

ಚಳಿಗಾಲ ಬಂತೆಂದರೆ ಹಿಮ್ಮಡಿ ಒಡಕು ಸಮಸ್ಯೆ ತುಂಬ ಜನರ ಕಾಡುತ್ತದೆ. ಇದು ಚಿಕ್ಕ ಸಮಸ್ಯೆ ಎಂದು ಹಲವಾರು ಕ್ರೀಮ್ಳನ್ನು ಹಚ್ಚಿ ಪರಿಹಾರ ಸಿಗದೆ ಒದ್ದಾಡುವ ಸಾಕಷ್ಟು ಜನರಿದ್ದಾರೆ. ಧೂಳು, ತುಂಬ ಸಮಯ ನಿಂತಿರುವುದು, ಶೂ ಅಥವಾ ಸಾಕ್ಸ್ ಬಳಸದೆ ಇರುವುದು, ತುಂಬ ಗಡುಸಾದ ಸೋಪ್ ಬಳಸುವುದು - ಇಂತಹ ಚಿಕ್ಕಪುಟ್ಟ ಕಾರಣಗಳಿಂದ ಹಿಡಿದು ಸೋರಿಯಾಸಿಸ್, ಡರ್ಮಟೈಟಿಸ್ನಂತಹ ಚರ್ಮರೋಗಗಳು, ಥೈರಾಯ್್ಡ ಸಮಸ್ಯೆಗಳು, ವಿಟಮಿನ್ಗಳ ಕೊರತೆಯವರೆಗೆ ಹಲವು ಕಾರಣಗಳಿಂದ ಹಿಮ್ಮಡಿ ಒಡೆಯುತ್ತದೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಪಾದ ಒಡೆಯುವ ಸಮಸ್ಯೆಗೆ ಪರಿಹಾರಗಳನ್ನು ತಿಳಿದುಕೊಳ್ಳೋಣ. ಚಳಿಗಾಲ
ಧೂಳು ಮತ್ತು ತಂಪಿನಿಂದ ರಕ್ಷಿಸಿಕೊಳ್ಳಲು ಸಾಕ್ಸ್ಗಳನ್ನು ಬಳಸಬಹುದು. ಹಿಮ್ಮಡಿ ಒಡಕಿಗೆ ಒಳ್ಳೆಯ ಕೊಬ್ಬಿನ ಸೇವನೆ ತುಂಬ ಆವಶ್ಯಕ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ತುಪ್ಪ, ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆಗಳನ್ನು ಸೇವಿಸಬೇಕು. ಆದರೆ ಕರಿದ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ನಿತ್ಯವೂ ಪಾದಾಭ್ಯಂಗ ಅಂದರೆ ಪಾದಗಳಿಗೆ ಎಣ್ಣೆ ಅಥವಾ ತುಪ್ಪದ ಮಸಾಜ್ ಮಾಡಿಕೊಳ್ಳಬೇಕು ಎಂದು ಆಯುರ್ವೆದದಲ್ಲಿ ಹೇಳಿದ್ದಾರೆ. ವಿಶೇಷವಾಗಿ ಚಳಿಗಾಲದಲ್ಲಿ ನಿತ್ಯವೂ ಹಾಗೆ ಮಸಾಜ್ ಮಾಡಿ ಬಿಸಿನೀರಿನಲ್ಲಿ ಹತ್ತು ನಿಮಿಷ ಕಾಲಿಟ್ಟುಕೊಂಡರೆ ಈ ಸಮಸ್ಯೆ ಶುರುವಾಗಲು ಸಾಧ್ಯವೇ ಇಲ್ಲ. ಜೊತೆಗೆ ಇದರಿಂದ ಹಲವಾರು ಬೇರೆ ರೀತಿಯ ಪ್ರಯೋಜನಗಳೂ ದೊರೆಯುತ್ತವೆ.
