ಆಂತರ್ಯದಲ್ಲಿ ಭಗವಂತನ ಅನ್ವೇಷಣೆ

Manollasa Image 12 Feb 20
Published on

ಬಾಯಾರಿಕೆಯಿಂದ ಬಳಲಿ ಬೆಂಡಾದ ವ್ಯಕ್ತಿಯೊಬ್ಬ, ಆಗಸದಲ್ಲಿ ಓಡುತ್ತಿದ್ದ ಮೋಡಗಳನ್ನು ನೋಡಿ, ಕಣ್ಣೀರುಗರೆದು ನೀರಿಗಾಗಿ ಇನ್ನಿಲ್ಲದಂತೆ ಬೇಡುತ್ತಿದ್ದ. ಆದರೆ, ತಾನು ನಿಂತ ಭೂಮಿಯೇ ನೀರಿನ ಸೆಲೆ, ಸ್ವಲ್ಪ ಪರಿಶ್ರಮಪಟ್ಟರೆ ತಾನು ಈ ಭೂಮಿಯಿಂದಲೇ ಶಾಶ್ವತವಾದ ನೀರನ್ನು ಪಡೆಯಬಹುದು ಎಂಬ ಸತ್ಯವನ್ನು ಆತ ಮರೆತಿದ್ದ.

ಹಾಗೆಯೇ ಭಗವಂತನನ್ನು ಬಾಹ್ಯಪ್ರಪಂಚದಲ್ಲಿ ಹುಡುಕುವವರ ಕಥೆ.

ಭಗವಂತನ ಅಸ್ತಿತ್ವ ನಮ್ಮಲ್ಲೇ ಇದೆ. ನಮ್ಮ ಅಂತರಂಗದಲ್ಲೇ ಇದೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದೆ ನಾವು ನಿರಂತರವಾಗಿ ಭಗವಂತನನ್ನು ಹೊರ ಪ್ರಪಂಚದಲ್ಲಿ ಹುಡುಕುತ್ತೇವೆ. ಎಷ್ಟೋ ಜನ ಕನ್ನಡಕವನ್ನು ತಾವು ಹಾಕಿಕೊಂಡಿದ್ದೇವೆ ಎಂಬ ಅರಿವೇ ಇಲ್ಲದೆ, ಮನೆಯನ್ನೆಲ್ಲ ಹುಡುಕುತ್ತಾರೆ. ಹಾಗೆಯೇ ನಮ್ಮೊಳಗೆ ಇರುವಂತಹ ಅದ್ಭುತವಾದ ಪ್ರಕಾಶ ಜ್ಯೋತಿ ರೂಪವಾದ ಆತ್ಮಸ್ವರೂಪನಾದ ಭಗವಂತನನ್ನು ಹೊರಗಡೆ ಹುಡುಕುವುದು ಒಂದು ವಿಪರ್ಯಾಸ. ಇದಕ್ಕೆ ರಾಮಕೃಷ್ಣ ಪರಮಹಂಸರು ಒಂದು ಕಥೆಯನ್ನು ಹೇಳಿದ್ದಾರೆ. ಒಂದು ಚಳಿಗಾಲ, ವ್ಯಕ್ತಿಯೊಬ್ಬನಿಗೆ ರಾತ್ರಿ ಸಹಿಸಲು ಅಸಾಧ್ಯವಾದ ಚಳಿಯಾಯಿತು. ಹೇಗಾದರೂ ಮಾಡಿ ಮೈ ಬಿಸಿ ಮಾಡಿಕೊಳ್ಳಬೇಕು. ಸರಿ ಆತ ಬೀಡಿ ಸೇದಬೇಕೆಂದು ನಿರ್ಧಾರ ಮಾಡಿದ. ಮನೆಯಲ್ಲಿ ತಡಕಾಡಿದ, ಬೀಡಿಯೇನೋ ಸಿಕ್ಕಿತು. ಆದರೆ ಬೀಡಿ ಹೊತ್ತಿಸಿಕೊಳ್ಳಲು ಬೇಕಾದ ಬೆಂಕಿಪೊಟ್ಟಣ ಮನೆಯಲ್ಲಿ ಸಿಗಲಿಲ್ಲ. ಸರಿ, ಒಂದು ಲಾಟೀನು ಬೆಳಗುತ್ತಿತ್ತು, ಅದನ್ನು ಹಿಡಿದುಕೊಂಡು ಅದರ ಬೆಳಕಿನಲ್ಲಿ ಪಕ್ಕದ ಮನೆಗೆ ಹೋದ. ಅಲ್ಲಿ ನೋಡಿದರೆ ಆ ಮನೆಯ ಯಜಮಾನ ನಿದ್ರೆ ಮಾಡುತ್ತಿದ್ದ, ಆತನನ್ನು ಎಬ್ಬಿಸಿ ಕೇಳಿದ ‘ಅಣ್ಣ, ತುಂಬ ಚಳಿಯಾಗುತ್ತಿದೆ, ಸ್ವಲ್ಪ ಬೆಂಕಿಕಡ್ಡಿ ಕೊಡುತ್ತೀಯ? ನಾನು ಬೀಡಿ ಸೇದಬೇಕು’ ಅಂತ.

