ಆತ್ಮಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ

Manollasa 22 Jan 20
Published on

ಒಮ್ಮೆ ಶೃಂಗೇರಿ ಶ್ರೀಗಳ ಪ್ರವಚನ ನಡೆಯುತ್ತಿತ್ತು. ಪ್ರವಚನದ ಕೊನೆಯಲ್ಲಿ ‘ಆತ್ಮಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಅದೇ ಅಂತಿಮ ಮತ್ತು ಕೊನೆಯ ಸ್ಥಿತಿ ಎನ್ನುವುದನ್ನು ಅರಿಯುವವರೆಗೂ ಮನುಷ್ಯನು ಜೀವನ ಅಂದರೆ ಹುಟ್ಟು-ಮರಣಗಳ ಚಕ್ರದಲ್ಲಿ ಸುತ್ತುತ್ತಿರುತ್ತಾನೆ’ ಎಂದರು. ಆಗ ಭಕ್ತರೊಬ್ಬರು ಬ್ರಹ್ಮಜ್ಞಾನದ ಬಗ್ಗೆ ತಿಳಿಸಬೇಕಾಗಿ ಕೇಳಿಕೊಂಡರು. ಆಗ ಶ್ರೀಗಳು, ‘ನಾನು ಅದರ ಬಗ್ಗೆ ಮಾತನಾಡಿದರೆ ನೀವುಗಳು ಯಾರೂ ಕುಳಿತಿರುವುದಿಲ್ಲ. ಒಬ್ಬೊಬ್ಬರಾಗಿ ಎದ್ದು ಹೋಗಿಬಿಡುತ್ತೀರಿ’ ಎಂದು ನಕ್ಕು ನಿರ್ಗಮಿಸಿದರು.

ಹಾಗಾದರೆ ಬ್ರಹ್ಮಜ್ಞಾನಿ ಎಂದರೆ ಯಾರು...?

ರಾಜಸುಯಾಗ ನಡೆಸಿದ ಧರ್ಮರಾಯ ಕೊನೆಯಲ್ಲಿ ಸಂತರ್ಪಣೆ ನಡೆಸುತ್ತಿದ್ದ. ಅನ್ನದಾನ, ದ್ರವ್ಯದಾನ, ಭೂದಾನ, ಗೋದಾನ ಹೀಗೆ ಅನೇಕ ದಾನಗಳಿಗೆ ಕೊನೆ ಇರಲಿಲ್ಲ. ಒಂದು ಲಕ್ಷ ಜನಕ್ಕೆ ಭೋಜನ-ದಾನಾದಿಗಳು ನಡೆದಾಗ ಒಮ್ಮೆ ಗಂಟೆ ಬಾರಿಸಬೇಕೆಂದು ಭಟರಿಗೆ ಆಜ್ಞೆಯಾಗಿತ್ತು. ಆ ಪ್ರಕಾರ ಗಂಟೆಗಳು ಬಾರಿಸುತ್ತಲೇ ಇತ್ತು. ಸಂಜೆ ಸಮೀಪಿಸಲು ಕೆಲವು ಗಳಿಗೆಗಳು. ಆಗ ಸೇವಕರು ಪಾತ್ರೆಗಳನ್ನೆಲ್ಲ ತೊಳೆದು ಸ್ವಚ್ಛಗೊಳಿಸುತ್ತಿದ್ದರು.

ಆಗ ಪಾಂಡವರ ಜೊತೆಯಲ್ಲಿ ಕೃಷ್ಣನೂ ವಿರಮಿಸಿದ್ದ. ಯಾಗದ ಬಗ್ಗೆ ಮಾತನಾಡುತ್ತಿರುವಾಗ ಗಂಟೆ ನೂರಾರು ಬಾರಿ ನಿರಂತರವಾಗಿ ತಾನೇ ತಾನಾಗಿ ಬಾರಿಸಿತು. ಆಗ ಧರ್ಮರಾಯ-‘ಈ ಕ್ಷಣದಲ್ಲಿ ಲಕ್ಷಾಂತರ ಜನ ಧರ್ಮ ಅಥವಾ ಭೋಜನ ಸ್ವೀಕರಿಸಲು ಸಾಧ್ಯವಿಲ್ಲ, ಆದರೂ ಗಂಟೆ ಏಕೆ ಹೀಗೆ ಬಾರಿಸುತ್ತಿದೆ ಕೃಷ್ಣ’ ಎಂದು ಕೇಳಿದ.

ಆಗ ಪರಮಾತ್ಮ ಕೃಷ್ಣ ಊಟದ ಬಾಳೆಎಲೆ ಎಸೆಯುವ ಜಾಗಕ್ಕೆ ಪಾಂಡವರನ್ನು ಕರೆದುಕೊಂಡು ಹೋದ. ಅಲ್ಲಿ ಒಬ್ಬ ಎಂಜಲು ಎಲೆಗಳಿಂದ ಸಿಹಿತಿಂಡಿ ಮತ್ತು ಇತರೆ ಆಹಾರಗಳನ್ನು ಹೆಕ್ಕಿತಿನ್ನುತ್ತಿದ್ದ. ಆತನಿಗೆ ಯಾವ ಭೇದಭಾವಗಳು ಇರಲಿಲ್ಲ, ತನ್ನ ಪಾಡಿಗೆ ತಾನು ಸ್ವೀಕರಿಸುತ್ತಿದ್ದ. ಆತನನ್ನು ತೋರಿಸಿ ಕೃಷ್ಣ-‘ನೋಡು ಈತ ಬ್ರಹ್ಮಜ್ಞಾನಿ. ನಿನ್ನ ಯಾಗ ಈಗ ಪೂರ್ಣವಾಯಿತು. ಇಲ್ಲಿಯವರೆಗೆ ನೀನು ಮಾಡಿದ ದಾನ-ಧರ್ಮಗಳೆಲ್ಲ ಬರೀ ಭೌತಿಕವಾದದ್ದು’ ಎಂದು ಹೇಳಿದ.

ನಾವು ಆತ್ಮಜ್ಞಾನಿಗಳನ್ನು ಮಠ-ಮಂದಿರಗಳಲ್ಲಿ ಹುಡುಕುತ್ತೇವೆ. ನಮ್ಮ ಅಮೂಲ್ಯವಾದ ಸಮಯವನ್ನು ಪೂಜೆ, ಜಪ, ಧ್ಯಾನ ಎಂದು ಕಳೆಯುತ್ತೇವೆ. ಆದರೆ ನಿಜವಾದ ಜ್ಞಾನಿಗಳು, ನಿಜವಾದ ಜ್ಞಾನ ತಿಪ್ಪೆಗುಂಡಿಯಲ್ಲಿಯೋ ದೇವಸ್ಥಾನದ ಕೊನೆಯ ಮೆಟ್ಟಿಲಲ್ಲಿ ಭಿಕಾರಿಯಂತೆ ಕಾಣುವ ಸಂತನಲ್ಲಿದೆಯೋ ಬಲ್ಲವರಾರು? ಯಾವ ಆತ್ಮಜ್ಞಾನಿ ತಾನು ಜ್ಞಾನಿ ಎಂದು ಹೇಳಿಕೊಂಡಾನು; ಕಾವಿ ಇತರೆ ಭೌತಿಕ ಅಲಂಕಾರ ಮಾಡಿಕೊಂಡಾನು? ನಮ್ಮ ಜ್ಞಾನ ಜಾಗೃತವಾದಾಗ ಮಾತ್ರ ಆತನೇ ಜ್ಞಾನಿ ಎಂದು ಗುರುತಿಸಬಹುದು ಅಷ್ಟೇ. ಅಲ್ಲವೇ?

| ಗಣೇಶ್ ಮೂರ್ತಿ ನಾಗರಕೊಡಿಗೆ

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net