಯನಮಸ್ಕಾರ ಸರಳ ಸಾಧನಾಮಾರ್ಗಗಳಾಗಿವೆ.
ಏಕಪಾದ ಪ್ರಸರಣಾಸನ: ಸೂರ್ಯನಮಸ್ಕಾರದಲ್ಲಿ ಪಾದಹಸ್ತಾಸನದ ನಂತರ ಒಂದು ಕಾಲನ್ನು ಹಿಂದೆ ಚಾಚುವ ಆಸನವೇ ಏಕಪಾದ ಪ್ರಸರಣಾಸನ. ಶ್ವಾಸವನ್ನು ಒಳಗೆ ಎಳೆದುಕೊಳ್ಳುತ್ತ ಬಲಗಾಲನ್ನು ಹಿಂದಕ್ಕೆ ಚಾಚೋಣ. ಪಾದದ ಮುಂಭಾಗ, ಅಂಗುಷ್ಠಗಳು ಮತ್ತು ಬಲಮಂಡಿ ನೆಲಕ್ಕೆ ತಾಗಿರಲಿ. ತೊಡೆ ಹಾಗೂ ಮೀನಖಂಡಗಳು ತಾಗುವಂತೆ ಎಡಮಂಡಿಯನ್ನು ಮುಂದೆ ಒತ್ತುತ್ತ ಎದುರು ನೋಡೋಣ. ಎಡಪಾದದ ಬೆರಳುಗಳು ಹಾಗೂ ಎರಡೂ ಕೈ ಬೆರಳುಗಳು ಒಂದೇ ನೇರದಲ್ಲಿರಲಿ. ಲಾಭ: ತೊಡೆಯ ಪೆಡಸುತನ ನಿವಾರಣೆ. ಎದೆ ವಿಸ್ತಾರಗೊಳ್ಳಲು, ಭುಜಗಳಲ್ಲಿ ಸಾಮರ್ಥ್ಯ ಹೆಚ್ಚಲು ಸಹಕಾರಿ.