

ಅದೊಂದು ನದಿಪಾತ್ರ. ಆ ನದಿಯಲ್ಲಿ ಮೀನೊಂದು ವಾಸವಾಗಿತ್ತು. ಅದೇ ನದಿದಡದಲ್ಲಿ ನವಿಲೊಂದು ಮನೆ ಮಾಡಿತ್ತು. ದಿನ ಕಳೆದಂತೆ ನವಿಲಿಗೂ ಮೀನಿಗೂ ಗೆಳೆತನ ಬೆಳೆಯತೊಡಗಿತು. ಕ್ರಮೇಣ ಅವೆರಡೂ ಆತ್ಮೀಯರಾಗಿಬಿಟ್ಟವು. ಒಂದು ದಿನ ನೀರಿಗಾಗಿ ನದಿಯ ಬಳಿ ಬಂದ ಬೇಟೆಗಾರನೊಬ್ಬ ಅಲ್ಲೇ ಪಕ್ಕದಲ್ಲಿದ್ದ ನವಿಲನ್ನು ಹಿಡಿದ. ಆಗ ಮೀನು ಕೈ ಮುಗಿದು ನದಿಯಲ್ಲಿದ್ದ ಅತ್ಯಮೂಲ್ಯವಾದ ಮುತ್ತನ್ನು ತಂದು ಕೊಡುವುದಾಗಿಯೂ, ತನ್ನ ಗೆಳೆಯನನ್ನು ಬಿಟ್ಟು ಬಿಡಬೇಕಾಗಿಯೂ ಅಂಗಲಾಚಿತು. ಮುತ್ತಿನ ಆಸೆಯಿಂದ ಬೇಟೆಗಾರ ನವಿಲನ್ನು ಕೊಲ್ಲದೆ ಮೀನಿಗಾಗಿ ಕಾಯತೊಡಗಿದ.
ನದಿಯೊಳಕ್ಕೆ ಹೋದ ಮೀನು ಸ್ವಲ್ಪ ಸಮಯದ ಬಳಿಕ ಮೇಲೆ ಬಂದು ಮುತ್ತನ್ನು ಬೇಟೆಗಾರನ ಕೈಗಿತ್ತಿತು. ಸಂತೋಷಗೊಂಡ ಬೇಟೆಗಾರ ನವಿಲನ್ನು ಬಿಟ್ಟು ಮನೆಗೆ ತೆರಳಿದ. ಮುತ್ತನ್ನೇ ನೋಡುತ್ತಿದ್ದ ಬೇಟೆಗಾರ ಒಂದೇ ಮುತ್ತನ್ನು ಮಾರಿದರೆ ಬರುವ ಹಣಕ್ಕಿಂತ ಎರಡನ್ನು ಮಾರಿದರೆ ಹೆಚ್ಚು ಹಣವನ್ನು ಪಡೆಯಬಹುದು ಎಂದು ಚಿಂತಿಸಿದ. ದುರಾಸೆಯಿಂದ ಮಾರನೆಯ ದಿನ ಮತ್ತೆ ನದಿಯ ಬಳಿ ತೆರಳಿದ. ಮೀನನ್ನು ಕೂಗಿ ಕರೆದು, ‘ಈ ಒಂದೇ ಮುತ್ತನ್ನು ಇಟ್ಟುಕೊಂಡು ನನಗೇನು ಪ್ರಯೋಜನವಿಲ್ಲ. ಜೋಡಿಮುತ್ತುಗಳಿದ್ದರಷ್ಟೇ ಬೆಲೆ ಹೆಚ್ಚು. ಹಾಗಾಗಿ ಇನ್ನೊಂದು ಮುತ್ತನ್ನು ತಂದುಕೊಟ್ಟರೆ ನಿನ್ನ ಗೆಳೆಯನ ತಂಟೆಗೆ ಬರುವುದಿಲ್ಲ’ ಎಂದ.
ಜಾಣಮೀನು, ‘ಈ ಮುತ್ತನ್ನು ನನಗೆ ಕೊಡು. ನಂತರ ಎರಡು ಮುತ್ತನ್ನೂ ತಂದು ಒಪ್ಪಿಸುವೆ’ ಎಂದಿತು. ಬೇಟೆಗಾರ ಮುತ್ತನ್ನು ತಂದು ಬಂಡೆಯ ಮೇಲಿಟ್ಟು, ‘ಬೇಗ ಹೋಗಿ ಇನ್ನೊಂದು ಮುತ್ತನ್ನು ತಂದು ಕೊಡು’ ಎಂದ. ಮೀನು ಚಂಗನೆ ಮೇಲೆ ಬಂದು ಆ ಮುತ್ತನ್ನು ಕಚ್ಚಿಕೊಂಡು ನದಿಯಲ್ಲಿ ಮುಳುಗಿತು. ಅಲ್ಲಿಂದಲೇ ತಲೆಎತ್ತಿ, ‘ನೀನು ಮತ್ತೊಂದು ಮುತ್ತಿನ ಆಸೆಯಿಂದ ಬರುವೆ ಎಂದು ಗೊತ್ತಿತ್ತು. ಹಾಗಾಗಿ ನನ್ನ ಗೆಳೆಯ ನೆನ್ನೆಯೇ ಬಹಳ ದೂರ ಹೋಗಿಬಿಟ್ಟ. ನೀವು ಮನುಷ್ಯರೇ ಹೀಗೆ ನಿಮಗೆ ತೃಪ್ತಿ ಎಂಬುದಿಲ್ಲ. ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವುದಾಗಿ ಏನನ್ನೂ ಬೇಕಾದರೂ ಮಾಡಲು ಸಿದ್ಧರಿರುತ್ತೀರಿ. ಒಂದು ಸಿಕ್ಕಿದರೆ ಇನ್ನೊಂದು, ಇನ್ನೊಂದು ಸಿಕ್ಕಿದರೆ ಮತ್ತೊಂದು. ಹೀಗೆ ನಿಮ್ಮ ಆಸೆಗಳಿಗೆ ಮಿತಿಯೇ ಇರುವುದಿಲ್ಲ. ಆದ್ದರಿಂದಲೇ ನೀವು ದುಃಖಿಗಳು. ಇನ್ನೆಂದೂ ಇತ್ತ ಮುಖ ಮಾಡಬೇಡ. ಹೋಗು, ಹೊರಟು ಹೋಗು’ಎಂದು ಹೇಳಿ ನೀರಿನಲ್ಲಿ ಮಾಯವಾಗಿ ಬಿಟ್ಟಿತು.
ಈ ಕತೆಯ ಸಾರ ಮನುಷ್ಯನ ಬದುಕಿಗೆ ಬಹಳ ಹತ್ತಿರವಾದದ್ದು, ನಮಗೆ ಸಿಕ್ಕಿದ್ದರಲ್ಲಿಯೇ ತೃಪ್ತಿಯನ್ನು ಕಾಣುವ ಬದಲು ಇನ್ಯಾವುದಕ್ಕೋ ಹಂಬಲಿಸುತ್ತೇವೆ. ಅದು ಸಿಗದಾಗ ವೃಥಾ ದುಃಖಿಸುತ್ತೇವೆ. ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲಿ ಅಡಗಿದ ಸುಖವನ್ನು ಆನಂದಿಸುವ ಬದಲು ಇನ್ಯಾವುದಕ್ಕೋ ಹಂಬಲಿಸುತ್ತೇವೆ. ನಮ್ಮಲ್ಲಿಯೇ ಇರುವ ಆತ್ಮತೃಪ್ತಿಯ ಸೆಲೆಯನ್ನು ನಾವೇ ಬತ್ತಿಸಿಕೊಂಡು ಇನ್ನೆಲ್ಲೋ ಅದರ ಹುಡುಕಾಟದಲ್ಲಿ ನಿರತರಾಗುತ್ತೇವೆ. ಬದಲಿಗೆ, ತೃಪ್ತಿ ಎಂಬ ಸಂತೋಷದ ಒಳಗುಟ್ಟನ್ನು ಅರಿತು ಕೊಟ್ಟಿದ್ದರಲ್ಲಿಯೇ ಸಂತೋಷವನ್ನು ಅನುಭವಿಸೋಣ. ದುರಾಸೆಯಿಂದ ಹೊರಬಂದು ಆತ್ಮತೃಪ್ತಿಯನ್ನು ಮೈಗೂಡಿಸಿಕೊಳ್ಳೋಣ. ಅತೃಪ್ತ ಮನಸಿಗರಾಗದೆ, ಬದುಕು ಕಲ್ಪಿಸಿದ ಎಲ್ಲ ಸಂಗತಿಗಳಲ್ಲಿ ತೃಪ್ತಿಯನ್ನು ಕಂಡು ಬದುಕನ್ನು ಸಂಭ್ರಮಿಸೋಣ.
| ದಿವ್ಯಾ ಹೆಗಡೆ ಕಬ್ಬಿನಗದ್ದೆ (ಲೇಖಕರು ಹವ್ಯಾಸಿ ಬರಹಗಾರರು)