

ಒಬ್ಬ ಯುವಕ ಹಳ್ಳಿಯಲ್ಲಿ ಕನ್ನಡಕ ಮಾರಾಟದ ಅಂಗಡಿಯನ್ನು ಆರಂಭಿಸಿದ. ಆತ ಜನರ ಕಣ್ಣಿನ ತೊಂದರೆಯನ್ನು ಪರೀಕ್ಷಿಸಿ ಸೂಕ್ತ ಕನ್ನಡಕವನ್ನು ಒದಗಿಸುತ್ತಿದ್ದ. ದೃಷ್ಟಿದೋಷವಿದ್ದ ಅನೇಕರು ಅಂಗಡಿಗೆ ಬಂದು ತಮ್ಮ ಕಣ್ಣಿನ ತೊಂದರೆಗಳಿಗೆ ಅನುಸಾರವಾಗಿ ಕನ್ನಡಕವನ್ನು ಪಡೆದು, ಸರಾಗವಾಗಿ ಓದಲು, ಬರೆಯಲು ಸಮರ್ಥರಾದರು. ಅಂಗಡಿಯ ಜನಪ್ರಿಯತೆ ಕೇಳಿ, ಆ ಊರಿನ ಜಮೀನ್ದಾರ ಸಹಿತ ಕನ್ನಡಕ ಕೊಳ್ಳಲು ಬಂದ. ಅಂಗಡಿಯಾತ ಜಮೀನ್ದಾರನಿಗೆ ಬೇರೆ ಬೇರೆ ಪಾಯಿಂಟ್ಗಳು ಇರುವ ಹಲವಾರು ಕನ್ನಡಕ ಧರಿಸಿ ಓದಲು ಹೇಳಿದ. ಆದರೆ ಜಮೀನ್ದಾರನಿಗೆ ಒಂದು ಅಕ್ಷರವನ್ನೂ ಓದಲಾಗಲಿಲ್ಲ. ಆಗ ಆತ ಅಂಗಡಿಯವನಿಗೆ-‘ನೀನು ಮೋಸಗಾರ. ನನಗೆ ಓದಲಾಗುತ್ತಿಲ್ಲ. ನಿನ್ನ ಅಂಗಡಿಯ ಕನ್ನಡಕಗಳು ಸರಿಯಾಗಿಲ್ಲ’ ಎಂದು ಕೂಗಾಡತೊಡಗಿದ. ಆಗ ಅಂಗಡಿಯಾತ, ‘ನೀವು ಯಾವ ಭಾಷೆಯ ಲಿಪಿಯನ್ನು ಓದಬಲ್ಲಿರಿ?’ ಎಂದು ಕೇಳಿದಾಗ ಜಮೀನ್ದಾರ ‘ನಾನು ಓದಲು ಕಲಿತಿಲ್ಲ. ನಿಮ್ಮ ಅಂಗಡಿಯ ಕನ್ನಡಕ ಹಾಕಿಕೊಂಡರೆ ಚೆನ್ನಾಗಿ ಓದಬಹುದು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದಕ್ಕಾಗಿ ಇಲ್ಲಿಗೆ ಬಂದೆ...’ ಎಂದ. ಆಗ ಅಂಗಡಿಯವ ನಗುತ್ತ, ‘ಈ ಕನ್ನಡಕ ಓದಲು ಬಳಸುವ ಒಂದು ಸಾಧನವೇ ಹೊರತು, ಓದಲು ಕಲಿಸಲಾರದು. ಓದುವುದನ್ನು ನೀವೇ ಕಲಿತಿರಬೇಕು’ ಎಂದ.