ನೆರೆಮನೆಯಾತ, ‘ಅಯ್ಯಾ ಮೂರ್ಖ, ನಿನ್ನ ಕೈಯಲ್ಲಿ ಉರಿಯುತ್ತಿರುವ ಲಾಟೀನು ಇದೆ. ಆ ಲಾಟೀನನ್ನು ಬಳಸಿಕೊಂಡು, ಅದರ ಬೆಂಕಿಯಿಂದಲೇ ನೀನು ಬೀಡಿ ಹೊತ್ತಿಸಿಕೊಂಡು ಸೇದಬಹುದಿತ್ತಲ್ಲ! ಅದರ ಬದಲಿಗೆ ಬೆಂಕಿಕಡ್ಡಿ ಎಲ್ಲಿದೆ? ಎಂದು ಹುಡುಕಿಕೊಂಡು ನನ್ನ ಮನೆಯವರೆಗೂ ಬಂದೆಯಲ್ಲ!’ ಎಂದು ಕೇಳಿದ. ಹೀಗೆ ನಾವು ಹೊರಗಡೆ ಪ್ರಪಂಚದಲ್ಲಿ ಭಗವಂತ ಇದ್ದಾನೆ ಎಂಬ ಭರವಸೆಯಿಂದ ಹೊರಗಡೆ ಹುಡುಕುತ್ತೇವೆ. ನಮ್ಮ ಹಿರಿಯರು ಹೇಳುತ್ತಾರೆ, ‘ದೇಹೋ ದೇವಾಲಯಃ  ಪ್ರೋಕ್ತಃ  ದೇವೋ ಜೀವಃ ಸನಾತನಃ|’ ‘ನಮ್ಮ ದೇಹವೇ ದೇವಾಲಯ, ಅದರೊಳಗಿರುವ ಜೀವವೇ ಪರಮಾತ್ಮ, ನಾವು ನಮ್ಮನ್ನು ನಂಬಬೇಕು. ನಮ್ಮಲ್ಲಿರುವ ವಿಶಿಷ್ಟವಾದ ಅ ಚೈತನ್ಯವನ್ನು ನಂಬಬೇಕು’. ಹೊರಗಿನ್ನೆಲ್ಲೋ ಭಗವಂತ ಇದ್ದಾನೆ. ಅವನನ್ನು ನಾನು ನೋಡಬೇಕು ಎಂದು ಹುಡುಕಿಕೊಂಡು ಹೋಗುವುದಿದೆಯಲ್ಲ ಅದು ನಮ್ಮ ಅಜ್ಞಾನದ ಪರಮಾವಧಿ.

| ಡಾ. ಗಣಪತಿ ಹೆಗಡೆ

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net