ಮೂಳೆ, ಹಲ್ಲು, ಕೂದಲಿನ ಆರೋಗ್ಯಕ್ಕೆ ಪೂರಕ ಎಳ್ಳು

ವಿಜಯವಾಣಿ (1)
Published on
ಇತ್ತೀಚಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರ ಮೂಳೆ, ಕೂದಲು ಮತ್ತು ಹಲ್ಲುಗಳ ಆರೋಗ್ಯದ ಬಗ್ಗೆ ಯೋಚಿಸಿದರೆ ನಿಜವಾಗಿಯೂ ಚಿಂತೆಯಾಗುತ್ತದೆ. ಏಕೆಂದರೆ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಮೂಳೆ ಸಾಂದ್ರತೆ ಕಡಿಮೆಯಾಗುತ್ತಿದೆ. ತಮ್ಮ ಹಲ್ಲುಗಳು ಸರಿಯಾಗಿವೆ ಎಂದು ಯಾರೂ ಧೈರ್ಯದಿಂದ ಹೇಳಲು ಸಾಧ್ಯವಿಲ್ಲ. ಇನ್ನು ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ತಲೆ ಬೋಳಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಎಲ್ಲ ಸಮಸ್ಯೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಕೊಡುವುದು ಕ್ಯಾಲ್ಸಿಯಂ ಮಾತ್ರೆಗಳನ್ನು. ಆದರೆ ನಾವು ಹೀಗೆ ಕೇವಲ ಮಾತ್ರೆಗಳಿಂದಲೇ ನಮ್ಮ ದೇಹದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಸರಿಯಲ್ಲ. ಬದಲಿಗೆ ಆಹಾರ ಎಲ್ಲ ರೀತಿಯ ಪೋಷಕಾಂಶಗಳನ್ನು ನೀಡುವಂಥದ್ದಾಗಿರಬೇಕು. ಹಾಗಾಗಿ ಇಂದು ಕ್ಯಾಲ್ಸಿಯಂನಿಂದ ಭರಿತವಾದ ಎಳ್ಳಿನ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೆದ ಗ್ರಂಥಗಳು ಎಳ್ಳನ್ನು ವಿವರಿಸುವಾಗ ತ್ವಚ್ಯ, ಬಲ್ಯ, ಕೇಶ್ಯ ಎಂದು ಕರೆದಿದ್ದಾರೆ. ಅಂದರೆ ಎಳ್ಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ; ದೇಹಕ್ಕೆ ಬಲವನ್ನು ನೀಡುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ ಎಂದರ್ಥ. ಈ ಎಲ್ಲಾ ಫಲಿತಾಂಶಗಳು ಸಿಗಬೇಕು ಎಂದಾದರೆ ಎಳ್ಳು ಅತ್ಯಂತ ಪೋಷಕಾಂಶ ಭರಿತವಾಗಿರಲೇಬೇಕು. 100 ಗ್ರಾಂ ಎಳ್ಳಿನಲ್ಲಿ 975 ಮಿಲಿಗ್ರಾಂ ಕ್ಯಾಲ್ಸಿಯಂ ನಮಗೆ ಸಿಗುತ್ತದೆ ಅಂದರೆ 100 ಗ್ರಾಂ ಎಳ್ಳು ಒಬ್ಬ ಮನುಷ್ಯನಿಗೆ ಇಡೀ ದಿನಕ್ಕೆ ಬೇಕಾದ ಕ್ಯಾಲ್ಸಿಯಂನ 97% ಭಾಗವನ್ನು ನೀಡುತ್ತದೆ. ಇದರಿಂದ ಎಳ್ಳು ಎಷ್ಟು ಕ್ಯಾಲ್ಸಿಯಂ ಭರಿತ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೇ ಇದರಲ್ಲಿ ವಿಟಮಿನ್ ಬಿ6, ಮೆಗ್ನೀಷಿಯಂ, ನಾರಿನಂಶ, ಪೋ›ಟೀನ್, ಕಬ್ಬಿಣ ಮುಂತಾದ ಪೋಷಕಾಂಶಗಳು ಹೇರಳವಾಗಿವೆ.

ಹೀಗಾಗಿ ಎಳ್ಳನ್ನು ನಿತ್ಯವೂ ನಾವು ಸೇವಿಸಬೇಕು. ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಎಳ್ಳನ್ನು ನೀಡಬೇಕು. ಇದನ್ನು ಲಡ್ಡು, ಕಿಚಡಿ ಮುಂತಾದ ರೀತಿಯಲ್ಲಿ ತಯಾರಿಸಿ ಮಕ್ಕಳಿಗೆ ಕೊಡಬಹುದು. ಬೆಲ್ಲ ಹಾಕಿ ತಯಾರಿಸಿದ ಎಳ್ಳಿನ ಕ್ಯಾಂಡಿಯನ್ನು ಸಾಮಾನ್ಯವಾಗಿ ಎಲ್ಲಾ ಮಕ್ಕಳು ಇಷ್ಟ ಪಡುತ್ತಾರೆ. ಇದರ ಸೇವನೆಯಿಂದ ಎಳ್ಳಿನ ಉಪಯೋಗಗಳು ಸಿಗುವುದಲ್ಲದೇ ಕ್ಯಾಂಡಿಯನ್ನು ತಯಾರಿಸಲು ಬಳಸುವ ಉಳಿದ ಪದಾರ್ಥಗಳ ಕಾರಣದಿಂದ ಮಕ್ಕಳ ಆರೋಗ್ಯ ತುಂಬಾ ಚೆನ್ನಾಗಿ ಹೆಚ್ಚುತ್ತದೆ.