ಭಕ್ತಿ ಹಾಗೂ ಭಕ್ತಿಮಾರ್ಗಗಳ ನಡುವಿನ ಸೂಕ್ಷ್ಮಗಳು ಹೀಗೆಯೇ. ಭಕ್ತಿ ಎನ್ನುವುದು ಓದುವ ಸಾಮರ್ಥ್ಯದಂತೆ. ಆ ಸಾಮರ್ಥ್ಯವನ್ನು ನಾವು ಗುರುವಿನಿಂದ ಪಡೆಯುತ್ತೇವೆ. ಈ ಕನ್ನಡಕಗಳು ಭಕ್ತಿಯ ಮಾರ್ಗದಂತೆ. ಅದು ದ್ವೈತವೇ ಆಗಿರಲಿ, ಅದ್ವೈತ, ವಿಶಿಷ್ಟಾದ್ವೈತವೇ ಆಗಿರಲಿ, ಮನದೊಳಗೆ ಭಕ್ತಿ, ನಿಷ್ಠೆ ಇದ್ದಾಗ ಮಾತ್ರ ಆ ಸಿದ್ಧಾಂತಗಳು ಕೆಲಸ ಮಾಡುತ್ತವೆ, ದಾರಿ ತೋರುತ್ತವೆ. ‘ಎನ್ನ ಕಾಲೇ ಕಂಬ ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ’ ಎಂದು ಬಸವಣ್ಣನವರು ತನ್ನೊಳಗೆ ಪರಮಾತ್ಮನನ್ನು ಕಂಡು ಶುದ್ಧರಾಗಿ ದೈವತ್ವಕ್ಕೇರಿದರು. ‘ಕಾಯಕ’ ಎಂಬ ಮಾರ್ಗದಲ್ಲಿ ಕೈಲಾಸವನ್ನು ಕಂಡರು. ‘ಜನಸೇವೆಯೇ ಜನಾರ್ದನ ಸೇವೆ’ ಎಂದು ಅನೇಕ ಮಹಾತ್ಮರು ದೀನದಲಿತರ ಸೇವೆಯನ್ನು ನಿಷ್ಠೆಯಿಂದ ಮಾಡಿ ಆತ್ಮತೃಪ್ತಿ ಪಡೆದರು. ಮುಕ್ತಿ, ತೃಪ್ತಿಗೆ, ಒಳ್ಳೆಯ ಕೆಲಸ ಕಾರ್ಯಗಳಿಗೆ ಸಾಕಷ್ಟು ಮಾರ್ಗಗಳು ಉಂಟು. ಆದರೆ ಆ ಮಾರ್ಗದಲ್ಲಿ ಸಾಗಬೇಕು ಎಂದರೆ ನಮ್ಮೊಳಗೆ ಭಕ್ತಿ ಇರಬೇಕು. ಉತ್ಕಟ ಇಚ್ಛೆ ಇರಬೇಕು. ಅದು ವೈಯಕ್ತಿಕವಾಗಿದ್ದು ವ್ಯಕ್ತಿಯೇ ಅದನ್ನು ಗಳಿಸಿಕೊಳ್ಳುತ್ತ ಸಾಗಬೇಕು. ಆತ್ಮದಲ್ಲಿ ಭಕ್ತಿಯಿರದೇ ವ್ಯವಸ್ಥೆ ಎಂಬ ಮಾರ್ಗವನ್ನು, ಆಚರಣಾ ಪದ್ಧತಿಗಳನ್ನು ದೂಷಿಸಿದರೆ ‘ಕುಣಿಯಲು ಬಾರದವ ನೆಲ ಡೊಂಕು’ ಎಂದಂತಾಗುತ್ತದೆ ಅಲ್ಲವೇ?
ಬಾಳ ಕಡಲಲಿ ತೇಲುತಿವೆ, ನೂರಾರು ನಾವೆ ಆಯ್ಕೆಗಳು ಬಹಳ, ನಡೆಸುವವರು ನಾವೇ ಗುರು-ಗುರಿಯೆಂಬ ಆದಿ ಅಂತ್ಯದ ನಡುವೆ ಸಾಗುತಲಿರು ನೀ ದೃಢಚಿತ್ತದಲಿ ಮನವೇ
| ರೇಖಾ ಗಜಾನನ ಭಟ್ಟ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)