

ಇಂದಿನ ವೈದ್ಯಕೀಯ ಪ್ರಪಂಚದಲ್ಲಿ ‘ಬಿಸಿಲುಸ್ನಾನ’, ‘ಸೂರ್ಯಸ್ನಾನ’, ‘ವರ್ಣಚಿಕಿತ್ಸೆ’ ಎಂಬ ನೂತನ ಚಿಕಿತ್ಸಾವಿಧಾನವು ರೂಢಿಗೆ ಬರುತ್ತಿದೆ. ಇದನ್ನು ಕುರಿತು ಡಾ. ಗಾರ್ಡಿನರ್ ಹೀಗೆನ್ನುತ್ತಾರೆ; ‘ಬಿಸಿಲಿನಲ್ಲಿ ತನುವನ್ನು ಮೀಯಿಸಿರಿ. ಸೂರ್ಯನೇ ಶ್ರೇಷ್ಠ ಗುಣಕಾರಿ. ಎಲ್ಲ ಆರೋಗ್ಯಕ್ಕೂ ಮೂಲ. ಈ ನೂತನ ವಿಧಾನದಿಂದ ಪ್ರಪಂಚದಾದ್ಯಂತ ಕ್ಷಯ, ವಿಷಮ ಶೀತಜ್ವರ, ಕಜ್ಜಿ, ತಲೆಶೂಲೆ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ವ್ಯಾಧಿಗಳೆಲ್ಲವೂ ಜಾಗ್ರತೆಯಾಗಿ ನಿಶ್ಚಯವಾಗಿ ಗುಣವಾಗುತ್ತವೆ.’
ಒಬ್ಬ ಕುಷ್ಠರೋಗಿಯು ಏಕಾಗ್ರಚಿತ್ತನಾಗಿ ಸೂರ್ಯನನ್ನು ಕುರಿತು ಧ್ಯಾನಿಸಿದರೆ ಅವನು ರೋಗಮುಕ್ತನಾಗುತ್ತಾನೆ. ಋಗ್ವೇದದಲ್ಲಿ ಹೇಳಲ್ಪಟ್ಟ ಕೆಲವು ಋಕ್ಕುಗಳು ಸರ್ವವಿಷಾಪಹಾರಿಗಳೆಂದೂ, ಅವುಗಳನ್ನು ಅನುಸಂಧಾನ ಮಾಡಿದರೆ ಸರ್ವವ್ಯಾಧಿಗಳೂ ನಿವಾರಣೆ ಆಗುವುದಲ್ಲದೆ ಭೂತಬಾಧೆ, ಗ್ರಹಶಂಕೆ, ಮನೋಶೂನ್ಯಾದಿ ಉಪದ್ರವಗಳು ಶಮನವಾಗುವುದೆಂದೂ ಹೇಳಲ್ಪಟ್ಟಿದೆ. ಇದರಿಂದಲೇ ಈ ಋಕ್ಕುಗಳ ಸಮುದಾಯವನ್ನು ‘ರೋಗಘ್ನ ಉಪನಿಷತ್’ ಎಂದೂ ಕರೆಯಲಾಗಿದೆ.
ಬಿಸಿಲುಚಿಕಿತ್ಸೆಯಲ್ಲಿ ಪ್ರವೀಣರಾದ ಸ್ವಿಜರ್ಲೆಂಡ್ನ ಡಾ. ರೋಲಿ ಅವರು ಹೀಗೆ ಹೇಳಿದ್ದಾರೆ: ‘ವ್ಯಾಯಾಮದಂತೆ ಬಿಸಿಲುಸ್ನಾನವೂ ಶಾಲೆಯ ಕಾರ್ಯಕಲಾಪಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು. ಇವೆರಡನ್ನೂ ಜೊತೆಗೂಡಿಸಬಹುದು. ಬೆಳಗಿನ ಸೂರ್ಯನ ಲಾಭ ಸಿಗುವಂತೆ ಮನರಂಜನೆ ಮತ್ತು ದೈಹಿಕ ಶಿಕ್ಷಣಗಳನ್ನೂ ಏರ್ಪಡಿಸಬೇಕು. ಅವರ ದೇಹದ ಮೇಲೆ ಬಿಸಿಲು ಬೀಳುವಂತೆ ನೋಡಿಕೊಳ್ಳಬೇಕು.’
ಒಳ್ಳೆಯ ಆರೋಗ್ಯಕ್ಕೆ ಸಾಕಷ್ಟು ಬಿಸಿಲು ಇರಬೇಕು. ಏಕೆಂದರೆ ಬೆಳಗಿನ ಮತ್ತು ಸಂಜೆಯ ಬಿಸಿಲು ಕೆಂಪು ರಕ್ತಕಣಗಳನ್ನು ವೃದ್ಧಿಗೊಳಿಸುತ್ತದೆ. ದೇಹದ ಅಂಗಾಂಗಗಳನ್ನು ಪುಷ್ಟಿಗೊಳಿಸುತ್ತದೆ. ಚರ್ಮವನ್ನು ಶುಚಿಗೊಳಿಸುತ್ತದೆ. ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿ ಚಿರಯೌವನದ ಉತ್ಸಾಹವನ್ನು ತುಂಬುತ್ತದೆ.