ವಿಧಾನ

ಸುಮಾರು 100 ಗ್ರಾಂನಷ್ಟು ಎಳ್ಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಸ್ವಲ್ಪ ರುಬ್ಬಿಕೊಳ್ಳಬೇಕು. ನಂತರ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಅದನ್ನು ಹುರಿದಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಸಾವಯವ ಬೆಲ್ಲದ ಪುಡಿಯನ್ನು ಸುಮಾರು 75 ಗ್ರಾಂ ನಷ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಎರಡೆಳೆಯ ಪಾಕ ಬರುವವರೆಗೆ ಕಾಯಿಸಬೇಕು. ಪಾಕ ಬರುತ್ತಿದ್ದಂತೆಯೇ ಇದಕ್ಕೆ ಹುರಿದಿಟ್ಟ ಎಳ್ಳು, ಸುಮಾರು 50 ಗ್ರಾಂ ನಷ್ಟು ಒಣಕೊಬ್ಬರಿ ಪುಡಿ ಮತ್ತು ಅರ್ಧ ಚಮಚದಷ್ಟು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಸೇರಿಸಬೇಕು. ನಂತರ ಈ ಮಿಶ್ರಣ ಸ್ವಲ್ಪ ಬಿಸಿ ಇರುವಾಗಲೇ ಕ್ಯಾಂಡಿಗಳನ್ನು ತಯಾರಿಸಿ ಇಟ್ಟು ಬೇಕಾದಾಗಲೆಲ್ಲಾ ಸೇವಿಸಬಹುದು. ಇದರಿಂದ ಜೀರ್ಣಶಕ್ತಿ, ಶ್ವಾಸಾಂಗವ್ಯೂಹದ ಶಕ್ತಿ, ಮೂಳೆ, ನರಗಳು ಮತ್ತು ಕೂದಲಿನ ಶಕ್ತಿ ಹೆಚ್ಚುತ್ತವೆ. ವಿಶೇಷವಾಗಿ ಚಿಕ್ಕ ಮಕ್ಕಳು ಸಕ್ಕರೆ ಹಾಕಿದ ಪ್ಯಾಕ್ಡ್ ಅಥವಾ ಬೀದಿಬದಿಯ ತಿನಿಸುಗಳನ್ನು ಸೇವಿಸುವುದರಿಂದ ಅವರ ಮೂಳೆ ದುರ್ಬಲವಾಗುತ್ತಾ ಹೋಗುತ್ತದೆ.

ಅಂಥ ವಿಷ ಪದಾರ್ಥಗಳ ಬದಲಿಗೆ ಈ ಎಳ್ಳಿನ ಸಿಹಿತಿನಿಸನ್ನು ನೀಡುವುದರಿಂದ ಬೆಳವಣಿಗೆಯ ಹಂತದಲ್ಲಿರುವ ಮೂಳೆ, ಹಲ್ಲುಗಳ ಆರೋಗ್ಯ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಆದರೆ ಇದರಿಂದ ಕ್ಯಾಲ್ಸಿಯಂ ಹೇರಳವಾಗಿ ಸಿಕ್ಕರೂ ಅದನ್ನು ದೇಹ ಹೀರಿಕೊಳ್ಳಬೇಕಾದರೆ ವಿಟಮಿನ್ ಡಿ ಬೇಕಾಗುತ್ತದೆ. ಇಂದು ಯಾರನ್ನು ನೋಡಿದರೂ ಇದರ ಕೊರತೆಯನ್ನು ಅನುಭವಿಸುತ್ತಿರುವವರೇ. ಹಾಗಾಗಿ ದಿನದಲ್ಲಿ ಒಂದರ್ಧ ಗಂಟೆಯಾದರೂ ಬಿಸಿಲಿಗೆ ಮೈಯ್ಯೊಡ್ಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಆಗಲೂ ಇದು ಹೆಚ್ಚಾಗದೇ ಹೋದರೆ ವಿಟಮಿನ್ ಡಿ ಯ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಈಗಂತೂ ನಿತ್ಯವೂ ಸೇವಿಸಬಹುದಾದ ಮಾತ್ರೆಗಳು ಕೂಡ ಲಭ್ಯವಿವೆ. ಒಟ್ಟಿನಲ್ಲಿ ಈ ಚಳಿಗಾಲದ ಪ್ರತಿದಿನವನ್ನು ಎಳ್ಳುಂಡೆಯನ್ನು ಸೇವಿಸುತ್ತಾ ಕಳೆಯೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net