

# ನನಗೆ ಸಭಾಕಂಪನದ ಸಮಸ್ಯೆ ಇದೆ. ಇದಕ್ಕೆ ಯೋಗ - ಪ್ರಾಣಾಯಾಮಗಳಿಂದ ಪರಿಹಾರ ಸಿಗಬಹುದೇ?
| ನಿಕ್ಷಿತಾ ಮಡಿಕೇರಿ
ಪತಂಜಲಿ ಋಷಿಗಳು ಪ್ರಾಣಾಯಾಮದ ಬಗ್ಗೆ ‘ಶ್ವಾಸ ಪ್ರಚ್ಛಾ್ವಸಯೋಃ ಗತಿರ್ವಿಚ್ಛೇದಃ’ ಎಂದು ಹೇಳುತ್ತಾರೆ. ಅಂದರೆ ಉಸಿರಾಟದ ಪೂರಕ, ರೇಚಕಗಳ ವೇಗವನ್ನು ಕಡಿಮೆ ಮಾಡಿ ಹತೋಟಿಯಲ್ಲಿಡುವುದೇ ಪ್ರಾಣಾಯಾಮ; ಮನಸ್ಸಿನ ಚಂಚಲತೆ, ಗೊಂದಲಗಳನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ಪ್ರಾಣಾಯಾಮ ಎಂದು ಹೇಳುತ್ತಾರೆ. ಆದ್ದರಿಂದ ಮುಂಜಾನೆ ಖಾಲಿ ಹೊಟ್ಟೆಗೆ ಸುಖಪ್ರಾಣಾಯಾಮ, ನಾಡೀಶುದ್ಧಿ, ಭ್ರಾಮರೀ ಪ್ರಾಣಾಯಾಮಗಳನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡಿ. ಆರಂಭದಲ್ಲಿ ಕೆಲವು ಸರಳ ಆಸನಗಳನ್ನು ಮಾಡಿ. ಯೋಗದ ಕೊನೆಗೆ ಹತ್ತು ನಿಮಿಷ ಧ್ಯಾನ ಮಾಡಿ. ನೀವು ಮನಸ್ಸಿನಲ್ಲಿ ತಪ್ಪಾಗಬಹುದು ಎಂಬ ಆಲೋಚನೆಗಳನ್ನು ನಿಲ್ಲಿಸಿ. ಸ್ವಯಂ ಅನುಮಾನ, ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಯೋಚನೆಗಳನ್ನು ನಿಲ್ಲಿಸಿ.
ಪ್ಯಾನಿಕ್ ಅಟ್ಯಾಕ್ ಎದುರಿಸಲು ಕೆಲವು ಸರಳ ಯೋಗಮುದ್ರೆಗಳು ಸಹಾಯ ಮಾಡುತ್ತವೆ. ಬಿಡುವಿನ ವೇಳೆಯಲ್ಲಿ ಅಭ್ಯಾಸ ಮಾಡಿ. ತಲಾ ಹತ್ತು ನಿಮಿಷ ಚಿನ್ಮುದ್ರೆ, ಗಣೇಶಮುದ್ರೆ, ಅಭಯಮುದ್ರೆ, ಉತ್ತರಬೋಧಿ ಮುದ್ರೆ ಹಾಗೂ ಪ್ರಾಣಮುದ್ರೆಗಳ ಅಭ್ಯಾಸ ಮಾಡಿ.
# ಲಾಫಿಂಗ್ ಮುದ್ರೆ (ಮುಗುಳ್ನಗು ಮುದ್ರೆ) ಬಗ್ಗೆ ಮಾಹಿತಿ ನೀಡಿ.
| ವೀರೇಶ್ ನೆಲಮಂಗಲ
ಮುಗುಳ್ನಗು ಮುದ್ರೆ: ಮುಗುಳ್ನಗು ಮುದ್ರೆಯಲ್ಲಿ ಅಗ್ನಿ, ವಾಯು, ಆಕಾಶ ಮತ್ತು ಪೃಥ್ವಿ ತತ್ತ್ವಗಳು ಒಟ್ಟಿಗೆ ಸೇರುತ್ತವೆ.
ಈ ಮುದ್ರೆ ಹಾಕಿದ ಸ್ವಲ್ಪ ಹೊತ್ತಿನಲ್ಲಿ ಮುಖದ ಬಿಗುತನ ಕಡಿಮೆಯಾಗಿ ಮುಗುಳ್ನಗೆ ಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಹಜ ನಗು ಕಡಿಮೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಬಾಲ್ಯಸಹಜ ನಗುವನ್ನು ಸಂಪಾದಿಸಲು ಈ ಮುದ್ರೆ ಸಹಕಾರಿ. ದೈಹಿಕ, ಮಾನಸಿಕ ಚುರುಕುತನ ನಮ್ಮ ಅನುಭವಕ್ಕೆ ಬರುತ್ತದೆ. ಇದರ ಅಭ್ಯಾಸದಿಂದ ಮುಖದ ಬಿಗುತನ ನಿವಾರಣೆಯಾಗುತ್ತದೆ. ಮನಸ್ಸು ಅರಳುತ್ತದೆ.
ವಿಧಾನ: ತೋರುಬೆರಳು, ಮಧ್ಯದ ಬೆರಳು, ಉಂಗುರ ಬೆರಳುಗಳ ತುದಿಗಳನ್ನು ಹೆಬ್ಬೆರಳಿಗೆ ಮೃದುವಾಗಿ ರ್ಸ³ಸಿ. ಕಿರುಬೆರಳು ನೇರವಾಗಿಸಿ. ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಎರಡು ಅಥವಾ ನಾಲ್ಕು ಬಾರಿ ಅಭ್ಯಾಸ ಮಾಡಿ. ಕೊನೆಯಲ್ಲಿ ಹತ್ತು ನಿಮಿಷಗಳವರೆಗೆ ಪ್ರಾಣಮುದ್ರೆಯನ್ನು ಅಭ್ಯಾಸ ಮಾಡಿ.
ಸೂಚನೆ: ಈ ಮುದ್ರೆಯನ್ನು ಅಭ್ಯಾಸ ಮಾಡುವಾಗ ಶ್ಲೋಕಗಳು, ಮಂತ್ರಗಳನ್ನು ಪಠಿಸಬಾರದು.