ಸೂರ್ಯಕಿರಣಗಳು ಎಲ್ಲ ಆಹಾರಗಳ ಮೂಲ. ವೀರ್ಯವರ್ಧಕ ಮತ್ತು ಆಯುಸ್ಸನ್ನು ಪೋಷಿಸುವ ದಿವ್ಯೌಷಧ. ಅದು ಸಸ್ಯಕ್ಕೆ ಹೇಗೋ ಹಾಗೆಯೇ ಬೆಳೆಯುವ ಮಗುವಿಗೂ ಅತ್ಯಾವಶ್ಯಕ. ಭೂಮಿಯ ಮೇಲೆ ಬೆಳೆಯುವ ತರಕಾರಿಗಳು ಸೂರ್ಯನ ಸಂಪರ್ಕದಿಂದ ಬೇರೆ ತರಕಾರಿಗಳಿಗಿಂತ ಹೆಚ್ಚಿನ ಅನ್ನಾಂಗವನ್ನು ಹೊಂದಿರುತ್ತವೆ. ಮನೆಯೊಳಗೆ ಕಟ್ಟಿಹಾಕಿ ಪೋಷಿಸಿದ ಹಸುವಿನ ಹಾಲಿನಲ್ಲಿ ದೇಹದ ಬೆಳವಣಿಗೆಗೆ ಅವಶ್ಯಕವಾದ ಡಿ ಅನ್ನಾಂಗವು ಇರುವುದಿಲ್ಲ. ಈ ಅನ್ನಾಂಗವು ಹೆಚ್ಚಾಗಿ ದೊರಕಬೇಕಾದರೆ ಹಸುಗಳು ಹೊರಗೆ ಹೋಗಿ ಸೂರ್ಯನ ಕಟುನೀಲ ಕಿರಣಗಳ ಸಂಪರ್ಕವನ್ನು ಪಡೆಯಬೇಕು. ಪ್ರಕೃತಿಯ ವಿವಿಧ ವ್ಯಾಪಾರಗಳು, ಮನುಷ್ಯದೇಹದ ಶಾಖ ಮತ್ತು ಚಲನೆ, ಮರ ಅಥವಾ ಕಲ್ಲಿದ್ದಲಿನ ಉರಿಯುವಿಕೆ - ಇವೆಲ್ಲವೂ ಕ್ರಿಯಾರೂಪದಲ್ಲಿರುವ ಸೌರಶಕ್ತಿಯೇ ಆಗಿದೆ.
ಶಶಾಂಕಾಸನ: ಸೂರ್ಯನಮಸ್ಕಾರದ ದ್ವಿಪಾದ ಪ್ರಸರಣಾಸನದ ಮುಂದಿನ ಹಂತ ಶಶಾಂಕಾಸನ ಎಂಬ ವಿಶ್ರಾಂತಿದಾಯಕ ಆಸನ. ಇದನ್ನು ಆಕುಂಚಿತ ಭೂಧರ ಆಸನ ಎಂದು ಸಹ ಕರೆಯುವರು. ಮೊಲವು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಕುಳಿತಂತೆ ಹೋಲುವ ಭಂಗಿ. ಶ್ವಾಸ ತೆಗೆದುಕೊಳ್ಳುತ್ತ ಕೈಕಾಲುಗಳನ್ನು ಚಲಿಸದೆ ಹಾಗೆಯೇ ಮಂಡಿ ಊರಿ ಪಾದವನ್ನು ಹಿಂದೆ ಚಾಚಿ ಹಿಮ್ಮಡಿಗಳ ಮೇಲೆ ಕೂರೋಣ. ಶ್ವಾಸ ಬಿಡುತ್ತ ಮುಂದಕ್ಕೆ ಬಾಗಿ ಹಣೆಯನ್ನು ನೆಲಕ್ಕೆ ತಾಗಿಸೋಣ. ಹಣೆಯನ್ನು ತಾಗಿಸಬೇಕೆಂಬ ಕಾರಣದಿಂದ ಪೃಷ್ಠಭಾಗವನ್ನು ಮೇಲೆತ್ತಬಾರದು.
ಲಾಭಗಳು: ಸೂರ್ಯನಮಸ್ಕಾರದಿಂದ ಆಗುವ ಪರಿಣಾಮದ ಲಾಭವನ್ನು ಪಡೆಯಲು ಮನಸ್ಸು, ಶ್ವಾಸ ಹತೋಟಿಗೆ ತರಲು, ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ.