ಯೋಗ ಕ್ಷೇಮ: ಯೋಗಾಭ್ಯಾಸಿಗಳು ಗಮನಿಸಬೇಕಾದ ಅಂಶಗಳು

AROGYA
Published on

ಯೋಗಾಸನಾಭ್ಯಾಸಕ್ಕೆ ಮೊದಲು ಶೌಚಕ್ರಿಯೆ, ಮಲ-ಮೂತ್ರ ವಿಸರ್ಜನೆ ಆಗಿರುವುದು ಒಳಿತು. ಶುದ್ಧವಾದ ಪರಿಸರ ಆಯ್ಕೆ, ಏರುತಗ್ಗುಗಳಿಲ್ಲದ ಸಮತಟ್ಟಾದ ನೆಲದ ಆಯ್ಕೆ ಅಗತ್ಯ. ಬೆಳಗಿನ ಅಥವಾ ಸಂಜೆಯ ಸಮಯ ಅಭ್ಯಾಸಕ್ಕೆ ಹೆಚ್ಚು ಉತ್ತಮ ಹಾಗೂ ಫಲಕಾರಿ. ಸ್ನಾನದ ನಂತರ ಆಸನಗಳ ಅಭ್ಯಾಸ ಮಾಡಿದರೆ ಶರೀರದ ಚಾಲನೆ ಸುಲಭವಾಗುತ್ತದೆ. ಶರೀರದ ಯಾವುದೇ ಭಾಗ ನೆಲಕ್ಕೆ ತಾಗದಂತೆ ಅಗತ್ಯವಾದ ಜಮಖಾನವನ್ನು ಹಾಸಿ ಅಭ್ಯಾಸ ಮಾಡುವುದು ಅವಶ್ಯ.

ಊಟವಾದ ನಂತರ ಕನಿಷ್ಠ ಮೂರು ಗಂಟೆಗಳ ಅವಧಿಯವರೆಗೆ ಆಸನಗಳ ಅಭ್ಯಾಸ ಬೇಡ. ಲಘು ಉಪಾಹಾರವಿದ್ದಲ್ಲಿ ಎರಡು ಗಂಟೆಗಳ ನಂತರ ಅಭ್ಯಾಸ ಒಳ್ಳೆಯದು. ಅಭ್ಯಾಸಕ್ಕೆ ಸ್ವಲ್ಪ ಮುನ್ನ ನೀರು ಸೇವಿಸುವುದು ಒಳ್ಳೆಯದು. ಸಾಧ್ಯವಾದಷ್ಟು ಕನಿಷ್ಠ ಹಿತವಾದ ಉಡುಪು ಅಭ್ಯಾಸದ ದೃಷ್ಟಿಯಿಂದ ಒಳ್ಳೆಯದು. ಬಿಗಿಯಾದ ಉಡುಪು ಬೇಡ. ಆಸನಗಳ ಅಭ್ಯಾಸದ ಸಂದರ್ಭದಲ್ಲಿ ಸ್ಥೂಲ ಶರೀರವಿದ್ದಲ್ಲಿ, ವಾತಾವರಣ ಬಿಸಿ ಇದ್ದಲ್ಲಿ ಶರೀರ ಬೆವರುವುದು ಸಹಜ. ಆದರೆ ನಿವಾರಣೆಗಾಗಿ ಫ್ಯಾನ್ ಬಳಸುವುದು ಬೇಡ.

ಮೈ ಬೆವರಲಿ. ಆ ಬೆವರು ಸಹಜವಾಗಿಯೇ ತಣಿಯಲಿ. ಅಭ್ಯಾಸದ ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಸ್ನಾನ ಮಾಡಿದರೆ ಮೈ ಮನಸ್ಸುಗಳು ಹಗರುವಾಗುತ್ತವೆ. ಶರೀರ ಹೆಚ್ಚು ದಣಿದಿರುವಾಗ, ಮನಸ್ಸು ತುಂಬ ಉದ್ವೇಗ, ಒತ್ತಡ ಸ್ಥಿತಿಯಲ್ಲಿರುವಾಗ ಅಭ್ಯಾಸಗಳು ಬೇಡ. ವಿಶ್ರಾಂತಿ ಸ್ಥಿತಿಗೆ ತಂದುಕೊಂಡ ನಂತರ ಅಭ್ಯಾಸ ಒಳಿತು.

ಎಷ್ಟು ಆಸನಗಳನ್ನು ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಮಾಡಿದಷ್ಟು ಆಸನಗಳನ್ನು ಎಷ್ಟು ಪರಿಣಾಮಕಾರಿಯಾಗಿ, ಸಮರ್ಪಕವಾಗಿ ಮಾಡುತ್ತೇವೆ ಎನ್ನುವುದು ಮುಖ್ಯ. ಆಸನಗಳ ಅಭ್ಯಾಸದಲ್ಲಿ ಪುನರಾವರ್ತನೆಗೆ ಪ್ರಾಧಾನ್ಯತೆ ಕಡಿಮೆ ಹಾಗಾಗಿ ಒಂದೊಂದು ಆಸನದ ಅಂತಿಮ ಹಂತದಲ್ಲಿ ಹೆಚ್ಚು ಕಾಲ ಸ್ಥಿರವಾಗಿ, ಸುಖವಾಗಿ ಇರುವ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯ.

ಆಸನಗಳಲ್ಲಿ ಮೊದಮೊದಲಿಗೆ ಪರಿಪೂರ್ಣತೆ ಸಾಧ್ಯವಿಲ್ಲ. ‘ಅಭ್ಯಾಸಾತ್ ಸಿದ್ಧಿಮಾಪ್ನೋತಿ’ ಎಂಬಂತೆ ನಿರಂತರ ಹಾಗೂ ಸತತ ಅಭ್ಯಾಸದಿಂದ ಸಿದ್ಧಿ ದೊರಕುತ್ತದೆ. ಹಠದಿಂದ, ಬಲಾತ್ಕಾರವಾಗಿ ಅಭ್ಯಾಸ ಮಾಡುವ ಬದಲಾಗಿ ಪ್ರೀತಿಯಿಂದ ನಿತ್ಯ ಶರೀರವನ್ನು ಪಳಗಿಸುತ್ತಾ ಅಭ್ಯಾಸ ಮಾಡುವುದು ಮುಖ್ಯ.

ಪ್ರತಿಯೊಂದು ಆಸನಕ್ಕೂ ಪೂರಕ ಆಸನಗಳ ಅಭ್ಯಾಸ ಅತಿ ಮುಖ್ಯ. ಒಂದು ಹಿಂದಕ್ಕೆ ಬಾಗುವ ಆಸನ ಅಭ್ಯಾಸ ಮಾಡಿದರೆ ಪ್ರತಿಯಾಗಿ ಮುಂದಕ್ಕೆ ಬಾಗುವ ಆಸನಾಭ್ಯಾಸ, ಎಡಕ್ಕೆ ಬಾಗಿದರೆ ಬಲಕ್ಕೆ ಬಾಗುವ ಆಸನ, ಕುತ್ತಿಗೆ ಎದೆಯ ಭಾಗ ಮೇಲೆತ್ತಿದರೆ ಪೂರಕವಾಗಿ ಸೊಂಟ ಹಾಗೂ ಅದರ ಕೆಳಭಾಗವನ್ನು ಮೇಲೆತ್ತುವ ಆಸನ - ಹೀಗೆ ಪೂರಕ ಆಸನಗಳ ಅಭ್ಯಾಸದ ಬಗ್ಗೆ ಗಮನವಿರಲಿ.

ಪ್ರಯತ್ನ ಶೈಥಿಲ್ಯ ಅನಂತ ಸಮಾಪತ್ತಿ ಭ್ಯಾಂ ಎನ್ನುತ್ತಾರೆ ಪತಂಜಲಿ. ಆಸನಗಳ ಅಂತಿಮ ಹಂತದಲ್ಲಿ ಪ್ರಯತ್ನವಿಲ್ಲದೆಯೇ ಸಹಜವಾಗಿ ಇರುವ ಸ್ಥಿತಿ. ಇಲ್ಲಿ ದೈಹಿಕ ಮಟ್ಟಕ್ಕಿಂತ ಮನಸ್ಸನ್ನು ಆಧ್ಯಾತ್ಮಿಕ ಸ್ತರಕ್ಕೇರಿಸಿ ಅನಂತ ತತ್ವದಲ್ಲಿ ಮನಸ್ಸನ್ನು ನಿಲ್ಲಿಸುವ ಸ್ಥಿತಿಯ ಕಡೆಗೆ ಒಯ್ಯಬೇಕಾದುದು ನಮ್ಮ ಧ್ಯೇಯವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net