ಇನ್ನು ಈಗಾಗಲೇ ಹಿಮ್ಮಡಿ ಒಡೆದಿದ್ದರೆ ಅದಕ್ಕೆ ವಿಶೇಷ ಆರೈಕೆ ಬೇಕಾಗುತ್ತದೆ. ತುಪ್ಪಕ್ಕೆ ಅರಿಶಿಣವನ್ನು ಸೇರಿಸಿಟ್ಟುಕೊಂಡು ಹಚ್ಚುತ್ತ ಬಂದರೆ ಈ ಸಮಸ್ಯೆ ಬಹಳ ಬೇಗ ವಾಸಿಯಾಗುತ್ತದೆ. 100 ಮಿ.ಲೀ. ಕೊಬ್ಬರಿ ಎಣ್ಣೆಗೆ 20ರಿಂದ 30 ಗ್ರಾಂನಷ್ಟು ಶುದ್ಧ ಜೇನುಮೇಣವನ್ನು ಕರಗಿಸಿ ಸೇರಿಸಿದರೆ ಕ್ರೀಮ್ಂತಾಗುತ್ತದೆ. ಇದನ್ನಿಟ್ಟುಕೊಂಡು ಹಿಮ್ಮಡಿ ಮತ್ತು ತುಟಿಯ ಒಡಕಿಗೆ ನಿತ್ಯವೂ ಹಚ್ಚಬಹುದು. ಇನ್ನು ಹಿಮ್ಮಡಿ ಒಡಕು ಅತಿಯಾಗಿದ್ದು ಕೀವು ಸೋರುತ್ತಿದ್ದರೆ 50 ಮಿಲೀ ಕೊಬ್ಬರಿ ಎಣ್ಣೆಗೆ 10 ಮಿ.ಲೀ. ಬೇವಿನ ಎಣ್ಣೆ, ಒಂದು ಚಮಚ ಅರಿಶಿಣ ಮತ್ತು ಮಂಜಿಷ್ಠದ ಪುಡಿ ಹಾಗೂ ಅರ್ಧ ಚಮಚ ಚಂದನದ ಪುಡಿ ಹಾಕಿ ಸೇರಿಸಿಟ್ಟುಕೊಂಡು ನಿತ್ಯವೂ ಹಚ್ಚಬೇಕು. ಇದನ್ನು ಹಚ್ಚುವ ಮೊದಲು ಬೇವಿನ ಕಷಾಯ ಅಥವಾ ಬಿಸಿನೀರಿನಲ್ಲಿ ಕಾಲನ್ನು ಹತ್ತು ನಿಮಿಷ ಅದ್ದಿಟ್ಟುಕೊಂಡು ಚೆನ್ನಾಗಿ ತೊಳೆದಿರಬೇಕು. ಉರಿ ಇದ್ದರೆ ಇದೇ ಮಿಶ್ರಣಕ್ಕೆ ಎಣ್ಣೆ ಬದಲಿಗೆ ತುಪ್ಪವನ್ನು ಬಳಸಬಹುದು. ಉರಿ ಇದ್ದಾಗ ಹಿಮ್ಮಡಿಗೆ ಲೋಳೆಸರ (ಅಲೋವೆರಾ) ಹಚ್ಚಬಹುದು. ಇದರಿಂದ ಗಾಯವೂ ಬೇಗ ಗುಣವಾಗುತ್ತದೆ. ನೆಲ್ಲಿಕಾಯಿ, ಅರಿಶಿಣ, ಸೊಗದೆಬೇರು, ಮಂಜಿಷ್ಠ, ಜ್ಯೇಷ್ಠಮಧು, ಶ್ರೀಗಂಧ ಮುಂತಾದ ದ್ರವ್ಯಗಳ ಕಷಾಯ ಮಾಡಿಕೊಂಡು ಆಗಾಗ ಸೇವಿಸುತ್ತಿದ್ದರೆ ಅನುಕೂಲವಾಗುತ್ತದೆ. ಇವೆಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ.
ಮುದ್ರಾವಿಜ್ಞಾನ ಹೇಳುವ ವರುಣಮುದ್ರೆಯನ್ನು ದಿನಕ್ಕೆ 20 ನಿಮಿಷ ಅಭ್ಯಾಸ ಮಾಡಿದರೆ ತುಂಬ ಪ್ರಯೋಜನವಾಗುತ್ತದೆ. ಹೆಬ್ಬೆರಳು ಮತ್ತು ಕಿರುಬೆರಳುಗಳ ತುದಿಗಳನ್ನು ತಾಗಿಸಿ ಉಳಿದ ಬೆರಳುಗಳನ್ನು ನೇರವಾಗಿಟ್ಟುಕೊಂಡಾಗ ವರುಣ ಮುದ್ರೆಯಾಗುತ್ತದೆ. ಡಯಾಬಿಟೀಸ್ ಇದ್ದರೆ, ಹಿಮ್ಮಡಿ ಒಡಕು ಅತಿಯಾಗಿ ಗುಣವಾಗದ ಗಾಯವಾಗಿ ಕೀವು ತುಂಬಿಕೊಂಡಿದ್ದರೆ ಹೊಟ್ಟೆಗೆ ಔಷಧಗಳನ್ನು ಸೇವಿಸಬೇಕಾಗುತ್ತದೆ. ಎಳನೀರು, ಹಾಲು, ತುಪ್ಪ, ಬೆಣ್ಣೆ, ಹಣ್ಣುಗಳು, ಒಣಹಣ್ಣುಗಳು, ಕುಂಬಳಕಾಯಿ, ಸೌತೆಕಾಯಿಗಳನ್ನು ಹೆಚ್ಚಾಗಿ ಸೇವಿಸಬೇಕು; ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು. ಕರಿದ ಪದಾರ್ಥಗಳು, ಹಾಗಲಕಾಯಿ, ಹಸಿಮೆಣಸಿನಕಾಯಿ, ಸಾಸಿವೆ, ಸಾಂಬಾರ ಪದಾರ್ಥಗಳ ಅತಿಯಾಗಿ ಬಳಕೆ ಮಾಡದಿರುವುದು ಉತ್ತಮ.